
ಮಂಗಳೂರು: ದಿನಾಂಕ:05-03-2025 (ಹಾಯ್ ಉಡುಪಿ ನ್ಯೂಸ್) ನಿಷೇಧಿತ ಎಂಡಿಎಂಎ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಆಟೋರಿಕ್ಷಾ ಚಾಲಕ ಮೊಹಮ್ಮದ್ ಅಬ್ದುಲ್ ಜಲೀಲ್ ಎಂಬವನನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಆರೋಪಿ ರಿಕ್ಷಾ ಚಾಲಕನಿಂದ ಸುಮಾರು 3.75 ಲಕ್ಷ ರೂಪಾಯಿ ಮೌಲ್ಯದ 75 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್ ಮತ್ತು ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಂಗಳೂರಿನ ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಅಬ್ದುಲ್ ಜಲೀಲ್ (32) ಎಂಬಾತನು ಬೆಂಗಳೂರಿನಿಂದ ಪಾರ್ಸೆಲ್ ಸರ್ವಿಸ್ ಮೂಲಕ ಎಂಡಿಎಂಎ ತರಿಸಿಕೊಂಡು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಾರ್ಚ್ 4 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿ ರಿಕ್ಷಾ ಚಾಲಕ ದೊಡ್ಡ ಮಾದಕವಸ್ತು ವಿತರಣಾ ಜಾಲದ ಭಾಗವಾಗಿರುವ ಶಂಕೆ ಇದ್ದು ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.