Spread the love

ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಅಕೌಂಟಿನ ಯುವತಿಯೊಬ್ಬಳು ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುತ್ತಾ, ಗೋಡೆಗಳಿಗೆ ಚಿತ್ರ ಬಿಡಿಸುತ್ತಾ, ನಿರಂತರವಾಗಿ ಸಾಕಷ್ಟು ಶ್ರಮ ಪಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ…….

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ದಾನಿಗಳಿಂದ ಒಂದಷ್ಟು ಹಣ ಸಂಗ್ರಹಿಸಿ, ತನ್ನದೇ ಒಂದು ತಂಡ ಕಟ್ಟಿಕೊಂಡು, ಈ ರೀತಿ ಊರೂರು ಸುತ್ತುತ್ತಾ ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸಮಾಜ ಕೂಡ ಅದನ್ನು ಗುರುತಿಸಿ ಆಕೆಗೆ ಪ್ರೋತ್ಸಾಹಿಸುತ್ತಾ, ಪ್ರಶಸ್ತಿ ಸನ್ಮಾನ ನೀಡುತ್ತಾ, ಗೌರವಿಸುತ್ತಿದೆ…….

ನಿಜಕ್ಕೂ ಬದುಕಿನ ಸಾರ್ಥಕತೆ ಅಡಗಿರುವುದೇ ಇಲ್ಲಿ. ನೆಪೋಲಿಯನ್ ಬೋನಾಪಾರ್ಟೆ ಎಂಬ ಫ್ರಾನ್ಸಿನ ಕ್ರಾಂತಿಕಾರಿ ಹೀಗೆ ಹೇಳುತ್ತಾನೆ “ನಾವು ಹುಟ್ಟಿದ ಮೇಲೆ ನಾವಿಡುವ ಪ್ರತಿ ಹೆಜ್ಜೆಯಲ್ಲೂ ಒಂದೊಂದು ಗುರುತು ಬಿಟ್ಟು ಹೋಗಬೇಕು ” ಇಡೀ ಸಮಾಜ ಎಷ್ಟೇ ಅಧೋಗತಿಯ ಕಡೆ ಚಲಿಸುತ್ತಿದ್ದರು ಇಂತಹ ಕೆಲವರ ಸೇವೆಗಳು ಸಮಾಜ ಇನ್ನೂ ತನ್ನ ಘನತೆಯನ್ನು ಕಾಪಾಡಿಕೊಳ್ಳಲು ಕಾರಣವಾಗಿದೆ…….

ಎಷ್ಟೋ ಜನ ಬಡ ಮಕ್ಕಳಿಗೆ ಉಚಿತವಾಗಿ ಆಹಾರ ಶಿಕ್ಷಣ ವಸತಿ ನೀಡುವ ಕೆಲಸ ಈಗಲೂ ಮಾಡುತ್ತಿದ್ದಾರೆ. ಅನೇಕರು ಪರಿಸರದ ಉಳಿವಿಗಾಗಿ ನಿರಂತರವಾಗಿ ಶ್ರಮ ಪಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಬಹಳಷ್ಟು ಜನ ಭ್ರಷ್ಟಾಚಾರದ ವಿರುದ್ಧವೂ ಸದಾ ಕಾಲ ಎಲ್ಲಾ ಕಷ್ಟಗಳನ್ನು, ಜೀವ ಭಯಗಳನ್ನು ಸಹಿಸಿಕೊಂಡು ಹೋರಾಡುತ್ತಿದ್ದಾರೆ. ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಎಂದು ಕೋಲಾರದ ಅರಿವು ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹಳ್ಳಿಗಳಲ್ಲಿ ಜನ ಜಾಗೃತಿ ಮೂಡಿಸುತ್ತಿದೆ. ಗ್ರಂಥಾಲಯಗಳ ಉಳಿವಿಗಾಗಿ, ಜನರ ಓದಿನ ಹವ್ಯಾಸವನ್ನು ಬೆಳೆಸಲು ಅನೇಕರು ಖಾಸಗಿ ಗ್ರಂಥಾಲಯಗಳನ್ನು ಸ್ಥಾಪಿಸಿ ಸೇವೆ ಮಾಡುತ್ತಿದ್ದಾರೆ. ಮಧ್ಯಪಾನ, ಧೂಮಪಾನದ ವಿರುದ್ಧ ರಾಜ್ಯಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಿವೆ. ಕೆರೆ ಕಟ್ಟೆಗಳನ್ನು, ಬಾವಿಗಳನ್ನು, ನೀರಾವರಿ ಸೌಕರ್ಯಗಳನ್ನು ಒದಗಿಸಲು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಈಗಲೂ ಪ್ರಯತ್ನಶೀಲವಾಗಿವೆ. ವ್ಯಕ್ತಿಯೊಬ್ಬರು ನೀರಿನ ಮಾರಾಟವನ್ನು ತಡೆಯಲು ಕಳೆದ 20 ವರ್ಷಗಳಿಂದ ಮೌನ ವ್ರತವನ್ನು ಆಚರಿಸುತ್ತಿದ್ದಾರೆ. ಇನ್ನು ಕೆಲವರು ವೃದ್ಧಾಶ್ರಮಗಳನ್ನು, ಅನಾಥಾಶ್ರಮಗಳನ್ನು ಕಟ್ಟಿ ನಿರ್ಗತಿಕರಿಗೆ ಆಶ್ರಯ ನೀಡುತ್ತಿದ್ದಾರೆ. ಮತ್ತೊಂದಿಷ್ಟು ಜನ ಈ ಸಮಾಜದ ಮೌಢ್ಯಗಳ ವಿರುದ್ಧ ಹೋರಾಡುತ್ತಾ ವೈಚಾರಿಕ ಮನೋಭಾವವನ್ನು ಜನರಲ್ಲಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ……

ಹೀಗೆ ಹೇಳುತ್ತಾ ಹೋದರೆ ಸಾವಿರಾರು ಜನರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗಾಗಿಯೇ ಮುಡುಪಿಟ್ಟು ತಮ್ಮ ಬದುಕನ್ನು ಸಾರ್ಥಕ ಗೊಳಿಸಿಕೊಳ್ಳುತ್ತಿದ್ದಾರೆ ಮತ್ತು ಆ ಮುಖಾಂತರ ಸಮಾಜದ ಒಳ್ಳೆಯ ಗುಣಗಳು ಇನ್ನೂ ಜೀವಂತ ಇರುವಂತೆ ನೋಡಿಕೊಂಡಿದ್ದಾರೆ……

ದುರಂತವೆಂದರೆ, ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಧಾರ್ಮಿಕ ಮುಖಂಡರು, ಪತ್ರಕರ್ತರು, ವ್ಯಾಪಾರಿಗಳು, ಚಲನಚಿತ್ರ ನಟನಟಿಯರು ಸೇರಿ ಕೆಲವು ವರ್ಗಗಳು ತಮ್ಮ ಶ್ರೀಮಂತಿಕೆಗಾಗಿ, ತಮ್ಮ ಅಧಿಕಾರಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ಈ ಸಮಾಜದ ಮೌಲ್ಯಗಳನ್ನು, ಸಂಪತ್ತನ್ನು ನಾಶಪಡಿಸುತ್ತಲೇ ಸಾಗುತ್ತಿದ್ದಾರೆ…….

ವಿದ್ಯಾವಂತರ ಸಂಖ್ಯೆ ಹೆಚ್ಚಾದಷ್ಟು ಸಮಾಜದ ದುಷ್ಟತನ ಹೆಚ್ಚಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಹಾಗೆಯೇ ಶೇಕಡ 90% ರಷ್ಟು ಜನ ದೇವರಲ್ಲಿ ಮತ್ತು ಒಂದು ದೈವಿಕ ಶಕ್ತಿಯಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿದ್ದಾರೆ. ಜೊತೆಗೆ ಪ್ರತಿನಿತ್ಯ ತಮ್ಮ ಧರ್ಮದ ದೇವರಲ್ಲಿ ಪ್ರಾರ್ಥನೆಗಳನ್ನು, ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಅದೇ ಜನ ತಮ್ಮ ನಡವಳಿಕೆಯಲ್ಲಿ ಅತ್ಯಂತ ಅಮಾನವೀಯ, ಕೆಟ್ಟ, ದುಷ್ಟತನವನ್ನು ಅಳವಡಿಸಿಕೊಂಡಿದ್ದಾರೆ……

ವಿಚಿತ್ರ ನೋಡಿ ತಾವು ನಂಬಿದ ದೇವರು ಮತ್ತು ಧರ್ಮಕ್ಕೂ ಸಹ ಇವರು ದ್ರೋಹ ಬಗೆಯುತ್ತಾರೆ. ಎಲ್ಲ ಒಳ್ಳೆಯತನಗಳ ಸಂಕೇತವಾಗಿ ದೇವರು, ಧರ್ಮವಿದ್ದರೆ ಇವತ್ತು ಅದಕ್ಕೆ ವಿರುದ್ಧ ನಡವಳಿಕೆಗಳೇ ಹೆಚ್ಚಾಗಲು ಈ ಆತ್ಮವಂಚಕ ಮನಸ್ಸುಗಳೇ ಕಾರಣ. ಕುಂಕುಮ ವಿಭೂತಿ ಗಡ್ಡ ಟೋಪಿ ಕ್ರಾಸ್ ಹೂವು ಮುಂತಾದ ಧಾರ್ಮಿಕ ಸಂಕೇತಗಳು, ಪೂಜೆ ಹೋಮ ಹವನ ಮುಂತಾದ ಆಚರಣೆಗಳು ಕೇವಲ ಪ್ರದರ್ಶನದ ಗೊಂಬೆಗಳಾಗಿ ನಿಜವಾದ ಸೇವಾ ಮನೋಭಾವ ಮರೆಯಾಗುತ್ತಿರುವ ಸಂದರ್ಭದಲ್ಲಿ ಕೆಲವೇ ಜನರಾದರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಈ ಸಮಾಜ ಕನಿಷ್ಠ ಇಷ್ಟಾದರೂ ಸುವ್ಯವಸ್ಥೆಯಲ್ಲಿದೆ. ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತಿತ್ತು……

ಆದ್ದರಿಂದ ಅವಕಾಶ ಇರುವವರು, ಆಸಕ್ತಿ ಇರುವವರು, ಕನಸುಗಳನ್ನು ಹೊಂದಿರುವವರು ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಅಥವಾ ಅದರಲ್ಲಿ ನಿರತರಾದವರಿಗೆ ಕೈಲಾದ ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

error: No Copying!