ಬದುಕಿನ ಪಯಣದ ಹಾದಿಯಲ್ಲಿ,
ಎರಡು ದಾರಿಗಳು ಮತ್ತು ಎರಡು ಆಯ್ಕೆಗಳು……..
ಪ್ರತಿಯೊಬ್ಬರ ಜೀವನದಲ್ಲೂ ಹುಟ್ಟಿನಿಂದ ಕೊನೆಯವರೆಗೂ ಎಲ್ಲಾ ವಿಭಾಗಗಳಲ್ಲೂ ಈ ದಾರಿಗಳು ಇರುತ್ತವೆ.
ಒಂದು,
ಹಿರಿಯರು ತೋರಿದ, ಧರ್ಮಗಳು ನೀಡಿದ, ಗ್ರಂಥಗಳು ಹೇಳಿದ ಅನುಭವದ ಆಧಾರದ ಮೇಲೆ ರೂಪಗೊಂಡ ಸಾಂಪ್ರದಾಯಿಕ ಮಾರ್ಗ.
ಹುಟ್ಟಿನ ಕಾರಣಕ್ಕೆ ದೊರೆಯುವ ಪ್ರದೇಶ, ತಂದೆ ತಾಯಿ ಮತ್ತು ಸಂಬಂದಗಳು, ಜಾತಿ ಭಾಷೆ ಧರ್ಮ ದೇವರು ಪರಿಸರ ಶಿಕ್ಷಣ ಉದ್ಯೋಗ ವೈವಾಹಿಕ ಬದುಕು ಹೀಗೆ ಎಲ್ಲವೂ ಹೆಚ್ಚು ಕಡಿಮೆ ತುಂಬಾ ಯೋಚಿಸದೆ ನಮ್ಮ ಆಯ್ಕೆಗಳು ಸಿದ್ದವಾಗಿರುತ್ತದೆ. ನೀವು ಗುರು ಹಿರಿಯರು ತೋರಿದ ಮಾರ್ಗದಲ್ಲಿ ನಡೆದರೆ ಸಾಕು. ಬದುಕಿನ ಒಂದು ಹಂತವನ್ನು ಸುಲಭವಾಗಿ ತಲುಪುತ್ತೀರಿ. ಆ ಸಂಧರ್ಭದಲ್ಲಿ ಎದುರಾಗುವ ಕಷ್ಟ ಸುಖಗಳಿಗೂ ಈ ಮಾರ್ಗದಲ್ಲಿ ಮೊದಲೇ ಪರಿಹಾರ ನಿರ್ಧಾರವಾಗುತ್ತದೆ. ನೀವು ಹೊಸ ದಾರಿ ಹುಡುಕುವ ಅವಶ್ಯಕತೆ ಇರುವುದಿಲ್ಲ.
ಹುಟ್ಟಿನ ಸಂಭ್ರಮ, ಸಾವಿನ ದುಃಖ, ಅನಿರೀಕ್ಷಿತ ಅಪಘಾತ, ಅನಾರೋಗ್ಯ, ವಿವಾಹ ವಿಚ್ಛೇದನ ಎಲ್ಲಕ್ಕೂ ದೇವರ ಧರ್ಮದ ನಂಬಿಕೆಯ ಜ್ಯೋತಿಷಿಗಳ ಪುನರ್ಜನ್ಮದ ಪರಿಹಾರ ಇರುತ್ತದೆ. ಭಾರತೀಯರ ಸಹಜ ಬದುಕಿನ ಶೈಲಿ ಇದು.
ಇನ್ನೊಂದು,
ಈ ಸಾಂಪ್ರದಾಯಿಕ ಶೈಲಿಗೆ ವಿರುದ್ದವಾದ ಹೊಸ ದಾರಿ. ಇದೇ ಸಮಾಜದ ನೀತಿ ನಿಯಮಗಳಿಗೆ ಅನುಸಾರವಾಗಿಯೇ ಬದುಕು ಪ್ರಾರಂಭಿಸಿದರೂ ಯಾವುದೋ ಕಾರಣದಿಂದ ಅಥವಾ ಪರಿಸ್ಥಿತಿಯ ಒತ್ತಡದಿಂದ ಸ್ವತಂತ್ರ ಚಿಂತನೆ ರೂಪಿಸಿಕೊಂಡು ಹೊಸ ದಾರಿಯಲ್ಲಿ ಮುನ್ನಡೆಯುವ ಪ್ರಯತ್ನ. ಇದು ಸ್ವಲ್ಪ ಅಸ್ಪಷ್ಟ. ದಾರಿಯಲ್ಲಿ ಸೋಲು ಗೆಲುವಿನ ಎಲ್ಲಾ ಸಾಧ್ಯತೆಯೂ ಇರುತ್ತದೆ. ತುಂಬಾ ರಿಸ್ಕ್ ಇಲ್ಲಿದೆ. ಬದುಕು ಪ್ರಪಾತಕ್ಕೆ ಕುಸಿಯಲೂ ಬಹುದು. ಸಾಂಪ್ರದಾಯಿಕ ಶೈಲಿಗೆ ವಿರುದ್ದವಾದುದರಿಂದ ಜನರ ಸಹಕಾರವೂ ದೊರೆಯುವುದಿಲ್ಲ.
ಎಲ್ಲಾ ಕಷ್ಟ ಸುಖಗಳಿಗೂ ತನ್ನ ಅರಿವಿನಿಂದಲೇ ಉತ್ತರ ಕಂಡುಕೊಳ್ಳಬೇಕು.
ಪ್ರವಾಹಕ್ಕೆ ವಿರುದ್ಧ ಈಜುವ ಸಾಹಸ ಮಾಡಬೇಕು.
ಈ ಎರಡು ದಾರಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಪ್ರಶ್ನೆಗಿಂತ ನಿಮ್ಮ ಮನಸ್ಥಿತಿ ಯಾವ ದಾರಿಗೆ ಒಗ್ಗುತ್ತದೆ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು.
ನೀವು ಮೃದು ಸ್ವಭಾವದವರಾಗಿದ್ದು ಯಥಾಸ್ಥಿತಿ ಇಷ್ಟ ಪಡುವವರಾದರೆ, ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ, ತುಂಬಾ ಭಾವುಕರಾಗಿದ್ದರೆ, ಮನೆಯ ಜವಾಬ್ದಾರಿ ನಿಮ್ಮ ಹೆಗಲ ಮೇಲಿದ್ದರೆ ಮೊದಲಿನ ಆಯ್ಕೆ ಸೂಕ್ತ.
ಬಂದದ್ದೆಲ್ಲಾ ಬರಲಿ, ನೋವು ನಲಿವುಗಳನ್ನು ಅನುಭವಿಸಿಯೇ ತೀರುತ್ತೇನೆ, ನನ್ನ ಕಷ್ಟ ಸುಖಗಳನ್ನು ನನ್ನ ಕ್ರಿಯೆ ಪ್ರತಿಕ್ರಿಯೆಗಳೇ ನಿರ್ಧರಿಸುತ್ತವೆ, ಒಟ್ಟಿನಲ್ಲಿ ನನಗೆ ಸ್ವತಂತ್ರ ಚಿಂತನೆಯೇ ಬೇಕು. ಯಾವ ಪೂರ್ವ ನಿರ್ಧಾರಿತ ಸಿದ್ಧಾಂತಗಳನ್ನು ಪ್ರಶ್ನಿಸಿ, ಸರಿ ಎನಿಸದೆ ಒಪ್ಪಿಕೊಳ್ಳುವುದಿಲ್ಲ. ಪ್ರಪಾತಕ್ಕೆ ಬಿದ್ದರೂ ಅದು ನನ್ನ ನಿರ್ಧಾರಗಳ ಫಲಿತಾಂಶ ಕಾರಣ ಎಂಬ ಮನೋಭಾವದವರಿಗೆ ಎರಡನೆಯ ದಾರಿ ಸೂಕ್ತ.
ಒಟ್ಟು ಫಲಿತಾಂಶದ ದೃಷ್ಟಿಯಿಂದ ನೋಡುವುದಾದರೆ ಈ ಸಮಾಜದಲ್ಲಿ ಸುಮಾರು ಶೇಕಡಾ 90% ರಷ್ಟು ವಾಸ್ತವ ಜೀವನದಲ್ಲಿ ಯಶಸ್ಸಿಯಾಗಿರುವವರು ಸಾಂಪ್ರದಾಯಿಕ ಜೀವನಕ್ಕೆ ಶರಣಾಗಿರುವವರೇ ಆಗಿರುತ್ತಾರೆ.
ಎರಡನೆಯ ವರ್ಗದವರು ವಿಫಲರಾಗುವುದೇ ಹೆಚ್ಚಾದರೂ, ಬದುಕನ್ನು ಕ್ರಿಯಾತ್ಮಕವಾಗಿ ನೋಡಿ, ತಮ್ಮನ್ನು ಹೊಸ ಪ್ರಯೋಗಗಳಿಗೆ ತೆರೆದುಕೊಂಡು ಸ್ವತಂತ್ರ ಜೀವನ ನಡೆಸುತ್ತಾರೆ.
ಸಂಪ್ರದಾಯವಾದಿಗಳದು ಹೆಚ್ಚಿನ ಭಾಗ ನೆಮ್ಮದಿಯ ಬದುಕಾದರೆ,
ಹೊಸ ದಾರಿಯ ಹುಡುಕಾಟದವರದು ಸದಾ ಅತೃಪ್ತ ಆತ್ಮ.
ವಿಚಿತ್ರವೆಂದರೆ,
ಅವರಿಗೆ ಇವರು ಅರೆ ಹುಚ್ಚರಂತೆ,
ಇವರಿಗೆ ಅವರು ಅರೆ ಹುಚ್ಚರಂತೆ ಕಾಣುತ್ತಾರೆ.
ಬಹುತೇಕ ನನ್ನ ದಾರಿ ಎರಡನೆಯ ಮಾರ್ಗದ ಸಮೀಪದಲ್ಲಿದೆ ಎನಿಸುತ್ತದೆ………….
ನಿಮ್ಮ ಆಯ್ಕೆ ಯಾವುದೋ ?
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….