Spread the love

ತಮಗೆ ಅಂಟಿದ ರೇಬೀಸ್ ರೋಗವನ್ನು ಜನರಿಗೆ ಅಂಟಿಸುತ್ತಿರುವ ಕೆಲವು ನಕಲಿ ಪತ್ರಕರ್ತರು…….

ಕ್ಷಮಿಸಿ,
ನಿಮ್ಮಲ್ಲಿ ಕೆಲವರ ಮನಸ್ಸುಗಳಿಗೆ ಬೇಸರವಾಗಬಹುದು, ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮಾಡಬಹುದು. ಆದರೆ ಹುಚ್ಚುತನದ ಪರಮಾವಧಿ ತಲುಪುತ್ತಿರುವ ಕಪಟ ದೈವ ಭಕ್ತಿಯ ನಾಟಕ ಬಯಲು ಮಾಡಿ ದೇಶ ಭಕ್ತಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಗೊಳಿಸಲು ಅಕ್ಷರಗಳ ಮೂಲಕ ಒಂದಷ್ಟು ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ…….

ಮೊದಲಿಗೆ ‌ಈ ಮಾಧ್ಯಮಗಳು ನಮ್ಮ ಸಂವಿಧಾನದ ಮೂಲ ಆಶಯವನ್ನೇ ತಿಥಿ ಮಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾವಲುಗಾರರೇ ಕಳ್ಳತನ ಮಾಡುತ್ತಿದ್ದಾರೆ. ಅನ್ನವಿಟ್ಟ ಮನೆಗೆ ಕನ್ನ ಹಾಕುತ್ತಿದ್ದಾರೆ….

ಜನರ ಭಾವನೆಗಳನ್ನು ಗೌರವಿಸಬೇಕು ಎಂಬ ನೆಪದಲ್ಲಿ ತಮ್ಮ ನಿಜ ಮುಖವಾಡಗಳನ್ನು ತೋರಿಸಿ ಬೆತ್ತಲಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಜನರನ್ನು ಸಮೂಹ ಸನ್ನಿಯ ರೋಗವನ್ನು ಮತ್ತಷ್ಟು ಉಲ್ಬಣಗೊಳಿಸಿ ದೇಶವನ್ನು ಆತಂಕಕ್ಕೆ ದೂಡುತ್ತಿದ್ದಾರೆ……

ಕನ್ನಡದ ಟಿವಿ ಸುದ್ದಿ ವಾಹಿನಿಗಳ ಸಂಪಾದಕರು, ವರದಿಗಾರರು, ನಿರೂಪಕರು ತಮ್ಮ ವಾಹಿನಿಗಳಲ್ಲಿ ಮತ್ತು ಅಯೋಧ್ಯೆಯಿಂದ ಮಾತನಾಡುತ್ತಿರುವುದನ್ನು ಗಮನಿಸಿದರೆ ಬಹುಶಃ ಮಾಧ್ಯಮಲೋಕ ಸ್ವಾತಂತ್ರ್ಯ ನಂತರ ಇಷ್ಟೊಂದು ಅಧೋಗತಿ ಇಳಿದಿರುವುದು ಈಗ ದಾಖಲೆಯಾಗಿದೆ ಎಂದೆನಿಸುತ್ತದೆ…..

ಎಷ್ಟೊಂದು ಅನುಭವ, ತಿಳಿವಳಿಕೆ, ಅರಿವು ಮೂಡಿದ ನಂತರವೂ, ರಾಮ ಮಂದಿರ ಉದ್ಘಾಟನೆಗೆ 25000 ಸೈನಿಕರು, ಅರೆ ಸೈನಿಕರು, ಪೋಲೀಸರು, ಗೂಡಾಚಾರರು, ತಂತ್ರಜ್ಞಾನ ಎಲ್ಲವನ್ನೂ ಉಪಯೋಗಿಸಿಕೊಂಡು ರಕ್ಷಣೆ ಒದಗಿಸುವುದಾದರೆ ರಾಮನ ಶಕ್ತಿ ಏನು, ಆತ ನಮ್ಮಂತ ಸಾಮಾನ್ಯರನ್ನು ಹೇಗೆ ರಕ್ಷಿಸಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದಾಯಿತೆ ಮಾನ್ಯ ಪತ್ರಕರ್ತರೇ…..

ವ್ಯಾಟಿಕನ್ ಇರಲಿ, ಮೆಕ್ಕಾ ಇರಲಿ, ಜರುಸಲೇಂ ಇರಲಿ, ಅಮೃತಸರ ಇರಲಿ, ಯಾವುದೇ ಬುದ್ದ ಬಸವ ಮಹಾವೀರ ಅಂಬೇಡ್ಕರ್ ಶಿವಾಜಿ ರಾಯಣ್ಣ ಗಾಂಧಿ ವಿಗ್ರಹಗಳೇ ಇರಲಿ ಅವು ನಿರ್ಜೀವ ಪ್ರತಿಮೆಗಳು ಅಥವಾ ಕಟ್ಟಡಗಳೇ ಹೊರತು ಅದನ್ನು ಅವು ಸ್ವಯಂ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ರೂಪವೇ ಅದನ್ನು ರಕ್ಷಿಸಬೇಕು. ಅದೇ ಸೃಷ್ಟಿಯ ನಿಯಮ. ಇಷ್ಟು ಸಣ್ಣ ತಿಳಿವಳಿಕೆ ಇಲ್ಲದಿದ್ದರೆ ಪತ್ರಕರ್ತರಾಗಲು ಅನರ್ಹರು ಎಂದು ಕರೆಯಬಹುದು…..

” ದೇಶವೆಂದರೆ ಮಣ್ಣಲ್ಲ ಮನುಷ್ಯರು ” ಎಂದು ಕವಿಯೊಬ್ಬರು ಹೇಳುತ್ತಾರೆ. ಭಾರತದ ಅಧಿಕೃತ ಇತಿಹಾಸ ಪ್ರಾರಂಭವಾಗುವ ಹರಪ್ಪ – ಮಹೇಂಜಾದಾರೋ ನಾಗರಿಕತೆಯಿಂದ ಇಲ್ಲಿಯವರೆಗಿನ ಇತಿಹಾಸದಲ್ಲಿ ಬಹುಶಃ ಅತಿಹೆಚ್ಚು ಧಾರ್ಮಿಕ ಅಂಧತ್ವದ ಉನ್ಮಾದ ಸೃಷ್ಟಿಯಾಗಿರುವುದು ಈಗಲೇ ಇರಬೇಕು. ಏಕೆಂದರೆ ವೇದ ಉಪನಿಷತ್ತುಗಳ ಕಾಲದಿಂದ ಅಥವಾ ಮೊಗಲರ ಕಾಲದಲ್ಲಿ ಅಥವಾ ಬ್ರಿಟಿಷರ ಸಮಯದಲ್ಲಿ ಅಥವಾ ಇಲ್ಲಿಯವರೆಗೆ ಸ್ವಾತಂತ್ರ್ಯ ನಂತರದ ಆಡಳಿತದಲ್ಲಿ ಇಷ್ಟೊಂದು ಅತಿರೇಕ ಇರಲಿಲ್ಲ. ಸಾಕಷ್ಟು ಅಸಮಾನತೆ, ಅಮಾನವೀಯ ನಡವಳಿಕೆಗಳು ಇದ್ದರು ಈ ನೆಲದಲ್ಲಿ ನಿಜವಾದ ಭಕ್ತಿ, ಸಂಯಮ, ಸಾಮರಸ್ಯ, ಮಾನವೀಯತೆ ಸಹ ಸದಾ ಜೀವಂತವಾಗಿತ್ತು. ಇತರೆ ಧರ್ಮಗಳಂತೆ ದೇವರು – ಧರ್ಮದ ವಿಷಯದಲ್ಲಿ ಇಲ್ಲಿನ ಶ್ರಮಜೀವಿಗಳ ಸಂಸ್ಕೃತಿ ಕಾಯಕವನ್ನೇ ನಂಬಿ ಬದುಕುತ್ತಿತ್ತು. ದೈವ ಭಕ್ತಿ ಸಹಜವಾಗಿ ಹಬ್ಬ, ಜಾತ್ರೆ ಉತ್ಸವ, ಶುಭ ಸಮಾರಂಭಗಳಲ್ಲಿ ಎಷ್ಟು ಅವಶ್ಯಕವೋ ಅಷ್ಟೇ ಇತ್ತು……

ದೇವರೇ ಎಲ್ಲವನ್ನೂ ಮಾಡುತ್ತಾನೆ ಅಥವಾ ನೋಡಿಕೊಳ್ಳುತ್ತಾನೆ ಎಂಬ ಮೂರ್ತ ರೂಪಕ್ಕಿಂತ ಪ್ರಕೃತಿಯಲ್ಲಿ ದೇವರು, ಕಾಯಕದಲ್ಲಿ ದೇವರು, ಒಳ್ಳೆಯತನದಲ್ಲಿ‌ ದೇವರು,
ತನ್ನೊಳಗೆ ದೇವರು, ತಂದೆ ತಾಯಿಗಳಲ್ಲಿ‌ ದೇವರು, ಹೀಗೆ ವಿವಿಧ ರೂಪದಲ್ಲಿ ಕಾಣುತ್ತಿದ್ದುದೇ ಹೆಚ್ಚು. ಹಾಗೆಯೇ ಸಮಯ ಸಂದರ್ಭ ಅವಕಾಶ ಅನುಕೂಲ ನೋಡಿ ಮನೆಯ ದೇವರಲ್ಲದೆ ವಿವಿಧ ದೇವಸ್ಥಾನಗಳಿಗೆ ಭೇಟಿಯೂ ನಡೆಯುತ್ತಿತ್ತು….

ಭಾರತೀಯ ಜೀವನಶೈಲಿಯಲ್ಲಿ ದೇವರೆಂಬುದು ಒಂದು ನಂಬಿಕೆ ಮಾತ್ರ. ವಾಸ್ತವವಲ್ಲ. ದೇವರನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪೂಜಿಸುವವರು ಸಹ ಆಂತರ್ಯದಲ್ಲಿ ಇದ್ದೇ ಇರುವನು ಎಂಬ ಸಂಪೂರ್ಣ ನಂಬಿಕೆ ಹೊಂದಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮ ಶ್ರಮ – ಸಾಮರ್ಥ್ಯಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ. ವೈಧ್ಯರು, ವಿಜ್ಞಾನಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ಉದ್ಯಮಿಗಳು, ವ್ಯಾಪಾರಸ್ಥರು, ರೈತರು, ಸೈನಿಕರು, ವೃತ್ತಿನಿರತರು, ಸಾಮಾನ್ಯರು ಸೇರಿ ಎಲ್ಲರೂ ತಮ್ಮ ಕೆಲಸ ಮಾಡುತ್ತಾರೆ. ಆದರೆ ಒಳ್ಳೆಯ ಫಲಿತಾಂಶಕ್ಕೆ ಒಂದು ದೇವರೆಂಬ ಅಗೋಚರ ಶಕ್ತಿ ಇರಬಹುದು ಎಂದು ನಮಸ್ಕರಿಸುತ್ತಾರೆಯೇ ಹೊರತು ಸಂಪೂರ್ಣ ದೇವರಿದ್ದಾನೆ, ಆತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಸುಮ್ಮನಿರುವುದಿಲ್ಲ…..

ಅಪಾರ ದೈವ ಭಕ್ತಿಯ ರಾಜಕಾರಣಿಗಳಾದ ದೇವೇಗೌಡ, ಯಡಿಯೂರಪ್ಪ ಡಿಕೆ ಶಿವಕುಮಾರ್ ಅವರು ಎಷ್ಟೇ ಹೋಮ ಹವನ ಮಾಡಿ ಪೂಜೆ ಸಲ್ಲಿಸಿದರು, ಕುಂಕುಮ, ವಿಭೂತಿ, ದಾರ ಧರಿಸಿದರು ಚುನಾವಣಾ ಸಮಯದಲ್ಲಿ ಜಾತಿ ಹಣ ಕುತಂತ್ರ ಜೊತೆಗೆ ಹಗಲು ರಾತ್ರಿ ಕಷ್ಟ ಪಡುತ್ತಾರೆ. ದೇವರ ಮೇಲೆ ಭಾರ ಹಾಕಿ ಮನೆಯಲ್ಲಿ ಮಲಗುವುದಿಲ್ಲ. ದೇವರು ಇದ್ದಾನೆ ಎಂಬ ಪ್ರಬಲ ನಂಬಿಕೆ ಅವರದಾಗಿದ್ದರೆ ದೇವಸ್ಥಾನದಲ್ಲಿಯೇ ಸಮಯ ಕಳೆಯಬಹುದಲ್ಲ…..

ಇಷ್ಟರ ನಡುವೆಯೂ ಇವರುಗಳಿಗೆ ಸದಾ ಗೆಲುವೇ ಸಿಗುವುದಿಲ್ಲ. ಸೋಲು ಗೆಲುವು ಅವಮಾನ ಜೈಲು ಅನಾರೋಗ್ಯ ಎಲ್ಲವೂ ಸಹಜವಾಗಿ ಎಲ್ಲರಂತೆ ಇದ್ದೇ ಇರುತ್ತದೆ ಅಲ್ಲವೇ. ಅದನ್ನು ಅವರು ಸ್ವೀಕರಿಸುತ್ತಾರೆ ಸಹ…..

ರಾಮನೂರಿನಿಂದ ನೇರ ಸುದ್ದಿ ಪ್ರಸಾರ ಮಾಡುತ್ತಿರುವ ಪತ್ರಕರ್ತರೇ, ಸಂಪಾದಕರೇ, ವಾಹಿನಿಗಳೇ, ನಿರೂಪಕರೇ,…

ನೀವು ಅನುಭವಿಸುತ್ತಿರುವ ಈ ಜೀವನದ ಎಲ್ಲಾ ಅನುಕೂಲಗಳು ನಿಮಗೆ ದೊರೆತಿರುವುದು ರಾಮ ಅಲ್ಲಾ ಜೀಸಸ್ ಗಳಿಂದಲ್ಲ. ಇಲ್ಲಿನ ಜನ ತಮ್ಮ ಅನುಭವ ಮತ್ತು ಅನುಭಾವದಿಂದ ಕಟ್ಟಿಕೊಂಡ ಮಾನವೀಯ ಮೌಲ್ಯಗಳ ಅದ್ಬುತ ಸಮಾಜದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ. ರಾಮರಾಜ್ಯವೇ ಆಗಿದ್ದರೆ ಅಲ್ಲಿ ಅವರ ಮಕ್ಕಳ ವಂಶಪಾರಂಪರ್ಯ ಆಡಳಿತ ಮತ್ತು ಸರ್ವಾಧಿಕಾರಿ ಆಡಳಿತ ಇರುತ್ತಿತ್ತು. ಟೀ ಮಾರುತ್ತಿದ್ದ ಸಾಮಾನ್ಯ ಹುಡುಗ 142 ಕೋಟಿ ಜನಸಂಖ್ಯೆಯ ವೈವಿಧ್ಯಮಯ ದೇಶದಲ್ಲಿ ಸುಮಾರು ‌13 ವರ್ಷ ಮುಖ್ಯಮಂತ್ರಿ, 10 ವರ್ಷ ಪ್ರಧಾನ ಮಂತ್ರಿ ಆಗುತ್ತಿರಲಿಲ್ಲ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಒಂದು ‌ಶ್ರೀಮಂತ ರಾಜ್ಯದ 13 ಬಜೆಟ್ ಮಂಡಿಸಿ 6 ವರ್ಷ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಾವು ಹೀಗೆ ಮುಕ್ತವಾಗಿ ವಿಶ್ವದ ಯಾವುದೇ ಭಾಗಕ್ಕಿಂತ ಹೆಚ್ಚು ಸ್ವತಂತ್ರವಾಗಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು‌ ಸಾಧ್ಯವಾಗುತ್ತಿರಲಿಲ್ಲ,
ವಿಭಿನ್ನ ಧಾರ್ಮಿಕ ನಂಬಿಕೆಗಳ 40 ಕೋಟಿಗೂ ಹೆಚ್ಚು ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಜೈನ್ ಬೌದ್ದ ಪಾರ್ಸಿ ಲಿಂಗಾಯತ ಧರ್ಮದವರು ಇಲ್ಲಿ ‌ಸುರಕ್ಷಿತವಾಗಿ ಬದುಕಲು‌ ಸಾಧ್ಯವಾಗುತ್ತಿರಲಿಲ್ಲ….

ಅದಕ್ಕೆ ಕಾರಣ ಮತ್ತು ಇದು ಸಾಧ್ಯವಾಗಿದ್ದು
ಮುಟ್ಟಿಸಿಕೊಳ್ಳದ ಮನುಷ್ಯನಾಗಿ ಹುಟ್ಟಿದ ಹುಡುಗನೊಬ್ಬ ವಿಶ್ವ ಶ್ರೇಷ್ಠ ಸಂವಿಧಾನ ರಚಿಸಿರುವುದು ನೆನಪಿರಲಿ….

ಎಲ್ಲರಿಗೂ ಅನ್ವಯಿಸುವಂತೆ ಹೇಳುವುದಾದರೆ, ದೇವರು – ಭಕ್ತಿ ವೈಯಕ್ತಿಕ ಮಟ್ಟದಲ್ಲಿರಲಿ. ಪೂಜೆ – ಪ್ರಾರ್ಥನೆ ಮಸೀದಿ ಮಂದಿರ ಚರ್ಚುಗಳಿಗೆ ಸೀಮಿತವಾಗಿರಲಿ. ಬಹಿರಂಗ ಹುಚ್ಚುತನ ಬೇಡ. ಬೇರೆಯವರು ತಪ್ಪು ಮಾಡಿದ್ದರೆ ಅದನ್ನೇ ನೆಪ ಮಾಡಿಕೊಂಡು ನಾವು ಇನ್ನೊಂದು ದೊಡ್ಡ ತಪ್ಪು ಮಾಡುವುದು ಬೇಡ. ರಷ್ಯಾ ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್ ಯುದ್ಧ ಇನ್ನೂ ನಿಂತಿಲ್ಲ. ಇರಾನ್ ಪಾಕಿಸ್ತಾನದ ಮಧ್ಯೆ ತಿಕ್ಕಾಟ ಪ್ರಾರಂಭವಾಗಿದೆ. ನಮ್ಮಲ್ಲಿ ಮಣಿಪುರದ ಗಲಭೆ ಮತ್ತೆ ಶುರುವಾಗಿದೆ. ಇಂತಹ ಒತ್ತಡದ ಸಂದರ್ಭದಲ್ಲಿ ಅವಶ್ಯಕವಾಗಿ ಅತಿರೇಕದ ವರ್ತನೆಗಿಂತ ಸಂಯಮದ ಸಂಭ್ರಮ ಬಹಳ ಮುಖ್ಯ…

ಸಾಮಾನ್ಯ ಜನರ ಸಾಮಾನ್ಯ ವರ್ತನೆ ಸಹನೀಯ. ಆದರೆ ಮಾಧ್ಯಮಗಳ ಅತಿಯಾದ ವಿಜೃಂಭಣೆ ರಾಮನ ಬಗೆಗಿನ ಗೌರವಕ್ಕೂ ಚ್ಯುತಿ ಬರುವಂತಿದೆ. ಇಷ್ಟೊಂದು ಹೀನಾಯ ಮನಸ್ಥಿತಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಖಂಡಿತ ಒಳ್ಳೆಯದಲ್ಲ. ಸಮಗ್ರ ಚಿಂತನೆಯ ಅರಿವೇ ಇಲ್ಲದ ಯಾರು ಯಾರು ಅಯೋಧ್ಯೆಗೆ ಹೋಗಿ ವಿವೇಚನೆ ಇಲ್ಲದೇ ಯುದ್ದ ಭೂಮಿಯ ರಣೋತ್ಸಾಹ ಬಂದವರಂತೆ ಅಯೋಗ್ಯ ತನದಿಂದ ಮಾತನಾಡುತ್ತಾರೆ. ಅದರ ದುಷ್ಪರಿಣಾಮ ಬಗ್ಗೆ ಯೋಚಿಸುವುದೇ ಇಲ್ಲ.

ಪತ್ರಕರ್ತರು ಸಂಸ್ಕೃತಿಯ ವಾಹಕರು. ಆದರೆ ಈ ವಿಷಯದಲ್ಲಿ ಇವರುಗಳು ಬಹುತೇಕ ಹುಚ್ಚರಂತೆ, ಜನರಿಗೆ ರಾಮನ ಬಗ್ಗೆಯೇ ಜಿಗುಪ್ಸೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಐತಿಹಾಸಿಕ ಮಹತ್ವದ ಅನೇಕ ವ್ಯಕ್ತಿಗಳನ್ನು ನಿರ್ಲಕ್ಷಿಸಿ ರೇಬಿಸ್ ರೋಗಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ದಯವಿಟ್ಟು ಅವರ ಬಲೆಗೆ ಬೀಳದೆ ಭಕ್ತಿ ಇರುವವರು ಸಂಯಮದಿಂದ ವರ್ತಿಸಿ. ಈಗ ಭಾವನೆಗಳಿಗೆ ಧಕ್ಕೆ ಎನ್ನುವ ನೆಪ ಬೇಡ. ‌ದೇಶದ ಐಕ್ಯತೆ ಮತ್ತು ಸಮಗ್ರತೆ ನಮ್ಮೆಲ್ಲರ ಆದ್ಯತೆಯಾಗಿರಲಿ.
ಧನ್ಯವಾದಗಳು ಶುಭೋದಯ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!