Spread the love

ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ…..

ಆದರೂ ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು……

ನಿಮ್ಮ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದ್ದರೆ ದಯವಿಟ್ಟು ಸಾಧ್ಯವಾದಷ್ಟು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಳ್ಳಿ.

೧) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಲೋಟ Green/Red/ White/Block Tea ಯಾವುದಾದರೂ ಒಂದನ್ನು Alternative day ಕುಡಿಯಿರಿ. ( ನಿಮ್ಮ ಹತ್ತಿರದ Organic shop ಗಳಲ್ಲಿ ಅಥವಾ ದೊಡ್ಡ ಅಂಗಡಿಗಳಲ್ಲಿ ದೊರೆಯುತ್ತದೆ.) ಅಥವಾ ಇದಕ್ಕೆ ಪರ್ಯಾಯವಾಗಿ ರಾಗಿ ಗಂಜಿ – ಸಿರಿ ಧಾನ್ಯಗಳ ಗಂಜಿ ಆದರೂ ಸೇವಿಸಬಹುದು…..

೨) ದಿನದ ಯಾವುದಾದರೂ ಸಮಯದಲ್ಲಿ ಹಸಿಯಾಗಿ ತಿನ್ನಬಹುದಾದ ಕ್ಯಾರೆಟ್ ಸೌತೆಕಾಯಿ ಈರುಳ್ಳಿ ಬೆಳ್ಳುಳ್ಳಿ ನವಿಲುಕೋಸು ಎಲೆ ಕೋಸು ಬೀನ್ಸ್ ಟೊಮ್ಯಾಟೊ ಬೀಟ್ ರೋಟ್ ಮೂಲಂಗಿ ಮುಂತಾದ ತರಕಾರಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಅಥವಾ ಇತರೇ ತರಕಾರಿಗಳನ್ನು ಅರ್ಧ ಬೇಯಿಸಿ ಸಹ ತಿನ್ನಬಹುದು….

೩) ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಮರೆಯದೆ ಸೇವಿಸಿ. ಕನಿಷ್ಠ ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವಿಸುವುದು ಕಡ್ಡಾಯ ಎಂದು ಭಾವಿಸಿ ಸಂಕಲ್ಪ ಮಾಡಿಕೊಳ್ಳಿ……

೪) ಎಷ್ಟೇ ಕಷ್ಟವಾದರೂ ಹೆಸರು ಕಾಳು, ಕಡಲೆ ಕಾಳು ಮುಂತಾದ ಸೇವಿಸಬಹುದಾದ ಮೊಳಕೆ ಕಾಳುಗಳನ್ನು ವಾರಕ್ಕೆ ಕನಿಷ್ಠ ಐದು ದಿನ ಸ್ವಲ್ಪವಾದರೂ ಸೇವಿಸಲು ರೂಡಿಸಿಕೊಳ್ಳಿ……

೫) ಬಾದಾಮಿ ಗೋಡಂಬಿ ಒಣ ದ್ರಾಕ್ಷಿ ಖರ್ಜೂರ ಅಂಜೂರ ವಾಲ್ ನಟ್ ಪಿಸ್ತಾ ಮುಂತಾದ ಡ್ರೈ ಪ್ರೂಟ್ ಗಳನ್ನು ನಿಮ್ಮ ಜೊತೆಯಲ್ಲೇ ಕೊಂಡೊಯ್ದು ಅಲ್ಪ ಪ್ರಮಾಣದಲ್ಲಿ ಆಗಾಗ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ…..

೬) ಅಕ್ಕಿ ರಾಗಿ ಗೋದಿ ಜೋಳ ನವಣೆ ಸಜ್ಜೆ ಆರ್ಕ ಊದಲು ಮುಂತಾದವುಗಳಿಂದ ತಯಾರಾದ ದಿನನಿತ್ಯದ ಊಟದ ಪದಾರ್ಥಗಳನ್ನು ಹಸಿವು ನೀಗಿಸಲು ಮಾತ್ರ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಈ ಎಲ್ಲವೂ ಊಟದಲ್ಲಿ ಸೇರಿರುವಂತೆ ವಾರದ Menu ಸಿದ್ದಪಡಿಸಿಕೊಳ್ಳಿ.
( ಒಂದು ದಿನ ಒಂದೊಂದರಂತೆ)….

೭) ಹಾಲಿಗೆ ಹೆಚ್ಚು ನೀರು ಬೆರೆಸಿ ದಿನಕ್ಕೆ ಕೇವಲ ಒಂದು ಗ್ಲಾಸ್ ಕುಡಿಯಿರಿ…..

೮) ಮಾಂಸಾಹಾರಿಗಳು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪ್ರಮಾಣದಲ್ಲಿ ಅದನ್ನು ಸೇವಿಸಿ. ಹೋಟೆಲ್‌ ಮಾಂಸಹಾರಕ್ಕಿಂತ ಮನೆಗಳಲ್ಲಿ ಮಾಡಿದ ಮಾಂಸಹಾರ ಉತ್ತಮ. ಮೀನು ಮೊಟ್ಟೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸಿ….

ಇದರ ಜೊತೆಗೆ,

೧) ಪ್ರತಿನಿತ್ಯ ಕನಿಷ್ಠ ೩ ಕಿಲೋಮೀಟರ್ ಸಾಧಾರಣ ಓಟ ಮತ್ತು ೩ ಕಿಲೋಮೀಟರ್ ನಡಿಗೆ ಮಾಡಲೇ ಬೇಕೆಂಬ ದೃಡ ನಿರ್ಧಾರ ಮಾಡಿ.
ನೀವು ಎಲ್ಲೇ ಇದ್ದರೂ ಇದಕ್ಕಾಗಿ ಯೋಜನೆ ರೂಪಿಸಿಕೊಳ್ಳಿ…..

೨) ಅನುಕೂಲ ಇದ್ದವರು ಯೋಗ Gym Aerobic Dance ಓಟ ಧ್ಯಾನ ಮುಂತಾದ ಯಾವುದಾದರೂ ಒಂದರಲ್ಲಿ ತೊಡಗಿಸಿಕೊಳ್ಳಿ.
ಯೋಗ ನಿಮ್ಮ ಮೊದಲ ಆಯ್ಕೆಯಾಗಿರಲಿ……

೩) ದೈಹಿಕ ಚಟುವಟಿಕೆಗಳ ಯಾವುದೇ ಅವಕಾಶವನ್ನು ಕಳೆದುಕೊಳ್ಳ ಬೇಡಿ. ಮುಖ್ಯವಾಗಿ ಪರಿಸರದೊಂದಿಗಿನ ಪ್ರವಾಸವನ್ನು ಸದಾ ಆಯ್ಕೆ ಮಾಡಿಕೊಳ್ಳಿ ಮತ್ತು ಅನುಭವಿಸಿ…..

೪) ಗೆಳೆಯರು ಮತ್ತು ಕುಟುಂಬದವರೊಂದಿಗೆ ಸ್ನೇಹ ಸಂಬಂಧ ಉತ್ತಮವಾಗಿದ್ದರೆ ಅದನ್ನು ಜತನವಾಗಿ ಕಾಪಾಡಿಕೊಳ್ಳಿ ಮತ್ತು ಸಾಧ್ಯವಾದಷ್ಟು ಹೆಚ್ಚು ಸಮಯ ಅವರೊಂದಿಗೆ ಕಳೆಯಿರಿ…

೫) ಹೊಟ್ಟೆ ಪಾಡಿನ ಉದ್ಯೋಗದ ಜೊತೆಗೆ ಯಾವುದಾದರೂ ಒಂದು ಆಸಕ್ತಿಯ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಾಜ ಸೇವೆ ಇವುಗಳಲ್ಲಿ ಉತ್ತಮ……

ಈ ಎಲ್ಲವನ್ನೂ ಒಂದು ಅನಿವಾರ್ಯ ಮತ್ತು ಅವಶ್ಯಕ ಉದ್ಯೋಗ ಎಂದು ಮಾಡಿಕೊಳ್ಳಿ…..

ನಿಮ್ಮ ಎಲ್ಲಾ Will power ಅನ್ನು ಉಪಯೋಗಿಸಿ ಎಷ್ಟೇ ಬಾರಿ ವಿಫಲರಾದರೂ, ಎಷ್ಟೇ ಕಷ್ಟ ನಷ್ಟ ನೋವು ಅಸಹಾಯಕತೆ ಇದ್ದರೂ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಿ…….

ನೂರು ಬಾರಿ ನಿಮ್ಮ ಸಂಕಲ್ಪ ನಾನಾ ಕಾರಣಗಳಿಂದ ಸಾಧ್ಯವಾಗದಿದ್ದರೂ ನೂರೊಂದನೇ ಸಾರಿ ಪ್ರಯತ್ನಿಸುವುದನ್ನು ಬಿಡಬೇಡಿ‌.
ಈ ಪ್ರಯತ್ನದಲ್ಲಿ ಬರುವ ಸಣ್ಣಪುಟ್ಟ ದೈಹಿಕ – ಮಾನಸಿಕ ನೋವುಗಳನ್ನು ಪ್ರಜ್ಞಾ ಪೂರ್ವಕವಾಗಿ ಮೆಟ್ಟಿ ನಿಲ್ಲಿ…..

ಈ ಅಭ್ಯಾಸಗಳನ್ನು ತಪ್ಪಿಸಿಕೊಳ್ಳಲು ಬಹಳಷ್ಟು ನೆಪಗಳು ನಿಮಗೆ ದಿನವೂ ಸಿಗುತ್ತಲೇ ಇರುತ್ತದೆ……

ನಿಮ್ಮ ಮನಸ್ಸಿನಲ್ಲಿ ಎರಡು ರೀತಿಯ ತೊಯ್ದಾಟಗಳು ಸದಾ ಜಾಗೃತವಾಗಿರುತ್ತದೆ,…

ಒಂದು,
ಅಯ್ಯೊ ಎಷ್ಟು ಮಾಡಿದರೂ ಅಷ್ಟೆ. ಹಣೆಯಲ್ಲಿ ಬರೆದಿದ್ದು ಆಗುತ್ತದೆ. ಅದಕ್ಕಾಗಿ ಇಷ್ಟೊಂದು ಕಷ್ಟ ಏಕೆ. ಏನೂ ಅಭ್ಯಾಸವಿಲ್ಲದವರು ಸದಾ ವಾಕಿಂಗ್ ಮಾಡುತ್ತಿದ್ದವರು ಮೊನ್ನೆ ತಾನೆ ದಿಡೀರ್ ಸತ್ತರು ಎಂಬ ಆಲೋಚನೆ ನಿಮಗೆ ನೆಪವಾಗಿ ಬರುತ್ತದೆ. ಸೋಮಾರಿಗಳು ಇದನ್ನೇ ಪ್ರಮುಖವಾಗಿ ಹೇಳುತ್ತಿರುತ್ತಾರೆ…..

ಎರಡು,
ಹೌದು ಕನಿಷ್ಠ ಮಟ್ಟದ ವ್ಯಾಯಾಮ ಮತ್ತು ಆಹಾರ ಪದ್ದತಿ ನನ್ನ ಜೀವನಮಟ್ಟವನ್ನು ಖಂಡಿತ ಉತ್ತಮ ಸ್ಥಿತಿಯಲ್ಲಿ ಇಟ್ಟಿರುತ್ತದೆ.ಅದಕ್ಕಾಗಿ ನಾನು ಈಗ ಸ್ವಲ್ಪ ಶ್ರಮ ಪಡಲೇಬೇಕು. ಇದು ಜೀವ ಇರುವವರೆಗೂ ಪಾಲಿಸ ಬೇಕಾದ ಕರ್ತವ್ಯ….

ನೀವು ಸಾಧ್ಯವಾದಷ್ಟು ಎರಡನೇ ಮನಸ್ಸಿನ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ…..

ಇದರಿಂದ ಫಲಿತಾಂಶಗಳನ್ನು ಬೇಗ ನಿರೀಕ್ಷೆ ಮಾಡಬೇಡಿ. ಇದು ದೀರ್ಘಾವಧಿಯ ನಿರಂತರ ಕ್ರಿಯೆ.
ಆದರೆ ಖಂಡಿತ ನಿಮ್ಮ ಜೀವನಶೈಲಿ ಆರೋಗ್ಯಕರ ವಾಗಿರುವುದಲ್ಲದೆ ಕನಿಷ್ಠ ಸಣ್ಣಪುಟ್ಟ ಖಾಯಿಲೆಗಳು ನಿಮ್ಮನ್ನು ಕಾಡುವುದು ಕಡಿಮೆಯಾಗುತ್ತದೆ ಎಂದು ಖಚಿತವಾಗಿ ಭರವಸೆ ನೀಡಬಲ್ಲೆ……

( ನಾನು ಡಾಕ್ಟರ್ ಅಥವಾ ಆಯುರ್ವೇದ ಪಂಡಿತ ಅಥವಾ Fitness ಗುರು ಅಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ. ಇದು ಇಲ್ಲಿಯವರೆಗಿನ ಬದುಕಿನ ಅನುಭವದ ಅನಿಸಿಕೆಗಳು ಮಾತ್ರ. ಆಯ್ಕೆಗಳು ನಿಮ್ಮ ವಿವೇಚನೆಗೆ ಸೇರಿದ್ದು…. )

ಏಕೆಂದರೆ……….

ಸರಳ ಸಹಜ ಸಾಮಾನ್ಯ ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ,………

ನೀವು ಮಹಾನ್ ದೈವ ಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ದಿಂದ 80 ಮಾತ್ರ,
ನೀವು ಉಗ್ರ ದೈವವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ,…….

ನೀವು ಅತ್ಯುಗ್ರ ಯೋಗ ಧ್ಯಾನದ ಮಹರ್ಷಿಗಳಾಗಿದ್ದರೂ ಬದುಕುವುದು ಇಷ್ಟೆ,
ನೀವು ಲಫಂಗ, ದುಷ್ಟ ಸೋಮಾರಿಯಾಗಿದ್ದರೂ ನಿಮ್ಮ ಆಯಸ್ಸು ಇಷ್ಟೆ,…..

ನೀವು ಗಿಡಮೂಲಿಕೆ, ಸಸ್ಯಾಹಾರ ಮುಂತಾದ ಆಯುರ್ವೇದದ ರೀತಿಯಲ್ಲಿ ಆಹಾರ ಸೇವಿಸಿದರೂ ಅಷ್ಟೆ,
ನೀವು ಸಿಕ್ಕಸಿಕ್ಕ ಪ್ರಾಣಿ, ಪಕ್ಷಿ , ಮಾಂಸಾಹಾರ ತಿಂದರೂ ಅಷ್ಟೆ……,

ನೀವು ವಿಶ್ವದ ಬಹುದೊಡ್ಡ ಶ್ರೀಮಂತರಾದರೂ ಅಷ್ಟೆ,
ನೀವು ಬೀದಿಯಲ್ಲಿ ಅಲೆದು ತಿನ್ನುವ ಭಿಕ್ಷುಕರಾದರೂ ಅಷ್ಟೆ…..

ನೀವು ಪ್ರಖ್ಯಾತ, ಪ್ರಕಾಂಡ, ಸಕಲಕಲಾವಲ್ಲಭ ಮೇಧಾವಿಗಳಾದರೂ ಅಷ್ಟೆ,
ನೀವು ನನ್ನಂತ ದಡ್ಡ, ಅಪ್ರಯೋಜಕರಾದರೂ ಬದುಕುವುದು ಅಷ್ಟೆ…….

ನೀವು ಯಾವ ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶದವರಾದರೂ ಅಷ್ಟೆ,
ನೀವು ಮನುಷ್ಯನ ಎಲ್ಲಾ ಖಾಯಿಲೆಗಳನ್ನು ಗುಣಪಡಿಸುವ ವೈದ್ಯರಾದರೂ ಅಷ್ಟೆ…….

ನೀವು ಬುದ್ದ, ಮಹಾವೀರ, ಯೇಸು, ಪ್ಯೆಗಂಬರ್, ಶಂಕರಾಚಾರ್ಯ, ಗುರುನಾನಕ್, ಬಸವ, ಗಾಂಧಿ, ಅಂಬೇಡ್ಕರ್ ಆಗಿದ್ದರೂ ಅಷ್ಟೆ,
ನೀವು ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ , ಮಮತ, ಮಾಯಾವತಿ ಆಗಿದ್ದರೂ ಅಷ್ಟೆ,
ನೀವು ಯಂಕ, ಸೀನ, ಲಕ್ಷ್ಮೀ, ಕಮಲ, ನಿರ್ಮಲ ಆಗಿದ್ದರೂ ಅಷ್ಟೆ,…….

ನೀವು ಒಮ್ಮೆಯೂ ಸುಳ್ಳಾಡದ, ಮೋಸಮಾಡದ, ಅತ್ಯಂತ ಕರುಣಾಮಯಿ ಆಗಿದ್ದರೂ ಅಷ್ಟೆ,
ನೀವು ಭ್ರಷ್ಟ, ವಂಚನೆ, ಸುಳ್ಳಗಳನ್ನೇ ಜೀವನ ಮಾಡಿಕೊಂಡಿದ್ದರೂ ಅಷ್ಟೆ,….

ಇದೇ ಸೃಷ್ಟಿಯ ಅದ್ಭುತ, ಆಶ್ಚರ್ಯಕರ ನಿಯಮ,
ಹುಟ್ಟು ಸಾವಿನಲ್ಲಿ ಸೃಷ್ಟಿ ಮಾಡಿರುವ ಸಮಾನತೆ ಇದು‌….

ಹಾಗಾದರೆ ಜೀವನ ಮಟ್ಟಗಳಲ್ಲಿ ವ್ಯತ್ಯಾಸ ಇಲ್ಲವೇ ?,
ಖಂಡಿತವಾಗಿ ಇದೆ.
ಕೆಲವರು ಅತ್ಯುತ್ತಮ ಮಟ್ಟದ ಸುಖಕರ ಜೀವನ ನಡೆಸಿದರೆ,
ಇನ್ನೂ ಕೆಲವರು ಅತ್ಯಂತ ಕೆಟ್ಟ. ಕಷ್ಟಕರ ಜೀವನ ಸಾಗಿಸುತ್ತಾರೆ…..

ಇಲ್ಲೂ ಇರುವ ಮತ್ತೊಂದು ಆಶ್ಚರ್ಯಕರ ಸಂಗತಿ,……

ವ್ಯಕ್ತಿಯ ಮಾನಸಿಕ ಸ್ಥಿತಿ,
ಅಜ್ಞಾನ, ಮೌಢ್ಯ, ನಂಬಿಕೆ, ಭಕ್ತಿ, ತಿಳಿವಳಿಕೆ ಎಂಥಾ ಬಡವರಿಗೂ ಸ್ವಲ್ಪ ನೆಮ್ಮದಿ ನೀಡಿದರೆ,
ಹಣ, ಅಧಿಕಾರ, ಅರಿವು, ಆರೋಗ್ಯ ಎಲ್ಲಾ ಇದ್ದರೂ ನೆಮ್ಮದಿ ಇಲ್ಲದವರ ಬದುಕೂ ಇಲ್ಲಿದೆ…..

ಬದುಕಿಗೆ ನಿರ್ದಿಷ್ಟವಾದ ಮಾನದಂಡಗಳು ಇಲ್ಲವೆನಿಸುತ್ತದೆ,
ಕೆಲವು ಅಸಹಜ ಖಾಯಿಲೆ, ಅಪಘಾತ, ಕೊಲೆ, ಪ್ರಾಕೃತಿಕ ವಿಕೋಪ ಇತ್ಯಾದಿ ಅನಿರೀಕ್ಷಿತಗಳನ್ನು ಹೊರತುಪಡಿಸಿದರೆ ಮತ್ತು ಕೆಲವು ಅಪರೂಪದ ಶತಾಯುಷಿಗಳನ್ನು ಬಿಟ್ಟರೆ,
ಮನುಷ್ಯನ ಆಯಸ್ಸು ಸುಮಾರು ಇಷ್ಟೇ ಎಲ್ಲಾ ಕಡೆಯೂ….

ಹಾಗಾದರೆ ಇದಕ್ಕೆ ಉತ್ತರ, ಪರಿಹಾರ, ?

ಸೃಷ್ಟಿಯ ರಚನೆಯೇ ಹೀಗಿರಬಹುದೇ ?
ಅಥವಾ ಇನ್ನೇನಾದರೂ ಒಳ ಮರ್ಮ ಇದೆಯೇ ?
ನನಗೂ ಸ್ಪಷ್ಟವಾಗಿ ಅರ್ಥವಾಗಿಲ್ಲ.

ಧರ್ಮದಲ್ಲಿದೆ, ದೇವರಲ್ಲಿದೆ, ಗ್ರಂಥಗಳಲ್ಲಿ ಇದೆ ಎಂದು ಅತಿಮಾನುಷ ಶಕ್ತಿಯ ಪ್ರತಿಕ್ರಿಯೆ ನೀಡದೆ,
ನಿಮ್ಮ ಇಂದಿನ ಅರಿವಿನ ಮಿತಿಯಲ್ಲಿ ಮಾಹಿತಿ ಹಂಚಿಕೊಂಡರೆ
ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……….

error: No Copying!