ದರ್ಶನ್ ಜಾಮೀನು ಅರ್ಜಿಯ ವಾದ ಪ್ರತಿವಾದ ಮಂಡನೆಯ ನೇರ ಪ್ರಸಾರ ಮಾಡಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಅದನ್ನು ಸಾಂಕೇತಿಕವಾಗಿ, ಉದಾಹರಣೆಯಾಗಿ ತೆಗೆದುಕೊಂಡು ಆ ಬಗ್ಗೆ ಒಂದಷ್ಟು ಚಿಂತನೆ…….
ನ್ಯಾಯಾಲಯದ ಕಾರ್ಯಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುತ್ತಿರುವುದರಿಂದ ಸಮಾಜದ ಸಾಮಾನ್ಯ ಜನರ ಮನಸ್ಥಿತಿಯ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಸ್ವಲ್ಪ ಗಮನಿಸಬೇಕಾಗುತ್ತದೆ. ಏಕೆಂದರೆ ಪ್ರಖ್ಯಾತರ, ಕುಖ್ಯಾತರ, ಜನಪ್ರಿಯ ವ್ಯಕ್ತಿಗಳ ಕೆಲವು ಕ್ರಿಮಿನಲ್ ಅಪರಾಧಗಳ ವಾದ ಪ್ರತಿವಾದಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೇರವಾಗಿ ಮನೆ ಮನೆ ತಲುಪುತ್ತಿದೆ…..
ಉದಾಹರಣೆಗೆ ರೇಣುಕಾ ಸ್ವಾಮಿ ಕೊಲೆಯ ಕೇಸಿನಲ್ಲಿ ಜನಪ್ರಿಯ ನಟ ದರ್ಶನ್ ಪರವಾಗಿ ಖ್ಯಾತ ವಕೀಲರು ವಾದಿಸುತ್ತಿರುವ ಪ್ರತಿ ಪದಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಸಾಮಾನ್ಯವಾಗಿ ಕಕ್ಷಿದಾರರ ಪರವಾಗಿ ವಕೀಲರು ವಾದ ಮಾಡುವ ರೀತಿಯೇ ಹಾಗಿರುತ್ತದೆ, ಅಂದರೆ ಚಾರ್ಜ್ ಶೀಟಿನಲ್ಲಿರುವ ತಮಗೆ ಅನುಕೂಲಕರವಾದ ವಿಷಯವನ್ನು ಅವರು ಉಪಯೋಗಿಸಿಕೊಂಡು, ತಮ್ಮ ಕಕ್ಷಿದಾರ ಅಪರಾಧದಲ್ಲಿ ಭಾಗಿಯೇ ಆಗಿಲ್ಲ ಎಂದು ವಾದ ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಪೊಲೀಸ್ ವ್ಯವಸ್ಥೆ ಆರೋಪಿಗಳು ಹೇಗೆ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ ಮತ್ತು ಹಾಗೆ ವಾದಿಸುತ್ತಾರೆ…..
ವಾಸ್ತವದಲ್ಲಿ ಸಾಮಾನ್ಯವಾಗಿ ಪೊಲೀಸರು ಸಲ್ಲಿಸುವ ಚಾರ್ಜ್ ಶೀಟ್ ನಲ್ಲಿ ಹೆಚ್ಚು ಕಡಿಮೆ ನಿಜಾಂಶವೇ ಇರುತ್ತದೆ. ಕೆಲವೊಮ್ಮೆ ಪ್ರಭಾವ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂತಾದ ಕಾರಣಗಳಿಂದಾಗಿ ಆರೋಪಿಗಳಿಗೆ ಅನುಕೂಲವಾಗುವಂತೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯೂ ಇರುತ್ತದೆ. ಆದರೆ ಬಹುತೇಕ ಮಾಧ್ಯಮಗಳ ಗಮನ ಸೆಳೆದ ಪ್ರಕರಣಗಳಲ್ಲಿ ದಾಖಲೆಗಳ ಕೊರತೆ ಇರಬಹುದು, ಸ್ವಲ್ಪ ತಪ್ಪುಗಳು ಇರಬಹುದು, ಆದರೆ ಆರೋಪಗಳು ಹೆಚ್ಚು ನಿಖರವಾಗಿರುತ್ತವೆ…..
ಪ್ರತಿ ವಾದಿ ವಕೀಲರು ಅದನ್ನು ಸಂಪೂರ್ಣ ಸುಳ್ಳು ಎಂದು ವಾದಿಸಿ ಆರೋಪಿಗಳನ್ನು ನಿರಪರಾಧಿಗಳೆಂದು ದೃಢಪಡಿಸುತ್ತಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇಕಡ 90% ಕ್ಕೂ ಹೆಚ್ಚು ಪ್ರಕರಣಗಳು ವಾಸ್ತವದಲ್ಲಿ ನಡೆದಿದ್ದರೂ ನ್ಯಾಯಾಲಯದಲ್ಲಿ ಖುಲಾಸೆಯಾಗುತ್ತದೆ. ಈಗ ಆ ರೀತಿಯ ಪ್ರಕರಣಗಳ ವಾದ ಪ್ರತಿವಾದಗಳು ನೇರವಾಗಿ ಜನರಿಗೆ ತಲುಪಿದರೆ ಸಾಮಾನ್ಯ ಜನರು ಸಹ ಅಪರಾಧ ಮಾಡಲು ಪ್ರೇರೇಪಣೆ ಸಿಗಬಹುದು ಅಥವಾ ಧೈರ್ಯ ಬರಬಹುದು…
ಏಕೆಂದರೆ ಹಿಂದೆಯೂ ಸಹ ನೇರ ಪ್ರಸಾರವಿಲ್ಲದಿದ್ದರೂ ಕೊಲೆ ಪಾತಕಿಗಳು, ಅತ್ಯಾಚಾರಿಗಳು ಬಂಧನವಾದ ಕೇವಲ ಎರಡು ಮೂರು ತಿಂಗಳಲ್ಲೇ ಜಾಮೀನಿನಲ್ಲಿ ಬಿಡುಗಡೆಯಾಗಿ ಐದಾರು ವರ್ಷಗಳ ನಂತರ ಕೇಸಿನಿಂದ ಖುಲಾಸೆ ಆಗಿರುವುದರಿಂದ ನಾವು ಹೀಗೆ ನಮ್ಮ ವಿರೋಧಿಗಳನ್ನು ಕೊಂದು ಬೇಗ ಬಿಡುಗಡೆಯಾಗಬಹುದು ಎಂಬ ಮನೋಭಾವವೇ ನಮ್ಮ ಸಮಾಜದಲ್ಲಿ ಎಲ್ಲಾ ರೀತಿಯ ಅಪರಾಧಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ. ಕೊಲೆಗಾರರು, ಅತ್ಯಾಚಾರಿಗಳೇ ಬಿಡುಗಡೆಯಾದರೆ ಇನ್ನು ಕಳ್ಳರು, ಸುಳ್ಳರು, ವಂಚಕರು, ಭ್ರಷ್ಟಾಚಾರಿಗಳು ತಮ್ಮ ತಪ್ಪು ಯಾವ ಲೆಕ್ಕ ಎಂದು ಭಾವಿಸುತ್ತಾರೆ…..
ಮುಖ್ಯವಾಗಿ ಕ್ರಿಮಿನಲ್ ಘಟನೆಗಳು ನೇರ ಪ್ರಸಾರವಾಗಿ ಅವು ಜನಗಳನ್ನು ತಲುಪಿದರೆ ಪ್ರಾರಂಭದ ಕೆಲವು ವರ್ಷಗಳಲ್ಲಿ ಈ ಸಮಾಜ ಮಾನಸಿಕ ಸ್ಥಿತಿ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ…..
ಹಿಂದಿನಿಂದಲೂ ನ್ಯಾಯಾಲಯದ ಕಾರ್ಯಕಲಾಪಗಳನ್ನು ಯಾವುದೇ ವ್ಯಕ್ತಿ ನೇರವಾಗಿ ಅಲ್ಲಿ ಹೋಗಿ ಕುಳಿತು ವೀಕ್ಷಿಸಬಹುದಿತ್ತು. ಆದರೂ ನಮ್ಮ ಜನಸಂಖ್ಯೆಯ ಬಹುತೇಕ ಜನರಿಗೆ ನ್ಯಾಯಾಲಯಗಳು ಇನ್ನೂ ಅಪರಿಚಿತವಾಗಿಯೇ ಉಳಿದಿವೆ ಮತ್ತು ಕೆಲವರು ಸಣ್ಣ ಪ್ರಮಾಣದ ಅನುಭವ ಹೊಂದಿರಬಹುದು….
ನ್ಯಾಯಾಲಯದ ವಾದ ಪ್ರತಿವಾದ ಆಲಿಸಿದರೆ ಆಗಬಹುದಾದ ತೊಂದರೆ ಏನು ಎಂಬ ಪ್ರಶ್ನೆ ಕೇಳಬಹುದು. ವಾಸ್ತವವೆಂದರೆ ನ್ಯಾಯಾಲಯದ ವಕೀಲರ ಬಹುತೇಕ ವಾದಗಳು ತುಂಬಾ ತುಂಬಾ ಸುಳ್ಳುಗಳ, ಊಹೆಗಳ, ವಿಷಯಗಳನ್ನು ಅನುಕೂಲಕ್ಕೆ ತಕ್ಕಂತೆ ತಿರುಚುವ, ಇಲ್ಲಸಲ್ಲದ ಪ್ರತಿ ಆರೋಪ ಮಾಡುವ, ಕೃತಕ ಘಟನೆಗಳನ್ನು ಸೃಷ್ಟಿಸುವ, ಭಾವುಕ ವಾದ ಮಂಡಿಸುವ ಆಧಾರದ ಮೇಲೆಯೇ ನಡೆಯುತ್ತದೆ……
ಇದರಿಂದಾಗಿ ಹೆಚ್ಚು ಕಡಿಮೆ ಎಲ್ಲಾ ಕಾನೂನುಗಳು ಅಪರಾಧಿಗಳಿಗೆ ಹೆಚ್ಚು ಅನುಕೂಲಕರವಾದಂತೆ ಭಾಸವಾಗುತ್ತದೆ. ಕಾನೂನಿನ ಕಾಲಂಗಳು ಹೆಚ್ಚಾದಂತೆ, ವಕೀಲರ ಅನುಭವ ಮತ್ತು ಬುದ್ದಿಶಕ್ತಿ ಬೆಳೆದಂತೆ ಅದರಿಂದ ಅಪರಾಧಿಗಳ ಬಿಡುಗಡೆಯೂ ಸುಲಭವಾಗುತ್ತಿದೆ…….
ಆರೋಪಿ ನಾನು ಅಪರಾಧ ಮಾಡಿಲ್ಲ ಎಂಬ ಒಂದೇ ವಾದ ಮಂಡಿಸುತ್ತಾನೆ. ಆದರೆ ಪ್ರತಿವಾದಿಗಳು ಆತನ ಅಪರಾಧಗಳನ್ನು ನ್ಯಾಯಾಲಯಕ್ಕೆ ದಾಖಲೆ ಮತ್ತು ಸಾಕ್ಷಿಗಳ ಸಮೇತ ದೃಢಪಡಿಸಲು ತುಂಬಾ ತುಂಬಾ ಶ್ರಮಪಡಬೇಕಾಗುತ್ತದೆ. ಎಷ್ಟೋ ಘಟನೆಗಳಲ್ಲಿ ಅಪರಾಧದ ಮುನ್ಸೂಚನೆ ಇರುವುದಿಲ್ಲ. ಆಗ ದಾಖಲೆಗಳ ಕೊರತೆ ತುಂಬಾ ಕಾಡುತ್ತದೆ. ಶೇಕಡಾ100% ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಬಹಳಷ್ಟು ಅಪರಾಧಿಗಳು ಸುಲಭವಾಗಿ ಬಿಡುಗಡೆ ಹೊಂದುತ್ತಾರೆ. ಕೆಲವು ಕಳ್ಳರು, ವಂಚಕರು, ಕೊಲೆಗಾರರು, ದರೋಡೆಕೋರರು ಇವುಗಳನ್ನೇ ವೃತ್ತಿ ಮಾಡಿಕೊಂಡು ಜೀವನಪೂರ್ತಿ ಅಪರಾಧ, ಪೋಲೀಸ್, ನ್ಯಾಯಾಲಯ ಮತ್ತೆ ಅಪರಾಧ ಹೀಗೆಯೇ ಕಳೆಯುತ್ತಾರೆ. ಅದಕ್ಕೆ ಕಾರಣವೇ ಸುಳ್ಳು ವಾದಗಳು……
ಇನ್ನೂ ಕಳವಳಕಾರಿ ಅಂಶವೆಂದರೆ ನಮ್ಮ ಕಣ್ಣ ಮುಂದೆ ಅಥವಾ ನಮ್ಮ ಅರಿವಿನ ಸುತ್ತಮುತ್ತಲು ನಮಗೆ ಸತ್ಯ ತಿಳಿದಿರುವ ವಿಷಯಗಳಲ್ಲಿಯೂ ವಕೀಲರ ವಾದ ಅದಕ್ಕೆ ವಿರುದ್ಧವಾಗಿ ಸುಳ್ಳಿನ ಪರಮಾವಧಿಯ ರೀತಿ ಇರುತ್ತದೆ. ಅದನ್ನು ವೀಕ್ಷಿಸುವ ಸಾಮಾನ್ಯ ಜನ ಈ ಸಮಾಜದ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳಬಹುದು ಮತ್ತು ಅಪರಾಧ ಅಥವಾ ವಂಚನೆ ಮಾಡಿ ತಪ್ಪಿಸಿಕೊಳ್ಳುವ ಉಪಾಯವನ್ನು ಸುಲಭವಾಗಿ ಮನೆಯಲ್ಲಿ ಕುಳಿತೇ ಕಲಿತುಕೊಳ್ಳಬಹುದು. ಯುವ ಜನಾಂಗ ನ್ಯಾಯಾಲಯದ ಕಲಾಪಗಳನ್ನು ಎಳೆಯ ವಯಸ್ಸಿನಲ್ಲಿ ತಪ್ಪಾಗಿ ಗ್ರಹಿಸಬಹುದು. ಅಪರಾಧ ಮಾಡುವ ಮತ್ತು ತಪ್ಪಿಸಿಕೊಳ್ಳುವ ಯೋಚನೆಗಳು ಸುಲಭವಾಗಿ ಅವರ ಮನಸ್ಸು ಪ್ರವೇಶಿಸಬಹುದು……
ಸಾರ್ವಜನಿಕವಾಗಿ ಅತ್ಯಾಚಾರ ಮಾಡಿ ಜನರಿಂದಲೇ ಪೋಲೀಸರಿಗೆ ಹಿಡಿದುಕೊಟ್ಟವನ ಪರವಾಗಿ ಅವನ ಪರ ವಕೀಲರು ಆತ ಅಲ್ಲಿ ಇರಲೇ ಇಲ್ಲ. ಇನ್ನೂ ಅತ್ಯಾಚಾರ ಮಾಡಲು ಹೇಗೆ ಸಾಧ್ಯ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಾದಿಸಬಹುದು. ಹಾಗೆ ಕೊಲೆ, ವಂಚನೆ, ಹಲ್ಲೆ ಕಳ್ಳತನದ ವಿಷಯ ಇವೆಲ್ಲವೂ ಸುಲಭವಾಗಿ ನೋಡಲು ದೊರೆತರೆ ಸಾಮಾನ್ಯ ಜನರ ಮನಸ್ಥಿತಿ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು. ಕೌಟುಂಬಿಕ ಜಗಳಗಳು, ಭ್ರಷ್ಟಾಚಾರದ ಪ್ರಕರಣಗಳು, ಜಮೀನಿನ ವ್ಯಾಜ್ಯಗಳು ಮುಂತಾದವುಗಳ ವಾದ ಸರಣಿಗಳು ಇನ್ನೂ ಭಯಂಕರ ಮತ್ತು ಕ್ಷುಲ್ಲಕವಾಗಿರುತ್ತವೆ. ಕೆಲವೊಮ್ಮೆ ಅಸಹ್ಯ ತರಿಸುತ್ತವೆ…..
ಆದರೆ ದೀರ್ಘಕಾಲದಲ್ಲಿ ಇದು ಒಳ್ಳೆಯ ಮತ್ತು ಜಾಗೃತ ಪರಿಣಾಮ ಬೀರಬಹುದು. ಈ ರೀತಿಯ ಕಲಾಪಗಳನ್ನು ವೀಕ್ಷಿಸುತ್ತಾ ಜನ ಅಪರಾಧಿಗಳ ಬಗ್ಗೆ ಎಚ್ಚರಿಕೆ ಹೊಂದಿ ಹೆಚ್ಚು ಹೆಚ್ಚು ಅಧಿಕೃತ ಮತ್ತು ದೂರ ದೃಷ್ಟಿಯಿಂದ ಸಾಕ್ಷಿ ದಾಖಲೆಗಳಿಗೆ ಮಹತ್ವ ಕೊಡಬಹುದು. ನ್ಯಾಯಾಲಯಗಳಲ್ಲಿ ಹೇಗೆ ನ್ಯಾಯ ಪಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಸುಳ್ಳು, ವಂಚನೆಗಳು ಕಡಿಮೆಯಾಗಬಹುದು. ನ್ಯಾಯ ಅನ್ಯಾಯದ ಗೆರೆ ಸ್ಪಷ್ಟವಾಗಬಹುದು……
ಒಟ್ಟಿನಲ್ಲಿ ಎರಡೂ ರೀತಿಯ ಪರಿಣಾಮಗಳನ್ನು ನಿರೀಕ್ಷಿಸಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೆಟ್ಟ ಪರಿಣಾಮಗಳೇ ಹೆಚ್ಚು ಎನಿಸುತ್ತದೆ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..