Spread the love

ಉಡುಪಿ: ದಿನಾಂಕ:10-01-2025(ಹಾಯ್ ಉಡುಪಿ ನ್ಯೂಸ್)

ನ್ಯಾಯಯುತವಾದ ವೇತನವನ್ನು ನೀಡದೆ ಶೋಷಣೆಗೆ ಒಳಪಡಿಸಲಾದ ಮುಜರಾಯಿ ದೇವಸ್ಥಾನದ ನೌಕರರೊಬ್ಬರಿಗೆ ವೇತನ ಸಹಿತ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯವು ಆದೇಶ ಮಾಡಿದ ಸಕಾರಾತ್ಮಕ ಬೆಳವಣಿಗೆಯೊಂದು ಇತ್ತೀಚೆಗೆ ನಡೆದಿದೆ.

ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆಯ ಅಧೀನಕ್ಕೆ ಒಳಪಟ್ಟ ಉಡುಪಿ ತಾಲೂಕು ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನದ ನೌಕರರಾದ ನಟರಾಜ ಪುರಾಣಿಕ ಎಂಬವರೇ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರು ಮತ್ತು ಸರಕಾರದ ಅನ್ಯಾಯದ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿ ನ್ಯಾಯಪಡೆದವರಾಗಿದ್ದಾರೆ.

ನಟರಾಜ ಪುರಾಣಿಕ ಅವರು ದಶಕಗಳಿಂದ ಅಂಬಲಪಾಡಿ ದೇವಸ್ಥಾನದ ನೌಕರರಾಗಿದ್ದು, ಇವರಿಗೆ ನಿಯಮಾನುಸಾರ ಪೂರ್ಣ ವೇತನವನ್ನು ನೀಡದೆ ಆರಂಭದಲ್ಲಿ ನಾಲ್ಕು ಸಾವಿರ ರೂಪಾಯಿಗಳಂತೆಯೂ, ನಂತರ ಐದು ಸಾವಿರ ರೂಪಾಯಿಗಳಂತೆಯೂ ವೇತನ‌ ನೀಡಿ ಅನ್ಯಾಯ ಮಾಡಲಾಗುತ್ತಿತ್ತು. ಈ ಬಗ್ಗೆ ನ್ಯಾಯಕೋರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರಾಗಿರುವ ಡಾ. ನೀ. ವಿಜಯ ಬಲ್ಲಾಳರಿಗೆ, ಜಿಲ್ಲಾಡಳಿತಕ್ಕೆ ಮತ್ತು ಮುಜರಾಯಿ ಇಲಾಖಾ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಕೊನೆಗೆ 2016ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ರಾಜ್ಯ ಉಚ್ಛ ನ್ಯಾಯಾಲಯವು ದೇವಸ್ಥಾನದ ನೌಕರರಾದ ನಟರಾಜ ಪುರಾಣಿಕರ ಪರವಾಗಿ 2024ರ ಡಿಸೆಂಬರ್ 2ರಂದು ಅಂತಿಮ ಆದೇಶ ಮಾಡಿತು. ಆದೇಶದಂತೆ ದೇವಳದ ಆಡಳಿತ ಮುಖ್ಯಸ್ಥರಾದ ಡಾ. ವಿಜಯ ಬಲ್ಲಾಳರಿಂದ 13, 27, 742 ಲಕ್ಷ ರೂಪಾಯಿಗಳ ಚೆಕ್ ನ್ನು ಪಡೆದು ನಟರಾಜ ಪುರಾಣಿಕರಿಗೆ ಹಸ್ತಾಂತರಿಸುವ ಮೂಲಕ ನ್ಯಾಯಮೂರ್ತಿಗಳು ನ್ಯಾಯ ಒದಗಿಸಿದರು.

ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನೊಂದ ನಟರಾಜ ಪುರಾಣಿಕರ ಪರವಾಗಿ ಖ್ಯಾತ ನ್ಯಾಯವಾದಿ ಅಜಿತ್ ಶೆಟ್ಟಿ ವಾದಿಸಿದ್ದರು.

error: No Copying!