ಮತ್ತೆ ಮತ್ತೆ ನಮ್ಮನ್ನು ಪ್ರಶ್ನಿಸಿಕೊಳ್ಳಲೇಬೇಕಿದೆ,
ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ,
ಏಕೆಂದರೆ ಕೇವಲ 20/25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.
ಕಾರು ಹೊಂದಿದ ವ್ಯಕ್ತಿ ಇದ್ದಕ್ಕಿದ್ದಂತೆ ಕಾರಿನ ಮಹಿಮೆಯಿಂದಲೇ ಬುದ್ದಿವಂತನೆಂತಲೋ, ಶ್ರಮಜೀವಿಯೆಂತಲೋ, ಯಾವುದೋ ಪಕ್ಷ ಅಥವಾ ಸಂಘಟನೆಯ ನಾಯಕನೆಂತಲೋ, ಶ್ರೀಮಂತನೆಂತಲೋ, ಬಹುತೇಕರಿಂದ ಹುಸಿ ಗೌರವ ಪಡೆಯಲಾರಂಭಿಸುತ್ತಾನೆ.
ಆತನ ಹಿನ್ನಲೆ, ಹಣದ ಮೂಲ,ವರ್ತನೆ ಯಾವುದೂ ಮುಖ್ಯವಾಗುವುದಿಲ್ಲ.
ಅದೇ ಒಬ್ಬ ಸರಳ, ಸಜ್ಜನ, ವಿದ್ಯಾವಂತ, ನಿಜವಾದ ಶ್ರಮಜೀವಿ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲೋ, ಸೈಕಲ್ ನಲ್ಲೋ ಓಡಾಡುತ್ತಾ ಸಾಧಾರಣ ಬಟ್ಟೆ ಧರಿಸಿದ್ದರೆ ನಿಜವಾಗಿ ಆತನಿಗೆ ಸಿಗುವ ಮರ್ಯಾದೆ ಅಷ್ಟಕಷ್ಟೇ. ಅದರಲ್ಲೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಆತ ಅವಮರ್ಯಾದೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು.
ಬಂಧು ಬಳಗದವರಲ್ಲಿ ಸರಳ ವ್ಯಕ್ತಿಯ ಬಗ್ಗೆ ಆತ ಏನೋ ಒಬ್ಬ ಮಾನಸಿಕ ಅಸ್ವಸ್ಥ ಅಥವಾ ಕೆಲಸಕ್ಕೆ ಬಾರದವನು ಎಂಬಂತೆ ಸಹಾನುಭೂತಿ ವ್ಯಕ್ತವಾಗುತ್ತದೆ.
ಕೈ ಬೆರಳುಗಳಿಗೆ ಉಂಗುರ,
ಕೈಗೆ ಚಿನ್ನದ ಚೈನು,
ಕತ್ತಿಗೆ ಚಿನ್ನದ ಸರ ಹಾಕಿಕೊಳ್ಳುವ ವ್ಯಕ್ತಿಗೆ ಸಿಗುವ ಗೌರವ, ಸಾಧಾರಣ ಬಟ್ಟೆಯ ಸರಳ ಮತ್ತು ಒಳ್ಳೆಯ ವ್ಯಕ್ತಿಗೆ ಸಿಗುವುದೇ ಇಲ್ಲ.
ನಾನು ಇಲ್ಲಿ ಶ್ರೀಮಂತರನ್ನು ದೂಷಿಸುತ್ತಿಲ್ಲ ಅಥವಾ ಅವರೆಲ್ಲರೂ ಕೆಟ್ಟವರು ಎಂದು ಹೇಳುತ್ತಿಲ್ಲ. ಆದರೆ ಸಮಾಜದ ಮನೋಭಾವ ಹೇಗೆ ಹಣವಂತರಿಗೆ ಪ್ರೋತ್ಸಾಹದಾಯಕವಾಗಿದೆ ಮತ್ತು ಅದರಿಂದ ಹೇಗೆ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಮಾತ್ರ ಹೇಳುತ್ತಿದ್ದೇನೆ.
ಹಣಕ್ಕೆ ಗುಣಕ್ಕಿಂತ ಮರ್ಯಾದೆ ಜಾಸ್ತಿಯಾದಾಗ ಜನ ಹಣದ ಹಿಂದೆ ಬೀಳುತ್ತಾರೆ ಮತ್ತು ಅದನ್ನು ಪಡೆಯಲು ಯಾವ ಹಂತಕ್ಕೂ ಹೋಗುತ್ತಾರೆ ಎಂಬ ಅನುಮಾನ ನನ್ನದು.
ಇದರಿಂದಾಗಿ ಗುಣ ಹಿಂದೆ ಸರಿಯುತ್ತದೆ. ಸಮಾಜ ಅಸ್ತವ್ಯಸ್ತವಾಗುತ್ತದೆ.
ಮೌಲ್ಯಗಳು ನಶಿಸುತ್ತವೆ. ಬಹುಶಃ ಈಗ ಆಗುತ್ತಿರುವುದು ಇದೇ.
ಯಾವುದೇ ಮೂಲದಿಂದಾದರು ಹಣ ಅಧಿಕಾರ ಪಡೆಯಲು ಪ್ರಯತ್ನಿಸುವ ಮನೋಭಾವ ಪ್ರಾಮುಖ್ಯತೆ ಹೊಂದಲು ಇದು ಬಹುಮುಖ್ಯ ಕಾರಣವಾಗಿದೆ.
ಆದ್ದರಿಂದ ತಿಳಿದ ಕೆಲವರಾದರೂ ಇದನ್ನು ಅರಿತು ತಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಂಡರೆ ಸಮಾಜವನ್ನು ಕಾಡುತ್ತಿರುವ ಬಹಳಷ್ಟು ಸಮಸ್ಯೆಗಳು ಕಡಿಮೆಯಾಗುತ್ತದೆ ಮತ್ತು ಹಿಂದಿನಂತೆ ಗುಣಕ್ಕೆ ಗೌರವ ದೊರೆಯುತ್ತದೆ ಎಂಬ ಆಶಯದೊಂದಿಗೆ ……………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…..