Spread the love

ಉಡುಪಿ: ದಿನಾಂಕ:18-02-2024(ಹಾಯ್ ಉಡುಪಿ ನ್ಯೂಸ್) ನಗರಸಭೆಯ ಮಾಲೀಕತ್ವದ ಅಂಗಡಿಗಳನ್ನು ಟೆಂಡರು ಮೂಲಕ ಬಾಡಿಗೆಗೆ ವಹಿಸಿ ಕೊಂಡಿರುವ ಮಾಲೀಕರುಗಳಿಗೆ ಇದೀಗ ಉಡುಪಿ ನಗರ ಸಭೆಯ ಅಧಿಕಾರಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಿದ್ದು ಆ ಅವಧಿಯಲ್ಲಿ ಬಾಡಿಗೆ ವಿನಾಯಿತಿ ನೀಡಲಾಗುವುದೆಂದು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಬಾಡಿಗೆ ಅಂಗಡಿ ಮಾಲಕರೆಲ್ಲರಿಗೂ ಅಭಯವನ್ನು ನೀಡಿದ್ದರು.

ಮುಖ್ಯಮಂತ್ರಿ ಗಳ ಆಶ್ವಾಸನೆಯನ್ನು ನಂಬಿ ಅಂಗಡಿ ಮಾಲಕರುಗಳು ಲಾಕ್ ಡೌನ್ ಅವಧಿಯ ಬಾಡಿಗೆ ಪಾವತಿಸದೆ ಬಾಕಿ ಇರಿಸಿದ್ದರು ಎನ್ನಲಾಗಿದೆ. ಆದರೆ ಇದೀಗ ಉಡುಪಿ ನಗರ ಸಭೆಯ ಅಧಿಕಾರಿಗಳು ಲಾಕ್ ಡೌನ್ ಅವಧಿಯ ಬಾಡಿಗೆ ಬಾಕಿ ಗೆ ಹೆಚ್ಚುವರಿ ದಂಡವನ್ನು ಸೇರಿಸಿ ಎಲ್ಲರಿಗೂ ನೋಟಿಸ್ ಮಾಡುತ್ತಿದ್ದು ಬಾಕಿಯನ್ನು ಶೀಘ್ರದಲ್ಲೇ ಪಾವತಿಸದಿದ್ದಲ್ಲಿ ಕ್ರಮಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲೀಕರು ದೂರಿ ಕೊಂಡಿದ್ದಾರೆ.

ಈ ಬಗ್ಗೆ ಅಂಗಡಿ ಮಾಲಕರುಗಳು ಜೊತೆಯಾಗಿ ಉಡುಪಿ ಶಾಸಕರಾದ ಯಶಪಾಲ ಸುವರ್ಣ ಅವರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿದ್ದು ಶಾಸಕರು ನಗರಾಡಳಿತ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ನಗರಸಭೆಯ ಅಧಿಕಾರಿಗಳು ಮಾತ್ರ ಕೂಡಲೇ ಬಾಕಿ ಪಾವತಿಸಬೇಕು ಎಂದು ನೋಟೀಸುಗಳನ್ನು ನೀಡಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಉಡುಪಿ ನಗರದ ನಗರಸಭೆಯ ಮಾಲೀಕತ್ವದ ಅಂಗಡಿಗಳನ್ನು ಟೆಂಡರ್ ನಲ್ಲಿ ನಡೆಸುತ್ತಿರುವ ಅಂಗಡಿ ಮಾಲಕರುಗಳು ದೂರಿಕೊಂಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಗಳು, ಉಡುಪಿ ಶಾಸಕರು ಹಾಗೂ ಪೌರಾಯುಕ್ತರು ಈ ಬಗ್ಗೆ ತುರ್ತು ಗಮನಹರಿಸಿ ಲಾಕ್ ಡೌನ್ ಬಾಡಿಗೆ ಬಾಕಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಿ ಕೊಡಬೇಕು . ಹಾಗೂ ಅಂಗಡಿ ಮಾಲೀಕರುಗಳಿಗೆ ಕಿರುಕುಳ ನೀಡದಂತೆ ನಗರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿದ್ದಾರೆ.

error: No Copying!