ಅಯೋಧ್ಯೆ: ದಿನಾಂಕ:22-01-2024(ಹಾಯ್ ಉಡುಪಿ ನ್ಯೂಸ್) ಹಿಂದೂ ಧರ್ಮದ ಆರಾಧ್ಯ ದೇವರಾದ ಪ್ರಭು ಶ್ರೀ ರಾಮಚಂದ್ರ ದೇವರ ಭವ್ಯ ದೇಗುಲ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಇಂದು ಲೋಕಾರ್ಪಣೆ ಗೊಂಡಿದೆ.
ಶತಮಾನಗಳಿಂದ ಶ್ರೀ ರಾಮ ಜನ್ಮಭೂಮಿಯಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಆಗಿದ್ದ ಧಕ್ಕೆ ದೇಶಾದ್ಯಂತ ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಕೊನೆಗೂ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಎರಡೂ ಧರ್ಮಗಳ ಸಮನ್ವಯತೆ ಯಿಂದ ಅಯೋಧ್ಯೆಯ ಮೂಲ ಸ್ಥಳದಲ್ಲೇ ಪ್ರಭು ಶ್ರೀರಾಮಚಂದ್ನನ ಭವ್ಯ ದೇಗುಲ ತಲೆಎತ್ತಿ ನಿಂತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಯೋಧ್ಯೆಯಲ್ಲಿ ಸಾವಿರಾರು ಸಂತರು, ಗಣ್ಯರ ಉಪಸ್ಥಿತಿಯಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು.
ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಇಂದು ಪವಿತ್ರ ದಿನವಾಗಿದ್ದು ಅವರ ಆರಾಧ್ಯ ದೇವರಾದ ಪ್ರಭು ಶ್ರೀ ರಾಮಚಂದ್ರ ಇಂದು ಐದು ಶತಮಾನಗಳ ಬಳಿಕ ಬಾಲ ರಾಮನಾಗಿ ಅಯೋಧ್ಯೆಯಲ್ಲಿ ಅವತಾರವೆತ್ತಿದ್ದಾನೆ. ಮತ್ತೊಮ್ಮೆ ಭರತಖಂಡದಲ್ಲಿ ಬಾಲರಾಮಾವತಾರವಾಗಿದೆ.