Spread the love

ಆಕೆ ಉಪಯೋಗಿಸುವ ಮೊಬೈಲ್‌ ಬೆಲೆ 30000 ಕ್ಕೂ ಹೆಚ್ಚು,

ಆಕೆ ಕೈಯಲ್ಲಿ ಹಿಡಿದು ಓಡಾಡುವ ವ್ಯಾನಿಟಿ ಬ್ಯಾಗ್ ಬೆಲೆ ಸುಮಾರು 5೦00 ದಷ್ಟು,

ಆಕೆಯ ಬ್ಯೂಟಿ ಪಾರ್ಲರ್ ಖರ್ಚು ತಿಂಗಳಿಗೆ 5000 ವಾಗುತ್ತದೆ,

ಆಕೆ ಓಡಾಡುವ ಕಾರಿನ ಬೆಲೆ 8/10 ಲಕ್ಷಗಳು,

ಆಕೆಯ ಗಂಡ ಒಬ್ಬ ಬಿಸಿನೆಸ್ ಮನ್, ಆತ ಓಡಾಡುವುದು 50 ಲಕ್ಷದ ಕಾರಿನಲ್ಲಿ,

ಪ್ರತಿಷ್ಟಿತ ಕ್ಲಬ್ ನ ಸದಸ್ಯನಾದ ಆತನ ತಿಂಗಳ ಸಾಮಾನ್ಯ ಖರ್ಚಿನ ಸರಾಸರಿ ಕ್ಲಬ್ ಬಿಲ್ 30000,

ಆತನ ಒಬ್ಬನೇ ಮಗನ ಶಾಲೆಯ Fees ವಾರ್ಷಿಕ 2 ಲಕ್ಷಕ್ಕೂ ಹೆಚ್ಚು,

ಅವರ ಮನೆಯ ನಾಯಿ ಮತ್ತು ಸೆಕ್ಯುರಿಟಿಗಾಗಿ ತಿಂಗಳಿಗೆ 20000 ಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ,

ಆತನ ವ್ಯವಾಹಾರದ ವಾರ್ಷಿಕ ಆದಾಯ ಅಧಿಕೃತವಾಗಿಯೇ 3 ಕೋಟಿ,

ಇದೆಲ್ಲಾ ಅವರ ಕುಟುಂಬದ ಶ್ರೀಮಂತಿಕೆಯ ಕೆಲವು ಮೇಲ್ನೋಟದ ಲಕ್ಷಣಗಳು…….

ಇತ್ತ ತಳ್ಳುಗಾಡಿಯಲ್ಲಿ ಒಬ್ಬ ವ್ಯಕ್ತಿ ದಿನವೂ ಪ್ರೆಶ್ ತರಕಾರಿ ಮಾರುತ್ತಾ ಅವರ ಮನೆಯ ಬಳಿ ಬರುತ್ತಾನೆ. ಅವರು ಎಷ್ಟೇ ಶ್ರೀಮಂತರಾದರೂ ಮೊದಲಿನಿಂದಲೂ ಇವನ ಬಳಿಯೇ ತರಕಾರಿ ಕೊಳ್ಳುವ ಅಭ್ಯಾಸ ರೂಡಿಸಿಕೊಂಡಿದ್ದಾರೆ……

ಬೃಹತ್‌ ಬಂಗಲೆಯ ಮೊದಲನೇ ಮಹಡಿಯಲ್ಲಿ ನಿಲ್ಲುವ ಆಕೆ ತರಕಾರಿ ತರಲು ಕೆಳಕ್ಕೆ ಅವರ ಮನೆಯ ಕೆಲಸದಾಕೆಯನ್ನು ಕಳಿಸುತ್ತಾಳೆ……

ಆಕೆ ಮಾತ್ರ ಮಹಡಿಯ ಮೇಲಿನಿಂದಲೆ ಕೇಳುತ್ತಾಳೆ…. “ನಿಂಬೆ ಹಣ್ಣು ಎಷ್ಟು”

ಆತ ” ಹತ್ತು ರೂಪಾಯಿಗೆ ಎರಡು “

ಆಕೆ “ಅಯ್ಯೋ ಅಷ್ಟೊಂದ…. ನಮಗೆ ಹತ್ತು ರೂಪಾಯಿಗೆ 3 ಕೊಡು. ಆಮೇಲೆ ಪಾಲಾಕ್ ಸೊಪ್ಪು ಎಷ್ಟು”

ಆತ ” ಅಮ್ಮ ಕಟ್ಟು 25 ರೂಪಾಯಿ “

ಆಕೆ “ಅಬ್ಬಬ್ಬಾ ಯಾಕಪ್ಪಾ ಅಷ್ಟೊಂದು ರೇಟ್ ಹೇಳ್ತೀಯ… 20 ರೂಪಾಯಿ ಮಾಡ್ಕೋ, ಕೊತ್ತಂಬರಿ ಎಷ್ಟು “

ಆತ ” ಅಮ್ಮ ಅದು ಕಟ್ಟು ಹತ್ತು ರೂಪಾಯಿ “

ಆಕೆ ” ಓಹೋ ತುಂಬಾ ಜಾಸ್ತಿಯಾಯ್ತು,
ನಾವು ಬದುಕೋದು ಹೇಗೆ.. ಈರಳ್ಳಿ, ಬದನೆಕಾಯಿ, ಆಲೂಗಡ್ಡೆ ಎಲ್ಲಾ ರೇಟ್ ಕಡಿಮೆ ಮಾಡ್ಕೊಂಡು ಒಂದೊಂದು ಕೆಜಿ ಕೊಡು. ನಾವು ಮಾಮೂಲಿ ಗಿರಾಕಿ ಅಲ್ವ. ನಾಳೆಯಿಂದ ತಗೊಬೇಕೊ ಬೇಡ್ವೋ ಹೇಳು”

ಆತ ” ಅಮ್ಮ ನಾನು ನಿಮಗೆ ಸುಳ್ಳು ಹೇಳೋದಿಲ್ಲ. ಮಾರ್ಕೆಟ್ಟಿನಲ್ಲಿ ಇರೋದೆ ಅಷ್ಟು. ನಮಗೂ ಏನೂ ಗಿಟ್ಟೋದಿಲ್ಲ. ಹೆಚ್ಚು ಕಡಿಮೆ ಮಾಡಿ ಹಾಕ್ಕೊಡ್ತಿನಿ.”

ಬೇಕಾದ ತರಕಾರಿ ಎಲ್ಲಾ ತೆಗೆದುಕೊಂಡ ಕೆಲಸದಾಕೆ, “ಅಮ್ಮಾ ಒಟ್ಟು 160 ಆಯ್ತುಂತೆ ” ಎಂದು ಮೇಲಕ್ಕೆ ತಿರುಗಿ ಕೂಗುತ್ತಾಳೆ…..

ಆಕೆ ” ತಗೋ 150 “ಎಂದು ಅದರಲ್ಲೂ ಚೌಕಾಸಿ ಮಾಡಿ ಮೇಲಿನಿಂದ 100 + 50 ರ ಎರಡು ನೋಟು ಮಡಿಚಿ ಎಸೆಯುತ್ತಾಳೆ….

ಅವರ ಬಂಗಲೆಯ ಮುಂದಿನ ಸಣ್ಣ ಕೊಠಡಿಯಲ್ಲಿ ವಾಸಿಸುವ ನಾನು ಕಿಟಕಿಯಲ್ಲಿ ಬೆಳಗ್ಗೆ ಹಲ್ಲುಜ್ಜುತ್ತಾ ಈ ದೃಶ್ಯ ನೋಡುತ್ತಿರುತ್ತೇನೆ……

ಇದನ್ನು ಹೇಗೆಂದು ಅರ್ಥೈಸುವುದು ?,,,..

ಭಾರತೀಯರ ಸಹಜ ಗುಣವೇ ?,

ತಿನ್ನುವ ಆಹಾರದ ಬಗ್ಗೆ ಅಸಡ್ಡೆಯೇ ?,

ಬೆಳೆಯುವ ರೈತನ ಬಗ್ಗೆ ತಿರಸ್ಕಾರವೇ ?,

ಮಾರುವ ವ್ಯಕ್ತಿಯ ಯೋಗ್ಯತೆಯ ನಿರ್ಧಾರವೇ ?,

ವ್ಯಾವಹಾರಿಕ ಕುಶಲತೆಯೇ ?,

ಹಣ ಉಳಿಸುವ ಜಾಣತನವೇ ?,

ಅಥವಾ

ಮಾನಸಿಕ ಅಸ್ವಸ್ಥತೆಯೇ ?,

ಬೆಲೆ ಕೊಡಬೇಕಾಗಿರುವುದು – ಚೌಕಾಸಿ ಮಾಡಬೇಕಾಗಿರುವುದು ಆಡಂಬರದ ಒಣ ಪ್ರದರ್ಶನದ ವಸ್ತುಗಳಿಗೋ ?,

ಅಥವಾ,

ತಿನ್ನುವ ಆಹಾರಕ್ಕೋ ?,

ಗೊಂದಲದಲ್ಲಿದ್ದೇನೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068…….

error: No Copying!