Spread the love
  • ಕಾಪು: ದಿನಾಂಕ:08-02-2024(ಹಾಯ್ ಉಡುಪಿ ನ್ಯೂಸ್) ಪಾವಂಜೆ ಕಡೆಯಿಂದ ಕಾಪು ಮಲ್ಲಾರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾಪು ಪೊಲೀಸ್‌ ಠಾಣೆಯ ಎಎಸ್ಐ ಯವರಾದ ಜನಾರ್ಧನ ಮೂಲ್ಯ ಅವರು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
  • ಕಾಪು ಪೊಲೀಸ್ ಠಾಣಾ ಎ.ಎಸ್.ಐ. ಯವರಾದ ಜನಾರ್ಧನ ಮೂಲ್ಯ ಅವರು ದಿನಾಂಕ: 07.02.2024 ರಂದು ಠಾಣಾ  ಸರಹದ್ದಿನಲ್ಲಿ ರಾತ್ರಿ ರೌಂಡ್ಸ್  ಕರ್ತವ್ಯದಲ್ಲಿದ್ದು ದಿನಾಂಕ : 08-02-2024 ರಂದು ಬೆಳಗ್ಗೆ 02:00 ಗಂಟೆಯ ಸುಮಾರಿಗೆ ಮಲ್ಲಾರು ಗ್ರಾಮದ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬಳಿ ತಲುಪುವಾಗ ಮಂಗಳೂರು ಕಡೆಯಿಂದ ಬಂದ ಹಳದಿ ಬಣ್ಣದ 909 ಮಾದರಿಯ ಟಿಪ್ಪರ್‌ ವಾಹನವೊಂದು ಅವರ ಬದಿಯಲ್ಲಿ ಮಲ್ಲಾರು ಕಡೆಗೆ ಹೋಗುತ್ತಿದುದನ್ನು ಗಮನಿಸಿದಾಗ ಆ ವಾಹನದ ಬಾಡಿಯಿಂದ ನೀರು ಇಳಿಯುತ್ತಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.
  • ಆ ವಾಹನದಲ್ಲಿ ಮರಳನ್ನು ಸಾಗಿಸುತ್ತಿರಬಹುದು ಎಂಬ ಅನುಮಾನದಿಂದ ಬೈಕ್‌ ನಲ್ಲಿ ಆ ವಾಹನದ ಮುಂದೆ ಹೋಗಿ ಅದರ ಚಾಲಕನಲ್ಲಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ವಾಹನವನ್ನು ನಿಲ್ಲಿಸಿರುತ್ತಾನೆ ಎಂದಿದ್ದಾರೆ .
  • ಆ ವಾಹನದಲ್ಲಿ ಚಾಲಕ ಮಾತ್ರ ಇದ್ದು, ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಬಾಡಿಯ ಮಟ್ಟದವರೆಗೆ ಮರಳನ್ನು ತುಂಬಿಸಿರುವುದು, ಆ ಮರಳಿನಿಂದ ನೀರು ಇಳಿಯುತ್ತಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ. ವಾಹನದ  ಚಾಲಕನ  ಹೆಸರು  ವಿಚಾರಿಸಿದಾಗ ರಾಜು ಎಂದು ತಿಳಿಸಿರುತ್ತಾನೆ. ವಾಹನದ ಮಾಲೀಕರ ಬಗ್ಗೆ ವಿಚಾರಿಸಿದಾಗ ವಾಹನವು ಕಾರ್ನಾಡು ನಿವಾಸಿ ಮಧುಸೂದನ್‌ ಎಂಬವವರಿಗೆ ಸೇರಿದ್ದಾಗಿರುತ್ತದೆ ಎಂದು ತಿಳಿಸಿರುತ್ತಾನೆ.
  • ವಾಹನದಲ್ಲಿದ್ದ ಮರಳಿನ ಬಗ್ಗೆ ಚಾಲಕನಲ್ಲಿ ವಿಚಾರಿಸಿದಾಗ ಮಧುಸೂದನ್‌ ರವರು ಇತ್ತೀಚಿಗೆ ಮುಲ್ಕಿ ಹಳದಂಗಡಿ ಪಾವಂಜೆ ದೇವಸ್ಥಾನದ ಹತ್ತಿರದ ಹೊಳೆಯಲ್ಲಿ ಮರಳನ್ನು ತೆಗೆಸಿ ಅದನ್ನು ಮಾರಾಟ ಮಾಡಿ ಲಾಭ ಮಾಡುವ ಉದ್ದೇಶದಿಂದ ಉಡುಪಿ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದು, ಅದರಂತೆ ಈ ದಿನ ಅದೇ ಹೊಳೆಯಿಂದ ಮರಳನ್ನು ತೆಗೆದುಕೊಂಡು ಮಾರಾಟ ಮಾಡಲು ಮಲ್ಲಾರು ಕಡೆಗೆ ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
  • ಮಧುಸೂದನ್‌ ಹಾಗೂ ರಾಜುರವರು ತಮ್ಮ  ಸ್ವಂತಕ್ಕಾಗಿ ಲಾಭ ಮಾಡುವ  ಉದ್ದೇಶದಿಂದ  ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿದ್ದು ,ಮರಳು ಸಾಗಿಸುತ್ತಿದ್ದ 909 ಟೆಂಪೋವನ್ನು, ಅದರಲ್ಲಿದ್ದ ಸುಮಾರು 10,000 ರೂಪಾಯಿ ಬೆಲೆಬಾಳುವ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .
  • ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .
error: No Copying!