Spread the love

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಸೆಪ್ಟೆಂಬರ್ 15………

ಮಾನವ ಸರಪಳಿ,
ಬೀದರ್ ನಿಂದ ಚಾಮರಾಜನಗರದವರೆಗೆ, ಸುಮಾರು 25 ಲಕ್ಷ ಜನರು ಭಾಗವಹಿಸುತ್ತಿದ್ದಾರೆ. 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ. ಸಮಯ ಬೆಳಗ್ಗೆ 9:30 ರಿಂದ
10: ೦೦ ಗಂಟೆಯವರೆಗೆ….

ವಿಶ್ವದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬೆಳವಣಿಗೆಗಾಗಿ, ಜನಜಾಗೃತಿಯ ಅಭಿಯಾನವಾಗಿ, ಮಾನವ ಸರಪಳಿ ಒಂದು ಅದ್ಭುತ ಪರಿಕಲ್ಪನೆ…..

ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ, ಬಹುದೊಡ್ಡ ಸಂವಿಧಾನ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ನಮ್ಮ ಈ ಭಾರತ….

ಎಷ್ಟೆಷ್ಟೋ ಕಷ್ಟ, ನೋವು, ಯುದ್ಧ, ಹತ್ಯಾಕಾಂಡ, ರಕ್ತದೋಕುಳಿ ಎಲ್ಲವನ್ನೂ ಅನುಭವಿಸಿದ ನಂತರ, ರಾಜಪ್ರಭುತ್ವ, ಸರ್ವಾಧಿಕಾರಿ, ದುಷ್ಟ ದೊರೆಗಳ ಆಡಳಿತದಲ್ಲಿ ನರಳುತ್ತಿದ್ದ ಸಾಮಾನ್ಯರ ಬದುಕು, ವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಮುಕ್ತವಾಗಿ ಬದುಕಲು ಒಂದು ಅವಕಾಶ ಕಲ್ಪಿಸಿದ್ದು ಈ ಪ್ರಜಾಪ್ರಭುತ್ವ…….

ಗ್ರೀಕ್ ನ‌ ಅಥೆನ್ಸ್ ನಿಂದ ಭಾರತದ ದೆಹಲಿಯವರೆಗೆ ಪ್ರಜಾಪ್ರಭುತ್ವ ನಡೆದ ಹಾದಿ……….

ಭಾರತೀಯರಾದ ನಾವು…….

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರಜೆಗಳೇ ನಡೆಸುವ ಆಡಳಿತ ಪ್ರಜಾಪ್ರಭುತ್ವ. ಅದಕ್ಕೆ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕ ಮಾರ್ಗದರ್ಶನ ಮಾಡುತ್ತದೆ……..

ಅನಾಗರಿಕ ವ್ಯವಸ್ಥೆಯಿಂದ ಬಲಿಷ್ಠನೊಬ್ಬನ ನಾಯಕತ್ವ, ಪ್ರದೇಶದ ಒಡೆತನ, ಸಮುದಾಯಗಳ ಮುಖಂಡತ್ವ, ಧಾರ್ಮಿಕ ನಾಯಕತ್ವ, ರಾಜ ಪ್ರಭುತ್ವ, ಸರ್ವಾಧಿಕಾರ, ಸೈನಿಕ ಆಡಳಿತ, ಕಮ್ಯುನಿಸ್ಟ್ – ಸೋಷಿಯಲಿಸ್ಟ್ ಅಧಿಕಾರ, ಪ್ರಜಾಪ್ರಭುತ್ವ ಹೀಗೆ ಅನೇಕ ಪ್ರಯೋಗಗಳು ಮಾನವ ಇತಿಹಾಸದಲ್ಲಿ ಜನರ ಕಲ್ಯಾಣಕ್ಕಾಗಿ ಬೆಳೆದು ಬಂದಿದೆ. ಆ ಎಲ್ಲಾ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಹೇಳುವುದಾದರೆ ನಾಗರಿಕ ಸಮಾಜಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲಿಯವರೆಗಿನ ಅನುಭವದಲ್ಲಿ ಅತ್ಯಂತ ಉತ್ತಮ ಆಡಳಿತ ವಿಧಾನ. ಅದು ಇನ್ನಷ್ಟು ಸುಧಾರಿಸಬೇಕು ಎಂಬುದು ನಿಜ. ಪ್ರಜೆಗಳು ವಿವೇಚನಾ ಶೀಲರು ಮತ್ತು ಒಳ್ಳೆಯವರಾದರೆ ಪ್ರಜಾಪ್ರಭುತ್ವ ಮತ್ತಷ್ಟು ಆರೋಗ್ಯಕರವಾಗಿ ಬಲಗೊಳ್ಳುತ್ತದೆ……

ಗ್ರೀಕ್ ನ ಅಥೆನ್ಸ್ ನಗರದ ಒಂದು ಮೈದಾನದಲ್ಲಿ ಜನರೆಲ್ಲಾ ಸೇರಿ ಕೈ ಎತ್ತುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೂಲಕ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಪ್ರಾರಂಭವಾಯಿತು ಎಂದು ಇತಿಹಾಸದಲ್ಲಿ ದಾಖಲಾಗಿದೆ…..

ಭಾರತದಲ್ಲಿ ನನಗೆ ಲಭ್ಯವಿರುವ ಮಾಹಿತಿಯ ಪ್ರಕಾರ 12 ನೆಯ ಶತಮಾನದಲ್ಲಿ ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪ ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲಾಗುತ್ತದೆ. ಅದು ಅನುಭವ ಮಂಟಪಕ್ಕೆ ಮಾತ್ರ ಸೀಮಿತವಾಗಿತ್ತು. ಬಿಜ್ಜಳನ ಆಡಳಿತ ರಾಜ ಪ್ರಭುತ್ವವನ್ನು ಹೊಂದಿತ್ತು…..

ಬ್ರಿಟೀಷರು ಭಾರತವನ್ನು ಸಂಪೂರ್ಣ ಆಕ್ರಮಿಸಿದ ನಂತರ ಅನೇಕ ಪ್ರಾಂತೀಯ ಒಕ್ಕೂಟಗಳನ್ನು ಒಗ್ಗೂಡಿಸಿ ಕೆಲವೊಂದು ಚುನಾವಣೆ ಮತ್ತು ನಾಮಕರಣದ ಮೂಲಕ ಜನ ಪ್ರಾತಿನಿಧ್ಯವನ್ನು ನೀಡುವ ನಿಯಂತ್ರಿತ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಜಾರಿಗೆ ತಂದರು……

1947 ಆಗಸ್ಟ್ 15 ರ ನಂತರ ಭಾರತ ಸ್ವಾತಂತ್ರ್ಯ ಪಡೆದರೂ ನಿಜವಾದ ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವ ಜಾರಿಯಾಗಿದ್ದು ಜನವರಿ 26 1950. ಹಾಗೆಯೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾದ ಸಾರ್ವತ್ರಿಕ ಚುನಾವಣೆ ನಡೆದದ್ದು 1951 /52……..

ಸುಮಾರು 75 ವರ್ಷಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಈ ಮಧ್ಯೆ ಭಾರತದ ಕರಾಳ ಇತಿಹಾಸದಲ್ಲಿ ಒಂದಾದ 1977 ರ ತುರ್ತುಪರಿಸ್ಥಿತಿಯನ್ನು ಸಹ ಇಲ್ಲಿ ನೆನಪಿಸಿಕೊಳ್ಳಬೇಕು. ಅದನ್ನು ಹೊರತುಪಡಿಸಿ ಬಹುತೇಕ ನಿಯಮಗಳ ಪ್ರಕಾರವೇ ಆಡಳಿತ ನಡೆಯುತ್ತಿದೆ. ಮೋಸ ವಂಚನೆ ಶಾಸಕರ ಕುದುರೆ ವ್ಯಾಪಾರ ಭ್ರಷ್ಟಾಚಾರ ಕೋಮುವಾದಗಳು ಇದ್ದರೂ ಸಹ ಅಂಕಿಅಂಶಗಳ ಪ್ರಕಾರ ಬಹುಮತ ಹೊಂದಿರುವವರೇ ಅಧಿಕಾರ ನಡೆಸುತ್ತಿದ್ದಾರೆ. ಆ ಮಟ್ಟಿಗೆ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ಹಾಗೆಯೇ ಎಷ್ಟೇ ಬಲಿಷ್ಠ ಸರ್ಕಾರವಾದರು ನ್ಯಾಯಾಂಗ ವ್ಯವಸ್ಥೆಗೆ ಬಹುತೇಕ ಬೆಲೆ ಕೊಡುತ್ತದೆ. ಒಟ್ಟಿನಲ್ಲಿ ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಒಂದು ಮಾದರಿ……….

ತಾಂತ್ರಿಕವಾಗಿ ಒಂದು ಮಾದರಿ ಎಂಬುದು ನಿಜ. ಆದರೆ ವಾಸ್ತವದಲ್ಲಿ ತುಂಬಾ ಹೆಮ್ಮೆ ಪಡುವಂತೇನೂ ಇಲ್ಲ.
ಸುಮಾರು 60 ವರ್ಷಗಳ ಕಾಲ ಮತದಾರರು ಗುಲಾಮಿ ಮನಸ್ಥಿತಿಯ ಪ್ರಭಾವಕ್ಕೆ ಒಳಗಾಗಿದ್ದರೆ ಕಳೆದ 10 ವರ್ಷಗಳಲ್ಲಿ ಭಕ್ತ ಸಂಸ್ಕೃತಿ ತಲೆ ಎತ್ತಿದೆ. ಎರಡೂ ಒಂದೇ ನಾಣ್ಯದ ಎರಡು ಮುಖಗಳಷ್ಟೇ.‌ ಪ್ರತಿಯೊಂದನ್ನು ಒಪ್ಪಿಕೊಳ್ಳುತ್ತಾ, ಸಮರ್ಥಿಸುತ್ತಾ, ತಮ್ಮ ಅನುಕೂಲಕರ ವಾದ ಮಂಡಿಸಿ ಜನಪ್ರಿಯತೆ ಗಳಿಸುವ ಸ್ವಾರ್ಥ ಎದ್ದು ಕಾಣುತ್ತದೆ. ದೇಶ ಹಾಳಾದರೂ ಪರವಾಗಿಲ್ಲ ತನ್ನ ವಿಚಾರಧಾರೆಯ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು ಅದಕ್ಕೆ ಯಾವ ಮಾರ್ಗವಾದರು ಸರಿ ಎಂಬ ಕೆಟ್ಟ ಮನಸ್ಥಿತಿ ಬೆಳವಣಿಗೆ ಹೊಂದಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ…..

ವಿಶ್ವ ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಪೀಠಿಕೆ ಓದುವುದು, ಮಾನವ ಸರಪಳಿಯಲ್ಲಿ ಭಾಗವಹಿಸುವವರು ಜೊತೆಗೆ, ನಮ್ಮ ನಡವಳಿಕೆಗಳಲ್ಲಿ ಸಹ ಪ್ರಜಾಪ್ರಭುತ್ವದ ಅಂಶಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ‌ಮುಖ್ಯವಾಗಿ ಅತ್ಯಂತ ಸರಳವಾದ ಕೆಲವು ಗುಣಗಳನ್ನು ಅನುಸರಿಸಬೇಕು…..

ಜನ, ದೇಶ ಮತ್ತು ಸಂವಿಧಾನ ಅತ್ಯಂತ ಮಹತ್ವದ್ದು. ಅದಕ್ಕೆ ಗೌರವ, ಪ್ರೀತಿ, ಮಾನ್ಯತೆ ಮತ್ತು ಮೊದಲ ಆದ್ಯತೆ ನೀಡುತ್ತೇನೆ…..

ಸಂಯಮ, ಸಹಕಾರ, ಪ್ರೀತಿ, ಸಹಬಾಳ್ವೆ ಇವುಗಳು ದಿನನಿತ್ಯದ ಬದುಕಿನ ಚಟುವಟಿಕೆಗಳ ಭಾಗವಾಗಿರುವಂತೆ ನೋಡಿಕೊಳ್ಳುತ್ತೇನೆ…..

ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಸ್ತ್ರೀ ಶೋಷಣೆ, ಚುನಾವಣಾ ಅಕ್ರಮ ಇವುಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸುತ್ತೇನೆ……..

ಗಾಳಿ, ನೀರು, ಆಹಾರ ಮಲಿನವಾಗಲು ಉದ್ದೇಶಪೂರ್ವಕವಾಗಿ ನಾನು ಕಾರಣನಾಗದಿರುವಂತೆ ಎಚ್ಚರಿಕೆ ವಹಿಸುತ್ತೇನೆ…..

ನನ್ನೊಳಗೆ ಮಾನವೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಸದಾ ಜಾಗೃತವಾಗಿರುವಂತೆ ಅರಿವಿನ ಅಂತರದಲ್ಲಿ ಸದಾ ಜೀವಿಸುತ್ತೇನೆ…..

ದೇಶಕ್ಕೆ ಅತ್ಯಂತ ಮಾನವೀಯ ಮತ್ತು ಸಮಾನತೆಯ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸದಾ ನೆನೆಯುತ್ತಾ……

ವಿಶ್ವ ಮಾನವ ಪ್ರಜ್ಞೆಯೊಂದಿಗೆ
” ಮೇರಾ ಭಾರತ್ ಮಹಾನ್ “

ಇದು ದೇಶಕ್ಕೆ ನಾನು ಕೊಡುವ ಒಂದು ಸಣ್ಣ ಕೊಡುಗೆ………

ಪ್ರಜಾಪ್ರಭುತ್ವ ದಿನದ ಶುಭಾಶಯಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ,
9844013068………..

error: No Copying!