
ಉಡುಪಿ: ದಿನಾಂಕ :11-02-2025(ಹಾಯ್ ಉಡುಪಿ ನ್ಯೂಸ್) ಬನ್ನಂಜೆಯ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿದ ನಾಲ್ವರ ತಂಡವೊಂದು ವಯೋವೃದ್ಧ ರೋರ್ವರಿಗೆ ಜೀವ ಬೆದರಿಕೆ ಹಾಕಿ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿ ನಗರದ ಮೂಡನಿಡಂಬೂರು ಗ್ರಾಮದ ಶಿರಿಬೀಡು ವಾರ್ಡಿನ ಬನ್ನಂಜೆ ಐಬಿ ಹಿಂದುಗಡೆ ನಿವಾಸಿ ಚಿತ್ತರಂಜನ್ (73), ಎಂಬವರ ಪ್ರತೀಕ್ಷಾ ಎಂಬ ಮನೆಯ ಹೊರಗಡೆ ದಿನಾಂಕ :09-02-2025ರಂದು ಸಂಜೆ ಆರೋಪಿಗಳಾದ ಚಂದ್ರಹಾಸ , ಗಣೇಶ , ಅಭಿಲಾಷ್ ಮತ್ತು ಮದನ್ ಎಂಬುವವರು ಕಾರು ಮತ್ತು ಬೈಕ್ ನಲ್ಲಿ ಬಂದು ಮನೆಯ ಮುಂದೆ ನಿಲ್ಲಿಸಿ ಮನೆಯ ಗೇಟನ್ನು ಕಾಲಿನಲ್ಲಿ ಒದ್ದು ಅಕ್ರಮವಾಗಿ ಒಳಪ್ರವೇಶಿಸಿ ಚಿತ್ತರಂಜನ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ ಕಾರ್ ಒಳಗಡೆ ಹತ್ಯಾರ್ ಇದೆ ಎಂದು ಹೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಚಂದ್ರಹಾಸ ಎಂಬವನು ಕೈಯೊಳಗೆ ಏನೋ ವಸ್ತು ಇಟ್ಟುಕೊಂಡು ಚಿತ್ತರಂಜನ್ ರವರ ಕಪಾಳಕ್ಕೆ ಹೊಡೆದ ಪರಿಣಾಮ ಚಿತ್ತರಂಜನ್ ರವರ ಹಲ್ಲು ಕಿತ್ತು ಬಿದ್ದು ಒಸಡಿನಲ್ಲಿ ರಕ್ತ ಸ್ರಾವವಾಗಿ ಚಕ್ಕರ್ ಬಂದು ಬಿದ್ದಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಚಿತ್ತರಂಜನ್ ರವರ ಅಂಗಡಿಯನ್ನು ಆರೋಪಿಗಳು ಹೇಳಿದ ರೇಟಿಗೆ ಕೊಡಬೇಕೆಂಬ ಕಾರಣದಿಂದ ಈ ರೀತಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಚಿತ್ತರಂಜನ್ ರವರು ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 117(2) , 329(3), 351(2),352 rw 3(5) BNS ರಂತೆ ಪ್ರಕರಣ ದಾಖಲಾಗಿದೆ.