ಕುಂದಾಪುರ: ದಿನಾಂಕ: 29-04-2024(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರ ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಮಹಿಳೆ ಯೋರ್ವರು ನೇಣಿಗೆ ಶರಣಾದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಕುಂಭಾಶಿ ಗ್ರಾಮದ ನಿವಾಸಿ ಸಂದೀಪ (30) ಎಂಬವರ ತಂಗಿ ಸೌಜನ್ಯ ರವರನ್ನು ದಿನಾಂಕ 01/05/2021 ರಂದು ಹಳೆಕಟ್ಟು ಕೊರವಾಡಿಯ ನಿವಾಸಿಯಾದ ಬಸವ ರವರ ಮಗನಾದ ಜಗದೀಶ್ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 27/04/2024 ರಂದು ರಾತ್ರಿ 09:00 ಗಂಟೆಗೆ ಸಂದೀಪರವರ ಸೋದರ ಮಾವ ಉದಯರವರಿಗೆ ಸೌಜನ್ಯರವರು ಮೊಬೈಲ್ ಮೂಲಕ ಕರೆಮಾಡಿ ಗಂಡ ಜಗದೀಶ ಹಾಗೂ ಗಂಡನ ತಾಯಿ ಶ್ಯಾಮಲ, ಅಕ್ಕಂದಿರಾದ ಶೋಭಾ ಮತ್ತು ಶ್ಯಾಮಲ, ಮೈದಿನ ಪುಂಡಲೀಕರವರು ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಕೂಗಿ ಹೇಳಿದ್ದಾಳೆ ಹಾಗೂ ಅದಕ್ಕೆ ಸೋದರ ಮಾವನವರು ಬುದ್ದಿವಾದ ಹೇಳಿ ಒಳ್ಳೆಯ ರೀತಿ ಸಂಸಾರ ಮಾಡಿಕೊಂಡಿರುವಂತೆ ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.
ಬಳಿಕ ರಾತ್ರಿ 9:45 ಗಂಟೆಗೆ ಸೌಜನ್ಯ ಳು ಸಂದೀಪರವರ ಸೋದರ ಮಾವನವರಿಗೆ ಪುನಃ ಕರೆ ಮಾಡಿ ನನ್ನ ಗಂಡ ಜಗದೀಶರವರು ನನಗೆ ಹೊಡೆದು ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದ್ದು ಅದರಂತೆ ಸಂದೀಪರವರ ಸೋದರ ಮಾವ ನವರು ಜಗದೀಶನ ಮನೆಗೆ ಹೋಗಿದ್ದು, ಜಗದೀಶನು ಸೌಜನ್ಯರವರನ್ನು ದಿನಾಂಕ 28/04/2024 ರಂದು ತವರು ಮನೆಗೆ ಬಿಟ್ಟು ಹೋಗುವುದಾಗಿ ತಿಳಿಸಿದ್ದನು ಎಂದಿದ್ದಾರೆ. ದಿನಾಂಕ 28/04/2024 ರಂದು ರಾತ್ರಿ 12:34 ಗಂಟೆಗೆ ಸೌಜನ್ಯಳ ಗಂಡ ಜಗದೀಶನು ಸಂದೀಪರವರ ಮಾವ ಉದಯ ಅವರಿಗೆ ಕರೆಮಾಡಿ ಈ ಕೂಡಲೇ ಮನೆಗೆ ಬಾ ಎಂದು ತಿಳಿಸಿದ್ದು ಅದರಂತೆ ಸಂದೀಪರವರ ಸೋದರ ಮಾವ ಅವರು ಜಗದೀಶನ ಮನೆಗೆ ಹೋಗುವಾಗ ಸೌಜನ್ಯಳ ಗಂಡನ ಮನೆಯವರು ಸ್ವಂತ ಕಾರಿನಲ್ಲಿ ಮನೆಯಿಂದ ಹೊರಡುತ್ತಿದ್ದು ನಂತರ ಸಂದೀಪರವರ ಸೋದರ ಮಾವ ನವರು ಆ ಕಾರನ್ನು ಹಿಂಬಾಲಿಸಿಕೊಂಡು ಬಂದು ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಬಂದಿದ್ದು ಅಲ್ಲಿ ಸಂದೀಪರವರ ಸೋದರ ಮಾವ ನವರು ನೋಡುವಾಗ ಸೌಜನ್ಯಳು ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ತಿಳಿಯಿತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂದೀಪರವರ ತಂಗಿ ಮದುವೆಯಾಗಿ 3 ವರ್ಷ ಆಗಿದ್ದು ಗಂಡನ ಮನೆಯ ಆರೋಪಿತರೆಲ್ಲರೂ ಸೌಜನ್ಯಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಕಾರಣದಿಂದಲೇ ಸೌಜನ್ಯಳು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27/04/2024 ರಂದು ರಾತ್ರಿ 9:30 ಗಂಟೆಯ ನಂತರ ಗಂಡನ ಮನೆಯ ಒಳಗಡೆ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸೌಜನ್ಯಳ ಅಣ್ಣ ಸಂದೀಪ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 323, 498(ಎ), 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.