Spread the love

” ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು….. “
ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ,……

ಕೇಳಿಸಿತೇ ಈ ವಾಕ್ಯಗಳು,
ಅರ್ಥವಾಯಿತೇ ಈ ಮಾತುಗಳು,

ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ…….

ಇದು ಸಹಜ, ಸ್ವಾಭಾವಿಕ ಮತ್ತು ಒಳ್ಳೆಯ ವಿಷಯಗಳಿಗೆ ಮಾತ್ರ ಅನ್ವಯ. ದುಷ್ಟ, ವಿನಾಶಕಾರಿ ಮತ್ತು ಜೀವ ವಿರೋಧಿ ಕೆಲಸಗಳಿಗೆ ಇದು ಅನ್ವಯವಾಗುವುದಿಲ್ಲ.

ನಾವು ಏನನ್ನಾದರೂ ವಿಭಿನ್ನ ವಿಶಿಷ್ಟ, ಸಾಮಾನ್ಯರಿಗೆ ಅಸಾಮಾನ್ಯವಾಗಿ ಕಾಣುವಂತ ಪ್ರಯೋಗಾತ್ಮಕ ಕೆಲಸಕ್ಕೆ ಕೈಹಾಕಿದಾಗ ನಮ್ಮ ಸಮಾಜದ ಪ್ರತಿಕ್ರಿಯೆ ಹೆಚ್ಚು ನಕಾರಾತ್ಮಕವಾಗಿರುತ್ತದೆ. ಅದು ಒಳ್ಳೆಯ ಪ್ರತಿಕ್ರಿಯೆಯಲ್ಲ ಎಂದು ಖ್ಯಾತ ಸಾಹಿತಿ, ನಾಟಕಕಾರ, ಚಿಂತಕ, ವಾಗ್ಮಿ ಬರ್ನಾರ್ಡ್ ಶಾ ಸುಮಾರು ನೂರು ವರ್ಷಗಳ ಹಿಂದೆಯೇ ಹೇಳಿದ್ದಾರೆ.

ಇಲ್ಲಿ ಸಲಹೆಗಳು, ಹಿತ ನುಡಿಗಳು, ಮನವಿಗಳು, ಕಾಳಜಿ ಪೂರ್ವಕ ಒತ್ತಾಯಗಳು, ಪ್ರೀತಿ – ಆತಂಕ – ಮಮಕಾರದ ಮಾತುಗಳು ಖಂಡಿತ ಸ್ವೀಕಾರಾರ್ಹ. ಇದನ್ನು ಹೊರತುಪಡಿಸಿ ಲೇವಡಿ, ಹಾಸ್ಯ, ವ್ಯಂಗ್ಯ, ಅಜ್ಞಾನ, ಅಸೂಯೆ, ಕೀಟಲೆ, ಬೇಜವಾಬ್ದಾರಿ, ಉಡಾಫೆ ಮಾತುಗಳು ಮಾತ್ರ ಖಂಡನೀಯ ಮತ್ತು ಮೇಲಿನ ಮಾತುಗಳು ನೇರವಾಗಿ ಅವರಿಗೇ ಅನ್ವಯ.

” ಅಸಾಮಾನ್ಯವಾದದ್ದನ್ನು ಸಾಧಿಸಬೇಕಾದರೆ ಅಸಾಧ್ಯವಾದುದನ್ನೇ ಮಾಡಬೇಕಾಗುತ್ತದೆ ” ಎಂಬುದು ತತ್ವಜ್ಞಾನಿಯೊಬ್ಬರ ಮಾತು.
ಈ ಅಸಾಧ್ಯವಾದದ್ದು ಯಾವಾಗಲೂ ಈ‌ ಸಮಾಜದ ಸ್ಥಾಪಿತ ಮನಸ್ಥಿತಿಗಳಿಗೆ ಸ್ವಲ್ಪ ವಿಚಿತ್ರ ಅನಿಸುತ್ತದೆ. ಆಳ‌, ಅಗಲ‌, ದೂರ, ಪರಿಣಾಮ, ಫಲಿತಾಂಶ ಎಲ್ಲವೂ ನೆನಪಾಗಿ ಇದು ಒಂದು ಹುಚ್ಚುತನ ಎನಿಸುತ್ತದೆ. ಅದು ಅವರವರ ಭಾವಕ್ಕೆ ಸಂಬಂಧಿಸಿದ್ದು. ಆದರೆ ಆ ಸಮಯದಲ್ಲಿ ಪ್ರೋತ್ಸಾಹ ಅಥವಾ ಶುಭ ನುಡಿ ಅಥವಾ ನಿರ್ಲಿಪ್ತತೆ ಅಥವಾ ನಿರ್ಲಕ್ಷ್ಯ ಪ್ರತಿಕ್ರಿಯೆ ಸಹಜವಾದದ್ದು. ಆದರೆ ನಿರುತ್ಸಾಹ ಅಥವಾ ಅಡ್ಡಿಯುಂಟು ಮಾಡುವುದು ಒಳ್ಳೆಯ ಲಕ್ಷಣವಲ್ಲ. ಕೆಲವು ಮನುಷ್ಯರ ಕನಸುಗಳು ಅಗಾಧವಾಗಿರುತ್ತದೆ. ಅದರಲ್ಲಿ ಕೆಲವೇ ಕೆಲವು ಮಂದಿ ಅದನ್ನು ನನಸಾಗಿಸಲು ಹೊರಡುತ್ತಾರೆ. ಇತಿಹಾಸದ ಪುಟಗಳಲ್ಲಿ ಈ‌ ರೀತಿಯ ಕನಸುಗಳು ವಿಫಲವಾಗಿರುವುದೇ ಹೆಚ್ಚು. ಆದರೆ ಯಶಸ್ವಿಯಾಗುವವರು ಒಂದು ಹೊಸ ದಾರಿಯನ್ನೇ ಸೃಷ್ಟಿ ಮಾಡುತ್ತಾರೆ. ಅದು ಮತ್ತಷ್ಟು ದಾರಿಗಳಾಗಿ ಕವಲೊಡೆಯುತ್ತದೆ.

ಹಡಗು, ವಿಮಾನ, ಔಷಧಿಗಳು, ಶಸ್ತ್ರಚಿಕಿತ್ಸೆ, ಹೋರಾಟ, ಗಗನಯಾನ, ಮೊಬೈಲ್ ಎಲ್ಲವೂ ಈ ಅಸಾಧ್ಯ ಹುಡುಕಾಟದ ಭಾಗಗಳು. ‌ಅದನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಿದ್ದರೆ ಏನಾಗುತ್ತಿತ್ತು ಯೋಚಿಸಿ. ‌ನಮ್ಮಿಂದ ಆಗದ ಕೆಲಸವನ್ನು ಇನ್ನೊಬ್ಬರು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದಾಗ ವಿಶಾಲ ಮನೋಭಾವದಿಂದ ಅದನ್ನು ಸ್ವಾಗತಿಸುವುದು ಉತ್ತಮ ಮಾರ್ಗ. ‌ಅದಕ್ಕೆ ಅಡ್ಡಿ ಪಡಿಸುವುದು ಅನ್ಯಾಯದ ಮಾರ್ಗ.

ಆದ್ದರಿಂದ ದಯವಿಟ್ಟು ಯಾರಾದರೂ ಅಸಾಧಾರಣ ಕೆಲಸ ಮಾಡಲು ಹೊರಟರೆ ದಯವಿಟ್ಟು ಪ್ರೋತ್ಸಾಹಿಸಿ ಅಥವಾ ಕನಿಷ್ಠ ನಿರ್ಲಿಪ್ತರಾಗಿರಿ. ಆದರೆ ಅಡ್ಡಿಯುಂಟು ಮಾಡಬೇಡಿ.

ಕ್ರೀಡೆ, ರಾಜಕೀಯ, ಸಂಗೀತ, ವಿಜ್ಞಾನ, ಕಲೆ, ವಾಣಿಜ್ಯ, ಸಾಹಸ, ಸಾಮಾಜಿಕ ಸೇವೆ ಯಾವುದೇ ಇರಲಿ ಕೆಲವು ಅಸಾಧಾರಣವಾದ ಸಾಧನೆ ಮಾಡಲು ನಮ್ಮ ಸುತ್ತಮುತ್ತಲಿನ ಯಾರಾದರು ಪ್ರಯತ್ನಿಸಿದರೆ ದಯವಿಟ್ಟು ಪ್ರೋತ್ಸಾಹಿಸಿ ಅದು ಅಸಾಧ್ಯ ಎಂದು ನಿಮಗನಿಸಿದರೂ ಸಹ.‌ ಏಕೆಂದರೆ ಪ್ರಯತ್ನದಲ್ಲೇ ಒಂದು ಹೊಸತನವಿರುತ್ತದೆ. ಆ ಪ್ರಯತ್ನದ ದಾರಿ ಮುಂದಿನವರಿಗೆ ಒಂದು ಮಾರ್ಗದರ್ಶನವಾಗುತ್ತದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……

error: No Copying!