Spread the love

ಉಡುಪಿ : ದಿನಾಂಕ: 10-10-2024( ಹಾಯ್ ಉಡುಪಿ ನ್ಯೂಸ್)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳ ಮೇಲೆ  ಲೈಂಗಿಕ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನೀಡಿದ  ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆದ ಇಲಾಖೆಯ ಆಂತರಿಕ ತನಿಖೆಯಲ್ಲಿ ಆರೋಪ ಸಾಬೀತಾಗಿ ಹಿಂಭಡ್ತಿಗೊಳಗಾದ ಬಳಿಕವೂ ಜಿಲ್ಲಾ ಸರ್ಜನ್ ಆಗಿ ನೇಮಕಾತಿಗೊಂಡ ಡಾ. ಅಶೋಕ್ ಎಚ್. ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ  ಆಯುಕ್ತಾಲಯ ತನಿಖೆಗೆ ಆದೇಶಿಸಿದೆ.

ಅಕ್ಟೋಬರ್ 15ರಂದು ಅಪರಾಹ್ನ 2 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ತನಿಖೆ ನಡೆಯಲಿದೆ. ಈ ಸಂಬಂಧ ಖುದ್ದು ಹಾಜರಿರುವಂತೆ ಇಲಾಖಾಧಿಕಾರಿಗಳು ಡಾ. ಅಶೋಕ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿ ವಿಚಾರಣಾ ಪ್ರಕ್ರಿಯೆಗೆ ಹಾಜರಾಗುವಂತೆ ಸೂಚಿಸಿದೆ.

ಡಾ. ಅಶೋಕ್ ಎಚ್. ವಿರುದ್ಧ ದ. ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಲವಾರು ಮಂದಿ ಮಹಿಳಾ ಸಿಬ್ಬಂದಿಗಳು ಹಾಗೂ ಕಾರ್ಕಳ ತಾಲೂಕಿನ ಮಹಿಳಾ ಸಿಬ್ಬಂದಿಗಳು ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು.

ದೂರುಗಳ ಕಾರಣ ಜಿಲ್ಲಾ ಮಟ್ಟದ ಆಂತರಿಕ ದೂರು ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ದೂರಿನಲ್ಲಿ ಮಾಡಲಾದ ಅಪಾದನೆಗಳು ಸಾಬೀತಾದ ಕಾರಣ ಡಾ. ಅಶೋಕ್ ಎಚ್.ಇವರಿಗೆ ವೇತನ ಹಿಂಭಡ್ತಿಗೊಳಿಸಲಾಗಿತ್ತು.

ಆರೋಪ ಸಾಬೀತಾಗಿ ವೇತನ ಹಿಂಭಡ್ತಿಗೆ ಒಳಗಾಗಿದ್ದರೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಆಸಕ್ತಿವಹಿಸಿ ನೀತಿ ನಿಯಮಾವಳಿ ಮಾನದಂಡಗಳನ್ನೆಲ್ಲವನ್ನೂ ಕಡೆಗಣಿಸಿ ಡಾ. ಅಶೋಕ್ ಎಚ್. ಇವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ನೇಮಕಾತಿ ಮಾಡಿದ್ದರು.

ಇದೀಗ ಆರೋಗ್ಯ ಇಲಾಖೆಯ ಆಯುಕ್ತಾಲಯವು ಜಾಗೃತಕೋಶದ ಅಧಿಕಾರಿಗಳ ಮೂಲಕ ತನಿಖಾ ಪ್ರಕ್ರಿಯೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಮೊದಲ ಹಂತದ ವಿಚಾರಣೆಯು ಅಕ್ಟೋಬರ್ 15ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಅಪಾದಿತರಾದ ಡಾ. ಅಶೋಕ್ ಎಚ್.ಇವರನ್ನು ಖುದ್ದು ವಿಚಾರಣೆಗೆ ಕರೆಯಲಾಗಿದೆ.

ವರದಿ : ಶ್ರೀರಾಮ ದಿವಾಣ

error: No Copying!