ನವದೆಹಲಿ: ದಿನಾಂಕ:04-12-2024(ಹಾಯ್ ಉಡುಪಿ ನ್ಯೂಸ್) ಉತ್ತರ ಪ್ರದೇಶದ ಸಂಭಾಲ್ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾಗಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಅವಕಾಶ ನೀಡದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ಹರಿದು ಹಾಕುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಸಂಭಾಲ್‌ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಘಾಜಿಪುರ ಗಡಿಯಲ್ಲಿ ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ವಿರೋಧ ಪಕ್ಷದ ನಾಯಕರು ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಇದ್ದು, ನಂತರ ದೆಹಲಿಗೆ ಮರಳಿದರು.
ಸಂಭಾಲ್ ಭೇಟಿಗೆ ರಾಹುಲ್ ಗಾಂಧಿಗೆ ಅವಕಾಶ ನೀಡದಿರುವುದನ್ನು ಖಂಡಿಸಿದ ಖರ್ಗೆ, “ಬಿಜೆಪಿ-ಆರ್‌ಎಸ್‌ಎಸ್ ತನ್ನ ವಿಭಜಕ ಕಾರ್ಯಸೂಚಿಯೊಂದಿಗೆ ಸಂವಿಧಾನವನ್ನು ಹರಿದು ಹಾಕುವಲ್ಲಿ ನಿರತವಾಗಿವೆ ಎಂದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಭಾಲ್‌ನಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡದಂತೆ ತಡೆದಿರುವುದೇ ಇದಕ್ಕೆ ಸಾಕ್ಷಿ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವುದು ಬಿಜೆಪಿ-ಆರ್‌ಎಸ್‌ಎಸ್‌ನ ಏಕೈಕ ಸಿದ್ಧಾಂತವಾಗಿದೆ. ಇದಕ್ಕಾಗಿ ಅವರು ಸಂವಿಧಾನ ಅಂಗೀಕರಿಸಿದ ಪ್ರಾರ್ಥನಾ ಕಾಯಿದೆಯನ್ನು ಹರಿದು ಹಾಕಿದ್ದಲ್ಲದೆ, ಈಗ ಎಲ್ಲೆಡೆ ದ್ವೇಷದ ಮಾರುಕಟ್ಟೆಯ ಶಾಖೆಗಳನ್ನು ತೆರೆಯಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ಮುಖ್ಯಸ್ಥರು ವಾಗ್ದಾಳಿ ನಡೆಸಿದ್ದಾರೆ.
ಆದರೆ ಸೌಹಾರ್ದತೆ, ಶಾಂತಿ, ಸಹೋದರತ್ವ ಮತ್ತು ಪ್ರೀತಿಯ ಅಂಗಡಿ ತೆರೆಯುವುದನ್ನು ಕಾಂಗ್ರೆಸ್ ಮುಂದುವರಿಸುತ್ತದೆ ಮತ್ತು ವಿವಿಧತೆಯಲ್ಲಿ ಏಕತೆ ತತ್ವದ ಮೂಲಕ ಸಮಾಜವನ್ನು ಒಗ್ಗೂಡಿಸಲು ಸಹಾಯ ಮಾಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.