Spread the love

ಯಾರು ಹೆಚ್ಚು ಶಕ್ತಿಶಾಲಿ, ಯಾರ ಹೆಸರನ್ನು ಹೆಚ್ಚು ನೆನಪಿಸಿಕೊಳ್ಳಬೇಕು, ಯಾರಿಂದ ಹೆಚ್ಚು ಪ್ರಯೋಜನವಾಗಿದೆ,……,

ತುಂಬಾ ಮುಕ್ತವಾಗಿ, ನಿಷ್ಕಳಂಕವಾಗಿ, ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ನಿಧಾನವಾಗಿ ಈ ವಿಷಯವನ್ನು ಚರ್ಚಿಸಬೇಕಿದೆ. ಇಲ್ಲಿ ಯಾವುದೇ ಪೂರ್ವಾಗ್ರಹವು ಬೇಡ. ಯಾರಿಗೂ ಸೇರದ ಒಂದು ಜಾಗದಲ್ಲಿ ನಿಂತು, ಅಂದರೆ ನೋ ಮ್ಯಾನ್ಸ್ ಲ್ಯಾಂಡ್ ನಲ್ಲಿ ನಿಂತು ಯೋಚಿಸಬೇಕಿದೆ…….

ಏಕೆಂದರೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೆಲವರಿಗೆ ಅಂಬೇಡ್ಕರ್… ಅಂಬೇಡ್ಕರ್…. ಅಂಬೇಡ್ಕರ್…. ಎನ್ನುವುದು ಒಂದು ಫ್ಯಾಷನ್ ಆಗಿದೆ, ಇಷ್ಟೇ ಬಾರಿ ದೇವರ ಹೆಸರನ್ನು ಜಪಿಸಿದ್ದರೆ ಏಳು ಜನ್ಮಕ್ಕಾಗುವಷ್ಟು ಪುಣ್ಯ ಸಿಗುತ್ತಿತ್ತು ಎಂದು ಹೇಳಿದ್ದಾರೆ. ಅದರ ಪರ ಮತ್ತು ವಿರುದ್ಧ ಚರ್ಚೆಗಳು ಪ್ರಾರಂಭವಾಗಿದೆ….

ಭಾರತದಲ್ಲಿ ದೇವರ ಅಸ್ತಿತ್ವವನ್ನು ಜಗತ್ತಿನ ಪ್ರಾರಂಭದಿಂದ 1950 ಜನವರಿ 26 ರ ವರೆಗೆ ಒಂದು ನಿಯಂತ್ರಣ ವ್ಯವಸ್ಥೆಯಾಗಿ ನೋಡುತ್ತಾ, ಅಲ್ಲಿಂದ 2024 ರ ಇಲ್ಲಿಯವರೆಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿಯು ರಚಿಸಿದ ಸಂವಿಧಾನ ನಮ್ಮನ್ನು, ನಮ್ಮ ಸಮಾಜವನ್ನು ನಿಯಂತ್ರಿಸುತ್ತಿದೆ ಎಂದು ಭಾವಿಸುವುದಾದರೆ, ನಮ್ಮ ಬದುಕು ಯಾವ ಸಮಯದಲ್ಲಿ ಹೆಚ್ಚು ಭದ್ರತೆ, ನೆಮ್ಮದಿ, ಸಂತೋಷದಿಂದ ಇತ್ತು ಮತ್ತು ಇದೇ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ನೋಡಿ….

ಹಿಂದೆ ರಾಜಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಜನರ ಜೀವನಮಟ್ಟ ಎಲ್ಲವೂ ರಾಜನ ನಿಯಂತ್ರಣದಲ್ಲೇ ಇರುತ್ತಿತ್ತು. ರಾಜನನ್ನೇ ಪ್ರತ್ಯಕ್ಷ ದೈವ ಎಂದು ಕರೆಯಲಾಗುತ್ತಿತ್ತು. ಆತ ಒಳ್ಳೆಯವನಾಗಿದ್ದರೆ, ಪ್ರಜೆಗಳು ಗುಲಾಮಿತನದಲ್ಲಿದ್ದರೂ ಸ್ವಲ್ಪ ನೆಮ್ಮದಿಯಿಂದ ಇರುತ್ತಿದ್ದರು. ರಾಜ ದುಷ್ಟನಾದರೆ ಅದೊಂದು ನರಕಯಾತನೆಯ ಪರಿಸ್ಥಿತಿ……

ಇದಲ್ಲದೆ ಇನ್ಯಾರೋ ದಾಳಿಕೋರರು ಆ ರಾಜ್ಯವನ್ನು ದಾಳಿ ಮಾಡಿದಾಗ ಸಿಕ್ಕಸಿಕ್ಕವರನ್ನು ಕತ್ತರಿಸಿ ಕೊಂದು, ಮಹಿಳೆಯರನ್ನು ಅಪಹರಣ ಮಾಡಿಕೊಂಡು ತಮ್ಮ ಪ್ರಾಂತ್ಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು. ಆಗ ಯಾವ ದೇವರೂ, ಯಾರನ್ನೂ ರಕ್ಷಿಸುತ್ತಿರಲಿಲ್ಲ. ಬಲಿಷ್ಠರು ಮಾತ್ರ ಉಳಿಯುತ್ತಿದ್ದರು. ಸತಿ ಸಹಗಮನ ಸಂದರ್ಭದಲ್ಲಿಯೂ ಯಾವ ದೇವರೂ ಹೆಣ್ಣು ಮಕ್ಕಳನ್ನು ರಕ್ಷಿಸಲಿಲ್ಲ. ಈ ದೇಶದ ಮೇಲೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡಿ ಜನರನ್ನು ಕೊಂದು, ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಾಗ ಯಾವ ದೇವರೂ ಕಾಪಾಡಲಿಲ್ಲ. ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು ಈ ದೇಶವನ್ನ ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಂಡು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾ, ಜಲಿಯನ್ ವಾಲಾ ಬಾಗ್ ನಂತಹ ಘಟನೆಗಳು ನಡೆದಾಗಲೂ ಯಾವ ದೇವರೂ ನಮ್ಮನ್ನು ಕಾಪಾಡಲಿಲ್ಲ….

1950 ರವರೆಗೂ ಅಸ್ಪೃಶ್ಯ ಸಮುದಾಯವನ್ನು ಊರ ಹೊರಗಿಟ್ಟು, ಎಲ್ಲ ಮೂಲಭೂತ ಸೌಕರ್ಯಗಳಿಂದ ಅವರನ್ನು ವಂಚಿಸಿ, ಪಶುಗಳಂತೆ ಕಾಣುತ್ತಿದ್ದಾಗಲೂ ಯಾವ ದೇವರು ಅವರ ನೆರವಿಗೆ ಬಂದು ಅವರಿಗೆ ಸಮಾನತೆಯನ್ನು ನೀಡಲಿಲ್ಲ…..

ಇವು ಕೆಲವು ಉದಾಹರಣೆಗಳು ಮಾತ್ರ. ಆದರೆ 1950ರ ನಂತರ ನಮ್ಮ ಪರಿಸ್ಥಿತಿಯನ್ನು ಗಮನಿಸಿ. ಬಹುತೇಕ ನಮಗೆಲ್ಲರಿಗೂ ಕಾನೂನಾತ್ಮಕ ಸಮಾನತೆ ದೊರೆಯಿತು. ನಾವೆಲ್ಲರೂ ಭಾರತೀಯರು ಎಂಬ ಒಂದು ಪರಿಕಲ್ಪನೆಯ ಅಡಿಯಲ್ಲಿ ಭಾರತ ದೇಶದ ಪ್ರಜೆಗಳಾದೆವು. ಸ್ವಲ್ಪ ಹೆಚ್ಚು ಕಡಿಮೆ ಎಲ್ಲರಿಗೂ ನಿಧಾನವಾಗಿ ಶಿಕ್ಷಣ ದೊರೆಯಿತು. ಊಟ, ಬಟ್ಟೆ, ವಸತಿಗಳು ಸ್ವಲ್ಪ ಸ್ವಲ್ಪ ಸರ್ವರ ಪಾಲುದಾರಿಕೆಗೆ ಒಳಪಟ್ಟವು.

ದನ ಮೇಯಿಸುವವರು, ಕುರಿ ಕಾಯುವವರು, ಚಪ್ಪಲಿ ಹೊಲೆಯುವವರು, ಟೀ ಮಾರುವವರು, ಅಗಸರು, ಕ್ಷೌರಿಕರು, ದೇವರ ಅರ್ಚಕರು, ಕೃಷಿಕರು, ಬೇಡರು ಹೀಗೆ ಎಲ್ಲಾ ಜಾತಿಯ ಜನರಲ್ಲಿಯೂ ಒಂದಷ್ಟು ಜನ ಪ್ರತಿಭಾವಂತರು ವಿವಿಧ ಉದ್ಯೋಗಗಳು, ರಾಜಕೀಯ ಸ್ಥಾನಮಾನಗಳು, ವ್ಯವಹಾರ, ಸಾಹಿತ್ಯ, ಸಂಗೀತ, ಸಿನಿಮಾ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದುವರೆಯಲು ಸಾಧ್ಯವಾಯಿತು. ಯಾವುದೇ ರೀತಿಯ ಕೊಲೆ, ಅತ್ಯಾಚಾರಗಳಿಗೆ ಜೈಲು ಶಿಕ್ಷೆ ಸಿಗುವಂತಾಯಿತು. ಜನರ ಜೀವನಮಟ್ಟ, ನೆಮ್ಮದಿ, ರಕ್ಷಣೆ, ಸ್ವಾತಂತ್ರ್ಯ, ಘನತೆ ಇವುಗಳು ಭಾರತೀಯರಿಗೆ ಸಿಗುವಂತಾಯಿತು……

ಇನ್ನೂ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ದೊರೆಯುವಂತಾಯಿತು. ಈಗ ಯೋಚಿಸಿ ನೋಡಿ, ಅಂಬೇಡ್ಕರ್… ಅಂಬೇಡ್ಕರ್…. ಅಂಬೇಡ್ಕರ್ …..ಎನ್ನುವುದು ಹೆಚ್ಚು ಕೃತಜ್ಞತಾ ಪೂರ್ವಕ ಪದವೋ ಅಥವಾ ಯಾವುದೇ ಧರ್ಮದ ದೇವರ ಹೆಸರುಗಳನ್ನು ಹೆಚ್ಚು ಹೆಚ್ಚು ಜಪಿಸುವುದು ಸೂಕ್ತವೋ…….

ನಿಮ್ಮ ಮನಸ್ಸು ಮುಕ್ತವಾಗಿದ್ದರೆ, ಪ್ರಾಕೃತಿಕವಾಗಿ, ನೈಜವಾಗಿ ವಾಸ್ತವಕ್ಕೆ ಹತ್ತಿರವಾಗಿದ್ದರೆ, ಖಂಡಿತವಾಗಲೂ ಅದು ಅಂಬೇಡ್ಕರ್ ಹೆಸರಿಗೆ ನಾವು ಹೆಚ್ಚು ಕೃತಜ್ಞರಾಗಿ ಇರಬೇಕಾಗುತ್ತದೆ…….

ಯಾಕೋ ಗೊತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಈ ಸಮಾಜ ವಾಸ್ತವದಿಂದ ದೂರವಾದ, ಅನಾವಶ್ಯಕವಾದ, ಅಜ್ಞಾನದ, ಭಾವನಾತ್ಮಕ ವಿಭಜನೆಯತ್ತ ಸಾಗುತ್ತಿದೆ. ಯಾರಿಗೆ ಕೃತಜ್ಞತೆ ಸಲ್ಲಿಸಬೇಕೋ ಅವರನ್ನು ವಿರೋಧಿಸುತ್ತಾ, ಕಾಲ್ಪನಿಕ ಲೋಕಕ್ಕೆ ಹೆಚ್ಚು ನಿಷ್ಠರಾಗುತ್ತಿರುವುದು ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ…..

ಮನರಂಜನೆಯ ಪ್ರಾಮುಖ್ಯತೆ ಹೆಚ್ಚಾಗಿ ಮೌಲ್ಯಗಳು ಕುಸಿಯುತ್ತಿವೆ……

ಮಾನ್ಯ ಗೃಹ ಮಂತ್ರಿ ಅಮಿತ್ ಶಾ ಅವರು ಬಾಯಿ ತಪ್ಪಿ ಹೇಳಿದರೋ, ಉದ್ದೇಶಪೂರ್ವಕವಾಗಿ ಹೇಳಿದರೋ, ಮಾತಿನ ಓಘದಲ್ಲಿ ಹೇಳಿದರೋ,
ವಿರೋಧ ಪಕ್ಷಗಳನ್ನು ತಿವಿಯಲು ಹೇಳಿದರೋ,
ಕೆಲವು ದಲಿತ ಪರ ಎನ್ನುವವರ ಬಯಲು ಮಾಡಲು ಹೇಳಿದರೋ,
ದಲಿತರು ಅಂಬೇಡ್ಕರ್ ಹೆಸರು ಹೇಳುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕಿದೆ ಎನ್ನುವ ಅರ್ಥದಲ್ಲಿ ಹೇಳಿದರೋ ಅಥವಾ ಅವರ ಆಂತರ್ಯದ ಅಸಮಾಧಾನ ಮಾತುಗಳಲ್ಲಿ ಹೊರ ಹಾಕಲ್ಪಟ್ಟಿತೋ, ಏನೇ ಆಗಲಿ ಖಂಡಿತವಾಗಲೂ ಅವರ ಮಾತುಗಳು ತಪ್ಪು ಗ್ರಹಿಕೆಯಿಂದ, ಅಸೂಯೆಯಿಂದ ಹೊರಬಂದಿರುವ ಸಾಧ್ಯತೆ ಹೆಚ್ಚು……

ಈಗ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕಾಗುತ್ತದೆ ಮತ್ತು ಸರಿಯಾದ ಅರ್ಥವೇನೆಂದರೆ, ಬಾಬಾ ಸಾಹೇಬ್ ಅವರ ಸಂವಿಧಾನವೇ ನಮಗೆ ಅತ್ಯಂತ ಹೆಚ್ಚು ನೆಮ್ಮದಿ, ಪ್ರಾಮುಖ್ಯತೆ, ದೇಶದ ಅಭಿವೃದ್ಧಿ, ಸಮಾಜದ ಕ್ರಮಬದ್ಧತೆಗೆ ಅನಿವಾರ್ಯವಾಗಿದೆ….

ಅಂಬೇಡ್ಕರ್ ಯಾವುದೋ ಒಂದು ಜಾತಿಗೆ ಸೀಮಿತವಲ್ಲ. ಅವರು ಈ ದೇಶದ ಆಸ್ತಿ. ಅನೇಕ ಅಸಹಾಯಕರು, ಶೋಷಿತರು ಇವತ್ತು ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ ಸಂವಿಧಾನವೆಂಬ ಅಸ್ತ್ರವೇ ಬಹುಮುಖ್ಯ ಕಾರಣ. ಅದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಸಂವಿಧಾನ ಯಾರನ್ನೂ ದ್ವೇಷಿಸುವುದಿಲ್ಲ, ಎಲ್ಲರನ್ನು ಪ್ರೀತಿಸುತ್ತದೆ, ಸಮಾನತೆಯಿಂದ ಕಾಣುತ್ತದೆ. ಮಾನವೀಯತೆಯನ್ನು ಹೇಳುತ್ತದೆ…….


ಮೊನ್ನೆ ದಿನಾಂಕ 19/12/ 2024 ರ ಗುರುವಾರ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ
ಶ್ರೀ ಲಿಂಗೇಗೌಡರ ಅಕಾಲಿಕ ಮರಣದ ಪ್ರಯುಕ್ತ ಏರ್ಪಡಿಸಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೋರಾಟಗಾರರು ಎದುರಿಸಬೇಕಾದ ಸವಾಲುಗಳನ್ನು ಕುರಿತು ಮಾತನಾಡಿದೆನು‌. ಹಾಗೆಯೇ ನಿನ್ನೆ ದಿನಾಂಕ 20/12/2024 ರ ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಲಹಂಕದ ಮದರ್ ಡೈರಿ ಸರ್ಕಲ್ ಬಳಿ ನಡೆದ ಯಲಹಂಕ ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್ ಪಕ್ಷದ ವತಿಯಿಂದ ನಿಂಗೇಗೌಡರ ಮತ್ತೊಂದು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲೂ ಭಾಗವಹಿಸಿ ನಿಂಗೇಗೌಡರ ನೆನಪು ಮತ್ತು ಹೋರಾಟದ ಹಾದಿಯನ್ನು ಕುರಿತು ಮಾತನಾಡಿದೆನು….


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 984013068……….

error: No Copying!