ಹಿರಿಯಡ್ಕ: ದಿನಾಂಕ :25-06-2024 (ಹಾಯ್ ಉಡುಪಿ ನ್ಯೂಸ್) ಉಡುಪಿ ಕಾಜಾರಗುತ್ತಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗಳು ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಿನಾಂಕ 24/06/2024 ರಂದು ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ ಉಡುಪಿ ಗ್ಯಾಂಗ್ ವಾರ್ ಪ್ರಕರಣದಲ್ಲಿ ವಿಚಾರಣಾ ಖೈದಿಗಳಾದ ಮಹಮ್ಮದ್ ಆಶೀಕ್ ಮತ್ತು ಮಹಮ್ಮದ್ ಸಕ್ಲೇನ್ ಎಂಬವರು ಕರ್ತವ್ಯದಲ್ಲಿದ್ದ ಜೈಲರ್ ಎಸ್‌ಎ ಶಿರೋಳರವರಲ್ಲಿ ಜಗಳ ನಡೆಸಿದ್ದು ಈ ಸಂಬಂಧ ಈ ಇಬ್ಬರು ವಿಚಾರಣಾ ಖೈದಿಗಳನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ದರಾಮ ಬಿ ಪಾಟೀಲ್ ಅವರ ಚೇಂಬರಿಗೆ ಕರೆದುಕೊಂಡು ಬಂದಾಗ ಪ್ರಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಜೈಲರ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಟ ಮಾಡಿದ್ದಾರೆ ಎನ್ನಲಾಗಿದೆ.
ಅಧೀಕ್ಷಕರ ಕಚೇರಿಯಿಂದ ವಾಪಾಸು ಕರೆದುಕೊಂಡು ಹೋಗುವಾಗ ಜೈಲು ಸಿಬ್ಬಂದಿಗಳಲ್ಲಿ ಪುನಃ ಗಲಾಟೆ ಆರಂಭಿಸಿ ಜೈಲು ಸಿಬ್ಬಂದಿಯವರನ್ನು ತಳ್ಳಿ ಹಾಕಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿ ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಟನ್ನು ಮತ್ತು ಚಾ ಮಾಡುವ ಸೌಟನ್ನು ತಂದಿದ್ದಲ್ಲದೆ, ಮಹಮ್ಮದ್ ಸಕ್ಲೇನ್ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಆಗ ಜೈಲು ಸಿಬ್ಬಂದಿಗಳು ಸೇರಿ ಅವರನ್ನು ಹಿಡಿದಿರುತ್ತಾರೆ ಎನ್ನಲಾಗಿದೆ .
ಕರ್ತವ್ಯದಲ್ಲಿದ್ದ ಜೈಲು ಅಧೀಕ್ಷಕರು ಹಾಗೂ ಸಿಬ್ಬಂದಿಗಳಿಗೆ ಹಲ್ಲೆ ಮಾಡಲು ಪ್ರಯತ್ನಿಸಿ ಖೈದಿಗಳೀರ್ವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಜೈಲು ಅಧೀಕ್ಷಕರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 353, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.