ಕನ್ನಡ ಭಾಷೆಯ ರಾಜ್ಯ ಮಟ್ಟದ ಪ್ರಮುಖ ದಿನ ಪತ್ರಿಕೆಗಳು…..
ಪ್ರಜಾವಾಣಿ – ಕನ್ನಡ ಪ್ರಭ – ಸಂಯುಕ್ತ ಕರ್ನಾಟಕ – ಉದಯವಾಣಿ – ವಿಜಯ ಕರ್ನಾಟಕ – ವಿಜಯವಾಣಿ – ವಿಶ್ವ ವಾಣಿ – ಪ್ರಜಾ ಪ್ರಗತಿ ಮುಂತಾದವು…..
ಟಿವಿ ೯ , ಸುವರ್ಣ ನ್ಯೂಸ್, ನ್ಯೂಸ್ ೧೮, ಪಬ್ಲಿಕ್ ಟಿವಿ, ಬಿಟಿವಿ – ರಾಜ್ ನ್ಯೂಸ್, ಟಿವಿ ೫, ಕಸ್ತೂರಿ, ರಿಪಬ್ಲಿಕ್ ಕನ್ನಡ, ಪ್ರಜಾ ಟಿವಿ, ಪವರ್ ನ್ಯೂಸ್, ವಾರ್ತಾಭಾರತಿ ಇತ್ಯಾದಿಗಳು ಪ್ರಮುಖ ಟಿವಿ
ಸುದ್ದಿ ವಾಹಿನಿಗಳು…..
ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ – ಅವಲೋಕಿಸಿದರೆ ಅವುಗಳ ಕಾರ್ಯತಂತ್ರ ಮತ್ತು ವಿಚಾರಗಳು ನಮಗೆ ಸ್ಪಷ್ಟವಾಗುತ್ತಾ ಹೋಗುತ್ತದೆ………
ಕೆಲವು ನೇರವಾಗಿ ಬಲಪಂಥ ಮತ್ತು ಒಂದು ಪಕ್ಷದ ಪರವಾಗಿ, ಇನ್ನು ಕೆಲವು ಎಡಪಂಥ ಮತ್ತು ಒಂದು ಪಕ್ಷದ ಪರವಾಗಿ ಅಭಿಪ್ರಾಯ ರೂಪಿಸಿದರೆ, ಮತ್ತೆ ಕೆಲವು ಸಮತೋಲನ ಸಾಧಿಸಲು ಪ್ರಯತ್ನಿಸುತ್ತವೆ……….
ವ್ಯಾಪಾರಿ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಹುಶಃ ಅವರಿಗೆ ಅನಿವಾರ್ಯ ಇರಬಹುದು………
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶಿಕ್ಷಣ, ಆರೋಗ್ಯ, ನ್ಯಾಯಾಂಗ, ಸೈನ್ಯ, ಆಡಳಿತ, ರಾಜಕೀಯ ಮತ್ತು ಮಾಧ್ಯಮ ವ್ಯಾಪಾರೀಕರಣಗೊಂಡರೆ ಯಾವ ಸಮಾಜವೂ ನಾಗರಿಕವಾಗಿ ಉಳಿಯಲು ಸಾಧ್ಯವಿಲ್ಲ…
ಮುಖ್ಯವಾಗಿ ಈಗ ಮಾಧ್ಯಮ ಸಂಪೂರ್ಣ ವ್ಯಾಪಾರೀಕರಣಗೊಂಡಿದೆ. ಓದುಗರು ಮತ್ತು ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವುದು. ಅದನ್ನು ಮಾಪನ ಮಾಡುವ ಏಜೆನ್ಸಿ ಮುಖಾಂತರ ಹೆಚ್ಚು ನಂಬರ್ ಪಡೆಯುವುದು ಅದನ್ನು ತೋರಿಸಿ ಹೆಚ್ಚು ಜಾಹೀರಾತು ಆಕರ್ಷಿಸಿ ದೊಡ್ಡ ಮೊತ್ತದ ಹಣ ಸಂಪಾದಿಸುವುದು ಅದರ ಉದ್ದೇಶವಾಗಿದೆ.
ಬಹುತೇಕ ಶಿಕ್ಷಣ ಆರೋಗ್ಯ ಮತ್ತು ರಾಜಕೀಯದ ಎಲ್ಲಾ ತಂತ್ರಗಳು ಮತ್ತು ಅಪಾಯಕಾರಿ ಪೈಪೋಟಿ ಇಲ್ಲಿಯೂ ಉಂಟಾಗಿದೆ.
ಸುದ್ದಿಗಳನ್ನು ಅದು ಇದ್ದಂತೆ ಪ್ರಕಟ ಮಾಡಬೇಕಿದ್ದ ಮೂಲ ಮಾಧ್ಯಮ ಈಗ ಸುದ್ದಿಗಳನ್ನು ತಾವೇ ಹುಟ್ಟುಹಾಕುವ ಹಂತಕ್ಕೆ ತಲುಪಿದೆ. ಬಹುಶಃ ಇನ್ನು ಕೆಲವು ವರ್ಷಗಳ ನಂತರ ಸುದ್ದಿಗಾಗಿ ಕೊಲೆ ಅತ್ಯಾಚಾರ ದರೋಡೆ ಗಲಭೆ ರಾಜಕೀಯ ವ್ಯಾಪಾರ ಎಲ್ಲವನ್ನು ಮಾಧ್ಯಮಗಳೇ ಮಾಡಬಹುದೇನೋ ?!!!.
ಕೆಲವು ಮಾಧ್ಯಮಗಳು ತಾವು ನಿಷ್ಪಕ್ಷಪಾತ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆ ಭರದಲ್ಲಿ ವಿವೇಚನೆಯನ್ನೇ ಕಳೆದುಕೊಳ್ಳುತ್ತವೆ.
ಸುದ್ದಿಯನ್ನು ಬೇಗ ಕೊಡುವ ಹಪಾಹಪಿಗೆ ಬಿದ್ದು ಘಟನೆಗಳನ್ನು ಮೇಲ್ನೋಟಕ್ಕೆ ಕಾಣುವುದನ್ನೇ ಸತ್ಯ ಎನ್ನುವಂತೆ ಜನರಿಗೆ ವಿವರಣೆ ಸಮೇತ ತಲುಪಿಸುತ್ತವೆ. ಇದಕ್ಕಿಂತ ಹುಚ್ಚಾಟ ಮತ್ತೊಂದಿಲ್ಲ.
ಮಾಧ್ಯಮದ ಮೂಲ ನಿಯಮವೇ ಅಕ್ಷರಗಳ ಪದಗಳ ವಾಕ್ಯಗಳ ಭಾವನೆಗಳ ನಂಬಿಕೆಗಳ ಹೇಳಿಕೆಗಳ ಘಟನೆಗಳ ಒಳ ಅರ್ಥವನ್ನು ಹುಡುಕಿ ತೆಗೆಯುವುದೇ ಹೊರತು ಅದನ್ನು ತಿರುಚಿ ಹೇಳುವುದು ಅಲ್ಲ. ಸುದ್ದಿಗಳನ್ನು ವೇಗವಾಗಿ ಹೇಳುವುದಕ್ಕಿಂತ ನಿಖರವಾಗಿ ಮತ್ತು ಅರ್ಥಪೂರ್ಣವಾಗಿ ಹೇಳುವುದು ಮುಖ್ಯವಾಗಬೇಕು. ಆದರೆ ಇತ್ತೀಚಿನ ಮಾಧ್ಯಮಗಳು…
ನಿರೂಪಕರಾಗಿ ಬದಲಾದ ಪತ್ರಕರ್ತರು……
ವಿದೂಷಕರಾಗಿ ವರ್ತಿಸುವ ಪತ್ರಕರ್ತರು……
ಹೊಗಳು ಭಟರು ಅಥವಾ ತೆಗಳು ಭಟರ ಪಾತ್ರದಾರಿಗಳಾಗಿ ಬದಲಾದ ಪತ್ರಕರ್ತರು……
ವಿವೇಚನೆಯಿಂದ ವಿಧ್ವಂಸಕ ಮನೋಭಾವಕ್ಕೆ ಬಲಿಯಾದ ಪತ್ರಕರ್ತರು….
ವಿಷಯಕ್ಕಿಂತ ವೇಗಕ್ಕೆ ಸಿಲುಕಿ ನಾಶವಾದ ಪತ್ರಕರ್ತರು……
ಶುದ್ದತೆಯಿಂದ ಮಾಲಿನ್ಯಕ್ಕೆ,
ಬುದ್ಧಿವಂತಿಕೆಯಿಂದ ಮೂರ್ಖತನಕ್ಕೆ ಜಾರಿದ ಪತ್ರಕರ್ತರು…..
ಜನಪ್ರಿಯತೆಯ ಹಿಂದೆ ಬಿದ್ದು ಸತ್ಯವನ್ನು ಸಮಾಧಿ ಮಾಡಿದ ಪತ್ರಕರ್ತರು…..
ಸೂಕ್ಷ್ಮತೆಯಿಂದ ಭಂಡತನಕ್ಕೆ ಜಿಗಿದ ಪತ್ರಕರ್ತರು……
ವೈಚಾರಿಕತೆಯಿಂದ ಮೌಢ್ಯಕ್ಕೆ, ವಾಸ್ತವತೆಯಿಂದ ಭ್ರಮೆಗೆ ಜನರನ್ನು ದೂಡಿದ ಪತ್ರಕರ್ತರು…..
ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಚಿನ್ನದ ಸೂಜಿಯಿಂದ ಕಣ್ಣಿಗೆ ಚುಚ್ಚಿಕೊಂಡು ಕುರುಡಾದ ಪತ್ರಕರ್ತರು…..
ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಹೊಸ ವರ್ಷದ ಸಂದರ್ಭದಲ್ಲಿ ಅದನ್ನು ಅತ್ಯಂತ ಮಹೋನ್ನತ ಸಂಭ್ರಮ ಎಂದು ವಿಜೃಂಭಿಸುವವರು ಇವರೇ, ಮತ್ತೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳುವವರೂ ಇವರೇ, ಜನರ ಮನರಂಜನೆಯ ಅಭಿವ್ಯಕ್ತಿಗೆ ಯಾವುದೇ ನಿರ್ಭಂದ ಇರಬಾರದು ಎನ್ನುವವರು ಇವರೇ,
ಅಲ್ಲಿ ನಡೆದ ಕೆಲವು ಸಣ್ಣ ಪುಟ್ಟ ಘಟನೆಗಳನ್ನೇ ಮತ್ತೆ ಮತ್ತೆ ಪ್ರದರ್ಶಿಸಿ ಇಡೀ ವಿಶ್ವದಲ್ಲೇ ರಾಜ್ಯಕ್ಕೆ ಆದ ಅವಮಾನ ಎಂದು ಹೇಳುವವರೂ ಇವರೇ…..
ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು, ಆ ವಿಷಯದ ಒಳಗಿನ ಸಂದೇಶ ಏನಾಗಿರಬೇಕು,
ಮೇಲ್ನೋಟದ ಸತ್ಯಕ್ಕಿಂತ ಆಂತರ್ಯದ ಮರ್ಮವೇನು, ಈ ಆಧುನಿಕ ಸಮಾಜದ ಹೆಣ್ಣು ಗಂಡು ಇಬ್ಬರ ಮಾನಸಿಕತೆ ಏನು ಎಂಬುದನ್ನು ಸಂಯಮದಿಂದ ಜವಾಬ್ದಾರಿಯಿಂದ ವಿಮರ್ಶಿಸದೆ ಇವರೂ ಅವರ ತರಹವೇ ಸ್ಟುಡಿಯೋಗಳಲ್ಲಿ ಕುಳಿತು ಆಡುತ್ತಾರೆ.
ಇನ್ನು ಕೆಲವು ಸಿನೆಮಾ ಸ್ಟಾರ್ ಗಳನ್ನು ಸಂದರ್ಶನ ಮಾಡುವಾಗ ಇವರು ಅವರಿಗೆ ಕೊಡುವ ಬಿಲ್ಡಪ್ ಗಳು ನಟನಟಿಯರು ಅತಿಮಾನವರೇ ಇರಬೇಕು ಎನಿಸುತ್ತದೆ.
ಸಿನಿಮಾ ಒಂದು ಮನರಂಜನಾ ಉದ್ಯಮ. ಅದರಲ್ಲಿ ನಟನೆ ಒಂದು ಕಲಾ ಮಾಧ್ಯಮ. ಅದರಲ್ಲಿ ಒಂದಷ್ಟು ಸೌಂದರ್ಯ, ಪ್ರತಿಭೆ, ಶ್ರಮ, ಗಿಮಿಕ್ , ಅದೃಷ್ಟ ಎಲ್ಲವೂ ಸೇರಿ ಜನಪ್ರಿಯತೆ ಗಳಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಯಾವುದೇ ಅತಿ ಅಮಾನುಷ ಶಕ್ತಿ ಅವರಿಗೆ ಇರುವುದಿಲ್ಲ. ಸಹಜವಾಗಿ ಎಲ್ಲಾ ಮನುಷ್ಯ ಪ್ರಾಣಿಗಳಂತೆ ಅವರಿಗೂ ಸಹಜ ಏರಿಳಿತಗಳ ಬದುಕು ಇರುತ್ತದೆ.
ಆದರೆ ಅವರನ್ನು ಮೆಚ್ವಿಸುವ ಭರದಲ್ಲಿ ಕಟ್ಟಾ ಅಭಿಮಾನಿಗಳಿಗಿಂತ ಹೆಚ್ಚಾಗಿ ದೈವಾಂಶ ಸಂಭೂತರಂತೆ ಅವರನ್ನು ವರ್ಣಿಸಿದರೆ ಸಮಾಜಕ್ಕೆ ತಲುಪುವ ಸಂದೇಶವಾದರೂ ಏನು ? ಆ ನಟಿಯ ಅಭಿನಯ, ಸಾಮಾಜಿಕ ಜವಾಬ್ದಾರಿ, ವೈಯಕ್ತಿಕ ಹೊಣೆಗಾರಿಕೆ, ಅವರ ನಟನೆಯ ದೋಷಗಳು ಎಲ್ಲವನ್ನೂ ಹೇಳುವವರು ಯಾರು. ಜನಪ್ರಿಯತೆಯ ಹಿಂದೆ ಬಿದ್ದು ಪತ್ರಕರ್ತರೇ ಹೊಗಳು ಭಟರಾದರೆ ವಾಸ್ತವಿದ ವಿವರಣೆ ಕೊಡುವವರಾರು….
ರಾಜಕೀಯ ವಿಷಯದಲ್ಲೋ ಸೂಕ್ಷ್ಮತೆ ಕಳೆದುಕೊಂಡು ಬಹಳ ದಿನಗಳಾಗಿವೆ. ತಮ್ಮ ನಿರೂಪಣೆಯಿಂದ, ಬಾಯಿ ಬುಡುಕತನದಿಂದ, ಅಜ್ಞಾನದಿಂದ, ಮಾತುಕತೆಯಿಂದ ಎಲ್ಲರ ನಡುವೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಾರೋ ಏನೋ ಲೋಕಾಭಿರಾಮವಾಗಿ ಹೇಳಿದ ಮಾತುಗಳನ್ನು, ಅದರ ಹಿನ್ನಲೆಯನ್ನು ಗಮನಿಸದೆ ಹಸಿಹಸಿಯಾಗಿ ಪ್ರಸಾರ ಮಾಡಿ ಇಡೀ ಘಟನೆಗಳ ದಿಕ್ಕನ್ನೇ ತಪ್ಪಿಸುತ್ತಾರೆ. ಸಿನಿಮಾ ಹಾಡುಗಳನ್ನು ರಾಜಕಾರಣಿಗಳ ವ್ಯಕ್ತಿತ್ವ ಅಳೆಯಲು ಉಪಯೋಗಿಸಿ ನಗೆಪಾಟಲು ಮಾಡುತ್ತಾರೆ. ಸಕಾರಾತ್ಮಕ ವಿಮರ್ಶೆಗಳನ್ನು ತುಳಿದು ನಕಾರಾತ್ಮಕ ವಿಷಯಗಳಿಗೆ ಸಂಪೂರ್ಣ ಸಮಯ ಮೀಸಲಿಡುತ್ತಾರೆ.
ಇನ್ನು ಮೌಢ್ಯಗಳ ವಿಷಯದಲ್ಲಿ ಟಿವಿ ನ್ಯೂಸ್ ಮಾಧ್ಯಮಗಳನ್ನು ಸಾಮಾಜಿಕ ಭಯೋತ್ಪಾದಕರೆಂದು ನಿಸ್ಸಂಶಯವಾಗಿ ಕರೆಯಬಹುದು. ಯಾವುದೇ ವೈಚಾರಿಕ ಪ್ರಜ್ಞೆ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುವವರು ಪತ್ರಕರ್ತರೆಂಬ ಭ್ರಮೆಗೆ ಒಳಗಾದ ನಿರೂಪಕರು……
ಮೌಢ್ಯಗಳನ್ನು ಬಿತ್ತುವವರು ಇವರೇ, ಮತ್ತೆ ಅದನ್ನು ಮೌಢ್ಯ ಎಂದು ಜರಿಯುವವರು ಇವರೇ, ಒಟ್ಟಿನಲ್ಲಿ ಬೇಜವಾಬ್ದಾರಿಯಿಂದ ಎಲ್ಲವನ್ನೂ ಸುದ್ದಿ ಮಾಡುವವರೂ ಇವರೇ…..
ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತ, ತಿಳಿವಳಿಕೆಯ, ಸೂಕ್ಷ್ಮ ಸಂವೇದನೆಯ ಜನರನ್ನು ಒಳಗೊಂಡಿರಬೇಕು. ಅವರನ್ನು ಪತ್ರಕರ್ತರು ಎಂದು ಕರೆಯಲಾಗುತ್ತದೆ. ಅವರ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ. ಆದರೆ ಈಗ ಟಿವಿ ವಾಹಿನಿಗಳನ್ನು ವೀಕ್ಷಿಸಿದರೆ ಪತ್ರಕರ್ತರೆಂಬ ಪರಿಕಲ್ಪನೆಯೇ ಬದಲಾದಂತೆ ಭಾಸವಾಗುತ್ತಿದೆ.
ಈಗ ಜನರು ಎಚ್ಚೆತ್ತುಕೊಳ್ಳುವ ಮೊದಲು ಮಾಧ್ಯಮಗಳೇ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…..
ಆದ್ದರಿಂದ ನಾವುಗಳು ಈ ವ್ಯಾಪಾರೀಕರಣಗೊಂಡ ಮಾಧ್ಯಮಗಳು ನೀಡುವ ಸುದ್ದಿಗಳನ್ನು ನೇರವಾಗಿ ಒಪ್ಪಿಕೊಳ್ಳದೆ ನಮ್ಮ ವಿವೇಚನೆ ಬಳಸಿ ಮತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿ ಇರುವವರ ಬಳಿ ಚರ್ಚಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು. ವೈಭವೀಕರಣಗೊಳ್ಳುವ ಮತ್ತು ಅವರಂತೆ ಕಣ್ಣಿಗೆ ಕಾಣುವ ಕಿವಿಗೆ ಕೇಳುವ ಯಾರೋ ಹೇಳುವ ವಿಷಯಗಳನ್ನು ನಿಜ ಎಂದು ಭಾವಿಸುವ ತಪ್ಪು ಮಾಡದೆ ಎಚ್ಚರಿಕೆಯಿಂದ ಇರೋಣ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068…….