
ಹಿರಿಯಡ್ಕ: ದಿನಾಂಕ:24-01-2025(ಹಾಯ್ ಉಡುಪಿ ನ್ಯೂಸ್) ಕುಕ್ಕೆಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕೊಜೆ ಮಣ್ಣು ಗಣಿಗಾರಿಕೆ ಸ್ಥಳಕ್ಕೆ ಉಡುಪಿ ಜಿಲ್ಲಾ ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ನಾನಿ ಚೆಲುವ ಮೂರ್ತಿ ಅವರಿಗೆ ದಿನಾಂಕ 23/01/2025 ರಂದು ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದರವರು ದೂರವಾಣಿ ಕರೆ ಮಾಡಿ ಉಡುಪಿ ತಾಲೂಕು, ಕುಕ್ಕೆಹಳ್ಳಿಯಲ್ಲಿ ಅಕ್ರಮ ಕೊಜೆ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ ಮೇರೆಗೆ ಚೆಲುವಮೂರ್ತಿಯವರು ಅಧಿಕಾರಿಗಳೊಂದಿಗೆ ಕೂಡಲೇ ಸ್ಥಳಕ್ಕೆ ಹೋದಾಗ ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಮದ ಪನ್ಚೂರು ಎಂಬಲ್ಲಿ ಸರ್ವೆ ನಂಬರ್ 85-1 ಮತ್ತು 85-2 ರಲ್ಲಿ ಹಿಟಾಚಿ ಯಂತ್ರವನ್ನು ಬಳಸಿ ಕೊಜೆ ಮಣ್ಣು ಗಣಿ ಗಾರಿಕೆ ನಡೆಸುತ್ತಿದ್ದು ಭಾರಿ ಪ್ರಮಾಣದಲ್ಲಿ ಕೊಜೆ ಮಣ್ಣನ್ನು ಆಳದಿಂದ ತೆಗೆದು ಸಾಗಾಟ ಮಾಡಿ ಬೃಹತ್ ಕಂದಕ ಉಂಟಾಗಿರುವುದು ಕಂಡು ಬಂದಿರುತ್ತದೆ ಎಂದು ದೂರಿನಲ್ಲಿ ಬರೆದಿದ್ದಾರೆ.
ಅಧಿಕಾರಿಗಳನ್ನು ನೋಡಿದ ಹಿಟಾಚಿ ಆಪರೇಟರ್ ಹಿಟಾಚಿಯೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ ಎನ್ನಲಾಗಿದೆ. ಸ್ಥಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಹೆಸರು ವಿಳಾಸವನ್ನು ವಿಚಾರ ಮಾಡಿದಾಗ ಆತನು ಸುರೇಂದ್ರ ಎಂದು ತಿಳಿಸಿದ್ದು ಆತನನ್ನು ವಿಚಾರಣೆ ಮಾಡಿದಾಗ ಆತನು ಅಜಿತ್ ಮತ್ತು ಮಹಾಬಲ ಎಂಬವರೊಂದಿಗೆ ಸೇರಿ ಕೊಜೆ ಮಣ್ಣುಗಾರಿಕೆ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ ಎಂದು ದೂರಿದ್ದಾರೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಸರಕಾರಕ್ಕೆ ರಾಜಧನ ಪಾವತಿಸದೇ ಸ್ವಂತ ಲಾಭಗಳಿಸುವ ಉದ್ದೇಶಕ್ಕೋಸ್ಕರ ಆಸ್ತಿಯ ಅಪರಾಧಿಕ ದುರ್ವ್ಯವಹಾರ ಮಾಡಿ ಅಕ್ರಮವಾಗಿ ಕೊಜೆ ಮಣ್ಣನ್ನು ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 316 ಜೊತೆಗೆ 3(5) BŅS, ಕಲಂ: 4(1A̧)21(4)MMRD ACT ರಂತೆ ಪ್ರಕರಣ ದಾಖಲಾಗಿದೆ.