Spread the love

ದೇಹವೆಂಬ ದೇಗುಲದಲ್ಲಿ
ಹೃದಯವೆಂಬ ಹಣತೆ ಬೆಳಗುತಿದೆ,…..

ಮನಸ್ಸೆಂಬ ಆಳದಲ್ಲಿ
ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ…..

ಜಾತಸ್ಯ ಮರಣಂ ಧ್ರುವಂ…

ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ…..

ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ……

ಸೃಷ್ಟಿಯ ನಿಯಮದಂತೆ,
ಗಂಡು ಹೆಣ್ಣಿನ ಸಮ್ಮಿಲನದಿಂದ,
ತಾಯ ಗರ್ಭದಲ್ಲಿ ಪ್ರಾರಂಭವಾಗುವುದು,
ಮೊದಲ ಉಚ್ವಾಸ –
ಅದೇ ನಮ್ಮ ಆರಂಭ,
ಅದೇ ಎಲ್ಲರ ಸಂಭ್ರಮ……

ಮುಂದೊಮ್ಮೆ,
ಕೊನೆಯ ನಿಶ್ವಾಸ –
ಅದೇ ನಮ್ಮ ಅಂತ್ಯ,
ಅದೇ ಎಲ್ಲರಿಗೂ ದುಃಖ – ನೋವು…….

ಈ ನಡುವಿನ ಬಾಲ್ಯ ಯೌವ್ವನ
ಮುಪ್ಪುಗಳೇ ನಮ್ಮ ಬದುಕು,…

ಹೇಗೆಂದು ವರ್ಣಿಸಲಿ ಇದನು,
ಹೇಗೆಂದು ಬಣ್ಣಿಸಲಿ ಇದನು,…

ಪದಗಳಿವೆಯೇ ಇದಕೆ ಅರ್ಥಕೊಡಲು,
ನಿಲುಕುವುದೇ ಇದು ಭಾಷೆಗಳಿಗೆ,….

ಹೃದಯದ ಬಡಿತ – ರಕ್ತದ ಹರಿವು,
ಮೆದುಳಿನ ಗ್ರಹಿಕೆ – ನರಗಳ ಚಲನೆ,
ಗಾಳಿ ನೀರು ಬೆಳಕಿನ ಶಕ್ತಿ,
ಮಣ್ಣಿನ ಆಶ್ರಯ ಮುನ್ನಡೆಸುವುದು
ಸಾವಿನೆಡೆಗೆ ,
ಅದೇ ಜೀವನ…..

ಚರ್ಮದ ಸ್ಪರ್ಶ – ಕಣ್ಣ ನೋಟ,
ಕಿವಿಯ ಆಲಿಸುವಿಕೆ – ಮೂಗಿನ ಗ್ರಹಿಕೆ,
ಹೊರ ಹಾಕುವುದು ಬಾಯಿ
ಧ್ವನಿಯ ಮೂಲಕ.
ಅದೇ ಜೀವಾ..
ಅದೇ ನಾನು ನಾನು ನಾನು….

ಕೊನೆಗೊಂದು ದಿನ ಆ ನಾನೇ
ಆಗುವುದು ನಿರ್ಜೀವ ಶವ….

ಸೂರ್ಯ – ಚಂದ್ರರ ನಾಡಿನಲ್ಲಿ,
ಸಾಗರದ ತಟದಲ್ಲಿ,
ಭೂತಾಯಿ ಮಡಿಲಲ್ಲಿ,
ಹಗಲು – ರಾತ್ರಿಗಳ ಜೊತೆಯಲ್ಲಿ,
ನೋವು ನಲಿವುಗಳ ಭಾವದಲ್ಲಿ,
ನಿಮ್ಮೆಲ್ಲರ ಹೃದಯದಲ್ಲಿ
ಶಾಶ್ವತವಾಗಿ ನೆಲೆಯಾಗುವಾಸೆ.
ಅದೇ ಬದುಕಿನ ಸಾರ್ಥಕತೆ…..

ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ,
ಮೃತ್ಯೋರ್ಮ ಅಮೃತಂಗಮಯ…

ತೃಪ್ತಿಯೇ ನಿತ್ಯ ಹಬ್ಬ…

ದೀಪದಿಂದ ದೀಪವ ಹಚ್ಚಬೇಕು ಮಾನವ…..

ಅದಕ್ಕಾಗಿ……….

ಸಂಕಲ್ಪ ಯಾತ್ರೆ ಮಾನಸಿಕವಾಗಿ…..

ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು……..

ವಿಷಯ ಯಾವುದೇ ಇರಲಿ,
ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ….

ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ…

ವಕೀಲಿಕೆ – ಚರ್ಚೆ ಮೀರಿ ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ….

ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ…..

ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ…..

ಸಭ್ಯತೆ – ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ…

ಆಗ ಮೂಡುವ ಅರಿವಿನಿಂದ…..

ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ…..

ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ……

ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ
ಸಾರ್ಥಕತೆಯತ್ತಾ ಸಾಗೋಣ……………

ಜ್ಞಾನವೆಂಬುದು ಮೂರ್ತ ಸ್ವರೂಪವೇ ಹೊರತು ಅಮೂರ್ತವಲ್ಲ……..

ಜ್ಞಾನ ತಿಳಿವಳಿಕೆ ಅಲ್ಲ ನಡವಳಿಕೆ…………

ಜ್ಞಾನ ನಂಬಿಕೆಯಲ್ಲ ವಾಸ್ತವ…….

ಜ್ಞಾನ ಮಾತಲ್ಲ ಕೃತಿ…….

ಜ್ಞಾನ ಭಾವನೆಯಲ್ಲ ಬದುಕು……….

ಜ್ಞಾನ ಅಕ್ಷರಗಳಲ್ಲಿ ಇಲ್ಲ ಅಂತರಂಗದಲ್ಲಿದೆ……..

ಜ್ಞಾನ ಹೇಳುವುದಲ್ಲ, ಕೇಳುವುದಲ್ಲ, ನಡೆದುಕೊಳ್ಳುವುದು…….

ಜ್ಞಾನ ನಿಂತ ನೀರಲ್ಲ ಹರಿಯುವ ನದಿ ಅರ್ಥಾತ್‌ ತ್ರಿಲೋಕ ಸಂಚಾರಿ……..

ಜ್ಞಾನ ಸರಿಯಾಗಿ ಉಪಯೋಗವಾಗದಿದ್ದರೆ ಅದು ಅಜ್ಞಾನವಾಗುತ್ತದೆ………

ಜ್ಞಾನದಿಂದ ನೆಮ್ಮದಿ ಸಿಗುತ್ತದೆ. ನಮ್ಮ ಮನಸ್ಸು ಶಾಂತವಾಗಿರದಿದ್ದರೆ ನಾವಿನ್ನೂ ಜ್ಞಾನವಂತರಲ್ಲ ಎಂದೇ ಭಾವಿಸಬೇಕು….

ಜ್ಞಾನ ಸ್ವತಂತ್ರ ಚಿಂತನೆಯೇ ಹೊರತು ಎರವಲು ಪಡೆಯಲುಬಾರದು……

ಜ್ಞಾನ ಮೇಲ್ಮುಖವಾಗಿ ಬೆಳೆಯುತ್ತದೆಯೇ ಹೊರತು ಕೆಳಕ್ಕೆ ಇಳಿಯುವುದಿಲ್ಲ…….

ಜ್ಞಾನದ ಅರ್ಥ ಮತ್ತು ವ್ಯಾಪ್ತಿ ಊಹೆಗೂ ನಿಲುಕುವುದಿಲ್ಲ……….

ಜ್ಞಾನದಲ್ಲಿ ವಿನಯವಿರುತ್ತದೆಯೇ ಹೊರತು ಅಹಂಕಾರ ಬೆಳೆಯುವುದೇ ಇಲ್ಲ…………..

ಜ್ಞಾನ ಸಹಜ ಸ್ವಾಭಾವಿಕವೇ ಹೊರತು ಅದನ್ನು ಮುಖವಾಡವಾಗಿಸಲು ಸಾಧ್ಯವಿಲ್ಲ………….

ಹಾಗಾದರೆ ಜ್ಞಾನವೆಂಬ ನಾನು‌ ಯಾರು ?

ಹುಡುಕಾಡುತ್ತಲೇ ಇದ್ದೇನೆ…….

ನೀವು ಬನ್ನಿ ನನ್ನೊಂದಿಗೆ,
ಜ್ಞಾನದ ಹುಡುಕಾಟದಲ್ಲಿ ಜೊತೆಯಾಗೋಣ………..

” ಕಳೆದುಕೊಳ್ಳುವುದು ಏನೂ ಇಲ್ಲ
ಪಡೆದುಕೊಳ್ಳುವುದೇ ಎಲ್ಲವೂ……… “

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ….. “

ಶುಭಾಶಯಗಳು.
ಎಲ್ಲರಿಗೂ ಒಳ್ಳೆಯದಾಗಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!