
ಗಂಗೊಳ್ಳಿ: ದಿನಾಂಕ :08-02-2025(ಹಾಯ್ ಉಡುಪಿ ನ್ಯೂಸ್) ತ್ರಾಸಿ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಪರವಾನಿಗೆ ಗಿಂತ ಹೆಚ್ಚಿನ ಮರಳು ಕಳ್ಳತನ ನಡೆಸುತ್ತಿದ್ದ ಮರಳು ಕಳ್ಳರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಹರೀಶ್ ಆರ್ ಅವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ಯವರಾದ ಹರೀಶ್ ಆರ್ ಅವರು ದಿನಾಂಕ 07/02/2025 ರಂದು ಬೆಳಿಗ್ಗೆ ಠಾಣೆಯಲ್ಲಿರುವಾಗ ಮಾಹಿತಿದಾರರೊಬ್ಬರು ಕರೆ ಮಾಡಿ ದಿನಾಂಕ 06/02/2025 ರಂದು ತ್ರಾಸಿ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸುವ ಪ್ರದೇಶದಲ್ಲಿ ಪರವಾನಿಗೆಕ್ಕಿಂತ ಹೆಚ್ಚಿನ ಮರಳನ್ನು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದಂತೆ ಠಾಣೆಯ ಸಿಬ್ಬಂದಿಯವರೊಂದಿಗೆ ತ್ರಾಸಿ ಗ್ರಾಮದ ಸೌಪರ್ಣಿಕಾ ನದಿಯಲ್ಲಿ ಮರಳು ಪರವಾನಿಗೆ ಪಡೆದ ಸ್ಥಳಕ್ಕೆ ಹೋಗಿದ್ದು ಆ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದ ದ್ರಶ್ಯಾವಳಿಯನ್ನು ಪರಿಶೀಲಿಸಿದಾಗ ದಿನಾಂಕ 06/02/2025 ರಂದು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 07:00 ಗಂಟೆಯವರೆಗೆ ಒಟ್ಟು 64 ಲೋಡ್ ಮರಳನ್ನು ಲಾರಿಯಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿದ್ದು ಪರವಾನಿಗೆಗಿಂತ ಹೆಚ್ಚುವರಿಯಾಗಿ 22 ಲೋಡ್ ಮರಳು (ಅಂದಾಜು 66 ಯುನಿಟ್ ಮರಳು,ಅಂದಾಜು ಮೌಲ್ಯ 1,98,000 ರೂಪಾಯಿ) ಲಾರಿಯಲ್ಲಿ ಸಾಗಾಟ ಮಾಡಿರುತ್ತಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಅಪಾದಿತರಾದ ಸುರೇಶ್ ಹಾಗೂ ಲಾರಿಯ ಚಾಲಕರು ಪರವಾನಿಗೆಗಿಂತ ಹೆಚ್ಚುವರಿಯಾಗಿ ಅಕ್ರಮವಾಗಿ ಸೌಪರ್ಣಿಕಾ ನದಿಯಿಂದ ಮರಳನ್ನು ಕಳವು ಮಾಡಿ ಅದನ್ನು ಲಾರಿಯಲ್ಲಿ ಸಾಗಾಟ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಸಂಘಟಿತ ಅಪರಾಧ ಮಾಡುವ ಉದ್ದೇಶದಿಂದ ಒಟ್ಟುಗೂಡಿಕೊಂಡು ಹೆಚ್ಚುವರಿಯಾಗಿ ಮರಳನ್ನು ತೆಗೆದು ಸರಕಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ, ಅಕ್ರಮವಾಗಿ ಮರಳು ಖನಿಜವನ್ನು ಸಾಗಾಟ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 303(2),112 BNS ಹಾಗೂ ಕಲಂ 4, 4(1A), 21 MMDR (MINES AND MINERALS REGULATION OF DEVELOPMENT) ACT ರಂತೆ ಪ್ರಕರಣ ದಾಖಲಾಗಿದೆ.