ಕುಂದಾಪುರ: ದಿನಾಂಕ :01-10-2024(ಹಾಯ್ ಉಡುಪಿ ನ್ಯೂಸ್) ಹೆಮ್ಮಾಡಿ ಗ್ರಾಮದ ನಿವಾಸಿಯೋರ್ವರಿಗೆ ವೀಸಾ ನೀಡುವುದಾಗಿ ನಂಬಿಸಿ 1,17,000 ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ,ಹೆಮ್ಮಾಡಿ ಗ್ರಾಮದ ನಿವಾಸಿ ಜೋಸೆಫ್ ಡಿಸೋಜಾ (58) ಎಂಬವರು ತನ್ನ ಮಗನಾದ ಪ್ರಜ್ವಲ್ ಡಿ ಸೋಜಾ ರವರನ್ನು ವಿದೇಶದಲ್ಲಿ ಉದ್ಯೋಗಕ್ಕೆ ಕಳುಹಿಸುವ ವಿಚಾರವಾಗಿ ರಾಬರ್ಟ್ ವಿಲ್ಸನ್ ಎನ್ನುವವರನ್ನು ಸಂಪರ್ಕಿಸಿ ಅವರ ಮುಖಾಂತರ ವೀಸಾ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆ ಸಮಯ 2 ನೇ ಆರೋಪಿಯಾದ ರಾಜೇಶ್ ಎಂಬವನು ವೀಸಾ ಮಾಡಿಸಿ ಕೊಡುವುದಾಗಿ ಹೇಳಿದ್ದಾನೆ ಎಂದು ದೂರಿದ್ದಾರೆ. ಆದರಂತೆ ವೀಸಾ ಮಾಡಿಸಿಕೊಡಲು 1 ನೇ ಆರೋಪಿಯಾದ ಅನಿತಾ ಎಂಬವಳು ಜೋಸೆಫ್ ಡಿಸೋಜಾ ರಿಂದ 1,17000/- ರೂ ಹಣವನ್ನು ಹಾಕುವಂತೆ ಹೇಳಿದಾಗ ಜೋಸೆಫ್ ಡಿಸೋಜಾ ರವರು ವೀಸಾ ಕೊಡಿಸುವರೆಂದು ತಿಳಿದು ದಿನಾಂಕ 15.09.2024 ರಂದು 30,000/- ರೂ ಅನ್ನು 1 ನೇ ಆರೋಪಿಯ ಖಾತೆಗೆ ಗೂಗಲ್ ಪೇ ಮಾಡಿದ್ದು , ನಂತರ 1ನೇ ಆರೋಪಿಯ ಖಾತೆಗೆ 60,000/- ರೂ ಅನ್ನು ವರ್ಗಾಯಿಸಿರುತ್ತಾರೆ. ಪುನಃ 1 ನೇ ಆರೋಪಿಯ ಖಾತೆಗೆ ದಿನಾಂಕ 27.06.2024 ರಂದು 17,000/- ರೂ ಅನ್ನು ಹಾಗೂ ದಿನಾಂಕ 22.09.2024 ರಂದು 10,000/-ರೂಪಾಯಿಯನ್ನು ವರ್ಗಾಯಿಸಿರುತ್ತಾರೆ ಎಂದು ದೂರಿದ್ದಾರೆ. ಜೋಸೆಫ್ ಡಿಸೋಜಾ ರವರು ಒಟ್ಟು 1,17000/- ವನ್ನು ವೀಸಾ ಪಡೆಯುವ ಸಲುವಾಗಿ ಪಾವತಿಸಿದ್ದು ನಂತರ ಆರೋಪಿಗಳು ವಿಸಿಟಿಂಗ್ ವೀಸಾವನ್ನು ಕಳುಹಿಸಿರುತ್ತಾರೆ ಎಂದಿದ್ದಾರೆ.
ಅವರು ನೀಡಿದ ವೀಸಾ ಪಡೆದು ದಿನಾಂಕ 18.09.2024 ರಂದು ಜೋಸೆಫ್ ಡಿಸೋಜಾ ಅವರ ಮಗ ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋದಾಗ ಅಧಿಕಾರಿಯವರು ವೀಸಾವನ್ನು ಪರಿಶೀಲಿಸಿದಾಗ ನಕಲಿ ವೀಸಾವೆಂದು ಪರಿಗಣಿಸಿ ವಾಪಾಸ್ಸು ಕಳುಹಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 316(2) 318(4) BNS ನಂತೆ ಪ್ರಕರಣ ದಾಖಲಾಗಿದೆ.