- ಉಡುಪಿ: ದಿನಾಂಕ:25-02-2024(ಹಾಯ್ ಉಡುಪಿ ನ್ಯೂಸ್) ಹೋಟೆಲ್ ವ್ಯವಹಾರದ ವಿಷಯದಲ್ಲಿ ಮಾತುಕತೆ ನಡೆಯುವಾಗ ಹಲ್ಲೆ ನಡೆಸಲಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
- ಉಡುಪಿ ,ಮೂಡನಿಡಂಬೂರು ಗ್ರಾಮದ ನಿವಾಸಿ ರಾಘವೇಂದ್ರ (46) ಎಂಬವರೊಂದಿಗೆ ಮಂಜುನಾಥ್, ಹೇಮಂತ್ ಹಾಗೂ ಆಪಾದಿತ ಆದರ್ಶ ಎಂಬವರು ದಿನಾಂಕ 23/02/2024 ರಂದು ಸಂಜೆ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಇಂಟೆಕ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಫಿಶ್ ಪ್ಯಾಕ್ಟರಿ ಹೋಟೆಲ್ ನ ವ್ಯವಹಾರದ ವಿಷಯವಾಗಿ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮಾತುಕತೆ ಸಮಯದಲ್ಲಿ ಹೋಟೆಲ್ ಗೆ ಸಂಬಂಧಿಸಿದ ಕರಾರು ಪತ್ರವನ್ನು ರದ್ದುಗೊಳಿಸಿ ಆದರ್ಶರವರು ಹೋಟೆಲ್ ಗೆ ನೀಡಿದ ಮುಂಗಡ ಹಣವನ್ನು ಮರುಪಾವತಿಸುವುದಾಗಿ ತಿಳಿಸಿದ್ದು, ಆ ಸಮಯದಲ್ಲಿ ಆಪಾದಿತ ಆದರ್ಶನು ಒಂದೇ ಸಮನೆ ಸಿಟ್ಟಿಗೆದ್ದು, ರಾಘವೇಂದ್ರರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗೆ ಸಿಕ್ಕಿದ ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿಯಿಂದ ರಾಘವೇಂದ್ರರವರ ತಲೆಗೆ ರಭಸವಾಗಿ ಎಸೆದಿದ್ದು, ಕುತ್ತಿಗೆಯನ್ನು ಜೋರಾಗಿ ಹಿಡಿದುಕೊಂಡಿದ್ದು, ನಂತರ ಟೇಬಲ್ ಚೇರ್ ಗಳಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ರಾಘವೇಂದ್ರ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 504,324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
- ಇದೇ ಪ್ರಕರಣದಲ್ಲಿ ಆದರ್ಶ ರವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
- ಉಡುಪಿ ನಿವಾಸಿ ಆದರ್ಶ(32) ಎಂಬವರು ಫಿಶ್ ಫ್ಯಾಕ್ಟರಿ ಹೋಟೆಲ್ ನಡೆಸಿಕೊಂಡಿದ್ದು, ದಿನಾಂಕ 23/02/2024 ರಂದು ಸಂಜೆ INTECH CITY ಬಿಲ್ಡಿಂಗ್ ನಲ್ಲಿರುವ ಕೆಮ್ಮಾಲೆ ಗ್ರೂಪ್ ಆಫೀಸ್ ಗೆ ಫಿಶ್ ಫ್ಯಾಕ್ಟರಿ ಹೋಟೆಲ್ ವ್ಯವಹಾರದ ಬಗ್ಗೆ ಮಾತನಾಡಲು ಹೋಗಿದ್ದು, ಆದರ್ಶರವರ ಫಿಶ್ ಫ್ಯಾಕ್ಟರಿ ಹೋಟೆಲ್ ವ್ಯವಹಾರದ ಉದ್ದಿಮೆಯ ಪರವಾನಗಿಯನ್ನು ಪಾಲುದಾರರಾದ ಮಂಜುನಾಥ, ರಾಘವೇಂದ್ರ, ಹೇಮಂತ್, ಡಾನ್ ಕಾರ್ಕಡ, ದಿನೇಶ್ ಎಂಬವರು ನೀಡದೆ ಇದ್ದುದರಿಂದ ಆದರ್ಶ ರವರು ಮುಂಗಡವಾಗಿ ನೀಡಿದ್ದ 2 ಲಕ್ಷ ಹಣವನ್ನು ವಾಪಸ್ಸು ಕೇಳಿದ್ದಕ್ಕೆ, ಆರೋಪಿ ರಾಘವೇಂದ್ರ ನೀರು ತುಂಬಿದ ಬಾಟಲಿಯನ್ನು ಆದರ್ಶ ರವರ ಮೇಲೆ ಬಿಸಾಡಿದ್ದು, ಅದು ಆದರ್ಶ ರವರ ಬಲ ಕೆನ್ನೆಗೆ ತಾಗಿದ್ದು, ನಂತರ ಕಬ್ಬಿಣದ ಸ್ಕೇಲ್ ಅನ್ನು ಬಿಸಾಡಿದ್ದು ಅದು ಎಡ ಭುಜಕ್ಕೆ ತಾಗಿದ್ದು, ನಂತರ ಆರೋಪಿಗಳಾದ ಮಂಜುನಾಥ, ಡಾನ್ ಕರ್ಕಡ, ಹೇಮಂತ್ ಮತ್ತು ದಿನೇಶ್ ರವರು ಆದರ್ಶ ಅವರನ್ನು ಗಟ್ಟಿಯಾಗಿ ಹಿಡಿದು ಹಲ್ಲೆ ನಡೆಸಿ ರೂಮ್ ನಲ್ಲಿ ಕೂಡಿ ಹಾಕಿ, ವಿಶ್ವನಾಥ ಮತ್ತು ಜಾಕ್ಸನ್ ಎಂಬವರನ್ನು ಕರೆಸಿ ಪುನಃ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
- ಘಟನೆಯ ಸಮಯ ಆದರ್ಶರವರ 4 ಪವನಿನ ಚಿನ್ನದ ಸರ ಮತ್ತು ಪರ್ಸ್ ಹಾಗೂ ಪರ್ಸ್ ನಲ್ಲಿದ್ದ 10,000/- ರೂಪಾಯಿ ಕಳೆದುಹೋಗಿರುತ್ತದೆ ಎಂದು ದೂರಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143,147, 342, 323, 324, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.