Spread the love

18 ನೆಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಂಕಿ ಸಂಖ್ಯೆಗಳು ಬಹುತೇಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಕೇವಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ರಾಜಕೀಯ ಆಸಕ್ತಿಯ ಸಾಮಾನ್ಯ ಜನರು, ಸಾಕಷ್ಟು ಕುಟುಂಬಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಹೋಟೆಲ್, ಬಸ್ಸು, ರೈಲು, ವಿಮಾನಗಳಲ್ಲಿ, ಕೋರ್ಟು ಕಚೇರಿ ಆಸ್ಪತ್ರೆ ಪೊಲೀಸ್ ಸ್ಟೇಷನ್ ಗಳಲ್ಲಿ, ಕೂಲಿ, ಉದ್ಯಮಿ, ವ್ಯಾಪಾರಿ, ರೈತ ಎಲ್ಲರೂ ಈ ಬಗ್ಗೆ ತಮ್ಮದೇ ಆದ ಒಂದೊಂದು ಅಭಿಪ್ರಾಯಗಳನ್ನು, ವಿಶ್ಲೇಷಣೆಗಳನ್ನು ಮಾಡುತ್ತಲೇ ಇದ್ದಾರೆ. ಸೋಲು ಗೆಲುವುಗಳ ಕಾರಣಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮ ಇದು ವ್ಯಾಪಕವಾಗಲು ಕಾರಣವಾಗಿದೆ…..

ಈ ವಿಶ್ಲೇಷಣೆಗಳ ಸಂಕ್ಷಿಪ್ತ ಸಾರಾಂಶ ಇಲ್ಲಿ ಸರಳವಾಗಿ ಹೇಳುವ ಒಂದು ಪ್ರಯತ್ನ….

ಇದು ನರೇಂದ್ರ ಮೋದಿ ಅವರ ಐತಿಹಾಸಿಕ ಹ್ಯಾಟ್ರಿಕ್ ಗೆಲುವು,

ಇದು ತಾಂತ್ರಿಕವಾಗಿ ಅಂಕಿ ಸಂಖ್ಯೆಗಳ ಎನ್.ಡಿಎ ಗೆಲುವು,

ಇದು ಬಿಜೆಪಿಯ ಸೈದ್ಧಾಂತಿಕ ತತ್ವಕ್ಕೆ ಸಿಕ್ಕಿದ ಮತ್ತೊಂದು ಗೆಲುವು,

ಇದು ಭಾರತ ಬ್ರಾಂಡ್ ಗೆ ದಕ್ಕಿದ ಗೆಲುವು,

ಇದು ದೇಶದ ಆರ್ಥಿಕ ಅಭಿವೃದ್ಧಿಯ ಗೆಲುವು,

ಇದು ವಿಕಸಿತ ಭಾರತದ ಗೆಲುವು,

ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗೆಲುವು,

ಇದು ಮೋದಿಯವರ ಪರಿಶ್ರಮಕ್ಕೆ ಸಿಕ್ಕ ಫಲ,

ಇದು ಬಲಿಷ್ಠ ಮತ್ತು ದೃಢನಾಯಕನ ಶೀಘ್ರ ತೀರ್ಮಾನದ ನಾಯಕತ್ವ ಗುಣಗಳಿಗೆ ಒಲಿದ ಗೆಲುವು,

ಇದು ಕಾಶ್ಮೀರ, ಅಯೋಧ್ಯೆ ಮತ್ತು ಹಿಂದುತ್ವದ ಗೆಲುವು,…..

ಹೀಗೆ ಇನ್ನೂ ಹಲವಾರು ದೃಷ್ಟಿಕೋನಗಳಿಂದ ಈ ಗೆಲುವನ್ನು ವಿಶ್ಲೇಷಿಸಲಾಗುತ್ತಿದೆ…..

ಹಾಗೆಯೇ ಇದು ಗೆಲುವಲ್ಲ ಸೋಲು ಎಂದು ಸಹ ಹೇಳಲಾಗುತ್ತಿದೆ…..

ಇದು ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆ ಸಂಪೂರ್ಣ ವಿಫಲವಾಗಿ 300ಕ್ಕಿಂತ ಕಡಿಮೆ ಸೀಟು ಗಳಿಸಿ ಸೋತಿದ್ದಾರೆ,

ಇದು ಬಿಜೆಪಿ ಸುಮಾರು 60 ಸೀಟುಗಳಷ್ಟು ಕಡಿಮೆ ಪಡೆದು ಬಹುಮತ ಗಳಿಸಲು ವಿಫಲವಾಗಿದೆ,

ಇದು ನರೇಂದ್ರ ಮೋದಿಯವರ ಮೋದಿ ಮೋದಿ ಮೋದಿ ಎಂಬ ಘೋಷಣೆ ಜನರಿಗೆ ಭ್ರಮ ನಿರಸನವಾಗಿರುವ ಲಕ್ಷಣ.

ಇದು ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಜನ ತಕ್ಕ ಪಾಠ ಕಲಿಸಿದ್ದಾರೆ,

ಇದು ಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ ನಡವಳಿಕೆ ಜನರಿಂದ ತಿರಸ್ಕರಿಸಲ್ಪಟ್ಟಿದೆ,

ಇದು ಪ್ರಜಾಸತ್ತಾತ್ಮಕ ಸಂಸ್ಥೆಗಳ ದುರುಪಯೋಗಕ್ಕೆ ಜನರಿಂದ ಬೆಂಬಲ ಸಿಕ್ಕಿಲ್ಲ,

ಇದು ನರೇಂದ್ರ ಮೋದಿಯವರ ಶ್ರೀಮಂತರ, ಪ್ರಖ್ಯಾತರ, ಜನಪ್ರಿಯರ ಪರವಾದ ನಿಲುವುಗಳಿಗೆ ಸೋಲುಂಟು ಮಾಡಿದೆ,

ಇದು ರೈತರು ಕಾರ್ಮಿಕರ ನಿರ್ಲಕ್ಷ ಅವರಿಗೆ ಮುಳುವಾಗಿದೆ,

ಇದು ಬೆಲೆ ಏರಿಕೆ ಮತ್ತು ಅತಿಯಾದ ತೆರಿಗೆಯ ಭಾರ ಜನರಿಗೆ ಅವರ ಬಗ್ಗೆ ಬೇಸರಮೂಡಿಸಿದೆ,

ಇದು ಹಿಂದುತ್ವದ ಘೋಷಣೆಗಳು ಮತ್ತು ಮುಸ್ಲಿಂ ವಿರೋಧ ಹಾಗೂ ದೇವಸ್ಥಾನಗಳ ಭ್ರಮಾತ್ಮಕ ವಿಷಯಗಳು ಜನರಿಂದ ತಿರಸ್ಕರಿಸಲ್ಪಟ್ಟಿವೆ,….

ಹೀಗೆ ಅವರ ವೈಫಲ್ಯಗಳ ಬಗ್ಗೆ ಸಹ ವಿಶ್ಲೇಷಣೆ ಮಾಡಲಾಗುತ್ತಿದೆ…….

ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ, ಪಕ್ಷ ಜಾತಿ ಧರ್ಮ ವ್ಯಕ್ತಿ ಅಂಕಿ ಸಂಖ್ಯೆಗಳು ಮುಂತಾದ ವಿಷಯಗಳ ಕೇಂದ್ರೀಕೃತವಾಗಿರಬಾರದು. ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾವಣೆಯ ವಿಶ್ಲೇಷಣೆ ಜನಕೇಂದ್ರೀಕೃತ, ಜನರ ಕ್ಷೇಮಾಭಿವೃದ್ಧಿ, ದೇಶದ ಒಟ್ಟು ಹಿತಾಸಕ್ತಿ ಮತ್ತು ಕಲ್ಯಾಣ ರಾಜ್ಯದ ಬಗ್ಗೆ ಮಾತ್ರ ಇರಬೇಕು. ಪಕ್ಷ ಅಥವಾ ವ್ಯಕ್ತಿಯ ಸೋಲು ಗೆಲುವು ಮುಖ್ಯವಾಗಲೇ ಬಾರದು…..

ಈ ಚುನಾವಣೆಯ ಒಟ್ಟು ಸಂದೇಶದ ಕೆಲವು ಮುಖ್ಯ ಅಂಶಗಳೆಂದರೆ,….

ಮೊದಲನೆಯದಾಗಿ, ಮಾಧ್ಯಮ ಪ್ರೇರಿತ ಮುನ್ಸೂಚನೆ, ಸಮೀಕ್ಷೆ ಅಥವಾ ಫಲಿತಾಂಶಗಳ ಪೂರ್ವ ಊಹೆ ಎಲ್ಲವನ್ನೂ ಬುಡಮೇಲು ಮಾಡಿ ಮತದಾರ ಆತನ ನಿಜವಾದ ಅಂತರ್ಯವನ್ನು ಬಿಟ್ಟು ಕೊಡಲಿಲ್ಲ. ಇದೊಂದು ಉತ್ತಮ ಬೆಳವಣಿಗೆ. ಸುಮಾರು 100 ಕೋಟಿ ಮತದಾರರು ಇರುವ ದೇಶದಲ್ಲಿ ಅನಾವಶ್ಯಕವಾಗಿ ಅಪಾರ ಹಣ ಖರ್ಚು ಮಾಡಿ ಸಮೀಕ್ಷೆಗಳನ್ನು ಮಾಡುತ್ತಾ, ಜನರನ್ನು ದಿಕ್ಕು ತಪ್ಪಿಸಿ, ತಾವು ದಿಕ್ಕು ತಪ್ಪಿ, ಕೆಲವು ಸಂದರ್ಭದಲ್ಲಿ ಸರಿಯಾಗಿಯೇ ಊಹಿಸಿದ್ದರೂ ಸಹ, ಅದನ್ನೇ ಬಂಡವಾಳ ಮಾಡಿಕೊಂಡು ಕೆಲವು ಏಜೆನ್ಸಿಗಳು, ಮಾಧ್ಯಮಗಳು, ಚುನಾವಣಾ ಚಾಣಕ್ಯರು ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದ್ದರು. ಈ ಬಾರಿಯ ಈ 18 ನೇ ಲೋಕಸಭಾ ಚುನಾವಣೆ ಸಮೀಕ್ಷೆಗಳನ್ನು ಅನುಮಾನದಿಂದ ನೋಡುವ ಹಾಗೆ ಮಾಡಿದೆ. ಇದು ಒಳ್ಳೆಯ ಬೆಳವಣಿಗೆ. ಯಾವ ಕಾರಣಕ್ಕೂ ಚುನಾವಣಾ ಫಲಿತಾಂಶಗಳು ಊಹೆಗೆ ನಿಲುಕದಂತಿದ್ದರೆ ಉತ್ತಮ. ಮತದಾರರ ಆಂತರ್ಯದ ಸ್ವಾತಂತ್ರ್ಯ ಹಾಗೆ ಉಳಿಯಬೇಕು. ಯಾವುದೇ ಪ್ರಭಾವಕ್ಕೆ ಒಳಗಾಗಬಾರದು…..

ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಮೂಗುದಾರ ತೊಡಸಿದ ಮತದಾರ.
ಬಹುತೇಕ 10 ವರ್ಷಗಳ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿದ್ದ ನರೇಂದ್ರ ಮೋದಿಯವರಿಗೆ ಈ ಚುನಾವಣೆಯಲ್ಲಿ ಸಂಪೂರ್ಣ ತಿರಸ್ಕರಿಸದೆ, ಮೂಗುದಾರ ತೊಡಿಸಿ ನಿಯಂತ್ರಣಕ್ಕೊಳಪಡಿಸಲಾಗಿದೆ. ಒಂದು ರೀತಿಯಲ್ಲಿ ಇದು ಸಹ ಉತ್ತಮ ಬೆಳವಣಿಗೆ…..

ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಮುಖ್ಯ ವಾಹಿನಿಯಿಂದ ಬಹುತೇಕ ನಾಪತ್ತೆಯಾಗಿದ್ದು ಇನ್ನೇನು ವಿನಾಶದ ಅಂಚಿನಲ್ಲಿದೆ ಎನ್ನುವ ಸಂದರ್ಭದಲ್ಲಿ ಮತದಾರ ಮತ್ತೆ ಅದನ್ನು ಮುಖ್ಯ ವಾಹಿನಿಯ ವಿರೋಧ ಪಕ್ಷವಾಗಿ ಗುರುತಿಸಿರುವುದು ಸಹ ಪ್ರಜಾಪ್ರಭುತ್ವದ ಯಶಸ್ಸಿನ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ…..

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಮುಖ್ಯತೆ ಪಡೆಯುತ್ತಿರುವುದು ಸಹ ಅತ್ಯಂತ ಪ್ರಮುಖ ವಿಷಯ……

ಸಾಮಾನ್ಯವಾಗಿ ಮತದಾರರು ಜಾತಿ ಧರ್ಮ ಹಣ ಹೆಂಡ ಕೊಡುಗೆಗಳು ಮುಂತಾದ ಆಕರ್ಷಣೆಗೆ ಒಳಗಾದರೂ ಕೆಲವೊಮ್ಮೆ ಒಟ್ಟಾರೆಯಾಗಿ ಆಡಳಿತಗಾರರ ಧೋರಣೆಯ ವಿರುದ್ಧ ಮತ ಚಲಾಯಿಸಿದ ಉದಾಹರಣೆಗಳಿವೆ. ಅಂದು ತುರ್ತುಪರಿಸ್ಥಿತಿ ಸೇರಿದ್ದ ಶ್ರೀಮತಿ ಇಂದಿರಾಗಾಂಧಿಯವರನ್ನು ಸಹ ಜನ ಆಗಿನ ಕಾಲಕ್ಕೇ ತಿರಸ್ಕರಿಸಿದ್ದರು. ಬಹುತೇಕ ಇಂದು ಸಹ ಅದೇ ಮನಸ್ಥಿತಿಯ ನರೇಂದ್ರ ಮೋದಿಯವರನ್ನು ಸ್ವಲ್ಪಮಟ್ಟಿಗೆ ತಿರಸ್ಕರಿಸಿದ್ದಾರೆ ಅಥವಾ ಎಚ್ಚರಿಸಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಮತ್ತು ಪ್ರಶಂಸಾರ್ಹ ಬೆಳವಣಿಗೆ….

ಹೀಗೆ ನಾನಾ ರೀತಿಯಲ್ಲಿ ವಿಶ್ಲೇಷಣೆಗಳು ನಡೆಯುತ್ತಿದೆ, ನಡೆಯುತ್ತಿರಲಿ. ಒಟ್ಟಿನಲ್ಲಿ ಸರ್ಕಾರ ಯಾವುದೇ ಬರಲಿ, ಯಾರದೇ ಬರಲಿ, ಭಾರತ ದೇಶದ ಜನರು ಮತ್ತು ದೇಶದ ಒಟ್ಟು ಹಿತಾಸಕ್ತಿ ಮತ್ತು ಅಭಿವೃದ್ಧಿ ಮುಖ್ಯವಾಗಿರಲಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ‌. ಎಚ್. ಕೆ.
9844013068……..

error: No Copying!