ಕೋಟ: ದಿನಾಂಕ:15-02-2024(ಹಾಯ್ ಉಡುಪಿ ನ್ಯೂಸ್) ಆರೋಗ್ಯ ಪೂರ್ಣ ಹದಗೆಟ್ಟ ಮೇಲೆ ಅದರ ವಿರುದ್ಧ ಚಿಕಿತ್ಸೆ ಪಡೆಯುವುದಕ್ಕಿಂತ ಖಾಯಿಲೆ ಬರುವುದಕ್ಕಿಂತ ಮೊದಲೆ ಅದರ ಬಗ್ಗೆ ಜಾಗೃತಿ ವಹಿಸುವುದು ಒಳಿತು ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.
ಅವರು ಮಂಗಳವಾರ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಕುಷ್ಟರೋಗ ನಿರ್ಮೂಲನೆ ಹಾಗೂ ಅಂಧತ್ವ ನಿವಾರಣಾ ಕಛೇರಿ ಉಡುಪಿ, ಕೆ.ಎಮ್.ಸಿ. ಮಣಿಪಾಲ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇವರ ಸಹಭಾಗಿತ್ವದಲ್ಲಿ ಗರ್ಭಿಣಿಯರಿಗೆ ಮಡಿಲು ತುಂಬುವ,ಕಣ್ಣಿನ ತಪಾಸಣೆ, ಗರ್ಭಕಂಠ ಕ್ಯಾನ್ಸರ್ ತಪಾಸಣೆ, ಬಿಪಿ, ಶುಗರ್ ತಪಾಸಣೆ, ಕುಷ್ಟರೋಗ ಅರಿವು, ಕ್ಷಯರೋಗ ಮಾಹಿತಿ ಹಾಗೂ ಅರಿವು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಅತ್ಯವಶ್ಯಕ ಎಂಬುವುದನ್ನು ಒತ್ತಿ ಹೇಳಿದ ಅವರು ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಈ ದಿಸೆಯಲ್ಲಿ ಕೇಂದ್ರಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಿಸಲು ಅನುದಾನ ಒದಗಿಸಲು ಸರಕಾರದ ಜನಪ್ರತಿನಿಧಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು. ಸಭೆಯ ಅಧ್ಯಕ್ಷತೆಯನ್ನು ಡಿಎಚ್‌ಓ ಐ.ಪಿ ಗಡರ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಸಮಾಜಸೇವಕ ಎಂ. ಚಂದ್ರಶೇಖರ್ ಪಾಂಡೇಶ್ವರ , ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಸಾಸ್ತಾನ ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿಠಲ ಪೂಜಾರಿ ಐರೋಡಿ, ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್, ಕುಷ್ಟರೋಗ ನಿರ್ಮೂಲನಾಧಿಕಾರಿ ಲತಾ ನಾಯಕ್ ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಫಾರ್ಮಸಿ ಅಧಿಕಾರಿ ಸೀಮಾ ಮ್ಯಾಥ್ಯೂ ಸ್ವಾಗತಿಸಿದರು. ಬ್ರಹ್ಮಾವರ ತಾಲೂಕು ಆಸ್ಪತ್ರೆ ಹಿರಿಯ ಅಧಿಕಾರಿ ಆಲಂದೂರು ಮಂಜುನಾಥ್ ನಿರೂಪಿಸಿದರು.
ವಿಶೇಷವಾಗಿ ಗಮನ ಸೆಳೆದ ಮಡಿಲು ತುಂಬುವ ಸೀಮಂತ ಶಾಸ್ತ್ರ
ಇದೇ ಮೊದಲ ಬಾರಿ ಎಂಬಂತೆ ಸಾಸ್ತಾನದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಡಿಲು ತುಂಬುವ ಸಿಮಂತ ಶಾಸ್ತ್ರ ವಿಶೇಷವಾಗಿ ಗಮನ ಸೆಳೆಯಿತು. ಒಟ್ಟು 9ಜನ ತುಂಬು ಗರ್ಭಿಣಿಯರಿಗೆ ಮಡಿಲು ತುಂಬಲು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ನೇತೃತ್ವದಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳ ತಂಡ ಚಕ್ಕುಲಿ,ಅತ್ರಾಸ,ಉಂಡೆ ಸೇರಿದಂತೆ ವಿವಿಧ ಬಗೆಯ ನವನವೀನ ತಿಂಡಿಗಳನ್ನು ಬಡಿಸಿ, ಸೀರೆನೀಡಿ , ಹಣೆಗೆ ಅರಸಿನ ಕುಂಕುಮ ಹಚ್ಚಿ , ಹೂ ಮುಡಿಗೇರಿಸಿ, ಆರತಿ ಬೆಳಗಿ ಸೋಬಾನ ಹಾಡನ್ನು ಹಾಡಿ ಸಂಭ್ರಮಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇವರ ಸಹಭಾಗಿತ್ವದಲ್ಲಿ ಗರ್ಭಿಣಿಯರಿಗೆ ಮಡಿಲು ತುಂಬುವ, ಕಣ್ಣಿನ ತಪಾಸಣೆ, ಗರ್ಭಕಂಠ ಕ್ಯಾನ್ಸರ್ ತಪಾಸಣೆ, ಬಿಪಿ, ಶುಗರ್ ತಪಾಸಣೆ, ಕುಷ್ಟರೋಗ ಅರಿವು, ಕ್ಷಯರೋಗ ಮಾಹಿತಿ ಹಾಗೂ ಅರಿವು ಮಾಹಿತಿ ಶಿಬಿರವನ್ನು ಕೋಟದ ಮಣೂರು ಗೀತಾನಂದ ಫೌಂಡೆಶನ್ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ಡಿಎಚ್‌ಓ ಐ.ಪಿ ಗಡರ್, ಸಮಾಜಸೇವಕ ಎಂ. ಚಂದ್ರಶೇಖರ್ ಪಾಂಡೇಶ್ವರ , ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ,ಸಾಸ್ತಾನ ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿಠಲ ಪೂಜಾರಿ ಐರೋಡಿ ಮತ್ತಿತರರು ಇದ್ದರು.