” ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು ” ಜಾರ್ಜ್ ವಾಷಿಂಗ್ಟನ್, ಅಮೆರಿಕದ ಮೊದಲ ಅಧ್ಯಕ್ಷ ಮತ್ತು ಚಿಂತಕ……
ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ ಪ್ರಯತ್ನ.
ಇದು ಎಲ್ಲಾ ವಯಸ್ಸಿನ ಎಲ್ಲಾ ಪ್ರದೇಶದ ಎಲ್ಲಾ ವರ್ಗಗಳಿಗೂ ಅನ್ವಯಿಸುವ ಮಾತು. ಆದರೂ ಹೆಚ್ಚಾಗಿ ಯುವ ವಯಸ್ಸಿನವರಿಗೆ ತುಂಬಾ ಎಚ್ಚರಿಕೆಯ ಅರ್ಥ ಕೊಡುತ್ತದೆ.
ಮೊದಲಿಗೆ ಕೆಟ್ಟವರು ಎಂದರೆ ಯಾರು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಜೂಜು ಕುಡಿತ ಹೆಣ್ಣಿನ ಸಹವಾಸ ಡ್ರಗ್ಸ್ ಕಳ್ಳತನ ಮುಂತಾದ ದುರಭ್ಯಾಸಗಳನ್ನು ಅನಿಯಂತ್ರಿತವಾಗಿ ಹೊಂದಿರುವವರನ್ನು ಕೆಟ್ಟವರು ಎನ್ನಲಾಗುತ್ತದೆ. ಜೊತೆಗೆ ಆಧುನಿಕ ಸಮಾಜದಲ್ಲಿ ರೌಡಿಸಂ ಕಾನೂನು ಬಾಹಿರ ಚಟುವಟಿಕೆಗಳು ಅನೈತಿಕ ವ್ಯವಹಾರಗಳು ಸಮಾಜದ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾಗಿ ಹಿಂಸೆಯಲ್ಲಿ ತೊಡಗುವುದು ಮುಂತಾದ ಕ್ರಿಮಿನಲ್ ಚಟುವಟಿಕೆಗಳನ್ನು ಮಾಡುವವರು ಸಹ ಕೆಟ್ಟ ಜನರು ಎನಿಸಿಕೊಳ್ಳುತ್ತಾರೆ.
( ಇದನ್ನು ಹೊರತುಪಡಿಸಿ ಆಂತರ್ಯದಲ್ಲಿ ಕೋಪ ಅಸೂಯೆ ದುಡುಕುತನ ಮುಂತಾದ ಕೆಲವು ಕೆಟ್ಟ ಚಾಳಿಗಳು ಇರುತ್ತವೆ. ಇದು ನಮ್ಮೆಲ್ಲರಲ್ಲೂ ಸ್ವಲ್ಪ ಮಟ್ಟಿಗೆ ಇರುತ್ತದೆ. ಅದನ್ನು ಕೆಟ್ಟತನ ಎನ್ನಲಾಗದು ಮತ್ತು ಇದು ಅಪಾಯಕಾರಿಯೂ ಅಲ್ಲ. )
ಮೇಲೆ ಹೇಳಿದ ಕೆಟ್ಟ ವ್ಯಕ್ತಿಗಳ ಸ್ನೇಹ ಅಥವಾ ಸಹವಾಸ ನಾವು ಮಾಡಿದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಅವರ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಅವರನ್ನು ಒಳ್ಳೆಯ ದಾರಿಗೆ ತರುವ ಅವಕಾಶ ತುಂಬಾ ಕಡಿಮೆ. ಕೆಟ್ಟದ್ದು ಯಾವಾಗಲೂ ಒಳ್ಳೆಯದಕ್ಕಿಂದ ಹೆಚ್ಚು ಆಕರ್ಷಣೆ ಹೊಂದಿರುತ್ತದೆ.
ಸಾಮಾನ್ಯವಾಗಿ ದುರಭ್ಯಾಸ ಮತ್ತು ಕ್ರಿಮಿನಲ್ ಮನೋಭಾವದ ವ್ಯಕ್ತಿಗಳು ಹೆಚ್ಚು ಚಾಕಚಕ್ಯತೆ ಹೊಂದಿರುತ್ತಾರೆ. ಧೈರ್ಯವೂ ತುಸು ಜೋರು. ಇಂತಹವರ ಸಹವಾಸ ಪ್ರಾರಂಭದಲ್ಲಿ ಹೆಚ್ಚು ಆಕರ್ಷಕ ಮತ್ತು ಸುಖಮಯವಾಗಿರುತ್ತದೆ. ಅದರಲ್ಲೂ ಹೆಚ್ಚು ಒತ್ತಡ ಮತ್ತು ಕಷ್ಟದಲ್ಲಿರುವವರಿಗೆ ಕೆಟ್ಟವರು ಆಪದ್ಬಾಂಧವರಂತೆ ಕಾಣುತ್ತಾರೆ. ಆ ಕ್ಷಣದ ನೋವು ಮರೆಯಲು ಇವರು ತುಂಬಾ ಆತ್ಮೀಯ ಸಹಾಯ ಮಾಡುತ್ತಿರುವಂತೆ ಭಾಸವಾಗುತ್ತದೆ. ಪುಕ್ಕಲರಿಗೆ ಇವರು ಹೀರೋಗಳಂತೆ ಕಾಣುತ್ತಾರೆ.
ಆದರೆ ನಿಧಾನವಾಗಿ ಕೆಟ್ಟದ್ದರ ಪರಿಣಾಮ ನಮ್ಮ ಮೇಲಾಗತೊಡಗುತ್ತದೆ. ನಮ್ಮ ಅರಿವಿಗೆ ಬರುವಷ್ಟರಲ್ಲಿ ಅದು ಇಡೀ ಬದುಕಿನ ಹಳಿಯನ್ನೇ ತಪ್ಪಿಸಿ ನಿಯಂತ್ರಣ ಸಿಗದಷ್ಟು ಮುಂದೆ ಹೋಗುವಬಹುದು. ಕೆಲವೊಮ್ಮೆ ನಮ್ಮ ಹಿತೈಷಿಗಳು ಈ ಬಗ್ಗೆ ಎಚ್ಚರಿಕೆ ಕೊಟ್ಟರೂ ನಾವು ನಿರ್ಲಕ್ಷಿಸಿರುತ್ತೇವೆ.
ಇದನ್ನು ಸೂಕ್ಷ್ಮ ದೃಷ್ಟಿಯಿಂದ ಅವಲೋಕಿಸಿಯೇ ಜಾರ್ಜ್ ವಾಷಿಂಗ್ಟನ್ ಕೆಟ್ಟವರಿಗಿಂತ ಏಕಾಂಗಿತನವೇ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಖಂಡಿತ ಇದು ಅಕ್ಷರಶಃ ಸತ್ಯ. ನಮ್ಮ ಮಕ್ಕಳ, ನಮ್ಮ ಸಂಬಂಧಿಗಳ, ನಮ್ಮ ನೆರೆಹೊರೆಯವರ ಅನೇಕ ಘಟನೆಗಳನ್ನು ಗಮನಿಸಿದಾಗ ಇದರ ಮಹತ್ವ ಅರಿವಾಗುತ್ತದೆ. ರಾಜಕೀಯ, ಆರ್ಥಿಕ, ಪ್ರೀತಿ ಪ್ರೇಮಗಳ ಮತ್ತು ಅನೇಕ ಪೋಲೀಸ್ ಪ್ರಕರಣಗಳಲ್ಲಿ ಇದು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ.
ಇನ್ನೂ ಮುಂದುವರಿದು…..
ಏಕಾಂಗಿತನ ಉತ್ತಮ ನಿಜ. ಆದರೆ ಅದರ ಸಂಪೂರ್ಣ ಆರಿವಾಗದೆ ಒಂದು ವ್ಯಕ್ತಿತ್ವ ರೂಪಗೊಳ್ಳದೆ ಏಕಾಂಗಿತನವೂ ಅಪಾಯವಾಗಬಹುದು. ಮಕ್ಕಳು ಯುವಕರಲ್ಲಿ ಅದು ಮಾನಸಿಕ ಖಿನ್ನತೆಯನ್ನು ಹೆಚ್ಚಿಸಬಹುದು. ಅತ್ಯುತ್ತಮ ಗುಣಮಟ್ಟದ ಏಕಾಂಗಿತನ ಮಾತ್ರ ತುಂಬಾ ಒಳ್ಳೆಯದು. ಅಂದರೆ ಓದು ಬರಹ ಯೋಗ ಧ್ಯಾನ ಕ್ರೀಡೆ ಕಲೆ ಸಂಗೀತ ಸಿನಿಮಾ ತೋಟಗಾರಿಕೆ ಸಂಘ ಸಮಾಜ ಸೇವೆ ಪ್ರವಾಸ ಮುಂತಾದ ನಮ್ಮ ಅನುಕೂಲಕರ ಹವ್ಯಾಸಗಳನ್ನು ಬೆಳೆಸಿಕೊಂಡರೆ ಏಕಾಂಗಿತನ ಕೆಟ್ಟವರ ಸಹವಾಸಕ್ಕಿಂತ ಉತ್ತಮವಾಗಿರುತ್ತದೆ. ಈ ಹವ್ಯಾಸಗಳು ನಮ್ಮನ್ನು ಅತ್ಯಂತ ಕ್ರಿಯಾಶೀಲವಾಗಿ ಇಡುವುದಲ್ಲದೆ ಉತ್ತಮ ಸಾಧನೆಗು ದಾರಿ ಮಾಡಿಕೊಡುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿದರೆ…..
ಕೆಟ್ಟವರ ಸಹವಾಸಕ್ಕಿಂತ, ಏಕಾಂಗಿತನಕ್ಕಿಂತ ಒಳ್ಳೆಯವರ ಒಡನಾಟ ಅತ್ಯುತ್ತಮ ಎಂದು ಹೇಳಬಹುದು. ಒಳ್ಳೆಯವರು ಎಂಬುದನ್ನು ಹಲವಾರು ಆಯಾಮಗಳಲ್ಲಿ ನೋಡಬೇಕಾಗುತ್ತದೆ.
ಅದು ಅಷ್ಟು ಸುಲಭವಲ್ಲ. ಒಳ್ಳೆಯತನ ಮುಖವಾಡವಾಗಿರದೆ ಸಹಜವಾಗಿರಬೇಕು. ಹೆಚ್ಚು ವಿಶಾಲ ಮನೋಭಾವ ಹೊಂದಿರಬೇಕು. ಒಂದು ಆದರ್ಶ ಮತ್ತು ಮಾರ್ಗದರ್ಶಕ ವ್ಯಕ್ತಿತ್ವ ಹೊಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸಿನ ನಿಲುವಿಗೆ ಹತ್ತಿರವಾಗಿರಬೇಕು ಮತ್ತು ಹೊಂದಾಣಿಯಾಗಬೇಕು. ಒಳ್ಳೆಯವರ ನಡುವಿನ ಸಂವಹನ ಸರಳ ಮತ್ತು ಸುಲಲಿತವಾಗಿರಬೇಕು.
ಆಗ ಖಂಡಿತ ಬದುಕಿನ ಕ್ವಾಲಿಟಿ ಹೆಚ್ಚುತ್ತದೆ. ನಮ್ಮ ನೆಮ್ಮದಿಯ ಮಟ್ಟ ಉತ್ತಮ ಸ್ಥಿತಿ ಕಾಯ್ದುಕೊಂಡಿರುತ್ತದೆ.
ಈ ಸಂಕೀರ್ಣ ಸಮಾಜದಲ್ಲಿ ಆಯ್ಕೆಗಳು ಬಹಳಷ್ಟಿವೆ. ಜೊತೆಗೆ ಅನೇಕ ಅನಿವಾರ್ಯತೆಗಳೂ ಇವೆ. ಒತ್ತಡಗಳು ಇವೆ. ಆದರೂ ಎಲ್ಲರ ಜೊತೆ ಪರಿಚಯವಿರಲಿ ಆದರೆ ಆತ್ಮೀಯ ಒಡನಾಟ ಒಳ್ಳೆಯವರೊಂದಿಗೆ ಮಾತ್ರವಿರಲಿ. ಸಾಧ್ಯವಾಗದಿದ್ದರೆ ಏಕಾಂಗಿತನವೇ ಉತ್ತಮ.
ಆದರೆ ಕೆಟ್ಟವರ ಸಹವಾಸ ಬೇಡ.
ಗೌತಮ ಬುದ್ದರ ಒಂದು ಸಂದೇಶ,
” ನಾವು ಬದುಕಿನಲ್ಲಿ ಅನೇಕರೊಂದಿಗೆ ಜೊತೆಯಾಗಿ ಹೆಜ್ಜೆಗಳನ್ನು ಹಾಕಬೇಕಾಗುತ್ತದೆ. ಆದರೆ ಯಾರೊಂದಿಗೆ ಎಷ್ಟು ದೂರ ನಡೆಯಬೇಕೆಂಬ ತೀರ್ಮಾನ ನಮ್ಮ ವಿವೇಚನೆಗೆ ಬಿಟ್ಟದ್ದು. ಅದು ನಮ್ಮ ಜೀವನ ಪ್ರಯಾಣದ ಗುಣಮಟ್ಟ ನಿರ್ಧರಿಸುತ್ತದೆ…”
ಇದು ಈಗಾಗಲೇ ಅನೇಕರ ಅನುಭವಕ್ಕೆ ಬಂದಿರಬಹುದು……
ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರಿಗೂ ತಿಳಿಸಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068……