1942 – ಆಗಸ್ಟ್ 9,
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ…..
ಕ್ವಿಟ್ ಇಂಡಿಯಾ……
2024 – ಆಗಸ್ಟ್ 9,
ಭ್ರಷ್ಟಾಚಾರಿಗಳೇ – ಜಾತಿವಾದಿಗಳೇ, ಧರ್ಮಾಂಧರೇ,
ಮತಾಂಧರೇ,
ಸಂವಿಧಾನ ವಿರೋಧಿಗಳೇ..
ನೀವು ಬದಲಾಗಿ – ಐಕ್ಯವಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ.
ದಯವಿಟ್ಟು ಯಾವುದೇ ಕಾರಣಕ್ಕೂ ನಮಗೆ ತೊಂದರೆ ಕೊಡಬೇಡಿ. ನಾವು ಸಾಮಾನ್ಯ ಜನ. ನೀವು ಬದುಕಿ ನಮ್ಮನ್ನು ಬದುಕಲು ಬಿಡಿ……
ಹಾಗಾದರೆ ಯಾರು ಬದಲಾಗಬೇಕು ಮತ್ತು ಹೇಗೆ ಬದಲಾಗಬೇಕು……
1) ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ಮೊದಲು ಬದಲಾಗಬೇಕಿದೆ….
ಅದರಲ್ಲೂ ಮುಖ್ಯವಾಗಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯಗಳ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿ ಉನ್ನತ ಅಧಿಕಾರದಲ್ಲಿರುವವರು, ಎಲ್ಲಾ ಗೆಜೆಟೆಡ್ ಶ್ರೇಣಿಯ ಅಧಿಕಾರಿಗಳು ಭ್ರಷ್ಟ ಮುಕ್ತರಾಗಿ ಸಂವಿಧಾನಾತ್ಮಕ ಅಧಿಕಾರ ಬಳಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಂದು ಕ್ರಾಂತಿಯೇ ಸಂಭವಿಸಬಹುದು. ಇದರಿಂದ ಸಹಜವಾಗಿಯೇ ಕೆಳಹಂತದ ಅಧಿಕಾರಿಗಳು ಬದಲಾಗುತ್ತಾರೆ. ಇಲ್ಲಿ ಪೋಲೀಸರು, ಶಿಕ್ಷಕರು, ಡಾಕ್ಟರುಗಳು, ನೋಂದಣಿ ಅಧಿಕಾರಿಗಳು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು…..
2) ಜನ ಪ್ರತಿನಿಧಿಗಳು.
ಇಲ್ಲಿಯೂ ಮುಖ್ಯವಾಗಿ ಮಂತ್ರಿಗಳು, ಶಾಸಕರು ಮತ್ತು ಸಂಸತ್ತಿನ ಸದಸ್ಯರು ಬದಲಾಗಬೇಕು. ಸಂಖ್ಯೆಗಳ ಆಧಾರದಲ್ಲಿ ಇವರ ಸಂಖ್ಯೆ ಸುಮಾರು 5000 ಮಾತ್ರ ಇರಬಹುದು. ಇಷ್ಟು ಕಡಿಮೆ ಜನ ಆತ್ಮಾವಲೋಕನ ಮಾಡಿಕೊಂಡು ಬದಲಾದರೆ ಬಹುತೇಕ ವ್ಯವಸ್ಥೆ ಸರಿಯಾಗುತ್ತದೆ.
3) ಎಲ್ಲಾ ಧರ್ಮಗಳ ಮುಖ್ಯಸ್ಥರು.
ಇಲ್ಲಿಯೂ ಮುಖ್ಯವಾಗಿ ಮಂದಿರ, ಮಸೀದಿ, ಚರ್ಚುಗಳಲ್ಲಿ ಧರ್ಮ ಭೋದನೆ ಮಾಡುವವರು, ಧರ್ಮದ ಮೂಲಕವೇ ಸಂವಿಧಾನದ ಆಶಯಗಳನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರೆ ಬಹುದೊಡ್ಡ ಬದಲಾವಣೆ ಸಾಧ್ಯ. ಧರ್ಮದ ಮುಂದುವರೆದ ಮತ್ತು ಸುಧಾರಿತ ಅಂಶಗಳೇ ಸಂವಿಧಾನ ಎಂಬುದನ್ನು ಎಲ್ಲರೂ ಸ್ಪಷ್ಟವಾಗಿ ಹೇಳಬೇಕು.
4) ಎಲ್ಲಾ ರೀತಿಯ ಮಾಧ್ಯಮಗಳವರು.
ಕಾಲದಿಂದ ಕಾಲಕ್ಕೆ ಮಾಧ್ಯಮಗಳ ಸ್ವರೂಪ ಮತ್ತು ತಾಂತ್ರಿಕತೆಯಲ್ಲಿ ವ್ಯತ್ಯಾಸಗಳಾದರು ಇಂದಿಗೂ ಮಾಧ್ಯಮವೇ ಜನರ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯ ಬಹುದೊಡ್ಡ ವೇದಿಕೆ. ಬಹುತೇಕ ಜನರ ಅನೇಕ ವಿಷಯಗಳ ಅಭಿಪ್ರಾಯ ರೂಪಗೊಳ್ಳುವುದೇ ಮಾಧ್ಯಮಗಳ ಸುದ್ದಿಯ ಪ್ರಭಾವದಿಂದಾಗಿ. ಅವರುಗಳು ಎಲ್ಲಾ ಸ್ಪರ್ಧೆಗಳ ನಡುವೆಯೂ ಮೌಲ್ಯಯುತ ಮತ್ತು ವಿವೇಚನಾಯುಕ್ತ ಸುದ್ದಿಗಳನ್ನು ಪ್ರಸಾರ ಮಾಡಿದರೆ ಖಂಡಿತವಾಗಿ ಸಮಾಜ ಬದಲಾವಣೆಯ ಹಾದಿಗೆ ಮರಳುತ್ತದೆ.
5) ವಕೀಲರು ಮತ್ತು ನ್ಯಾಯಾಲಯಗಳು
ವೃತ್ತಿ ಧರ್ಮ ಮತ್ತು ಬದುಕಿನ ಅನಿವಾರ್ಯತೆಯ ಜೊತೆಗೆ ನೈತಿಕ ಮೌಲ್ಯಗಳನ್ನು ಕಾನೂನಿನ ಅರ್ಥೈಸುವಿಕೆಯಲ್ಲಿ ಅಳವಡಿಸಿಕೊಂಡು ಮತ್ತಷ್ಟು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಈ ಸಮಾಜದ ಬದಲಾವಣೆ ಸಾಧ್ಯವಿದೆ. ಕಾನೂನಿನ ಒಳಸುಳಿಗಳ ದುರುಪಯೋಗದಿಂದ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂಬುದು ವಾಸ್ತವ. ಅದರ ನಿಯಂತ್ರಣ ನ್ಯಾಯಾಂಗ ವ್ಯವಸ್ಥೆಯಿಂದ ಮಾತ್ರ ಸಾಧ್ಯ.
6) ಚುನಾವಣಾ ಆಯೋಗ, ಸಿಬಿಐ, ಇಡಿ ಮುಂತಾದ ಸ್ವತಂತ್ರ ಸಂಸ್ಥೆಗಳು
ಜನರ ತೆರಿಗೆ ಹಣದಿಂದಲೇ ಬದುಕುತ್ತಿರುವ ಈ ಇಲಾಖೆಗಳ ಅಧಿಕಾರಿಗಳು ದೇಶದ ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಂಡು ಯಾರಿಗೂ ಹೆದರದೆ ನ್ಯಾಯದ ಪರವಾಗಿ ಕೆಲಸ ಮಾಡಿದರೆ ವ್ಯವಸ್ಥೆಯ ಶಿಸ್ತು ಬದ್ಧ ಬದಲಾವಣೆಯ ಎಲ್ಲಾ ಸಾಧ್ಯತೆಗಳು ಇವೆ.
ಈ ರೀತಿಯ ಮುಖ್ಯ ಸ್ಥಾನದಲ್ಲಿ ಇರುವವರು ಪರಿವರ್ತನೆ ಹೊಂದಿದರೆ ಸಾಮಾನ್ಯ ಜನ ನಿಧಾನವಾಗಿ ಇವರನ್ನು ಅನುಸರಿಸುತ್ತಾರೆ.
ಇವರುಗಳು ಈಗಾಗಲೇ ಆರ್ಥಿಕವಾಗಿ ಬಹುತೇಕ ಸದೃಢವಾಗಿರುವವರು. ಕೇವಲ ಮಾನಸಿಕವಾಗಿ ದೇಶ ಮತ್ತು ದೇಶದ ಜನರ ಮೇಲೆ ಪ್ರೀತಿ ಅಭಿಮಾನ ಬೆಳೆಸಿಕೊಂಡು ತಮ್ಮ ಸಹಜ ಕರ್ತವ್ಯ ನಿರ್ವಹಿಸಿದರೆ ಸಾಕು. ಸುಧಾರಣೆ ಬಹುಬೇಗ ಸಾಧ್ಯವಾಗುತ್ತದೆ.
ಕ್ವಿಟ್ ಇಂಡಿಯಾ ಚಳವಳಿಯ 82 ನೆಯ ವರ್ಷದ ನೆನಪಿನ ಸಂದರ್ಭದಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ. ದಯವಿಟ್ಟು ಪ್ರತಿಯೊಬ್ಬರು ಕನಿಷ್ಠ ಸ್ವಲ್ಪಮಟ್ಟಿಗೆ ಇರುವುದರಲ್ಲಿ ಪ್ರಾಮಾಣಿಕರಾದರೆ ನೆಮ್ಮದಿಯ ನಾಳೆಗಳು ಸಾಧ್ಯ.
ಧನ್ಯವಾದಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……