
ಕಾಪು: ದಿನಾಂಕ:27-01-2024(ಹಾಯ್ ಉಡುಪಿ ನ್ಯೂಸ್) ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ದೈಹಿಕ, ಮಾನಸಿಕ ಕಿರುಕುಳ ಕೊಡುತ್ತಿದ್ದು ಇದೀಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ
ಕಾಪು ಮಜೂರು ಗ್ರಾಮದ ನಿವಾಸಿ ಸ್ಮೀತಾ (32) ಎಂಬವರು ದಿನಾಂಕ 08/09/2021 ರಂದು ಶಿವದಯ ಎಂಬವರನ್ನು ಗುರು-ಹಿರಿಯರ ಸಮ್ಮುಖದಲ್ಲಿ ಉಡುಪಿಯ ಕಿದಿಯೂರು ಹೋಟೆಲ್ ನಲ್ಲಿ ವಿವಾಹವಾಗಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಿವದಯರವರು ಮೂಲತಃ ಲಂಡನ್ ದೇಶದ ನಿವಾಸಿಯಾಗಿದ್ದು, ಅಲ್ಲಿಯ ನಾಗರಿಕತ್ವವನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಮದುವೆಯ ಸಂದರ್ಭ 20 ಲಕ್ಷ ವರದಕ್ಷಿಣೆ ನೀಡಬೇಕು ಹಾಗೂ ಮದುವೆಯ ಎಲ್ಲಾ ಖರ್ಚನ್ನು ನೋಡಿಕೊಳ್ಳುವಂತೆ ಶಿವದಯ ಮನೆಯವರು ತಿಳಿಸಿದ್ದು, ಮದುವೆಯ ಸಮಯ ಗಂಡ ಶಿವದಯನಿಗೆ 3 ಪವನ್ ಬಂಗಾರ ಕೂಡ ನೀಡಿದ್ದಾರೆ ಎನ್ನಲಾಗಿದೆ.
ಮದುವೆಯ ನಂತರ ಮುಂಬೈಯ ಕುರ್ಲಾದ ಮನೆಗೆ ಗಂಡ ಹಾಗೂ ಅವರ ತಂದೆ ತಾಯಿಯವರು ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸಿದ್ದು, ಮನೆಯಲ್ಲಿದ್ದ ಸಂಧರ್ಭದಲ್ಲಿ ಆಹಾರವನ್ನೂ ಕೊಡದೆ ಮಾನಸಿಕವಾಗಿ ಹಿಂಸಿಸಿರುತ್ತಾರೆ ಎನ್ನಲಾಗಿದೆ .
ಗಂಡ ಶಿವದಯನ ತಾಯಿಯಾದ ಶ್ರೀಮತಿ ಸುಜಾತ ರವರು ಹೊಡೆದಿರುತ್ತಾರೆ ಹಾಗೂ ನಂತರ ಗಂಡ ನನ್ನನ್ನು ಪುಸಲಾಯಿಸಿ ಲಂಡನ್ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಎಂದು ದೂರಿದ್ದಾರೆ.
ಆ ನಂತರ ಸ್ಮೀತಾರವರು ಭಾರತಕ್ಕೆ ಬಂದಿದ್ದು, ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ದಿನಾಂಕ 23/01/2024 ರಂದು ಮಧ್ಯಸ್ಥಿಕೆ ಮುಗಿದ ಬಳಿಕ ಸ್ಮೀತಾ ರವರು ಮನೆಗೆ ಹೋಗುವ ಸಂಧರ್ಭದಲ್ಲಿ ತನ್ನ ಗಂಡ ಹಾಗೂ ತನ್ನ ಮಾವ ದಯಾಶಂಕರ್ ರವರು ಸ್ಮೀತಾ ರವರನ್ನು ಮಜೂರಿನಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದ ಗಳಿಂದ ಬೈದು ಸ್ಮೀತಾರವರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ವರದಕ್ಷಿಣೆಗೆ ಹೆಚ್ಚಿನ ಬೇಡಿಕೆ ಇಟ್ಟು, ಬೆದರಿಕೆ ಹಾಕಿದ ಶಿವದಯ , ದಯಶಂಕರ್ ಮತ್ತು ಸುಜಾತ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಮೀತಾ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 498(A), 323, 341, 504, 506,ಜೊತೆಗೆ 34 ಐಪಿಸಿ ಮತ್ತು ಕಲಂ: 3, 4 D.P. Act ರಂತೆ ಪ್ರಕರಣ ದಾಖಲಾಗಿದೆ.