Spread the love

75 ವರ್ಷಗಳ ನಂತರ, ನೀವು ಕರಡು ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸಂವಿಧಾನದ ಅಧಿನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿರುವ ಭಾರತದ ಸದ್ಯದ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾತಾವರಣ ಒಳಗೊಂಡ ಒಟ್ಟಾರೆ ಪ್ರಗತಿ ಮತ್ತು ವಿಫಲತೆಯ ಬಗ್ಗೆ ನಿಮಗೊಂದು ಬಹಿರಂಗ ಪತ್ರ……..

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ, ಭಾರತದ ಭೂಪ್ರದೇಶ ಮತ್ತು ಇಲ್ಲಿನ ಜನಜೀವನ, ಆಚಾರ ವಿಚಾರ, ನಂಬಿಕೆಗಳು, ಸಂಪ್ರದಾಯ ಎಲ್ಲವೂ ಒಂದು ಹಿಡಿತಕ್ಕೆ ಸಿಗುವಷ್ಟು ಸುಲಭವಿಲ್ಲ. ಇಲ್ಲಿನ ವೈವಿಧ್ಯತೆ ಇಡೀ ವಿಶ್ವದ ವೈವಿಧ್ಯತೆಗೆ ಹೆಚ್ಚು ಕಡಿಮೆ ಸಮ ಪ್ರಮಾಣದಲ್ಲಿದೆ ಎಂದೇ ಹೇಳಬಹುದು. ಅದು ನಮಗಿಂತ ನಿಮಗೇ ಹೆಚ್ಚು ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಈಗಂತೂ ಜನಸಂಖ್ಯೆಯಲ್ಲಿ ಸಹ ಭಾರತ ವಿಶ್ವದ ನಂಬರ್ ಒನ್ ದೇಶವಾಗಿದೆ…..

ಬಾಬಾ ಸಾಹೇಬ್ ಜಿ,
ವಿಶ್ವದ ಅತಿ ದೊಡ್ಡ ಸಂವಿಧಾನ ಹೊಂದಿರುವ, ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಒಂದು ಪುಸ್ತಕದ ನೀತಿ ನಿಯಮಗಳ ಮೇಲೆ ಚಲಿಸುತ್ತಿರುವುದೇ ಒಂದು ಅದ್ಭುತ ಮತ್ತು ಆಶ್ಚರ್ಯ. ಶತಶತಮಾನಗಳಷ್ಟು ದೀರ್ಘಕಾಲದಿಂದ ಬೆಳೆದು ಬಂದಿರುವ ಇಲ್ಲಿಯ ಸೋಶಿಯಲ್ ಸ್ಟ್ರಕ್ಚರ್ ಎಷ್ಟೆಲ್ಲಾ ಅಸಮಾನತೆಯಿಂದ, ಧಾರ್ಮಿಕ ನಂಬಿಕೆಗಳಿಂದ, ಸಾಮಾಜಿಕ ಮೌಲ್ಯಗಳಿಂದ,
ಸೌಹಾರ್ದತೆಯ ಜೊತೆ ಸಂಘರ್ಷದಿಂದ ಮುನ್ನಡೆಯುತ್ತಿತ್ತು ಎಂದರೆ ಅದನ್ನು ನಿಮಗೆ ನಮ್ಮ ಪದಗಳಲ್ಲಿ ವಿವರಿಸುವುದು ಬಹಳ ಕಷ್ಟ ಮತ್ತು ಸಂಕೋಚ. ಅಂತಹ ದೈತ್ಯ ಪ್ರತಿಭೆ ನಿಮ್ಮದು…..

ಆದರೂ ಅದಕ್ಕೆ ನಿಮ್ಮೆಲ್ಲಾ ಅಧ್ಯಯನ, ಚಿಂತನೆ, ಶ್ರಮ ಎಲ್ಲವನ್ನೂ ಧಾರೆಯೆರೆದು ರಚಿಸಿರುವ ಸಂವಿಧಾನದ ಯಶಸ್ಸು – ಅಪಯಶಸ್ಸುಗಳ ಬಗ್ಗೆ ಒಂದು ಸಣ್ಣ ವಿವರಣೆ ಒಬ್ಬ ಶ್ರೀ ಸಾಮಾನ್ಯರಿಂದ…..

ಅಂಬೇಡ್ಕರ್ ಜಿ, ಸಾಮಾಜಿಕವಾಗಿ, ನೀವು ನಿಧನ ಹೊಂದಿದ 1956 ರ ನಂತರ ನಿಮ್ಮ ರಕ್ತ ಸಂಬಂಧದ ಬಂಧುಗಳಾದ ಅಸ್ಪೃಶ್ಯ ಜನಾಂಗ ಈಗ ಬಹುತೇಕ ಸಂಪೂರ್ಣ ಬದಲಾವಣೆಯ ಹಂತದಲ್ಲಿದೆ. ಅಸ್ಪೃಶ್ಯತೆ ಒಂದು ನಿಷೇಧಿತ ಆಚರಣೆಯಾಗಿದೆ. ಜನ ಬಹಿರಂಗವಾಗಿ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟುವುದಿಲ್ಲ ಎನ್ನಲು ಹಾಗೆಯೇ ಜಾತಿಯ ಹೆಸರಿನಲ್ಲಿ ನಿಂದನೆ ಮಾಡಲು ಭಯಪಡುವ ವಾತಾವರಣವಿದೆ. ಆದರೂ ಅಲ್ಲಲ್ಲಿ ನಿಂದನೆಗಳು, ಜಾತಿಯ ಕಾರಣಕ್ಕೆ ಕೊಲೆಗಳು, ಅತ್ಯಾಚಾರಗಳು, ಹಲ್ಲೆಗಳು ನಡೆಯುತ್ತಿರುವುದು ಸಹ ಮುಂದುವರಿದಿದೆ…..

ನೀವು ಅಂದು ತಾತ್ಕಾಲಿಕವಾಗಿ ನೀಡಿದ ಮೀಸಲಾತಿಯ ಪರಿಣಾಮವಾಗಿ ದೇಶದ ಎಲ್ಲಾ ಕಡೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಾಕಷ್ಟು ಅಸ್ಪ್ರಶ್ಯ ಮತ್ತು ಹಿಂದುಳಿದ ಜನ ಉದ್ಯೋಗಿಗಳಾಗಿದ್ದಾರೆ. ಅವರ ಮಕ್ಕಳನ್ನು ಚೆನ್ನಾಗಿ ಓದಿಸಿ ಅವರೂ ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಆಗಿದೆ…..

ರಾಜಕೀಯವಾಗಿ ದಲಿತರು ಮುಖ್ಯಮಂತ್ರಿಗಳು, ಉಪ ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು ಸಹ ಆಗಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಮಾಧ್ಯಮ ರಂಗ, ಕ್ರೀಡೆ, ವಿಜ್ಞಾನ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹಾಗೆಂದು ಜಾತಿ ವ್ಯವಸ್ಥೆ, ಮೇಲು-ಕೀಳಿನ ನಿಂದನೆ ಸಂಪೂರ್ಣ ಮಾಯವಾಗಿದೆಯೇ ಎಂದರೆ ಅದು ಸಂಪೂರ್ಣ ಸುಳ್ಳು. ಜನರ ಮನಸ್ಸಿನಲ್ಲಿ ಈಗಲೂ ಜಾತಿಯ ಶ್ರೇಷ್ಠತೆಯ ವ್ಯಸನ ಒಂದು ರೋಗವಾಗಿ ಉಲ್ಬಣವಾಗಿದೆ, ಇಡೀ ವ್ಯವಸ್ಥೆ ಜಾತಿಯ ಆಧಾರದ ಮೇಲೆಯೇ ನಡೆಯುತ್ತಿದೆ……

ಆದ್ದರಿಂದ ನಿಮ್ಮ ಸಮ ಸಮಾಜದ ಆಶಯ ಶೇಕಡಾ 50% ರಷ್ಟು ಮಾತ್ರ ಯಶಸ್ವಿಯಾಗಿದೆ. ಉಳಿದ ಶೇಕಡಾ 50% ರಷ್ಟು ವಿಫಲವಾಗಿರುವುದು ಮಾತ್ರವಲ್ಲದೆ ಅದರ ವಿರುದ್ಧ ದಿಕ್ಕಿನಲ್ಲೂ ನಡೆಯುತ್ತಿದೆ. ಈ ವಿಷಯಕ್ಕಾಗಿ ಖಂಡಿತ ವಿಷಾದ ವ್ಯಕ್ತಪಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ……

ರಾಜಕೀಯವಾಗಿ ಒಂದಷ್ಟು ಉತ್ತಮ ಪ್ರಯೋಗಗಳು, ಚಳವಳಿಗಳು, ಬಂಡಾಯಗಳು, ನಾಯಕತ್ವಗಳು, ರೂಪಗೊಂಡಿರುವುದು ನಿಜವೇ ಆದರೂ ಅದಕ್ಕೆ ಅಸ್ಪ್ರಶ್ಯ ಮತ್ತು ಹಿಂದುಳಿದ ಜಾತಿಗಳ ಜನಸಂಖ್ಯೆ ಕಾರಣವೇ ಹೊರತು ಮೇಲ್ಜಾತಿಯವರ ಉದಾರತೆ ಅಥವಾ ವಿಶಾಲ ಮನೋಭಾವ ಅಥವಾ ಹೃದಯವಂತಿಕೆ ಕಾರಣವಲ್ಲ. ಹಾಗೆಯೇ ದಲಿತ ಹೋರಾಟಗಳು ಸಾಕಷ್ಟು ಪ್ರಭಾವಶಾಲಿಯಾಗಿ ಇಡೀ ದೇಶದಲ್ಲಿ ವ್ಯಾಪಿಸಿದೆ ಮತ್ತು ಅದು ಬಲಿಷ್ಠವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಪರಿಸ್ಥಿತಿ ಇದೆ……

ಎಲ್ಲಾ ಶೋಷಣೆಗಳ ವಿರುದ್ಧವು ಪರಿಹಾರ ಸಿಗದಿದ್ದರೂ ಪ್ರತಿಭಟನೆಯ ಧ್ವನಿಗಳು ಮಾತ್ರ ಸದಾ ಮೊಳಗುತ್ತಿರುತ್ತದೆ. ಅದರಿಂದಾಗಿಯೇ ಶೋಷಿಸುವ ವರ್ಗದವರು ಬೇರೆ ಬೇರೆ ಮಾರ್ಗಗಳ ಮೊರೆ ಹೋಗುತ್ತಿರುವುದು ವಾಸ್ತವ ಸಂಗತಿಯಾಗಿದೆ……

ಶೈಕ್ಷಣಿಕವಾಗಿ, ಬಹುತೇಕ ಸಮಾಜದ ಎಲ್ಲ ವರ್ಗಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸುತ್ತಾ ಅಂಕಗಳ ದೃಷ್ಟಿಯಿಂದ ಸಮ ಸಮಾಜ ನಿರ್ಮಾಣವಾಗಿದೆ. ಎಲ್ಲರೂ ಸಹ ಪ್ರತಿಭಾವಂತರೆ ಆಗುತ್ತಿದ್ದಾರೆ. ಕಳೆದ 20/25 ವರ್ಷಗಳಲ್ಲಿ ಶೈಕ್ಷಣಿಕ ಅಂಕಗಳ ವಿಚಾರವಾಗಿ ಎಲ್ಲಾ ಜಾತಿ – ಸಮುದಾಯದಗಳ ನಡುವೆ ಅಂತಹ ದೊಡ್ಡ ಅಂತರವೇನು ಇಲ್ಲ…..

ಆದರೆ ವ್ಯಾಪಾರ, ವ್ಯವಹಾರ, ಉದ್ಯಮಗಳಲ್ಲಿ ಈ 75 ವರ್ಷಗಳ ನಂತರವೂ ದಲಿತ – ಹಿಂದುಳಿದ ವರ್ಗಗಳು ನಿರೀಕ್ಷಿಸಿದಷ್ಟು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಬಹುಶಃ ಅದಕ್ಕಾಗಿ ಮುಂದಿನ 50 ವರ್ಷಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಸಾಧ್ಯವಾಗಬಹುದಾದ ಸಾಧ್ಯತೆ ಇದೆ……

ಬಾಬಾ ಸಾಹೇಬ್ ಜಿ,
ಈಗ ಕಳೆದ 30/35 ವರ್ಷಗಳಲ್ಲಿ ಜಾಗತೀಕರಣ ಅಂದರೆ, ಮುಕ್ತ ಮಾರುಕಟ್ಟೆ ವ್ಯವಸ್ಥೆ ಈ ದೇಶವನ್ನು ಪ್ರವೇಶಿಸಿದೆ. ಅದರಿಂದಾಗಿ ನೀವು ನಿರೀಕ್ಷಿಸದ ಒಂದಷ್ಟು ಬೆಳವಣಿಗೆಗಳು ಆಗಿರುವುದು ನಿಜ. ಅದರ ಲಾಭವನ್ನು ಭಾರತದ ಮಹಿಳೆಯರು ಮತ್ತು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಪಡೆಯುತ್ತಿರುವುದು ಸಹ ವಾಸ್ತವಿಕವಾಗಿದೆ……

ಇನ್ನು ಕಾನೂನು, ಸುವ್ಯವಸ್ಥೆ, ಅಪರಾಧಗಳು, ಅದಕ್ಕೆ ಇರುವ ಕಠಿಣ ನಿಯಮಗಳು ಈ ವಿಷಯಕ್ಕೆ ಬಂದರೆ ಖಂಡಿತವಾಗಿಯೂ ನಿಮ್ಮ ಆಶಯಕ್ಕೆ ವಿರುದ್ಧವಾಗಿಯೇ ಎಲ್ಲವೂ ಚಲಿಸುತ್ತಿದೆ. ಅಂದರೆ ಕಾನೂನುಗಳನ್ನು ಉಪಯೋಗಿಸಿಕೊಂಡೇ ಅಪರಾಧಗಳನ್ನು ಮಾಡುತ್ತಾ, ಕಾನೂನಿನ ಬಲೆಯಿಂದ ನುಸುಳಿಕೊಂಡು, ಮತ್ತೆ ಅಪರಾಧಗಳನ್ನು ಮಾಡುತ್ತಾ, ಕಾನೂನು ಅಪರಾಧಗಳಿಗೆ ವರದಾನ ಎಂಬ ಪರಿಸ್ಥಿತಿ ಉದ್ಭವವಾಗಿದೆ‌. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ವಂಚನೆ ಯಾವುದೇ ವಿಷಯವಿರಲಿ, ಶಿಕ್ಷೆಯಾಗುವ ಪ್ರಮಾಣ ತುಂಬಾ ಕಡಿಮೆ ಇದೆ. ಬಹುತೇಕ ಅಮಾಯಕರು, ಅಸಹಾಯಕರು, ದುರ್ಬಲರು, ಹಣವಿಲ್ಲದವರು, ಹುಟ್ಟಾ ಕ್ರಿಮಿನಲ್ ಗಳ ವಿಷಯದಲ್ಲಿ ಮಾತ್ರ ಶಿಕ್ಷೆಯಾಗುತ್ತದೆ. ಉಳಿದ ಬಹುತೇಕ ಪ್ರಭಾವಶಾಲಿಗಳು ಈ ಕಾನೂನನ್ನು ಉಪಯೋಗಿಸಿಕೊಂಡು ಅಪರಾಧ ಮಾಡಿಯೂ ಬಚವಾಗುತ್ತಿದ್ದಾರೆ. ಇದು ಮಾತ್ರ ದುರ್ದೈವದ ಸಂಗತಿ. ಈ ಬಗ್ಗೆ ಇಡೀ ದೇಶ ನಾಚಿಕೆಯಿಂದ, ಅಸಹನೆಯಿಂದ ಕುದಿಯುತ್ತಿದೆ…..

ಅಂಬೇಡ್ಕರ್ ಅವರೇ,
ನೂರು ಅಪರಾಧಿಗಳು ಬಿಡುಗಡೆಯಾದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ನಿಮ್ಮ ಮಾನವೀಯ ಮೌಲ್ಯಗಳ ಹಿನ್ನೆಲೆಯ, ಅತ್ಯಂತ ಸೂಕ್ಷ್ಮವಾದ – ಸೂಕ್ತವಾದ ಹಾಗೆಯೇ ಮುಗ್ಧತೆಯನ್ನು ಎತ್ತಿ ಹಿಡಿಯುವ ಒಂದು ಮಾತನ್ನು ಹೇಳಿದ್ದೀರಿ. ಅಪರಾಧಗಳನ್ನು ಖಚಿತ ಸಾಕ್ಷಿಗಳ ಆಧಾರದ ಮೇಲೆ ನಿರ್ಧರಿಸುವ ನ್ಯಾಯ ವ್ಯವಸ್ಥೆ ಇರಬೇಕು ಎಂಬ ನಿಲುವು ನಿಮ್ಮದಾಗಿತ್ತು. ಆದರೆ ಈಗ ಅದನ್ನೇ ಉಪಯೋಗಿಸಿಕೊಂಡು, ಅಪರಾಧಿಗಳೇ ಬಿಡುಗಡೆಯಾಗಿ, ನಿರಪರಾಧಿಗಳಿಗೆ ಶಿಕ್ಷೆಯಾಗುತ್ತಿರುವ ದುರಂತ ಸನ್ನಿವೇಶ ಸೃಷ್ಟಿಯಾಗಿದೆ…..

ಅಂಬೇಡ್ಕರ್ ಜಿ,
ನಿಮ್ಮ ವ್ಯಕ್ತಿತ್ವ ನೀವು ಬದುಕಿರುವ ಸಂದರ್ಭಕ್ಕಿಂತ ಈಗ ಬೃಹದಾಕಾರವಾಗಿ ಬೆಳೆದಿದೆ. ನಿಮ್ಮ ಜನಪ್ರಿಯತೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ನಿಮ್ಮ ಸಾಮರ್ಥ್ಯ, ಪ್ರತಿಭೆ ಇಡೀ ವಿಶ್ವಕ್ಕೆ ಪರಿಚಯವಾಗಿದೆ. ನಿಮ್ಮ ದೂರದೃಷ್ಟಿ ಎಲ್ಲರ ಗಮನ ಸೆಳೆದಿದೆ. ಹಾಗೆಂದು ನಿಮ್ಮ ವಿರುದ್ಧ ಟೀಕೆಗಳು ಇಲ್ಲವೆಂದಲ್ಲ. ಸಾಕಷ್ಟು ಟೀಕೆಗಳು ಸಹ ನಿಮ್ಮ ಮೇಲೆಯೂ ಇದೆ. ಆದರೆ ನಿಮ್ಮ ಆ ವಿದ್ವತ್ಪೂರ್ಣ ವ್ಯಕ್ತಿತ್ವ ಆ ಟೀಕೆಗಳಿಗೆ ಮಹತ್ವ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ನಿಮ್ಮ ಅನುಯಾಯಿಗಳ, ಹಿಂಬಾಲಕರ, ಹಿತೈಷಿಗಳ, ಮೆಚ್ಚುವವರ, ಸಂಘಟನಾತ್ಮಕ ಶಕ್ತಿ ನಿಮ್ಮ ವಿರುದ್ಧ ಧ್ವನಿ ಎತ್ತುವವರು ಯೋಚಿಸುವಂತೆ ಮಾಡಿದೆ……

ನಿಮ್ಮ ಬಗ್ಗೆ ಸಾಕಷ್ಟು ಅಧ್ಯಯನ, ಚಿಂತನೆಗಳು ನಡೆಯುತ್ತಲೇ ಇವೆ. ಕೆಲವೊಮ್ಮೆ ನಿಮ್ಮನ್ನು ಸಹ ದೈವತ್ವಕ್ಕೇರಿಸುವ ಅತಿರೇಕವೂ ಸಹ ನಡೆಯುತ್ತಿರುತ್ತದೆ. ಆದರೂ ಆಧುನಿಕ ಭಾರತದ ಯಶಸ್ಸಿನ ಕೆಲವೇ ಪ್ರಮುಖರಲ್ಲಿ ನೀವು ಸಹ ಒಬ್ಬರಾಗಿ ವಿರಾಜಮಾನರಾಗಿದ್ದೀರಿ. ಇಂದು ಭಾರತ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರುವುದು ನಿಮ್ಮ ಆಳ ಮತ್ತು ದೂರದೃಷ್ಟಿಯ ಚಿಂತನೆಯ ಆ ನೀತಿ ನಿಯಮಗಳು……

ನೀವು ನೀಡಿದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮುಕ್ತತೆ ಎಲ್ಲವೂ ಈ ದೇಶ ಬಲಿಷ್ಠವಾಗಿ ಬೆಳೆಯಲು ಕಾರಣವಾಗಿದೆ. ಹಾಗೆಯೇ ನೀವು ಬಯಸಿದ ಮಹಿಳಾ ಸಬಲೀಕರಣ ಇಂದು ಹೆಮ್ಮರವಾಗಿ ಬೆಳೆದು ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಮಹಿಳೆಯರು ಬಹು ಮುಖ್ಯ ಪಾತ್ರ ವಹಿಸುತ್ತಿರುವ ಒಳ್ಳೆಯ ಸುದ್ದಿಯು ನಿಮಗಿದೆ. ಜನರು ಜೀವನಮಟ್ಟ ಸಾಕಷ್ಟು ಪ್ರಮಾಣದಲ್ಲಿ ಸುಧಾರಿಸಿದೆ…….

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ,
ಈ ರೀತಿ ಅನೇಕ ವಿಷಯಗಳನ್ನು ಹೇಳುತ್ತಾ ಹೋಗಬಹುದು. ನಿಮ್ಮ ಜನುಮದಿನದ ನೆನಪಿನ ಈ ಶುಭ ಸಂದರ್ಭದಲ್ಲಿ ಖಂಡಿತವಾಗಿಯೂ ನೀವು ಕಂಡ ಆಶಯದ ಭಾರತ ಯಶಸ್ಸಿನತ್ತಾ ಸಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಆದರೆ ಅದೇ ಸಂದರ್ಭದಲ್ಲಿ ವಿರುದ್ಧ ಚಿಂತನೆಗಳು ಬೆಳವಣಿಗೆಯಾಗುತ್ತಿರುವುದು ಸ್ವಲ್ಪ ಆಘಾತಕಾರಿ ವಿಷಯವಾಗಿದೆ. ಆದರೆ ಮತದಾರ ಎಚ್ಚೆತ್ತುಕೊಂಡರೆ ಅದನ್ನು ಸಹ ನಿಯಂತ್ರಿಸುವುದು ಕಷ್ಟವೇನಲ್ಲ. ಜನ ನಿಧಾನವಾಗಿಯಾದರೂ ಜಾಗೃತಿಗೊಳ್ಳುತ್ತಾರೆ ಎಂಬ ಭರವಸೆಯಂತೂ ಇದ್ದೇ ಇದೆ…..

ಒಟ್ಟಿನಲ್ಲಿ ನೀವು ನಿಮ್ಮ ಜೀವನದಲ್ಲಿ ನಡೆಸಿದ ಹೋರಾಟ ಇಂದು ಹೆಮ್ಮರವಾಗಿ ಬೆಳೆದು ಯಶಸ್ಸಿನ ಹಾದಿಯಲ್ಲಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಅದಕ್ಕಾಗಿ ನಿಮಗೆ ಹೃದಯಪೂರ್ವಕ ವಂದನೆಗಳನ್ನು ಅರ್ಪಿಸುತ್ತಾ….

Wish you Happy birthday Dr. Baba saheb Ambedkar…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ. 9844013068…….

error: No Copying!