Spread the love

ದ್ವೇಷ, ಅಸೂಯೆ, ಸೇಡಿನ ಕಾರಣದಿಂದ ಅಸಹ್ಯಕರ ಹಂತ ತಲುಪಿದ ಕರ್ನಾಟಕದ ರಾಜಕಾರಣ…….

ಭಾರತ ದೇಶದ ಕೆಲವೇ ಅತ್ಯುತ್ತಮ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹಾಗೆಯೇ ಇಲ್ಲಿನ ಸಾಂಸ್ಕೃತಿಕ ವಾತಾವರಣ ಸಹ ಸಹನೀಯ, ಸಮಾಧಾನಕರ ಗುಣಮಟ್ಟವನ್ನು ಹೊಂದಿದೆ….

ಸಾಹಿತ್ಯ, ಸಂಗೀತ, ಸಿನಿಮಾ, ಕ್ರೀಡೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವು ಬಹು ಮುಖ್ಯವಾದದ್ದು. ಇಲ್ಲಿನ ಪ್ರಾಕೃತಿಕ ಸಂಪತ್ತು, ಸಾಮಾನ್ಯ ಜನರ ನಡವಳಿಕೆ, ತಿಳುವಳಿಕೆ, ವರ್ತನೆ ಎಲ್ಲವೂ ಕೂಡ ಸ್ವಲ್ಪ ಆದರ್ಶದ ಮಾದರಿಯಲ್ಲಿ ಇದೆ…..

ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೂ ಸಹ ಬಹುತೇಕ ಮೌಲ್ಯಯುತ ರಾಜಕಾರಣವನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಅನುಸರಿಸುತ್ತಲೇ ಬಂದಿದ್ದಾರೆ. ಆದರೆ ಇತ್ತೀಚಿನ ಸುಮಾರು 15/20 ವರ್ಷಗಳ ರಾಜಕೀಯ ವಾತಾವರಣ ಮಾತ್ರ ತೀರಾ ಅದೋಗತಿಯತ್ತ ಸಾಗುತ್ತಿದೆ. ಅದರಲ್ಲೂ ಈಗಿನ ಬೆಳವಣಿಗೆಗಳಂತೂ ಏಕವಚನ, ಕೀಳು ಭಾಷೆ, ದ್ವೇಷ, ವಂಶಾಡಳಿತ, ಕುತಂತ್ರ ಎಲ್ಲವೂ ಮೇಳೈಸಿ, ಇಡೀ ರಾಜಕಾರಣ ತೀರ ಕೆಳಹಂತಕ್ಕೆ ಇಳಿದಿರುವುದು ನಾಚಿಕೆಗೇಡು ಮತ್ತು ವಿಷಾದನೀಯ……

ನಾವು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಾ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತಾ, ಸಾಮಾಜಿಕವಾಗಿ, ರಾಜಕೀಯವಾಗಿ ಸಮೂಹ ಸಂಪರ್ಕಗಳ ಮಾಧ್ಯಮಗಳ ಮೂಲಕ ಅರಿವು ಮೂಡಿಸಿಕೊಳ್ಳುತ್ತಾ ಸಾಗುತ್ತಿರಬೇಕಾದರೆ ರಾಜಕೀಯ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರಬೇಕಾಗಿತ್ತು, ಆದರೆ ದುರಾದೃಷ್ಟವಶಾತ್ ಇತ್ತೀಚಿನ ಘಟನೆಗಳು ಕರ್ನಾಟಕದ ಹೆಸರಿಗೆ ಮಸಿ ಬಳಿಯುವಂತಿದೆ…..

ಎಲ್ಲಿ ಹೋಯಿತು ಶ್ರೀಗಂಧದ ನಾಡಿನ ಆ ಸಭ್ಯ ರಾಜಕಾರಣ, ಎಲ್ಲಿ ಹೋಯಿತು ಮೌಲ್ಯಗಳ ಆಡಳಿತ ಆ ಸಮಾಜ,
ಎಲ್ಲಿ ಹೋಯಿತು ಆ ಸರ್ವ ಜನಾಂಗದ ಶಾಂತಿಯ ತೋಟ, ಎಲ್ಲಿ ಹೋಯಿತು ಸಾಂಸ್ಕೃತಿಕ ನಾಯಕ ಬಸವ ತತ್ವದ ಆ ಆಡಳಿತಾತ್ಮಕ ವ್ಯವಸ್ಥೆ,
ಎಲ್ಲಿ ಜಾರಿತೋ ಆ ಸಂವೇದನಾಶೀಲ ಮನಸ್ಸು……

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಅಧಿಕಾರವೇ ಮುಖ್ಯವಾಗಿ ಹೋಯಿತು. ಅವರ ವೈಯಕ್ತಿಕ ಹಿತಾಸಕ್ತಿಗಾಗಿ ರಾಜ್ಯದ ಒಟ್ಟು ವ್ಯವಸ್ಥೆಯನ್ನೇ ಅಪಮೌಲ್ಯಗೊಳಿಸುತ್ತಿದ್ದಾರೆ…

ಕರ್ನಾಟಕದ ಪ್ರಜ್ಞಾವಂತ ಜನರು ಈ ಘಟನೆಗಳನ್ನು ನೋಡುತ್ತಾ, ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಅನ್ನು ಆಸ್ವಾದಿಸುತ್ತಾ, ಕಾಡು ಹರಟೆ, ಚರ್ಚೆ, ಮಾತುಕತೆಗಳ ಮೂಲಕ ಅವರನ್ನೋ, ಇವರನ್ನೋ ಬೆಂಬಲಿಸುತ್ತಾ, ಜಾತಿ ರಾಜಕಾರಣದಿಂದ ಎಲ್ಲವನ್ನೂ ಸಮರ್ಥಿಸುತ್ತಾ ಅಥವಾ ವಿರೋಧಿಸುತ್ತಾ ಹೀಗೆ ಸಾಗಿದರೆ ಮುಂದೊಂದು ದಿನ ಇದರ ದುಷ್ಪರಿಣಾಮಗಳನ್ನು ನಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ…..

ಯಾವಾಗಲೂ, ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ದುಷ್ಟತನದ ಹಾದಿಯಲ್ಲಿ ಸಾಗುತ್ತಿರಬೇಕಾದರೆ, ನಾವುಗಳು ನಮ್ಮ ನಮ್ಮ ನೆಲೆಯಲ್ಲಿಯೇ ಒಂದು ಸ್ಪಷ್ಟ ಮತ್ತು ಮೌಲ್ಯಯುತ ಪ್ರತಿಕ್ರಿಯೆಯನ್ನು ನೀಡಲೇಬೇಕು. ಅದು ಸಾರ್ವಜನಿಕ ಅಭಿಪ್ರಾಯವಾಗಿ ಮಾರ್ಪಡಬೇಕು. ನಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಸಮೂಹ ಸಂಪರ್ಕ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ಈ ಕೆಟ್ಟ ರಾಜಕೀಯಕ್ಕೆ ಒಂದು ಇತಿಶ್ರೀ ಹಾಡಲೇಬೇಕು…..

ಇಲ್ಲದಿದ್ದರೆ ಕುಡುಕರ ಬೀದಿ ಜಗಳ ನೋಡಿ ಸುಮ್ಮನಾಗುವಂತೆ ಅದನ್ನು ನಿರ್ಲಕ್ಷಿಸುತ್ತಾ ಸಾಗಿದರೆ ಈ ರಾಜಕೀಯ ಪಕ್ಷಗಳ ನಾಯಕರು ಕೊಚ್ಚೆ ಗುಂಡಿಯಲ್ಲಿ ಬಿದ್ದು ಹೊರಳಾಡುವ ದಿನಗಳು ದೂರವಿಲ್ಲ. ಆಗ ಇಡೀ ಆಡಳಿತ ವ್ಯವಸ್ಥೆ ಹಾದಿ ತಪ್ಪಿ ನಾವೂ ಸಹ ಅನುಭವಿಸಬೇಕಾಗುತ್ತದೆ. ಕನಿಷ್ಠ ಈ ಸೇಡು, ದ್ವೇಷ, ಏಕವಚನದ ಅಸಹ್ಯಕರ ರಾಜಕಾರಣದ ಬಗ್ಗೆ ಕನಿಷ್ಠ ಬೇಸರವನ್ನಾದರೂ ವ್ಯಕ್ತಪಡಿಸಿ, ಅವರಿಗೆ ಛೀಮಾರಿ ಹಾಕೋಣ, ಧನ್ಯವಾದಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068………

error: No Copying!