Spread the love

ಉಡುಪಿ: ದಿನಾಂಕ :15/10/2024( ಹಾಯ್ ಉಡುಪಿ ನ್ಯೂಸ್) ಜಿಲ್ಲೆಯಲ್ಲಿ ನಾಮ ಫಲಕಗಳಲ್ಲಿ 60% ಕನ್ನಡ ಕಡ್ಡಾಯ ಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರವೇ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಜಾಹಿರಾತು ಫಲಕಗಳು, ಶಿಕ್ಷಣ ಸಂಸ್ಥೆಗಳ ಫಲಕಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆಯ ಜಾಹೀರಾತು ಫಲಕಗಳು ಸೇರಿದಂತೆ ಇನ್ನಿತರ ಎಲ್ಲಾ ಕಡೆ ಸರ್ಕಾರದ ನಿಯಮದಂತೆ ನಾಮಫಲಕಗಳನ್ನು ಅಳವಡಿಸಿಕೊಳ್ಳದೇ  ಮನಬಂದಂತೆ ಪರಭಾಷೆಯಲ್ಲಿ ನಾಮಫಲಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರ ಈ ವಿಷಯದ  ಬಗ್ಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ 2024 ರನ್ವಯ  ಕರ್ನಾಟಕ ರಾಜ್ಯ ವ್ಯಾಪ್ತಿ ಪರವಾನಿಗೆ ಪಡೆದು ನಡೆಸುವ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಎಲ್ಲಾ ರೀತಿಯ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ನಾಮಫಲಕದಲ್ಲಿ ಶೇ. 60% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಡಿಸೆಂಬರ್ 29, 2023 ರಂದು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಹತ್ತು ತಿಂಗಳು ಕಳೆದರೂ ಸಹ ಉಡುಪಿ ಜಿಲ್ಲೆಯಲ್ಲಿ ಸುಗ್ರೀವಾಜ್ಞೆ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ. ಇದನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಅನೇಕ ರೀತಿಯಿಂದ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದೆ,ಇಷ್ಟಾದರೂ ಸಹ ಜಿಲ್ಲಾಡಳಿತವಾಗಲೀ, ನಗರಸಭೆ ಆಡಳಿತವಾಗಲೀ ಇದರ ಬಗ್ಗೆ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ  .
ಮುಂದಿನ ನವಂಬರ್ ಒಂದರ ಒಳಗೆ….ಅಂದರೆ ಕನ್ನಡ ನಾಡ ಹಬ್ಬದ …ರಾಜ್ಯೋತ್ಸವದ ವೇಳೆಗೆ ……..ಎಲ್ಲಾ ವಾಣಿಜ್ಯ ಮಳಿಗೆಗಳ, ಅಂಗಡಿ ಮುಂಗಟ್ಟು ನಾಮಫಲಕಗಳು ಸಂಪೂರ್ಣವಾಗಿ ಶೇಕಡ 60 ರಿಂದ 70 ಭಾಗ ವಿಳಾಸ ಸಮೇತ ಕನ್ನಡದಲ್ಲಿ ಇರಬೇಕು ಇಲ್ಲದಿದ್ದರೆ ಕನ್ನಡ ಅಭಿಮಾನಿಗಳಿಂದ ಕನ್ನಡ ಕರ ಸೇವಕರಿಂದ,ಕನ್ನಡ ಭಕ್ತರಿಂದ ಕಪ್ಪು ಮಸಿ ಬಳಿಯಲಾಗುವುದು  . ಎಚ್ಚರಗೊಳ್ಳಿ, ಎಚ್ಚರಗೊಳ್ಳಿ…. ಕನ್ನಡ ನಾಮ ಫಲಕಗಳು ಅಗ್ರಸ್ಥಾನದಲ್ಲಿ ಬರೆಯಿಸಲು.. ಸಿದ್ದ ಮಾಡಿಕೊಳ್ಳಿ ಎಂದು ಎಚ್ಚರಿಸುವ ಮೂಲಕ ಕರವೇ ಉಡುಪಿ ಜಿಲ್ಲಾ ಘಟಕ ಉಡುಪಿ ಜಿಲ್ಲಾಧಿಕಾರಿಯವರಿಗೆ ದಿನಾಂಕ:14-10-2024 ರಂದು ಮನವಿಯನ್ನು ನೀಡಿದೆ.

ಕರ್ನಾಟಕ ರಕ್ಷಣಾ ವೇದಿಕೆ  ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಸರ್ವ ಸದಸ್ಯರುಗಳು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿಯವರಿಗೆ ಮನವಿಯನ್ನು ನೀಡಿದ್ದು ,ಈ ಮನವಿಗೆ ಯಾವುದೇ ಒಂದು ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ , ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಸುಂದರ. ಎ.ಬಂಗೇರ ,ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾ ಪಾಂಗಾಳ, ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಗೋಪಾಲ್ ದೊರೆ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣಕುಮಾರ್. ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸ್ಟ್ಯಾನಿ ಜಾರ್ಜ್ ಡಿಸೋಜ  ಹಾಗೂ ಜಿಲ್ಲಾ ಸದಸ್ಯರಾದ ರೇಣುಕಾ, ರಶ್ಮಿ, ಅಶೋಕ ,ದೇವರಾಜ್, ರವಿಕುಮಾರ್, ವಿನೋದ್ ಕುಮಾರ್, ಶರಣು ಕುಮಾರ್, ಮೈಬೂಬ್, ರಮೇಶ, ವೈಭವ ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!