ಬೆಂಗಳೂರು: ದಿನಾಂಕ: 09-01-2025(ಹಾಯ್ ಉಡುಪಿ ನ್ಯೂಸ್) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ .ಬೇಕರಿಯೊಂದರ ಮೇಲೆ ದಾಳಿ ಮಾಡಿರುವ ಪುಡಿ ರೌಡಿಗಳ ಗುಂಪೊಂದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಹೆಬ್ಬಾಳದ ಭೂಪಸಂದ್ರ ಬಳಿ ಈ ಘಟನೆ ನಡೆದಿದ್ದು, ಬೇಕರಿಯೊಂದಕ್ಕೆ ನುಗ್ಗಿದ ಪುಡಿ ರೌಡಿಗಳ ಗುಂಪು ಅಲ್ಲಿನ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುತ್ತಿರುವ ವೀಡಿಯೋ ಬೇಕರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ರಾತ್ರಿ 9ಗಂಟೆ ವೇಳೆಗೆ ಬೇಕರಿಗೆ ಆಗಮಿಸಿದ ಪುಡಿ ರೌಡಿಗಳ ಗ್ಯಾಂಗ್ ಮೊದಲು ಸಿಗರೇಟ್ ಕೇಳಿದ್ದಾರೆ. ಸಿಬ್ಬಂದಿ ಸಿಗರೇಟ್ ನೀಡಿ ಹಣ ಕೇಳಿದ್ದಕ್ಕೆ ಬೇಕರಿ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ವಿಶ್ವ ಎಂಬಾತ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಮಾತಿಗೆ ಮಾತು ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ.
ಕ್ಷಣಾರ್ಧದಲ್ಲಿ ಸಂಘರ್ಷ ತಾರಕಕ್ಕೆ ತಿರುಗಿ ಇಬ್ಬರು ಕಿಡಿಗೇಡಿಗಳು ಸಿಬ್ಬಂದಿಯನ್ನು ಥಳಿಸಲು ಮುಂದಾಗಿದ್ದಾರೆ. ಬೇಕರಿ ಒಳಗೆ ಇದ್ದ ಯುವಕನ ಮೇಲೆ ಅಲ್ಲೇ ಇದ್ದ ಸ್ಪ್ರೈಟ್ ಬಾಟಲ್ ತೆಗೆದು ಹೊಡೆಯಲು ಯತ್ನಿಸಿದ್ದಾರೆ.
ಅದೃಷ್ಟವಶಾತ್ ಸಿಬ್ಬಂದಿ ಬಾಟಲಿ ಏಟಿನಿಂದ ಪಾರಾಗಿದ್ದು, ಬಾಟಲಿ ತಾಗಿದ್ದರೆ ಆತನ ತಲೆಗೆ ಗಂಭೀರ ಗಾಯವಾಗುತ್ತಿತ್ತು ಎನ್ನಲಾಗಿದೆ. ಪುಡಿ ರೌಡಿಗಳ ಗ್ಯಾಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿರುವ ಪುಡಿ ರೌಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.