Spread the love

ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ ( ಗಾಡತೆ ) ಮತ್ತು ಪೊಳ್ಳು ( ಟೊಳ್ಳು – ಜೊಳ್ಳು ) ತನ……………

ರಕ್ತ ಸಂಬಂಧಗಳಾದ ತಂದೆ ತಾಯಿ ಅಜ್ಜ ಅಜ್ಜಿ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪ ಮುಂತಾದವುಗಳು ಆಯ್ಕೆಗಳಲ್ಲ ಅನಿವಾರ್ಯಗಳು. ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆ ಸಂಬಂಧಗಳು ಸ್ವಾಭಾವಿಕವಾಗಿಯೇ ಹುಟ್ಟಿನಿಂದಲೇ ನಮ್ಮವರು ಎಂಬ ಅಂತರಾಳದ ಭಾವ ಒಳಗೊಂಡಿರುತ್ತದೆ. ಆಧುನಿಕ ಕಾಲದಲ್ಲಿ ಇದು ಒಂದಷ್ಟು ಪರೀಕ್ಷೆಗೆ ಒಳಪಡುತ್ತಿದ್ದರು ಈಗಲೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭಗಳಿಗೂ ಅತ್ಯಂತ ನಂಬಿಕೆಯ ಸಂಬಂಧಗಳಾಗಿವೆ……

ಆದರೆ ಇದೇ ಅಭಿಪ್ರಾಯವನ್ನು ಗಂಡ ಹೆಂಡತಿ, ಅತ್ತೆ ಮಾವ, ಸೊಸೆ ಅಳಿಯ, ಗೆಳೆತನ, ಗ್ರಾಹಕ ಮಾಲೀಕ, ಸಹ ಪ್ರಯಾಣಿಕ, ಜೊತೆ ಕೆಲಸಗಾರ , ಬಾಡಿಗೆದಾರ ಮುಂತಾದ ನಮ್ಮ ನಡುವಿನ ಎಲ್ಲಾ ಸಂಬಂಧಗಳ ಬಗ್ಗೆ ಹೇಳುವುದು ಕಷ್ಟ. ಇವು ನಮ್ಮ ಆಯ್ಕೆಗಳು ಮತ್ತು ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ…..

ನಮ್ಮ ಸಮಾಜದ ನಿಜವಾದ ಗುಣಮಟ್ಟವನ್ನು ನಿರ್ಧರಿಸುವ ಸಂಬಂಧಗಳು ಇವು. ಇವುಗಳ ನಡುವೆ ಸೌಹಾರ್ದ, ಸಾಮರಸ್ಯ, ನಂಬಿಕೆ, ವಿಶ್ವಾಸ, ಆತ್ಮೀಯತೆ ಬೆಳೆದರೆ, ವ್ಯವಹಾರದಿಂದ ಹಿಡಿದು ಎಲ್ಲವೂ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಆದರೆ ನಮ್ಮ ಈಗಿನ ಭಾರತೀಯ ಸಮಾಜದಲ್ಲಿ ಇದು ಸಾಧ್ಯವಾಗಿದೆಯೇ ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ…..

ನನ್ನ ಅಭಿಪ್ರಾಯ ಮತ್ತು ಅನುಭವದಲ್ಲಿ ಈ ಸಂಬಂಧಗಳು ಈಗ ಬಹುತೇಕ ‌ಶಿಥಿಲಗೊಂಡು ಅನುಮಾನದ ಹುತ್ತದೊಳಗೆ ಸೇರಿಕೊಂಡಿದೆ. ಯಾರನ್ನು ಯಾರೂ ನಂಬದ ಸ್ಥಿತಿ ತಲುಪಿದೆ. ಒಂದು ವೇಳೆ ನಂಬಿದರೆ ಅವರು ಮುಗ್ದರಾಗಿರಬೇಕು ಮತ್ತು ಅವರು ಮೋಸಹೋಗುವ ಸಾಧ್ಯತೆಗಳೇ ಹೆಚ್ಚು…..

ಜಮೀನು, ಮನೆ ಕೊಳ್ಳುವ ಅಥವಾ ಮಾರುವ ಪ್ರಕ್ರಿಯೆಯೇ ಇರಬಹುದು, ಗ್ರಾಹಕ ವಸ್ತುಗಳನ್ನು ಖರೀದಿಸುವ ವಿಷಯವೇ ಇರಬಹುದು, ಮದುವೆಗಳ ಬೆಸುಗೆಯೇ ಇರಬಹುದು, ಸಾಮಾಜಿಕ ಜಾಲತಾಣಗಳ ಸ್ನೇಹವೇ ಇರಬಹುದು, ಸಹಪಾಠಿಗಳ ನಡುವಿನ ಪ್ರೀತಿ ಪ್ರೇಮಗಳೇ ಇರಬಹುದು, ಶಿಕ್ಷಣ ವೈದ್ಯಕೀಯ ನ್ಯಾಯಾಲಯ ರಾಜಕೀಯಗಳೇ ಇರಬಹುದು ಎಲ್ಲವೂ ಇಂದು ಅಸಹಜ ವಾತಾವರಣ ನಿರ್ಮಿಸಿವೆ. ಹೇಗೋ ಏನೋ ಯಾವುದಕ್ಕೂ ಎಚ್ಚರಿಕೆಯಿಂದ ಇರೋಣ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಿದೆ….

ಅಪರೂಪದಲ್ಲಿ ಎಲ್ಲೋ ಕೆಲವು ಉದಾಹರಣೆಗಳು ಪ್ರಾಣಕ್ಕಿಂತ ಹೆಚ್ಚು ಆತ್ಮೀಯ, ಗಾಢ ಮತ್ತು ತ್ಯಾಗದ ರೀತಿಯ ಸಂಬಂಧಗಳು ಕಾಣಸಿಗಬಹುದೇ ಹೊರತು ಸಹಜವಾಗಿ ಇವು ಇಲ್ಲ…..

ಪ್ರತಿನಿತ್ಯ ಕೋಟಿ ಕೋಟಿ ವ್ಯವಹಾರಗಳು, ಲಕ್ಷಾಂತರ ಪರಿಚಯಗಳು, ಸಾವಿರಾರು ಮದುವೆಗಳು ನಡೆಯುತ್ತಲೇ ಇರುತ್ತದೆ. ಆದರೆ ಅಷ್ಟೇ ಪ್ರಮಾಣದ ಮೋಸ ವಂಚನೆ ದೌರ್ಜನ್ಯ ಶೋಷಣೆ ಸಹ ಅವ್ಯಾಹತವಾಗಿ ಸಹಜವೆಂಬಂತೆ ನಡೆಯುತ್ತಿದೆ. ಇದೇ ಆತಂಕಕಾರಿ ವಿಷಯ…..

ಎಷ್ಟೇ ಬುದ್ದಿ ಉಪಯೋಗಿಸಿದರು, ಎಷ್ಟೇ ಎಚ್ಚರಿಕೆಯಿಂದ ಇದ್ದರು, ಎಷ್ಟೇ ಆತ್ಮೀಯತೆ ಹೊಂದಿದ್ದರೂ, ಎಷ್ಟೇ ಸಾಕ್ಷಿ ಆಧಾರ ದಾಖಲೆ ಇದ್ದರು, ಎಷ್ಟೇ ಕಾನೂನಿನ ಚೌಕಟ್ಟಿನಲ್ಲಿ ಇದ್ದರು, ಎಷ್ಟೇ ನಮ್ಮ ಪಾಡಿಗೆ ನಾವು ಇದ್ದರೂ ವಂಚನೆ ಮುಕ್ತವಾಗಿ, ನಂಬಿಕೆಯಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ…..

ಶ್ರೀಮಂತರು, ವಿದ್ಯಾವಂತರು, ಪ್ರಭಾವಿಗಳು, ಶಕ್ತಿಶಾಲಿಗಳೇ ಪತರಗುಟ್ಟಿ ಹೋಗುತ್ತಿರುವಾಗ ಇನ್ನು ಬಡವರು ಮಧ್ಯಮವರ್ಗದವರು, ನಿರ್ಗತಿಕರು, ಸಾಮಾನ್ಯರು, ಸಹೃದಯಿಗಳು ಮುಂತಾದವರ ಪಾಡು ಹೇಳತೀರದು…..

ಮನೆಯ ಮುಂದಿನ ಚಪ್ಪಲಿ, ಮನೆಯ ಮೇಲಿನ ಒಗೆದ ಬಟ್ಟೆ, ಪ್ರಯಾಣದ ನಮ್ಮ ಜೇಬು, ಮೊಬೈಲುಗಳು, ಕೀಲಿ ಹಾಕಿದ ಮನೆಗಳು, ಸಾರ್ವಜನಿಕ ಹಣ, ಅಪರಿಚಿತರೊಂದಿಗಿನ ಸ್ನೇಹ, ಸಾಮಾಜಿಕ ಜಾಲತಾಣಗಳ ಆತ್ಮೀಯತೆ ಸೇರಿ ಎಲ್ಲವೂ ಒಂದು ರೀತಿ ಭಯ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿ ಮಾಡಿವೆ…..

ಇದು ನಮ್ಮ ಸಮಾಜದ ಅನಾರೋಗ್ಯ ಮತ್ತು ಅಸ್ವಸ್ಥತೆಯ ಲಕ್ಷಣ. ಈಗಲೇ ಹೀಗಾದರೆ ಮುಂದಿನ ಮಕ್ಕಳ ಭವಿಷ್ಯವೇನು ? ಯಾವ ಆಧಾರದ ಮೇಲೆ ನಾವು ನಮ್ಮ ಮಕ್ಕಳನ್ನು ‌ಈ ಕಲುಷಿತ ವಾತಾವರಣದಲ್ಲಿ ಬಿಟ್ಟು ಹೋಗುವುದು…..

ತೀರಾ ಗಂಭೀರವಾಗಿ ಯೋಚಿಸಬೇಕಿದೆ.
ಅಭಿವೃದ್ಧಿ ಎಂದರೆ ವಸ್ತುಗಳು ಮತ್ತು ತಂತ್ರಜ್ಞಾನ ಮಾತ್ರವಲ್ಲ. ಅದು ನಾಗರಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳ ಗಟ್ಟಿತನ, ಒಳ್ಳೆಯತನ ಸಹ ಆಗಿದೆ. ಅದನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು……


ನಿನ್ನೆ, ದಿನಾಂಕ 26.05.2024 ರ ಭಾನುವಾರ, ಬೆಂಗಳೂರಿನ ನಾಗರಬಾವಿ ಬಸವ ಬಳಗದವರು ಏರ್ಪಡಿಸಿದ್ದ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ” ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ” ಎಂಬ ವಿಷಯ ಕುರಿತು ಮಾತನಾಡಿದೆನು……”


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068…….

error: No Copying!