ಕೋಟ: ದಿನಾಂಕ: 20-05-2024(ಹಾಯ್ ಉಡುಪಿ ನ್ಯೂಸ್) ವರದಕ್ಷಿಣೆ ಹಣ ಹಾಗೂ ಚಿನ್ನಾಭರಣ ತರುವಂತೆ ಗಂಡ ಹಾಗೂ ಗಂಡನ ಮನೆಯವರು ಒತ್ತಾಯ ಮಾಡುತ್ತಿದ್ದು,ತರದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಸುಶ್ಮಾ ಎಂಬವರು ದಿನಾಂಕ 30-11-2022 ರಂದು ಆಪಾದಿತ ಸಂಪತ್ ಎಂಬವರನ್ನು ಶಾಸ್ತ್ರೋಕ್ತವಾಗಿ ತೆಕ್ಕಟ್ಟೆಯಲ್ಲಿ ಮದುವೆಯಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
. ಮದುವೆಯ ಪೂರ್ವದಲ್ಲಿ ಆಪಾದಿತರಾದ ಸಂಪತ್ ಮತ್ತು ಸುಜಾತಾ ರವರು ಸುಶ್ಮಾರವರ ಮನೆಯವರ ಬಳಿ ರೂಪಾಯಿ 4,00,000/- ಲಕ್ಷ ನಗದು ಹಾಗೂ 4 ಗ್ರಾಮ್ ಚಿನ್ನದ ಸರ ಸ್ವತ್ತನ್ನು ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದು ಮದುವೆಯ ಸಮಯದಲ್ಲಿ ರೂಪಾಯಿ 2,00,000/- ನಗದು ಹಾಗೂ 4 ಗ್ರಾಮ್ ಚಿನ್ನದ ಸರ ಪಡೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯಾದ ಮರುದಿನವೇ ಗಂಡನಾದ ಸಂಪತ್ ನು ಸುಜಾತರವರೊಂದಿಗೆ ಸೇರಿಕೊಂಡು ಬಾಕಿ ವರದಕ್ಷಿಣೆ ಹಾಗೂ ಚಿನ್ನಾಭರಣವನ್ನು ತರುವಂತೆ ಪೀಡಿಸಿ ಗಂಡ ಸಂಪತ್ ನು ಕುಡಿದು ಬಂದು ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆ ಎಂದು ದೂರಿದ್ದಾರೆ.
ಹಣ ಹಾಗೂ ಚಿನ್ನಾಭರಣ ತರದಿದ್ದಲ್ಲಿ ಸುಶ್ಮಾ ಹಾಗೂ ಅವರ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಸುಶ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 498A, 323, 504, 506(2) IPC & 3, 4, 6 DP Act ನಂತೆ ಪ್ರಕರಣ ದಾಖಲಾಗಿದೆ.