ಉಡುಪಿ: ದಿನಾಂಕ 22/03/2024 (ಹಾಯ್ ಉಡುಪಿ ನ್ಯೂಸ್) ನಗರದ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮುಂಜಾನೆ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿಯವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರಿಗೆ ದಿನಾಂಕ:22-03-2024 ರಂದು ಠಾಣಾ ಸರಹದ್ದಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 6:15 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಜ್ವಲ ಬಾರ್ ಬಳಿ ಇರುವ ತರಕಾರಿ ಅಂಗಡಿಯ ಹತ್ತಿರ ತೆರಳಿ ಪರಿಶೀಲಿಸಿದಾಗ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ನಡೆಸಿ, ಆಪಾದಿತ ಪುರಂದರ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಪುರಂದರನು ಉಜ್ವಲ ಬಾರ್ ಉಸ್ತುವಾರಿಯನ್ನು ನೋಡಿಕೊಂಡಿರುವ ಭಾಸ್ಕರ್ ರವರ ಸೂಚನೆಯಂತೆ ಪ್ರಸ್ತುತ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜ್ಯಾರಿಯಲ್ಲಿದ್ದರೂ ಕೂಡ ಉಜ್ವಲ ಬಾರ್ ನಿಂದ ಮದ್ಯವನ್ನು ತೆಗೆದುಕೊಂಡು ಹೋಗಿ ಹೆಚ್ಚಿನ ಲಾಭಕ್ಕಾಗಿ ಆಪಾದಿತ ಪುರಂದರನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ.
ಆಪಾದಿತ ಪುರಂದರನನ್ನು ಬಂಧಿಸಿ ಆತನ ವಶದಿಂದ ಒಟ್ಟು ರೂ. 8,750/- ಮೌಲ್ಯದ ವಿವಿಧ ಬ್ರ್ಯಾಂಡ್ ನ ಮದ್ಯದ ಸಾಚೇಟ್ ಹಾಗೂ ಬಾಟಲಿಗಳನ್ನು ಮತ್ತು ನಗದು ರೂ. 4020/- ನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ರಂತೆ ಪ್ರಕರಣ ದಾಖಲಾಗಿದೆ.