ಸರ್ಕಾರಿ ಕೆಲಸ ಮತ್ತು ಅಧಿಕಾರಿಗಳು……
( ಕಠಿಣ ಅಭಿಪ್ರಾಯ ಎಂದಾದರೆ ಕ್ಷಮೆ ಇರಲಿ)…..
ಬಹಳಷ್ಟು ಸರ್ಕಾರಿ ಅಧಿಕಾರಿಗಳ ಒಂದು ಸಾಮಾನ್ಯ ಗುಣ ಎಂದರೆ, ( ಕೇಂದ್ರ ಮತ್ತು ರಾಜ್ಯ ಸೇರಿ )
ಐಎಎಸ್ ಅಧಿಕಾರಿಗಳಿಂದ ಡಾಕ್ಟರ್, ಇಂಜಿನಿಯರ್ ಸೇರಿದಂತೆ ಬಹುತೇಕ ಎಲ್ಲಾ ವಿಭಾಗದವರು ಕೆಲಸಕ್ಕೆ ಸೇರುವಾಗ ಅತ್ಯಂತ ಶ್ರದ್ಧೆಯಿಂದ ಮತ್ತು ಕಷ್ಟಪಟ್ಟು ಓದುತ್ತಾರೆ.
ಕೆಲಸ ಸಿಕ್ಕ ನಂತರ ಅಲ್ಲಿಗೆ ಅವರ ಓದು ಪರಿಶ್ರಮ ಮತ್ತು ಬುದ್ದಿಯ ಬೆಳವಣಿಗೆ ಹೆಚ್ಚು ಕಡಿಮೆ ನಿಂತು ಹೋಗುತ್ತದೆ…..
ಕೆಲಸ ಸೇರಿದ ನಂತರ ಒಮ್ಮೆ ತಮ್ಮ ಆಫೀಸಿನ ಕೆಲಸ ಪ್ರಾರಂಭ ಮಾಡುವ ಅವರು ಖಚಿತ ಸಂಬಳದ ಭದ್ರತೆಯೊಂದಿಗೆ ಫೈಲುಗಳಲ್ಲಿ ಮುಳುಗಿ ಹೋಗುತ್ತಾರೆ. ಯಾವುದೇ ಹೊಸತನಕ್ಕೂ ತಮ್ಮನ್ನು ತೆರೆದು ಕೊಳ್ಳುವುದಿಲ್ಲ ಮತ್ತು ನಮ್ಮ ಸರ್ಕಾರಿ ವ್ಯವಸ್ಥೆ ಅದಕ್ಕೆ ಪ್ರೋತ್ಸಾಹವೂ ಕೊಡುವುದಿಲ್ಲ……
ಸಾಕಷ್ಟು ಅಧಿಕಾರಿಗಳು ತಮ್ಮ ಯೌವನದ ದಿನಗಳಲ್ಲಿ ಸರ್ಕಾರಿ ಕೆಲಸ ಪ್ರಾರಂಭಿಸಿದರೆ ಮತ್ತೆ ಬದುಕಿನ ಬಗ್ಗೆ ಹಿಂತಿರುಗಿ ನೋಡುವುದು ನಿವೃತ್ತಿಯ ಸಮಯದಲ್ಲಿ…….
ಸಾಮಾನ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಸರ್ಕಾರದ ಕೆಲಸ ಪಡೆಯುವುದೇ ಜೀವನದ ಸಾರ್ಥಕತೆ ಎಂದು ಭಾವಿಸಲಾಗುತ್ತದೆ. ಕೆಲಸ ದೊರೆತ ನಂತರ ಅವರ ಮಾರುಕಟ್ಟೆ ಮೌಲ್ಯ ವೃದ್ಧಿಸುತ್ತದೆ. ಆಗ ಆದಷ್ಟು ಬೇಗ ಮದುವೆ ಮಾಡಲಾಗುತ್ತದೆ. ಅಲ್ಲಿಂದ ಅವರ ಯೋಚನೆ
ಹೆಂಡತಿ/ಗಂಡ, ಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆ, ಸ್ವಂತ ಮನೆ ಇತ್ಯಾದಿಗಳ ಸುತ್ತಲೇ ತಮ್ಮೆಲ್ಲಾ ಯೋಜನೆ ಮತ್ತು ಕಾರ್ಯತಂತ್ರ ರೂಪಿಸುತ್ತಾರೆ……
ಹೇಗಿದ್ದರೂ ಸಂಬಳ ತಿಂಗಳಿಗೆ ಸರಿಯಾಗಿ ಬರುತ್ತದೆ. ದಿನ ಕಳೆದಂತೆ ಆಫೀಸಿನ ಕೆಲಸಗಳೂ ಸುಲಭವಾಗಿ ಕಾಟಾಚಾರಾದ ಟೈಂಪಾಸ್ ಗಾಗಿ ದಿನ ದೂಡುತ್ತಾರೆ ಮತ್ತು ಸಾರ್ವಜನಿಕ ಸೇವೆ ಎಂಬುದು ಮರೆತೇ ಹೋಗುತ್ತದೆ. ಇನ್ನು ಕ್ರಿಯಾತ್ಮಕ ಚಟುವಟಿಕೆಗಳ ಬಗ್ಗೆ ಯೋಚಿಸುವ ಗೋಜಿಗೇ ಹೋಗುವುದಿಲ್ಲ. ಹೊಸ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿಯೂ ಇರುವುದಿಲ್ಲ.
ಸಾಧನೆಯ ಕನಸೂ ಕಾಣುವುದಿಲ್ಲ…..
30 ವರ್ಷಗಳಷ್ಟು ದೀರ್ಘಕಾಲ ಆರ್ಥಿಕ ಭದ್ರತೆ ಅವರನ್ನು ಸೋಮಾರಿಗಳಾಗಿ ಮಾಡುತ್ತದೆ……
ಎಲ್ಲೋ ಬೆರಳೆಣಿಕೆಯಷ್ಟು ಜನ ಮಾತ್ರ ಈ ಏಕತಾನತೆಯನ್ನು ಮೀರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾರೆ. ಅದು ತೀರಾ ಅಪರೂಪ……
ಈಗ ಅರ್ಥವಾಗಿರುವ ವಿಷಯವೆಂದರೆ ಈ ಕಾರಣಕ್ಕಾಗಿಯೇ ನಮ್ಮ ಆಡಳಿತಾತ್ಮಕ ವ್ಯವಸ್ಥೆ ಜಡ್ಡುಗಟ್ಟಿ ಹೋಗಿ ಸಂವೇದನೆಯನ್ನೇ ಕಳೆದುಕೊಂಡಿದೆ.
5 ವರ್ಷದ ಅವಧಿಯ ರಾಜಕಾರಣಿಗಳ ಕ್ರಿಯಾತ್ಮಕ – ದುರಾತ್ಮಕ ಭ್ರಷ್ಟತೆಗೆ ಇದು ಅತ್ಯಂತ ಪೂರಕ ವಾತಾವರಣ ಕಲ್ಪಿಸಿದೆ……
ಹೆಸರಿಗೆ ಮಾತ್ರ ಕೃಷಿ, ನೀರಾವರಿ, ಗೃಹ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಹಣಕಾಸು, ಮಹಿಳೆಯರು, ಮಕ್ಕಳು, ಕಂದಾಯ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಇಲಾಖೆಗಳು ಇವೆ. ಆದರೆ ಕೆಲಸ ಮಾತ್ರ ಯಥಾಸ್ಥಿತಿ ಕಾಪಾಡುವುದು ಅಥವಾ ಅದನ್ನು ಇನ್ನಷ್ಟು ಅಧೋಗತಿಗೆ ಒಯ್ಯುವುದು….
ಅವರು ಆಧುನಿಕತೆಗೆ, ಹೊಸತನಕ್ಕೆ, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ತುಂಬಾ ಉದಾಸೀನ ಮನೋಭಾವ ಹೊಂದಿರುತ್ತಾರೆ. Update ಆಗಲು ಪ್ರಯತ್ನಿಸುವುದೇ ಇಲ್ಲ. ಅದಕ್ಕಾಗಿ ಶ್ರಮ ಪಡುವುದು ಇಲ್ಲ. ಕಾರಣ ಆರ್ಥಿಕ ಭದ್ರತೆ…..
ನಿಜಕ್ಕೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ದೇಶದ ಆಡಳಿತಶಾಹಿ ವ್ಯವಸ್ಥೆ ಅತ್ಯಂತ ಪ್ರಾಮಾಣಿಕ ಮತ್ತು ಕ್ರಿಯಾತ್ಮಕವಾಗಿರಬೇಕು. ಇಲ್ಲದಿದ್ದರೆ ಯಾವ ಯೋಜನೆಗಳು ಎಷ್ಟೇ ಉತ್ತಮವಾಗಿದ್ದರೂ ಪ್ರಯೋಜನವಾಗುವುದಿಲ್ಲ…..
ಆದ್ದರಿಂದ ಈ ವಿಷಯದಲ್ಲಿಯೇ ಅತ್ಯಂತ ಜರೂರಾಗಿ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮತ್ತು ಕ್ರಿಯಾತ್ಮಕವಾಗಿ ಪುನರ್ ರೂಪಿಸಿ ಅಧಿಕಾರಿಗಳನ್ನು ಹೆಚ್ಚು ಉತ್ತರದಾಯಿತ್ವಕ್ಕೆ ಒಳಪಡಿಸಬೇಕಿದೆ.
ಸರ್ಕಾರಿ ಕೆಲಸ ಅತ್ಯಂತ ಜವಾಬ್ದಾರಿಯುತ ಕೆಲಸವೇ ಹೊರತು ಓತ್ಲಾ ಹೊಡೆಯುವ ಆರಾಮ ಕೆಲಸ ಅಲ್ಲ ಎಂದು ಪ್ರತಿ ಉದ್ಯೋಗಿಗೂ ಮನನ ಮಾಡಿಸಬೇಕಿದೆ…..
ವೇತನ/ಹಣಕಾಸು ಆಯೋಗಗಳ ಶಿಫಾರಸ್ಸುಗಳಿಂದಾಗಿ ಅವರ ಸಂಬಳ ಮತ್ತು ಭತ್ಯೆಗಳು ಹೆಚ್ಚಾಗುತ್ತಿದೆ. ಅದಕ್ಕಾಗಿ ಸಂತೋಷಪಡುತ್ತಾ………
ಆದರೆ ಸರ್ಕಾರಿ ವ್ಯವಸ್ಥೆಯೊಂದಿಗಿನ ನನ್ನ ಅನುಭವದಲ್ಲಿ ಹೇಳುವುದಾದರೆ…….
ಶೇಕಡ 9೦% ಎಲ್ಲಾ ದರ್ಜೆಯ ಸರ್ಕಾರಿ ಅಧಿಕಾರಿಗಳಿಗೂ ಕೊಡುವ ಸಂಬಳಕ್ಕೆ ಅವರಿಂದ ನ್ಯಾಯ ಸಿಗುತ್ತಿಲ್ಲ. ಅಷ್ಟೇ ಅಲ್ಲ ಶೇಕಡ 5೦% ಜನರಿಂದ ಅನ್ಯಾಯವೂ ಆಗುತ್ತಿದೆ. ನಿಜವಾದ ಭ್ರಷ್ಟಾಚಾರ ಎಂಬುದು ಸಾಮಾನ್ಯ ಜನರಿಗೆ ಅರಿವಾಗುವುದೇ ಸರ್ಕಾರಿ ಅಧಿಕಾರಿಗಳಿಂದ. ಭ್ರಷ್ಟತೆಗೆ ಪರ್ಯಾಯ ಹೆಸರೇ ಸರ್ಕಾರಿ ಅಧಿಕಾರಿಗಳು ಎಂಬಂತಾಗಿದೆ.
ಕೆಲವೊಮ್ಮೆ ಲಂಚವನ್ನೂ ದೌರ್ಜನ್ಯದಿಂದ, ಅಮಾನವೀಯವಾಗಿ, ಅಸಹ್ಯವಾಗಿ, ಒತ್ತಡ ಪೂರ್ವಕವಾಗಿ, ಕಿತ್ತುಕೊಳ್ಳಲಾಗುತ್ತದೆ.
ಒಬ್ಬ ಕೆಳ ದರ್ಜೆಯ ಅಧಿಕಾರಿಯಿಂದ ಉನ್ನತ ಸ್ಥಾನದ ಅಧಿಕಾರಿಯವರೆಗೆ ಅವರವರ ಯೋಗ್ಯತೆಗೆ ಅನುಗುಣವಾಗಿ ಲಂಚ ಕೀಳುತ್ತಾರೆ. ಸರ್ಕಾರಿ ಸೇವಕ – ಸರ್ಕಾರದಿಂದ ಕೆಲಸಕ್ಕೆ ಸಂಬಳ ತೆಗೆದುಕೊಳ್ಳುವ ಕೂಲಿಯವ ಎಂಬುದನ್ನು ಮರೆತು ದರ್ಪ ಮೆರೆಯುತ್ತಾರೆ….
ಇದು ಇಡೀ ದೇಶದ ಅಧೋಗತಿಗೆ ಅತಿಮುಖ್ಯ ಕಾರಣವಾಗಿದೆ. ಬಡ್ತಿ – ಹೆಚ್ಚಿನ ಸಂಬಳ – ಭದ್ರತೆ ಎಲ್ಲವನ್ನೂ ಕಾಲಕಾಲಕ್ಕೆ ಮತ್ತು ಖಚಿತವಾಗಿ ನೀಡುವ ಆಡಳಿತಗಾರರು ಹಾಗೆಯೇ ಅವರ ಜವಾಬ್ದಾರಿ ಕರ್ತವ್ಯ ಪ್ರಾಮಾಣಿಕತೆಗಳ ಮೇಲೆಯೂ ತುಂಬಾ ಗಂಭೀರ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಅವರ ತಪ್ಪುಗಳಿಗೆ ಹೆಚ್ಚಿನ ಶಿಕ್ಷೆ ಮತ್ತು ಪಶ್ಚಾತ್ತಾಪ ಪಡುವಂತ ವ್ಯವಸ್ಥೆ ರೂಪಿಸಬೇಕಿದೆ…..
ಸರ್ಕಾರದ ಕೆಲಸವೆಂದರೆ ಅದು ಜೀವನ ಪರ್ಯಂತ ಆರಾಮ ಎಂಬ ಕಲ್ಪನೆ ಹೋಗಿ ಅದೊಂದು ಅತ್ಯಂತ ಪವಿತ್ರ – ಜವಾಬ್ದಾರಿಯುತ ಮತ್ತು ಕಷ್ಟದ ಕೆಲಸ ಎಂಬ ಭಾವನೆ ಮೂಡಿಸಬೇಕಿದೆ…..
ಭಾರತ ಇನ್ನೂ ಬಹಳ ಬಡ ದೇಶ. ಈಗಲೂ ಎಷ್ಟೋ ಜನರಿಗೆ ಎರಡು ಹೊತ್ತಿನ ಊಟ ಸಿಗುತ್ತಿಲ್ಲ. ಎಷ್ಟೋ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿವೆ. ಅಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಕೊಡುವ ಸಂಬಳ ಹೆಚ್ಚೇ ಇದೆ, ಇರಲಿ. ಆದರೆ ಅದರ ಸಂಪೂರ್ಣ ಉಪಯೋಗ ಸಮಾಜಕ್ಕೆ ಸಿಗುವಂತಾಗಲಿ,
ಆ ದಿನಗಳು ಬೇಗ ಬರಲಿ ಎಂದು ಆಶಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……