ಉಡುಪಿ: ದಿನಾಂಕ:20-04-2024 (ಹಾಯ್ ಉಡುಪಿ ನ್ಯೂಸ್)
ಚುನಾವಣಾ ದಿನಾಂಕ ಘೋಷಣೆಯಾಗುವ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಬದಲಾವಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಚುನಾವಣೆ ಘೋಷಣೆಯಾಗುವ ಕೇವಲ ಒಂದೆರಡು ದಿನ ಮೊದಲು ರಾಜ್ಯ ಸರಕಾರ ಮಾಡಿರುವ ಈ ಬದಲಾವಣೆ ಸೂಕ್ತವಾದುದಲ್ಲ. ರಾಜ್ಯ ಚುನಾವಣಾ ಕಮಿಷನ್ ಮತ್ತು ಜಿಲ್ಲಾಡಳಿತ ಈ ಬದಲಾವಣೆಯನ್ನು ಕೂಡಲೇ ಹಿಂತೆಗೆದುಕೊಳ್ಳಲೇಬೇಕು.
ನಿನ್ನೆ ಮೊನ್ನೆಯವರೆಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದವರು ಡಾ. ವೀಣಾ ಕುಮಾರಿ. ಇವರು ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ಜನಪರ ಕಾಳಜಿಯ ಜನಸೇವಕರು ಎಂಬುದು ಎಲ್ಲರಿಗೂ ತಿಳಿದೇ ಇರುವ ವಿಷಯವಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ಕರ್ತವ್ಯ ಪಾಲಿಸುತ್ತಿದ್ದ ಡಾ. ವೀಣಾ ಕುಮಾರಿ ಅವರನ್ನು ಬದಲಾಯಿಸಿರುವುದು ಸರಕಾರದ ಅಸ್ವೀಕಾರಾರ್ಹ ಮತ್ತು ಶಂಕಾಸ್ಪದ ನಿರ್ಧಾರವಾಗಿದೆ.
ಡಾ. ವೀಣಾ ಕುಮಾರಿ ಅವರ ಸ್ಥಾನಕ್ಕೆ ಸರಕಾರ ಇದೀಗ ಡಾ. ಅಶೋಕ್ ಎಚ್. ಇವರನ್ನು ನೇಮಕ ಮಾಡಿದೆ. ಇವರ ಬಗ್ಗೆ ಈ ಹಿಂದೆಯೇ ಕೆಲವು ದೂರುಗಳು ಕೇಳಿಬಂದಿತ್ತು. ಹೀಗಿರುವಾಗ ಚುನಾವಣೆಯ ಹೊತ್ತಲ್ಲಿ ಸರಕಾರ ಇವರನ್ನು ಅವಸರವಾಗಿ ಜಿಲ್ಲಾ ಸರ್ಜನ್ ರಾಗಿ ನೇಮಕ ಮಾಡಿರುವುದರ ಹಿಂದೆ ಅಧಿಕಾರ ದುರುಪಯೋಗ ಮಾಡಲಿಕ್ಕಾಗಿಯೇ ಎಂಬ ಅನುಮಾನ ಸಾರ್ವಜನಿಕರಾದ ನಮಗೆ ಉಂಟಾಗಿದೆ. ಚುನಾಣಾ ಆಯೋಗ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ರಾಜ್ಯ ಸರಕಾರ ಮಾಡಿದ ನೇಮಕವನ್ನು ಹಿಂತೆಗೆದುಕೊಂಡು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಮಾಡಬೇಕಾಗಿದೆ.
-ಶ್ರೀರಾಮ ದಿವಾಣ