ಉಡುಪಿ: ದಿನಾಂಕ: 17-05-2024(ಹಾಯ್ ಉಡುಪಿ ನ್ಯೂಸ್) ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಇಬ್ಬರು ಯುವಕರ ಮೇಲೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ದೊಡಮನಿ ಅವರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಉಡುಪಿ ಸಂಚಾರ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಸುದರ್ಶನ್ ದೊಡಮನಿ ಅವರು ದಿನಾಂಕ: 15/05/2024 ರಂದು ಇಲಾಖೆಯ ಜೀಪಿನಲ್ಲಿ ಚಾಲಕ ಸತೀಶ್ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ರಾತ್ರಿ ಸಮಯ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆಗೆ ಹೋಗುತ್ತಿರುವಾಗ ಓರ್ವ ವ್ಯಕ್ತಿ ತನ್ನ KA-20 U-9347 ನೇ ಮೋಟಾರ್ ಸೈಕಲ್ ನಲ್ಲಿ ಕಲ್ಸಂಕ ಕಡೆಗೆ ಹೆಲ್ಮೆಟ್ ಧರಿಸದೇ ಮೊಬೈಲ್ನಲ್ಲಿ ಮಾತನಾಡುತ್ತಾ ಚಲಾಯಿಸುತ್ತಿದ್ದವನನ್ನು ನಿಲ್ಲಿಸಲು ಸೂಚಿಸಿದ್ದು, ಅದಕ್ಕೆ ವಾಹನ ಸವಾರನು ವೈನ್ ಗೇಟ್ ಬಳಿ ನಿಲ್ಲಿಸಿದ್ದು, ಬಳಿಕ ಸುದರ್ಶನ ದೊಡಮನಿ ಅವರು ವಾಹನ ಚಾಲಕನ ಬಳಿ “ನೀವು ಮೊಬೈಲ್ನಲ್ಲಿ ಮಾತನಾಡುತ್ತಾ, ಹೆಲ್ಮೆಟ್ ಧರಿಸದೇ ವಾಹನದಲ್ಲಿ ಸಂಚರಿಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು,ದಂಡ ಭರಿಸುತ್ತೀರಾ” ಎಂದು ಹೇಳಿದ್ದಕ್ಕೆ ವಾಹನ ಸವಾರನು “ನೀವು ನೋಟೀಸ್ ನೀಡಿ ಎಂದು ಹೇಳಿದ್ದು”.ಅದಕ್ಕೆ ಸುದರ್ಶನ ದೊಡಮನಿ ಅವರು ನಿಮ್ಮ ಮನೆಯ ವಿಳಾಸವನ್ನು ಹೊಂದಿರುವ ಯಾವುದಾದರೊಂದು ಒಂದು ದಾಖಲಾತಿಯನ್ನು ತೋರಿಸಲು ಕೇಳಿಕೊಂಡಾಗ,ವಾಹನ ಸವಾರನು ನಿರಾಕರಿಸಿದ್ದು, ಅದೇ ಸಮಯಕ್ಕೆ KA-20 HB-0776 ನೇ ನಂಬ್ರದ ಬುಲೆಟ್ ಬೈಕ್ ನಲ್ಲಿ ಮತ್ತೊಬ್ಬ ಆರೋಪಿ ಬಂದು ದಂಡ ಹಾಕುತ್ತೀಯಾ ಎಂದು ಏರು ಧ್ವನಿಯಲ್ಲಿ ಮಾತಾನಾಡುತ್ತಾ ಮೈಮೇಲೆ ಏರಿಬಂದಿದ್ದು.ಇಬ್ಬರೂ ಸೇರಿ ನಾವು ಕಾನೂನು ವಿಧ್ಯಾರ್ಥಿಗಳು ನಮಗೂ ಕಾನೂನು ಗೊತ್ತು ಎಂದು ವೀಡಿಯೋ ಮಾಡುತ್ತಾ ಮೊಬೈಲನ್ನು ಸುದರ್ಶನ ದೊಡಮನಿ ಅವರ ಮುಖದ ಹತ್ತಿರ ಹಿಡಿದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಕರ್ತವ್ಯ ಕ್ಕೆ ಅಡ್ಡಿ ಪಡಿಸಿದ ಶ್ರೀವತ್ಸ ಮತ್ತು ಗಣೇಶ್ ಪೂಜಾರಿ ಎಂಬಿಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ:186 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.