Spread the love

ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇರಬೇಕಾದ ಆಹಾರದ ವಿಷಯವಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿದೆ…..

ಹಿಂದು – ಮುಸ್ಲಿಂ,
ಆರ್ಯ – ದ್ರಾವಿಡ,
ದಲಿತ – ಬ್ರಾಹ್ಮಣ,
ಹಿಂದಿ – ಕನ್ನಡ,
ಎಡಪಂಥೀಯ – ಬಲಪಂಥೀಯ,
ಬಿಜೆಪಿ‌ – ಕಾಂಗ್ರೆಸ್,
ಉತ್ತರ ಭಾರತ – ದಕ್ಷಿಣ ಭಾರತ,
ಆಸ್ತಿಕ – ನಾಸ್ತಿಕ,
ಸಂಪ್ರದಾಯ – ವೈಚಾರಿಕತೆ,
ಮೂಡನಂಬಿಕೆ – ವೈಜ್ಞಾನಿಕತೆ………

ಹೀಗೆ ವಿಭಜನೆಯಾಗಿರುವ ಭಾರತದ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಮುಂದುವರಿದ ಭಾಗವಾಗಿ ಈ ವಿವಾದವನ್ನು ನೋಡಬೇಕಾಗುತ್ತದೆ. ಏಕೆಂದರೆ ಈ ವಿವಾದ ದಿಢೀರನೆ ಉದ್ಭವಿಸಿಲ್ಲ. ಶತಮಾನಗಳ ಒತ್ತಡದ ಮನಸ್ಥಿತಿ ಹೀಗೆ ಆಗಾಗ ಸ್ಪೋಟಿಸುತ್ತದೆ.

ಒಂದು ವರ್ಗ ಸಸ್ಯಹಾರವೇ ಶ್ರೇಷ್ಠ ಎನ್ನುತ್ತಾ ಇಡೀ ಸಂಪ್ರದಾಯಗಳನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡು, ಈಗಲೂ ಮುಂದುವರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ, ಜಾಗೃತ ಮನಸ್ಥಿತಿಯ, ವೈಚಾರಿಕ ಪ್ರಜ್ಞೆಯ ಮತ್ತೊಂದು ವರ್ಗ ಅದರ ವಿರುದ್ಧ ಮಾಂಸಾಹಾರ ಕೂಡ ಅತ್ಯಂತ ಸಹಜ, ಪ್ರಾಕೃತಿಕ ಆಹಾರ. ಇದನ್ನು ಶೋಷಣೆಯ ಮಾರ್ಗವಾಗಿ ಇಲ್ಲಿಯೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅದರ ವಿರುದ್ಧ ತಿರುಗಿ ಬಿದ್ದಿರುವುದು ಒಂದು ಕಾರಣವಾಗಿದೆ.

ನಿಜಕ್ಕೂ ಒಂದು ಸೌಹಾರ್ದಯುತ, ಸಮನ್ವಯದ, ಪ್ರೀತಿಯ ಸಮಾಜ ನಮ್ಮದಾಗಿದ್ದರೆ ಇದೊಂದು ವಿವಾದವೇ ಆಗುತ್ತಿರಲಿಲ್ಲ. ಏಕೆಂದರೆ ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು, ಸಮಾನತೆಯನ್ನು, ಘನತೆಯನ್ನು, ಆಸಕ್ತಿಯನ್ನು ಮತ್ತೊಬ್ಬರು ಗೌರವಿಸ ಬೇಕಾಗಿರುವುದು ಒಂದು ಉತ್ತಮ ಸಮಾಜದ ಗುಣಲಕ್ಷಣ. ಆದರೆ ಈಗ ಅದು ಉಳಿದಿಲ್ಲ.

ಯಾರೋ ಒಬ್ಬರು ಒತ್ತಾಯಪೂರ್ವಕವಾಗಿ ತಮ್ಮ ಸಂಪ್ರದಾಯಗಳನ್ನು ಹೇರುವುದಕ್ಕೆ ವಿರುದ್ಧವಾಗಿ ಬಂಡಾಯದ ಇನ್ನೊಂದು ವಿಚಾರಗಳು ಮುನ್ನೆಲೆಗೆ ಬರುತ್ತದೆ. ಇಲ್ಲಿ ಸರಿ ಯಾವುದು, ತಪ್ಪು ಯಾವುದು ಅಥವಾ ಈ ಸಾಹಿತ್ಯದ ನುಡಿ ಹಬ್ಬದ ಸಂದರ್ಭದಲ್ಲಿ ಸರಿಯೇ ಎಂಬ ಸಾಮಾನ್ಯ ಜ್ಞಾನದ ಪ್ರಶ್ನೆ ಕೇಳಲು ಸಾಧ್ಯವೇ ಇಲ್ಲ. ಏಕೆಂದರೆ ಈಗಾಗಲೇ ಸೈದ್ಧಾಂತಿಕವಾಗಿ ಮನಸ್ಸುಗಳು ಒಡೆದು ಹೋಗಿವೆ.

ಇದೊಂದು ತೀರ ಸಣ್ಣ ವಿಷಯ. ಒಂದು ವೇಳೆ ಅಲ್ಲಿ ಮಾಂಸಹಾರವನ್ನು ಸಸ್ಯಹಾರದ ಜೊತೆ ನೀಡಿದರೆ ಭೂಮಿ ಏನು ಕುಸಿದು ಬೀಳುವುದಿಲ್ಲ ಅಥವಾ ಯಾರಿಗೂ ಸಮಸ್ಯೆ ಏನು ಆಗುವುದಿಲ್ಲ. ಸಹಜವಾಗಿಯೇ ಅವರವರ ಊಟ ಅವರವರು ತಿನ್ನುತ್ತಾರೆ. ಹಾಗೆಯೇ ಇಲ್ಲಿಯವರೆಗಿನ ಸಂಪ್ರದಾಯದಂತೆ ಸಸ್ಯಾಹಾರವನ್ನೇ ಮುಂದುವರಿಸಿದರೂ ಅಂತಹ ದೊಡ್ಡ ವ್ಯತ್ಯಾಸವೇನು ಆಗುವುದಿಲ್ಲ. ಯಾರ ಜೀವಕ್ಕೂ ಅಪಾಯವೇನು ಇಲ್ಲ.

ಆದರೆ ಹಾಗಾಗಲು ಸಾಧ್ಯವಾಗದ ರೀತಿಯಲ್ಲಿ ಈ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿದೆ. ಎಲ್ಲರೂ ನಮ್ಮವರೇ. ಇಡೀ ದೇಹವೇ ಮೂಳೆ ಮಾಂಸದ ತಡಿಕೆ. ಸಾಮಾನ್ಯ ಜ್ಞಾನಕ್ಕೆ ನಿಲುಕಬಹುದಾದ ಈ ವಿಷಯ ಸಂಘರ್ಷಕ್ಕೆ ಒಳಪಡುತ್ತಿರುವುದು ದುರಂತ.

ಬಹಳಷ್ಟು ಜನ ಮಾಂಸಹಾರ ಬೇಕೇ ಬೇಕು ಎನ್ನುವವರನ್ನು ಕುರಿತು ಅಪಹಾಸ್ಯ ಮಾಡುತ್ತಿದ್ದಾರೆ,
ಹಾಗೆಯೇ ಸಸ್ಯಾಹಾರಿಗಳು ಈ ದೇಶದ ವಿಭಜಕ ಶಕ್ತಿಗಳು, ಅವರಿಂದಲೇ ಸಮಾಜ ದುರ್ಬಲವಾಗುತ್ತಿದೆ ಎನ್ನುವವರು ಅಷ್ಟೇ ಕಾಠಿಣ್ಯ ಮನಸನ್ನು ಹೊಂದಿದ್ದಾರೆ. ಒಂದು ಪ್ರೀತಿಯ ಸಮನ್ವಯ ಸಾಧ್ಯವಾಗದಷ್ಟು ನಾವುಗಳು ಅನುಮಾನದ, ಅಸಹಿಷ್ಣುತೆಯ ಮನಸ್ಥಿತಿಗೆ ತಲುಪಿದ್ದೇವೆ.

ಈ ಸಮಸ್ಯೆಗಳಿಗೆ ಪರಿಹಾರ ಸುಲಭವಾಗಿ ಸಿಗುವುದಿಲ್ಲ. ಆಹಾರ ಒಂದು ನೆಪ ಮಾತ್ರ. ಅದನ್ನು ಮೀರಿದ ಜನಾಂಗೀಯ ಸಂಘರ್ಷ ಈ ಸಾಮಾಜಿಕ ರಚನೆಯಲ್ಲಿಯೇ ಅಡಗಿದೆ. ಮುಂದಿನ ದಿನಗಳು ಹೇಗೋ ಏನೋ. ಕೇವಲ ಆಹಾರ ಮಾತ್ರವಲ್ಲ ಈ ಸಾಹಿತ್ಯ ಸಮ್ಮೇಳನ, ಅಲ್ಲಿ ಭಾಗವಹಿಸುವ ವ್ಯಕ್ತಿಗಳು, ಸುಮಾರು 32 ಕೋಟಿಯ ಖರ್ಚು ವೆಚ್ಚಗಳು, ಪ್ರಚಾರ, ಪ್ರಶಸ್ತಿಯ ಲಾಭಿಗಳು ಎಲ್ಲವೂ ಇದರ ಭಾಗವೇ……

ಇರಲಿ, ನನ್ನ ತಿಳಿವಳಿಕೆಯ ಮಿತಿಯಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ……
( Vegitarian – Non Vegitarian )

ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ ಅಭಿಪ್ರಾಯ ಆಧರಿಸಿ ಸಸ್ಯಾಹಾರ ಮತ್ತು ಮಾಂಸಾಹಾರದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ.

ಸಾಮಾನ್ಯವಾಗಿ ಸಸ್ಯಾಹಾರಿಗಳಿಗೆ ಮಾಂಸಾಹಾರಿಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಮಾಂಸಾಹಾರಿಗಳಿಗೆ ಅತಿಹೆಚ್ಚು ವೈವಿಧ್ಯಮಯ ಅಡುಗೆಗಳಿವೆ, ಅವರು ಎಲ್ಲಿ ಹೋದರು, ಯಾವುದೇ ಪ್ರದೇಶಕ್ಕೆ ಹೋದರೂ ಹೇಗೋ ಊಟದ ಸಮಸ್ಯೆಯಾಗುವುದಿಲ್ಲ, ಸಸ್ಯಹಾರಿಗಳಿಗೆ ತುಂಬಾ ಕಷ್ಟ. ಏನೋ ಹಣ್ಣು ಹಂಪಲು ತಿಂದು ಸಮಾಧಾನ ಮಾಡಿಕೊಳ್ಳಬೇಕು ಎಂದು ಗೊಣಗುತ್ತಿರುತ್ತಾರೆ.

ಇದು ನಿಜವೇ ????

ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ವ್ಯಾಪಾರ ವ್ಯವಹಾರದ ಹೋಟೆಲುಗಳ ದೃಷ್ಟಿಯಿಂದ ಸ್ವಲ್ಪ ಮಾತ್ರ ನಿಜವೆನಿಸುತ್ತದೆ. ಆದರೆ ಸಂಪೂರ್ಣ ಸತ್ಯವಲ್ಲ. ಏಕೆಂದರೆ……

ಭಾರತದ ಮಟ್ಟಿಗೆ, ಸಾಮಾನ್ಯವಾಗಿ ಕೇವಲ ಕುರಿ ( ಮೇಕೆ ) ಕೋಳಿ ಮತ್ತು ಮೀನು ಎಂಬ ಮೂರು ಮಾತ್ರವೇ ಅತಿಹೆಚ್ಚು ಉಪಯೋಗಿಸಲ್ಪಡುವ ಮಾಂಸಾಹಾರ. ಮೊಟ್ಟೆ ಅರೆ ಮಾಂಸಾಹಾರ. ಇನ್ನು ಹಂದಿ, ನಾಯಿ, ಮೊಲ, ಉಡ, ಕಪ್ಪೆ, ದನ, ಒಂಟೆ ಮಾಂಸವನ್ನು ಯಾರೋ ಕೆಲವರು ಅಲ್ಪ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

ಇದನ್ನು ಹೊರತುಪಡಿಸಿ ಉಳಿದ ಎಲ್ಲಾ ಆಹಾರ ಪದಾರ್ಥಗಳು ಸಸ್ಯಾಹಾರದ ವ್ಯಾಪ್ತಿಯಲ್ಲಿ ಬರುತ್ತದೆ. ಜೊತೆಗೆ ಯಾವುದೇ ಮಾಂಸಾಹಾರಿ ಮನುಷ್ಯ ಕೇವಲ ಕುರಿ ಕೋಳಿ ಮೀನುಗಳನ್ನು ಮಾತ್ರ ತಿನ್ನುವುದಿಲ್ಲ. ಅದನ್ನು ಮುದ್ದೆ, ಚಪಾತಿ, ರೊಟ್ಟಿ, ಬ್ರೆಡ್, ಅನ್ನ, ತರಕಾರಿಗಳು, ಹಣ್ಣುಗಳು, ಸಿರಿ ಧಾನ್ಯಗಳು, ಬೇಳೆ ಕಾಳುಗಳು, ಸೊಪ್ಪು ಮುಂತಾದ ಸಸ್ಯಹಾರದ ವಸ್ತುಗಳ ಮೇಲೆಯೇ ಅವಲಂಬಿಸಿ ಊಟ ಮಾಡುತ್ತಾನೆ. ಕೇವಲ ಆ ಮೂರು ಪ್ರಾಣಿಗಳು ಮಾತ್ರ ಹೆಚ್ಚುವರಿಯಾಗಿರುತ್ತದೆ.

ಅದರಲ್ಲೂ ಇತ್ತೀಚಿಗೆ ನೀವು ಮಾಂಸಾಹಾರಿ ವಸ್ತುಗಳನ್ನು ಉಪಯೋಗಿಸಿ ಮಾಡುವ ಎಲ್ಲವನ್ನೂ ಸಸ್ಯಹಾರದಲ್ಲಿ ಅಷ್ಟೇ ಉತ್ತಮವಾಗಿ ಮತ್ತು ರುಚಿಕರವಾಗಿ ಮಾಡಲಾಗುತ್ತಿದೆ. ಮಾಂಸದ ಬದಲು ತರಕಾರಿ ಉಪಯೋಗಿಸುತ್ತಾರೆ ಅಷ್ಟೆ. ಮಸಾಲೆ, ಉಪ್ಪು, ಖಾರ ಮುಂತಾದ ಎಲ್ಲಾ ಪೂರಕ ವಸ್ತುಗಳು ಸೇಮ್ ಟು ಸೇಮ್.

ಬಿರಿಯಾನಿ, ಕಬಾಬ್, ಮಂಚೂರಿ, ಕಟ್ ಲೆಟ್, ಸ್ಯಾಂಡ್ ವಿಚ್, ಫೀಜಾ ಇತ್ಯಾದಿ ಎಲ್ಲವೂ ಎರಡೂ ವಿಧದಲ್ಲಿ ಸಿಗುತ್ತದೆ.

ಇಲ್ಲಿ ಸಸ್ಯಹಾರ ಮತ್ತು ಮಾಂಸಾಹಾರದಲ್ಲಿ ಯಾವುದು ಉತ್ತಮ ಎಂಬ ಯಾವ ಅಭಿಪ್ರಾಯವನ್ನು ಸಹ ಹೇಳುತ್ತಿಲ್ಲ. ನಾನು ಆಹಾರ ತಜ್ಞನೂ ಅಲ್ಲ, ವೈದ್ಯನೂ ಅಲ್ಲ. ಆಹಾರ ಸ್ವಾತಂತ್ರ್ಯ ಅವರವರ ಆಯ್ಕೆ. ನಮ್ಮ ನಾಲಿಗೆಯ ರುಚಿ, ಮನೆತನದ ಸಂಪ್ರದಾಯ, ಆರೋಗ್ಯದ ಕಾಳಜಿ, ವೈದ್ಯರ ಸಲಹೆ, ದೇಶದ ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಯಾವುದೇ ಆಹಾರ ಸೇವಿಸಬಹುದು.

ಆದರೆ ಮಾಂಸಾಹಾರಿಗಳು ಮಾತ್ರ ಏನೋ ವಿಶೇಷ ಖಾದ್ಯಗಳನ್ನು ತಿನ್ನುತ್ತಾರೆ ಎಂದು ಸಸ್ಯಹಾರಿಗಳು ಹೊಟ್ಟೆ ಉರಿ ( ತಮಾಷೆಗಾಗಿ ) ಪಡುವುದು ಬೇಡ. ಸಸ್ಯಹಾರದ ಅವಲಂಬನೆ ಇಲ್ಲದೆ ಮಾಂಸಾಹಾರ ಇಲ್ಲವೇ ಇಲ್ಲ. ಊಟದ ಜೊತೆಗೆ ಉಪ್ಪಿನಕಾಯಿಯಂತೆ ಮಾತ್ರ ಹೆಚ್ಚುವರಿಯಾಗಿ ಮಾಂಸಾಹಾರ ಸೇವಿಸುತ್ತಾರೆ ಅಷ್ಟೇ……

ಹಾಗೆಯೇ ಇನ್ನೊಂದು ಮುಖ್ಯ ವಿಷಯ……..

ಸಸ್ಯಾಹಾರ ಅಥವಾ ಮಾಂಸಾಹಾರವನ್ನು ಯಾರೂ ಗುತ್ತಿಗೆ ಪಡೆದುಕೊಂಡಿಲ್ಲ. ಮಾಂಸಾಹಾರ ಅಸಹ್ಯ ಅಥವಾ ಹೊಲಸು ಅಥವಾ ಅಪಾಯಕಾರಿ ಅಥವಾ ನಿಷೇಧಿತ ಆಹಾರವಲ್ಲ.

ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ನೋವಿನ ವಿಷಯವೇ…….

ಅದು ಹಾವು, ಸೊಳ್ಳೆ, ತಿಗಣೆ, ನಾಯಿ, ಹಸು, ಹುಲಿ, ಜಿಂಕೆ, ಕೋಳಿ, ಮೀನು, ಹಂದಿ, ಮನುಷ್ಯ ಏನೇ ಆಗಿರಲಿ ಅದಕ್ಕೆ ನಾವು ಜೀವ ಕೊಡಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಅದನ್ನು ಹತ್ಯೆ ಮಾಡುವ ಯಾವ ಅಧಿಕಾರವೂ ಇಲ್ಲ.

ಅದೇ ರೀತಿ ಸಸ್ಯಗಳಿಗೂ ಜೀವ ಇರುವುದರಿಂದ ಅವು ತಮ್ಮ ವಂಶಾಭಿವೃದ್ಧಿಗಾಗಿ ನೀಡುವ ಹೂ ಹಣ್ಣು ಫಸಲುಗಳನ್ನು ಸಹ ನಾವು ಕಿತ್ತು, ಕಡಿದು ಉಪಯೋಗಿಸುವುದು ನ್ಯಾಯವಲ್ಲ.

ಇದು ಒಂದು ರೀತಿಯ ವಾದ ಮತ್ತು ಮೇಲ್ನೋಟಕ್ಕೆ ಸರಿ ಎನಿಸುತ್ತದೆ.

ಜೀವಿಗಳಿಗೆ ಗಾಳಿ ನೀರು ಆಹಾರ ಜೀವನಾವಶ್ಯಕ ಅಂಶಗಳು. ಅದು ಇಲ್ಲದೇ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಪ್ರಾಣಿ, ಪಕ್ಷಿ, ಮನುಷ್ಯ ಏನನ್ನು ತಿನ್ನಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವಾದದ ದೃಷ್ಟಿಯಿಂದ ಸಸ್ಯಗಳನ್ನು ಇದರಿಂದ ಹೊರಗಿಡೋಣ. ಅವುಗಳನ್ನು ನಿರ್ಜೀವ ವಸ್ತುಗಳೆಂದು ಪರಿಗಣಿಸೋಣ. ಅಂದ ಮೇಲೆ ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕೇವಲ ಸಸ್ಯಗಳು ಮತ್ತು ಆ ಜಾತಿಗೆ ಸೇರಿದ ಹಣ್ಣು, ತರಕಾರಿ ಮುಂತಾದುವುಗಳನ್ನು ಮಾತ್ರ ಸೇವಿಸಿ ಬದುಕುವುದು ಸಹಜ ಮತ್ತು ಸ್ವಾಭಾವಿಕ ನ್ಯಾಯ ಮತ್ತು ಜೀವನ ಕ್ರಮ ಎಂಬ ತೀರ್ಮಾನಕ್ಕೆ ಬರೋಣವೇ ?

ಇಲ್ಲಿ ಇನ್ನೂ ಒಂದು ರಿಯಾಯಿತಿ ಕೊಡಬಹುದು. ಅನೇಕ ಪ್ರಾಣಿಗಳಿಗೆ ಮನುಷ್ಯರಿಗಿರುವ ಬುದ್ದಿಶಕ್ತಿ, ಯೋಚನಾ ಕ್ರಮ, ನಾಗರಿಕ ಸಮಾಜ ರೂಪಿತ ನೀತಿ ನಿಯಮಗಳು ಇಲ್ಲದಿರುವುದರಿಂದ ಅದಕ್ಕೆ ಸಿಕ್ಕ ಸಸ್ಯವೋ, ಪ್ರಾಣಿಯೋ ಯಾವುದೋ ಆ ಕ್ಷಣದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಅದಕ್ಕೆ ತಿಳಿವಳಿಕೆ ಹೇಳಲು ಸಾಧ್ಯವಿಲ್ಲ. ಅದು ಅವುಗಳ ಸಹಜ ಆಹಾರ ಎಂದು ನಿರ್ಲಕ್ಷಿಸಬಹುದು. ಕೆಲವು ಕಾಡು ಪ್ರಾಣಿಗಳು ಮನುಷ್ಯರನ್ನು ತಿನ್ನುತ್ತವೆ. ಅದಕ್ಕೆ ಬುದ್ದಿ ಹೇಳಲು ಆಗುವುದಿಲ್ಲ. ಹೇಳಿದರೂ ಅದಕ್ಕೆ ಅರ್ಥವಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಂಡು ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.

ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ.

ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು ವಿಭಾಗಗಳು ಸೃಷ್ಟಿಯಾಗಿದೆ. ನನಗಿರುವ ಮಾಹಿತಿಯಂತೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 75/80% ಜನರು ಸಸ್ಯಗಳನ್ನು ಒಳಗೊಂಡ ಮಾಂಸಹಾರವನ್ನು ಮತ್ತು ಉಳಿದವರು ಸಸ್ಯಹಾರವನ್ನು ಸೇವಿಸುತ್ತಾರೆ. ( ಸಂಪೂರ್ಣ ಸಸ್ಯಹಾರ ಸಾಧ್ಯವೇ ಇಲ್ಲ ಎಂಬ ವಾದವೂ ಇದೆ. ಅದನ್ನು ಆಹಾರ ತಜ್ಞರಿಗೆ ಬಿಟ್ಟುಬಿಡೋಣ )

ಭಾರತದ ಮಟ್ಟಿಗೆ ಈ ಆಹಾರ ಸಂಸ್ಕೃತಿ ದುರಾದೃಷ್ಟವಶಾತ್ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸಂಕೀರ್ಣ ಸಮಸ್ಯೆ ಸೃಷ್ಟಿಸಿದೆ. ಅದರಲ್ಲೂ ಹಸುವಿನ ಮಾಂಸ ಸೇವನೆ ಸದ್ಯದ ಮಟ್ಟಿಗೆ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ನಾವು ಆಹಾರ ಸ್ವಾತಂತ್ರ್ಯ, ಹಕ್ಕು, ಬಹುಸಂಖ್ಯಾತರ ಭಾವನೆ, ಗೋವಿನ ವಿಶಿಷ್ಟ ಸ್ಥಾನ ಮುಂತಾದ ರಾಜಕೀಯ – ಧರ್ಮ ಪ್ರೇರಿತ ವಿಚಾರಗಳನ್ನು ವಿಮರ್ಶಿಸಬೇಕಿದೆ.

ಕುರಿ ಕೋಳಿ ಮೀನು ಹಂದಿಗಳ ಆಹಾರದ ಬಗ್ಗೆ ಹೆಚ್ಚಿನ ಪ್ರತಿರೋಧ ಇಲ್ಲ. ಸಸ್ಯಹಾರ ಒಳ್ಳೆಯದು, ಮಾಂಸಾಹಾರ ಒಳ್ಳೆಯದಲ್ಲ, ಪ್ರಾಣಿ ವಧೆ ಮಹಾಹಿಂಸೆ ಮುಂತಾದ ವಾದಗಳನ್ನು ಜಾತಿಯ ಮೇಲ್ವರ್ಗದವರು, ಜೈನರು ಮುಂತಾದವರು ಪ್ರತಿಪಾದಿಸುತ್ತಾರೆ. ಆದರೆ ಗೋವಿನ ಮಾಂಸದ ವಿಷಯದಲ್ಲಿ ಇತ್ತೀಚೆಗೆ ಅದನ್ನು ಹಿಂಸಾತ್ಮಕವಾಗಿ ಪ್ರತಿಭಟಿಸುವಷ್ಟು ಮುಂದುವರಿದಿದ್ದಾರೆ.

ಇದಕ್ಕೆ ಪ್ರತಿಯಾಗಿ ಹಸುವನ್ನು ಸೇರಿ ಮಾಂಸಹಾರ ಕೂಡ ಮಾನವನ ಸಹಜ ಆಹಾರ ಪದ್ದತಿ, ಅದು ಮನುಷ್ಯನ ಈ ಕ್ಷಣದ ಆಹಾರ ಸಮತೋಲನದ ಅತ್ಯವಶ್ಯಕ ವಿಧಾನ, ಈಗಿನ ಜನಸಂಖ್ಯೆಯ ದೃಷ್ಟಿಯಿಂದ ಸಸ್ಯಾಹಾರ ಸಾಕಾಗುವುದಿಲ್ಲ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ಪ್ರಾಣಿ ವಧೆ ಹಿಂಸೆಯಾದರೂ ಮನುಷ್ಯ ಪ್ರಕೃತಿಯ ಮೇಲೆ ಸಾಧಿಸಿರುವ ನಿಯಂತ್ರಣದ ಕಾರಣಕ್ಕೆ ಮತ್ತು ಬಹುಸಂಖ್ಯಾತರ ಆಯ್ಕೆ ಮಾಂಸಹಾರ ಆಗಿರುವುದರಿಂದ ಆತನ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ಇದು ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ.

ವಾದಗಳೇನೋ ಸರಿ. ಸತ್ಯ ಸಹ ಎಲ್ಲೋ ಅಡಗಿದೆ. ಆದರೆ ವಾಸ್ತವ……….

ಭಾರತದ ಈಗಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸಿದಾಗ………

ಸಂಪೂರ್ಣ ಸಸ್ಯಹಾರದ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವಿಲ್ಲ ಮತ್ತು ಅದಕ್ಕಾಗಿ ಒತ್ತಾಯ ಒಳ್ಳೆಯದಲ್ಲ. ಹಾಗಾದರೆ ಮಾಂಸಹಾರ ಪ್ರೋತ್ಸಾಹಿಸಬೇಕೆ. ಅದೂ ಒಳ್ಳೆಯದಲ್ಲ.

ಈ ಕ್ಷಣದಲ್ಲಿ ನಿಂತು ಯೋಚಿಸಿದರೆ…….

ಆಹಾರ ಅವರವರ ಆಯ್ಕೆ. ಕಾನೂನಿನ ಅಡಿಯಲ್ಲಿ ನಿಷೇಧವಿಲ್ಲದ ಏನನ್ನಾದರೂ ತಿನ್ನಲಿ. ಆ ಸ್ವಾತಂತ್ರ್ಯ ಅವರಿಗಿದೆ. ಮುಖ್ಯವಾಗಿ ದನದ ಮಾಂಸದ ಬಗ್ಗೆ ಕೆಲವರಿಗೆ ಅಸಮಾಧಾನ ಮತ್ತು ಆಕ್ರೋಶವಿದೆ. ಗೋ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವಷ್ಟು ಕ್ರೌರ್ಯವಿದೆ. ಇದು ಸರಿಯೇ ಎಂಬುದು ‌ಈಗ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.

ಎಲ್ಲಾ ಪ್ರಾಣಿಗಳಂತೆ ಹಸು ಕೂಡ ಒಂದು ಪ್ರಾಣಿ. ಮನುಷ್ಯನ ಉಪಯೋಗದ ದೃಷ್ಟಿಯಿಂದ ಒಂದಷ್ಟು ಹೆಚ್ಚು ಪ್ರಾಮುಖ್ಯತೆ ಪಡೆದಿರಬಹುದು ಮತ್ತು ಗಾತ್ರದಲ್ಲಿ ದೊಡ್ಡದು ಸಹ. ಅದನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ ಎಂದಾಗ ಕೆಲವರು ಭಾವುಕರಾಗಬಹುದು.

ಆದರೆ ನಮ್ಮದೇ ಕೆಲವೇ ಕೆಲವು ಜನರು ರುಚಿಗಾಗಿ, ಪೌಷ್ಟಿಕಾಂಶಕ್ಕಾಗಿ, ಬಡತನಕ್ಕಾಗಿ, ಆಹಾರ ಸ್ವಾತಂತ್ರ್ಯದ ರಕ್ಷಣೆಗಾಗಿ, ಎಲ್ಲ ಜಾತಿ ಮತ ಧರ್ಮಗಳ ಸೌಹಾರ್ದಕ್ಕಾಗಿ ಮತ್ತು ಇಂದಿನ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಗೋಮಾಂಸ ಸೇವಿಸುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಇಲ್ಲದಿದ್ದರೆ ಇದು ನಮ್ಮ ಸಮಾಜದ ವಿಭಜನೆಗೆ ಕಾರಣವಾಗಬಹುದು.

ಗೋಮಾಂಸ ವಿರೋಧಿಸುವವರಿಗೆ ಇನ್ನೂ ಒಂದು ಆಯ್ಕೆ ಇದೆ. ಅವರು ಗೋಮಾಂಸದ ವಿರುದ್ಧ ಜನಜಾಗೃತಿ ಮೂಡಿಸಬಹುದು. ಗೋವುಗಳ ಎಲ್ಲಾ ತಳಿಗಳನ್ನು ಮತ್ತಷ್ಟು ಮತ್ತಷ್ಟು ಬೆಳೆಸಬಹುದು. ಗೋವುಗಳನ್ನು ತಮ್ಮ ಮನೆಯಲ್ಲಿ ಸಾಕಿ ಸಲುಹಿ ಪೂಜೆ ಪುನಸ್ಕಾರ ಏನು ಬೇಕಾದರೂ ಮಾಡಬಹುದು. ಆ ಎಲ್ಲಾ ಸ್ವಾತಂತ್ರ್ಯ,ಅವಕಾಶ ಮತ್ತು ಹಕ್ಕು ಅವರಿಗಿದೆ ಮತ್ತು ಅದು ಹೆಚ್ಚು ಪ್ರಜಾಸತ್ತಾತ್ಮಕವೂ ಹೌದು.

ನಾನು ಗೋಮಾಂಸ ತಿನ್ನುವುದಿಲ್ಲ. ನನ್ನನ್ನು ಯಾರಾದರೂ ಕೇಳಿದರೆ ಅದಕ್ಕಿಂತ ಉತ್ತಮ ಆಹಾರವನ್ನು ಸೂಚಿಸುತ್ತೇನೆ. ಆದರೆ ಗೋಮಾಂಸ ತಿನ್ನುವವರ ಸ್ವಾತಂತ್ರ್ಯಕ್ಕೆ ಎಂದು ಅಡ್ಡಿಪಡಿಸುವುದಿಲ್ಲ. ಅವರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಗೌರವಿಸುತ್ತೇನೆ.

ನನಗೆ ಗೋವಿಗಿಂತ ಮನುಷ್ಯ, ಅವನ ಆಸೆ ಆಕಾಂಕ್ಷೆ, ಅವನೊಡನೆ ಒಡನಾಟ, ಪ್ರೀತಿಯ ಸಂಬಂಧ ಬಹಳ ಮುಖ್ಯ.

ಮನುಷ್ಯರಿಂದ ನನಗೆ ಸಾಕಷ್ಟು ನೋವು ಸಂಕಷ್ಟಗಳ ಅನುಭವ ಆಗಿದೆ. ಗೋವುಗಳಿಂದ ಒಂದಷ್ಟು ಉಪಕಾರ ಆಗಿದೆ. ಆದರೂ ಗೋವು ಮತ್ತು ಮನುಷ್ಯನ ಆಯ್ಕೆಯಲ್ಲಿ ನಾನು ಮನುಷ್ಯರನ್ನೇ ಆಯ್ದುಕೊಳ್ಳುತ್ತೇನೆ.
ಹಾಗೆಯೇ ಗೋವು ಮತ್ತು ದೇಶದ ಆಯ್ಕೆಯಲ್ಲಿ ದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ ನನ್ನ ಬದುಕು ಮುನ್ನಡೆಯುತ್ತಿರುವುದೇ ಮನುಷ್ಯರಾದ ನಿಮ್ಮೊಂದಿಗೆ ಮತ್ತು ಈ ದೇಶದೊಂದಿಗೆ.

ಹಸುವಿಲ್ಲದೆ ಬದುಕಬಲ್ಲೆ. ನೀವಿಲ್ಲದೆ ನಾನಿಲ್ಲ.
ಈ ದೇಶ ನೆಮ್ಮದಿಯಾಗಿರದೆ ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ.

ಒಟ್ಟಿನಲ್ಲಿ ಇದು ಒಂದು ಸಹಜ ಸ್ವಾಭಾವಿಕ ಅಭಿಪ್ರಾಯ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನೂ ಗೌರವಿಸುತ್ತಾ…………..

ಎಲ್ಲಾ ಕಾಲಕ್ಕೂ ಸಲ್ಲುವುದು ಸಸ್ಯಾಹಾರ ಅಥವಾ ಮಾಂಸಾಹಾರ ಅಥವಾ ಗೋಮಾಂಸವಲ್ಲ, ಸಾಮಾನ್ಯ ಜ್ಞಾನ ಮತ್ತು ಮಾನವೀಯತೆ ಮಾತ್ರ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….

error: No Copying!