ಲೈಕ್ – ಶೇರ್ – ಕಾಮೆಂಟ್,
ಯಾರಿಗೆ, ಯಾವುದಕ್ಕೆ ಎಷ್ಟು…….
ಸಿನಿಮಾ ನಟಿಯೊಬ್ಬರ ಒಂದು ನಗುಮುಖದ ಭಾವಚಿತ್ರಕ್ಕೆ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಎಕ್ಸ್ ಮುಂತಾದ ಸಾಮಾಜಿಕ ಜಾಲತಾಣದ ಲೈಕ್ ಕಾಮೆಂಟ್ ಮತ್ತು ಶೇರ್ ಸಾಮಾನ್ಯವಾಗಿ ಸಾವಿರದಿಂದ ಪ್ರಾರಂಭವಾಗಿ ಲಕ್ಷ, ಕೆಲವೊಮ್ಮೆ ಮಿಲಿಯನ್ ಸಹ ದಾಟುತ್ತದೆ. ಕಿರುತೆರೆಯ ನಿರೂಪಕಿಯೊಬ್ಬರ ಇದೇ ರೀತಿಯ ಭಾವಚಿತ್ರಕ್ಕೆ, ಲಕ್ಷಗಟ್ಟಲೆ ಲೈಕ್ ಒತ್ತಲಾಗುತ್ತದೆ. ಗಿಚ್ಚಿ ಗಿಲಿ ಗಿಲಿ ಅಥವಾ ಕಾಮಿಡಿ ಕಿಲಾಡಿಗಳು ಅಥವಾ ಮಜಾಭಾರತ ಕಾರ್ಯಕ್ರಮದ ನಟ ನಟಿಯರ ಹಾಸ್ಯಕ್ಕೆ ಸಾವಿರ – ಲಕ್ಷಗಳ ಕಾಮೆಂಟ್ ಇರುತ್ತದೆ. ಇನ್ನೂ ಅನೇಕ ಹಾಸ್ಯ ಕಲಾವಿದರ ವಿಡಿಯೋಗಳಿಗೆ ಲಕ್ಷ ಲಕ್ಷ ವೀಕ್ಷಕರು ಇರುತ್ತಾರೆ. ಈ ಮನರಂಜನಾ ಉದ್ಯಮದ ಯಾರೇ ಆಗಿರಲಿ, ಅವರ ನಗು, ಅವರ ಮನೆ, ಅವರ ನಾಯಿ, ಅವರ ಕಾರು, ಅವರ ತೋಟ, ಅವರ ಪ್ರವಾಸ ಇವುಗಳ ಮಾಹಿತಿ ತಿಳಿದುಕೊಳ್ಳಲು ಸಾಮಾನ್ಯ ಜನ ಹಾತೊರೆಯುತ್ತಾರೆ. ಲೈಕ್, ಕಾಮೆಂಟ್ ಮತ್ತು ಶೇರ್ ಮಾಡುತ್ತಾರೆ…….
ಹಾಗೆಯೇ ಚಿತ್ರ ವಿಚಿತ್ರ ನಡವಳಿಕೆಯ ಅನೇಕರು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಖಾಸಗಿ ವಿಷಯಗಳು ಸಹ ಜನರ ಆಕರ್ಷಣೆಗೆ ಒಳಗಾಗಿದೆ. ಸಂತೋಷ, ಆ ಸ್ವಾತಂತ್ರ್ಯ ಅವರಿಗೂ ಇದೆ, ಜನರಿಗೂ ಇದೆ……
ಆದರೆ ಅದೇ ಸಮಯದಲ್ಲಿ ಗೌತಮ ಬುದ್ಧರ ಭಾವಚಿತ್ರ ಮತ್ತು ಸಂದೇಶಕ್ಕೆ ನೂರರೊಳಗಿನ ಕಾಮೆಂಟ್, ಶೇರ್, ಲೈಕ್ ಸಿಗುತ್ತದೆ. ಚಾಣಕ್ಯನ ನೀತಿ ಶಾಸ್ತ್ರಕ್ಕೆ, ಬಸವಣ್ಣನವರ ವಚನಗಳಿಗೆ, ಸ್ವಾಮಿ ವಿವೇಕಾನಂದರ ಚಿಂತನೆಗೆ, ಭಕ್ತ ಕಬೀರರ ಹಾಡುಗಳಿಗೆ, ಮೀರಾಬಾಯಿ ಅವರ ಭಜನೆಗಳಿಗೆ, ಮಹಾತ್ಮ ಗಾಂಧಿಯವರ ಜೀವನ ದೃಷ್ಟಿಕೋನಕ್ಕೆ, ಬಾಬಾ ಸಾಹೇಬರ ವಿಚಾರಗಳಿಗೆ, ಸಾಮಾನ್ಯವಾಗಿ ಹತ್ತರಿಂದ ನೂರರ ಒಳಗಿನ ಲೈಕ್ ಕಾಮೆಂಟ್ ಮತ್ತು ಶೇರ್ ಇರುತ್ತದೆ. ಇರಲಿ, ಇದು ಸಹ ಅವರವರ ಸ್ವಾತಂತ್ರ್ಯ, ಅಭಿರುಚಿ, ಯೋಗ್ಯತೆ ಎಂದು ಭಾವಿಸೋಣ…….
ಇದೇ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಇನ್ನಷ್ಟು ಹೆಚ್ಚು ಪೊಲೀಸ್ ಠಾಣೆಗಳು ತೆರೆಯಬೇಕೆಂದು ಪ್ರತಿಭಟನೆ ನಡೆಯುತ್ತದೆ. ಮೊನ್ನೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕಿಕ್ಕಿರಿದು ಜನ ತಪಾಸಣೆಗಾಗಿ ಸೇರಿದ್ದರು ಎಂದು ಗೆಳೆಯರು ವಿಡಿಯೋ ಶೇರ್ ಮಾಡಿದ್ದರು. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬೆಳಗಿನಿಂದ ಸಂಜೆಯವರೆಗೂ ಸರತಿಯ ಸಾಲು ಕರಗಿರಲೇ ಇಲ್ಲ. ಅನೇಕ ಕೋರ್ಟುಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಕಕ್ಷಿದಾರರು ತುಂಬಿರುತ್ತಾರೆ. ಪತ್ರಿಕೆಗಳಲ್ಲಿ ಕ್ರೈಂ ಸುದ್ದಿಗಾಗಿ ಇತರ ಅನೇಕ ಪ್ರಮುಖ ವಿಷಯಗಳನ್ನು ಪಕ್ಕಕ್ಕೆ ಸೇರಿಸಿ ಇವುಗಳನ್ನೇ ವಿಜೃಂಭಿಸಲಾಗುತ್ತಿದೆ. ಟಿವಿ ಗಳಲ್ಲಿ ಬ್ರೇಕಿಂಗ್ ನ್ಯೂಸ್ ನ ಬಹುತೇಕ ವಿಷಯಗಳು ಸಮಾಜದ ಅತ್ಯಂತ ನೀಚ ವಿಷಯಗಳಿಗೆ ಸಂಬಂಧಿಸಿದಂತೆ ಇರುತ್ತದೆ. ನಮ್ಮ ಮಕ್ಕಳ ಬಹುತೇಕ ಚಟುವಟಿಕೆಗಳು ಮೊಬೈಲಿನ ವಿಡಿಯೋ ಗೇಮ್ಗಳಲ್ಲೇ ಕಳೆದುಹೋಗುತ್ತಿದೆ ಎಂದು ಎಲ್ಲಾ ಪೋಷಕರು ಪ್ರತಿನಿತ್ಯ ಗೊಣಗುತ್ತಾರೆ. ಕೊಲೆಗಳು, ಆತ್ಮಹತ್ಯೆಗಳು ಸಹಜವಾಗುತ್ತಿವೆ. ಇತ್ತೀಚಿನ ಬೇಸಿಗೆಯಲ್ಲಿ ತಾಪಮಾನ ಸಾಕಷ್ಟು ತೊಂದರೆ ನೀಡಿತು…….
ಒಟ್ಟಾರೆ ನಮ್ಮ ವ್ಯವಸ್ಥೆ ಮತ್ತು ಜನರ ಮನೋಭಾವ ಎತ್ತ ಸಾಗುತ್ತಿದೆ ಎಂದು ಆಶ್ಚರ್ಯವಾಗುತ್ತದೆ. ಒಳ್ಳೆಯದನ್ನು ಕೇವಲ ಉದಾಹರಣೆಯಾಗಿ ಸ್ಮರಿಸಿಕೊಳ್ಳುತ್ತಾರೆ. ಆದರೆ ತಮ್ಮ ನಡವಳಿಕೆ ಮಾತ್ರ ಅದಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ನಮ್ಮ ಮಕ್ಕಳು ಒಳ್ಳೆಯವರಾಗಿರಬೇಕು, ಒಳ್ಳೆಯ ಗುಣ ನಡತೆ ಸ್ವಭಾವ ಹೊಂದಿರಬೇಕು, ಒಳ್ಳೆಯ ಸಂಸ್ಕಾರ ಪಡೆಯಬೇಕು, ಒಳ್ಳೆಯ ಸಾಧನೆ ಮಾಡಬೇಕು ಮುಂತಾದ ಅನೇಕ ಕನಸುಗಳನ್ನು, ಆಶಯಗಳನ್ನು ಹೊಂದಿರುತ್ತಾರೆ. ಆದರೆ ಅದಕ್ಕೆ ಇಡೀ ಸಮಾಜ ಸಹ ಮೌಲ್ಯಯುತವಾಗಿ ನಡೆಯುತ್ತಿರಬೇಕು, ಮೌಲ್ಯಗಳು ಅಳವಡಿಕೆಯಾಗಿರಬೇಕು, ಅದಕ್ಕಾಗಿ ಮೌಲ್ಯಯುತ ಆದರ್ಶಗಳನ್ನು ಸಮಾಜದಲ್ಲಿ ನೆಲೆ ನಿಲ್ಲುವಂತೆ ಮಾಡಬೇಕು ಎನ್ನುವ ಮನೋಭಾವವೇ ಇಲ್ಲವಾಗಿದೆ…..
ಒಳ್ಳೆಯ ಬೀಜ ಬಿತ್ತದೇ, ಒಳ್ಳೆಯ ಫಸಲು ಹೇಗೆ ಸಾಧ್ಯ. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವೇ. ಇಷ್ಟು ಸರಳ ವಾಸ್ತವ ಸತ್ಯವನ್ನು ಅರಿಯಲಾರದಷ್ಟು ಅಥವಾ ಅರಿತರು ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತರಲಾರದಷ್ಟು ನಾವು ಅಸಾಯಕರಾಗಿದ್ದೇವೆಯೇ ಅಥವಾ ಸ್ವಾರ್ಥಿಗಳಾಗಿದ್ದೇವೆಯೇ ಅಥವಾ ಮೂರ್ಖರಾಗಿದ್ದೇವೆಯೇ…..
ಮೈದಾನದ ಕ್ರೀಡಾ ಸಂಸ್ಕೃತಿಗೆ ಪರ್ಯಾಯವಾಗಿ ವಿಡಿಯೋ ಗೇಮ್ ಸಂಸ್ಕೃತಿ ಹುಟ್ಟು ಹಾಕಿ, ಗ್ರಂಥಾಲಯ ಸಂಸ್ಕೃತಿಗೆ ಪರ್ಯಾಯವಾಗಿ ಬಾರ್ ಸಂಸ್ಕೃತಿ ಹುಟ್ಟು ಹಾಕಿ, ಎಳನೀರು ಸಂಸ್ಕೃತಿಗೆ ಪರ್ಯಾಯವಾಗಿ ಪೆಪ್ಸಿ ಕೋಕ್ ಸಂಸ್ಕೃತಿ ಹುಟ್ಟು ಹಾಕಿ, ಶ್ರಮ ಸಂಸ್ಕೃತಿಗೆ ವಿರುದ್ಧವಾಗಿ ಮಜಾ ಸಂಸ್ಕೃತಿ ಹುಟ್ಟು ಹಾಕಿ, ಅರಿವಿನ ಸಂಸ್ಕೃತಿಗೆ ವಿರುದ್ಧವಾಗಿ ಹುಚ್ಚು ಮನರಂಜನಾ ಸಂಸ್ಕೃತಿ ಹುಟ್ಟುಹಾಕಿ, ಈಗ ಸಮಾಜ ಹಾಳಾಗುತ್ತಿದೆ, ನಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ, ಎಲ್ಲೆಲ್ಲೂ ಕೊಲೆ ಹಿಂಸೆ ಪೆನ್ ಡ್ರೈವ್ ಗಳದೇ ಸುದ್ದಿ ಎಂದು ಬಾಯಿ ಬಡಿದುಕೊಂಡರೆ ಹೇಗೆ…..
ಅದಕ್ಕಾಗಿಯೇ ಹೇಳುವುದು, ಒಂದು ಒಳ್ಳೆಯ ಸಂಸ್ಕೃತಿ, ಒಂದು ಒಳ್ಳೆಯ ವ್ಯಕ್ತಿತ್ವ ರೂಪಗೊಳ್ಳಬೇಕೆಂದರೆ, ಇಡೀ ವ್ಯವಸ್ಥೆ, ಆ ನಿಟ್ಟಿನಲ್ಲಿ ಮೌಲ್ಯಯುತವಾಗಿ ಉಳಿಯಬೇಕು, ಬೆಳೆಯಬೇಕು, ಬೆಳೆಸಬೇಕು. ಇಲ್ಲದಿದ್ದರೆ ಮಾಡಿದ್ದುಣ್ಣೋ ಮಹಾರಾಯ. ಯೋಚಿಸಿ ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯ ಪ್ರವೃತ್ತರಾಗಿ. ಮುಂದಿನ 15/20 ವರ್ಷಗಳಲ್ಲಿ ಒಳ್ಳೆಯ ಮೌಲ್ಯಯುತ ಸಮಾಜ ನಮ್ಮದಾಗುತ್ತದೆ. ಧನ್ಯವಾದಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…….