Spread the love

ಅಪ್ಪ ಹೇಳುತ್ತಿದ್ದರು,
ಬೇಡುವ ಕೈ ನಿನ್ನದಾಗುವುದು ಬೇಡ,
ಕೊಡುವ ಕೈ ನಿನ್ನದಾಗಲಿ…..

ಅಮ್ಮ ಹೇಳುತ್ತಿದ್ದರು,
ಅವಮಾನ ಸಹಿಸಬೇಡ,
ಸ್ವಾಭಿಮಾನದ ಬದುಕು ನಿನ್ನದಾಗಲಿ,….

ಗುರುಗಳು ಹೇಳುತ್ತಿದ್ದರು,
ದೇಶದ್ರೋಹಿ ಸ್ವಾರ್ಥಿ ಆಗಬೇಡ,
ದೇಶಪ್ರೇಮಿ ತ್ಯಾಗ ಜೀವಿ ನೀನಾಗು……

ಮಾರ್ಗದರ್ಶಿಗಳು – ಹಿತೈಷಿಗಳು ಹೇಳುತ್ತಿದ್ದರು,
ದ್ವೇಷ ಭಾವನೆ ತೊಡೆದು ಹಾಕು,
ಪ್ರೀತಿಯ ಭಾಷೆ ನಿನ್ನದಾಗಲಿ…..

ನೀತಿ ಕಥೆಗಳಲ್ಲಿ ಓದುತ್ತಿದ್ದೆ,
ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ,
ಅನೈತಿಕ, ಅಸಹ್ಯಕ್ಕೆ ಸಮಾನ,
ದುಡಿದ ಶ್ರಮದ ಫಲ ಮಾತ್ರ ನಿನ್ನದಾಗಲಿ……

ಹಿರಿಯರು ಹೇಳುತ್ತಿದ್ದರು,
ಮೋಸ ವಂಚನೆ ಕಳ್ಳತನ ನಿನ್ನ ಬಳಿ ಸುಳಿಯದಿರಲಿ,
ಸ್ನೇಹ ವಿಶ್ವಾಸ ತಾಳ್ಮೆ ನಿನ್ನಿಂದ ಅಳಿಯದಿರಲಿ……

ಪುಸ್ತಕಗಳಲ್ಲಿ ಬರೆದಿದ್ದರು,
ನಿನ್ನಲ್ಲಿರುವ ಹಣ ಆಸ್ತಿ ಯಾವಾಗ ಬೇಕಾದರೂ ನಾಶವಾಗಬಹುದು.
ಆದರೆ, ನೀನು ಕಲಿತಿರುವ ವಿದ್ಯೆ ನಿನ್ನನ್ನು ಕೊನೆಯವರೆಗೂ ಕಾಪಾಡುತ್ತದೆ……

ಈಗಲೂ ಇದು ಪ್ರಸ್ತುತವೇ ?
ನಮ್ಮ ಮಕ್ಕಳಿಗೆ ಇದನ್ನು ಈಗಲೂ ಕಲಿಸುತ್ತಿದ್ದೇವೆಯೇ ?
ಇದು ಸಾರ್ವಕಾಲಿಕ ಸತ್ಯವೇ ?
ಬದಲಾವಣೆ ಅವಶ್ಯವೇ ?
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಅವರಿಗೆ ಯಶಸ್ಸು ಸಿಗುವುದೆ ? ಅಥವಾ ವಾಸ್ತವದಲ್ಲಿ ಗೊಂದಲಕ್ಕೆ ಒಳಗಾಗುವರೆ ?,……

ಒಳ್ಳೆಯ ಮನಸ್ಸಿನವರಿಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ನಿಜವೇ?…..,

ನಾವು ಏನು ದಾನ ಮಾಡುತ್ತೇವೆಯೋ ಅದರ ಎರಡು ಪಟ್ಟು ನಮಗೆ ವಾಪಸ್ಸು ಬರುತ್ತದೆ,
ಸತ್ಯವೆ ?…..,

ಒಳ್ಳೆಯವರಿಗೆ ಒಳ್ಳೆಯದು ಕೆಟ್ಟವರಿಗೆ ಕೆಟ್ಟದ್ದು ಆಗುತ್ತದೆ. ವಾಸ್ತವವೇ ?……,

ನಾವು ಬದಲಾದರೆ ಜಗತ್ತೇ ಬದಲಾಗುತ್ತದೆ, ಇದು ಪ್ರಾಯೋಗಿಕವೇ ?…..,

ಇಂದಿನ ಎಲ್ಲಾ ಕಷ್ಟ ಸುಖಗಳಿಗೂ ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣ ನಂಬಬಹುದೇ ?…..,

ಗಂಡು ಹೆಣ್ಣಿನ ಸಂಬಂಧ ಪೂರ್ವ ನಿಯೋಜಿತ ಋಣಾನುಬಂಧ, ಸರಿಯೇ ?…..,

ಗಂಡ ಹೆಂಡತಿ ಸಂಬಂಧ ಏಳು ಜನುಮಗಳ ಅನುಭಂದ, ಹೌದೇ ?…..,

ಅನ್ನದ ಪ್ರತಿ ಅಗುಳಿನ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ, ಗೊತ್ತೇ ?…..,

ಅಪಘಾತ, ಆಕಸ್ಮಿಕ, ಅನಾರೋಗ್ಯದ ಸಾವು ನಮ್ಮ ಹಣೆಬರಹ, ಒಪ್ಪೋಣವೇ ?……,

ಬದುಕಿನ ಎಲ್ಲಾ ಘಟನೆಗಳೂ ಪೂರ್ವ ನಿರ್ಧಾರಿತ, ಪ್ರಶ್ನಿಸಬಾರದೇ ?…….,

ನಮ್ಮನ್ನು ಕಾಡುವ ಈ ಮನಸ್ಥಿತಿಗೆ ಸಮಾಧಾನಕರ ಉತ್ತರಬೇಕಿದೆ……………

ಹೊಟ್ಟೆ ತುಂಬಿದ ಶ್ರೀಮಂತರು,
ವೇದಾಧ್ಯಯನ ಪಂಡಿತರು,
ಬೈಬಲ್ ಪ್ರಚಾರಕರು,
ಖುರಾನ್ ಆರಾಧಕರು,
ವಿಭೂತಿ ಮಠಾಧೀಶರು,
ಪುನರ್ಜನ್ಮ ಸೃಷ್ಟಿಕರ್ತರು,
ಜ್ಯೋತಿಷಿಗಳು,
ವಿಚಾರವಾದಿಗಳು,
ವಿಜ್ಞಾನಿಗಳ ಉತ್ತರಗಳು ನನಗೆ ಬೇಡ,…..,

ಬೀದಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಉತ್ತರ ಬೇಕಿದೆ……,

ಹುತಾತ್ಮ ಯೋಧನ ಹೆಂಡತಿಯಿಂದ ಉತ್ತರ ಬೇಕಿದೆ,……,

ಆತ್ಮಹತ್ಯೆ ಮಾಡಿಕೊಂಡ ರೈತನ ಮಗನಿಂದ ಉತ್ತರ ಬೇಕಿದೆ,…..,

ಬಸ್ ನಿಲ್ದಾಣದಲ್ಲಿ ದಿನ ಕಳೆಯುವ ಅನಾಥನಿಂದ ಉತ್ತರ ಬೇಕಿದೆ,……,

ಗಂಡನಿಂದಲೇ ಏಡ್ಸ್ ಬಂದು ಈಗ ಆತನಿಂದಲೇ ಪರಿತ್ಯಕ್ತಳಾದ ಮಹಿಳೆಯಿಂದ ಉತ್ತರ ಬೇಕಿದೆ,…..,

ಮಾನವೀಯತೆಯಿಂದ ವಿಧವೆಗೆ ಬದುಕು ನೀಡಿ ಈಗ ವರದಕ್ಷಿಣೆ ಆರೋಪದಲ್ಲಿ ಜೈಲಿನಲ್ಲಿ ದಿನದೂಡುತ್ತಿರುವ ಯುವಕನಿಂದ ಉತ್ತರ ಬೇಕಿದೆ,….,

ತನ್ನದೆಲ್ಲವನ್ನೂ ಗಲಭೆಯಲ್ಲಿ ಕಳೆದುಕೊಂಡ ವ್ಯಕ್ತಿಯ ಉತ್ತರ ಬೇಕಿದೆ,…..,

ತಮ್ಮ ಸರ್ವಸ್ವವನ್ನೂ ತಮ್ಮ ನಾಲ್ಕು ಮಕ್ಕಳಿಗಾಗಿ ತ್ಯಾಗಮಾಡಿ ಈಗ ಅವರಿಂದ ತಿರಸ್ಕೃತರಾಗಿ ವೃಧ್ಧಾಶ್ರಮದಲ್ಲಿ ಬದುಕುತ್ತಿರುವ ತಂದೆಯಿಂದ ಉತ್ತರ ಬೇಕಿದೆ,….,

ಪ್ರಾಮಾಣಿಕರಾಗಿದ್ದುದರಿಂದಲೇ ತನ್ನ ಸಹಚರರಿಂದ ಕಿರುಕುಳಕ್ಕೊಳಗಾಗಿ ಸೇವೆಯಿಂದ ವಜಾಗೊಂಡ ಸರ್ಕಾರಿ ಅಧಿಕಾರಿಯಿಂದ ಉತ್ತರ ಬೇಕಿದೆ,……,

ಅವರ ಉತ್ತರಗಳು ಆಶಾದಾಯಕವಾಗಿದ್ದರೆ ಇವನ್ನೆಲ್ಲಾ ಮತ್ತೊಮ್ಮೆ ವಾಸ್ತವದ ವಿಮರ್ಶೆಗೊಳಪಡಿಸಬಹುದು……,

ಇಲ್ಲದಿದ್ದರೆ ಇನ್ನೆಷ್ಟು ದಿನ ಈ ಭ್ರಮೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರಿಯುವುದು……,

ಅಥವಾ,

ಮೇಲೆ ಹೇಳಿದ ಎಲ್ಲವೂ ಸತ್ಯ. ನಿಮಗೆ ತಿಳಿವಳಿಕೆಯ ಕೊರತೆಯಿದೆ ಎನ್ನುವುದಾದರೆ ನಿಮಗೆ ಧನ್ಯವಾದಗಳು….

ನಿಮ್ಮ ಅದೃಷ್ಟ ನಮಗಿಲ್ಲ….

ಒಳ್ಳೆಯದೆಲ್ಲವೂ ಒಳ್ಳೆಯದಾಗಿ ಇನ್ನೂ ಉಳಿದಿದೆಯೇ ?….,

ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಮಕ್ಕಳಿಗೆ ನಾವು ನೈತಿಕ ಶಿಕ್ಷಣದ ಪಾಠಗಳಲ್ಲಿ ಏನು ಹೇಳಿಕೊಡಬೇಕು ?…..,

ಹಳೆಯದು ಮತ್ತು ಹೊಸದರ ಸಮ್ಮಿಲನ ಸಾಧಿಸುವುದು ಹೇಗೆ ?,…….,

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಲಿ……,

ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಇದು ಅತ್ಯವಶ್ಯ………………,

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……..

error: No Copying!