ಕೋಟ: ದಿನಾಂಕ : 28/03/2024(ಹಾಯ್ ಉಡುಪಿ ನ್ಯೂಸ್) ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ಬಂದ ಪೊಲೀಸರಿಗೆ ಹಲ್ಲೆ ನಡೆಸಿ ಆರೋಪಿ ಪರಾರಿ ಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಿನಾಂಕ :27-03-2024 ರಂದು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರ ಆದೇಶದಂತೆ ಕೋಟ ವ್ಯಾಪ್ತಿಯ ಆರೋಪಿ ಆದಮ್ ಎಂಬಾತನಿಗೆ ನೋಟೀಸ್ ಜ್ಯಾರಿ ಮಾಡಲು ಸಾಲಿಗ್ರಾಮದ ಆದಮ್ ಬಿರಿಯಾನಿ ಹೊಟೆಲ್ ಬಳಿ ಉಡುಪಿ ನಗರ ಠಾಣೆಯ ಹೆಡ್ ಕಾನ್ಸಟೇಬಲ್ ಮರಿಗೌಡ ರವರು ಸಿಬ್ಬಂದಿಯವರೊಂದಿಗೆ ಹೋದಾಗ ಆರೋಪಿ ಆದಮ್ ಹೋಟೆಲ್ ನಲ್ಲಿ ಹಾಜರಿದ್ದು, ಉಡುಪಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ತಿಳಿಸಿದಾಗ ಆರೋಪಿ ಆದಮ್ ನೋಟೀಸನ್ನು ತಿರಸ್ಕರಿಸಿ ಮರಿಗೌಡರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿ ಒಮ್ಮೆಲೆ ಕೈಯಿಂದ ಹೊಟ್ಟೆಗೆ ಹಾಗೂ ಬಲ ಕೆನ್ನೆಗೆ ಹೊಡೆದು ದೂಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಬಿಡಿಸಲು ಹೋದ ಸಿಬ್ಬಂದಿರವರಿಗೂ ಕೂಡ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪಿ ಆದಮ್ ಸ್ಥಳದಿಂದ ಓಡಿಹೋಗಿರುತ್ತಾನೆ ಎನ್ನಲಾಗಿದೆ. ಹಾಗೂ ಈ ಕೃತ್ಯಕ್ಕೆ ಹೋಟೆಲ್ ನಲ್ಲಿದ್ದ ಇಮ್ತಿಯಾಝ್ ಎಂಬ ವ್ಯಕ್ತಿಯು ಕೂಡ ಸಹಕರಿಸಿದ್ದಾನೆ ಎಂದು ಕರ್ತವ್ಯ ನಿರತ ಪೊಲೀಸರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ .
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 353, 332,504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.