Spread the love

ನಿಜವಾದ ಪ್ರಬುದ್ದ ಮನಸ್ಸುಗಳ ನ್ಯಾಯದ ದಂಡ ಸದಾ ನೇರ ಮತ್ತು ಸಮಾನಾಂತರವಾಗಿ ಇರಬೇಕಾಗುತ್ತದೆ. ಆಗ ಮಾತ್ರ ಎಲ್ಲವನ್ನೂ ಪ್ರಶ್ನಿಸುವ ಧೈರ್ಯ ಮತ್ತು ನೈತಿಕತೆ ಇರುತ್ತದೆ….

ಹಿಂದೂ ಮೂಲಭೂತವಾದಿಗಳ ನೈತಿಕ ಪೋಲೀಸ್ ಗಿರಿ ಪ್ರಶ್ನಿಸುವ ಮತ್ತು ಟೀಕಿಸುವ ಯಾರೇ ಆಗಲಿ ಅದೇ ಧ್ವನಿಯಲ್ಲಿ ಪ್ರಾಮಾಣಿಕವಾಗಿ ಮತ್ತು ಅಷ್ಟೇ ನಿಷ್ಠುರವಾಗಿ ಮುಸ್ಲಿಂ ಮೂಲಭೂತವಾದಿಗಳ ಹುಚ್ಚಾಟಗಳನ್ನು ಖಂಡಿಸಲೇಬೇಕು. ಕೇವಲ ಮಾತಿಗಾಗಿ ಮಾತ್ರವಲ್ಲ ಅವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಲೇಬೇಕು…

ಕಾನೂನು ವಿರುದ್ಧದ ಯಾವುದೇ ಅಪರಾಧ ಮತ್ತು ಹಿಂಸೆಗಳಿಗೆ ಯಾವ ಜಾತಿ ಧರ್ಮ ಪಕ್ಷ ಪ್ರದೇಶದ ನೆರಳು ಸೋಕಬಾರದು. ಅದು ಒಂದು ಅಪರಾಧ ಮಾತ್ರ ಎಂದೇ ಪರಿಗಣಿಸಬೇಕು.

ಹಾವೇರಿ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ನೋಡಿದರೆ ಹಿಂದು ಹುಡುಗನ ಜೊತೆ ಇದ್ದ ಮುಸ್ಲಿಂ ಹೆಣ್ಣು ಮಗಳಿಗೆ ಥಳಿಸಿ ಅತ್ಯಾಚಾರ ಸಹ ಮಾಡಲಾಗಿದೆ ಎಂಬ ಸುದ್ದಿ ಬರುತ್ತಿದೆ. ಹಿಂದು ಮತ್ತು ಮುಸ್ಲಿಂ ಹೆಣ್ಣುಮಕ್ಕಳನ್ನು ಯಾರೂ ಗುತ್ತಿಗೆ ತೆಗೆದುಕೊಂಡಿಲ್ಲ. ಪ್ರಾಪ್ತ ವಯಸ್ಸಿನ ಎಲ್ಲರೂ ತಮ್ಮ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರೇ. ಕೆಲವು ಕಡೆ ಮುಸ್ಲಿಂ ಹುಡುಗನ ಜೊತೆಯಲ್ಲಿರುವ ಹಿಂದೂ ಹುಡುಗಿಯನ್ನು ಹಿಂದು ಹುಡುಗರು ಥಳಿಸುವುದು ಸಹ ನಡೆದಿದೆ….

ಕೆಲವು ಮೂಲಭೂತವಾದಿ ಯುವಕರಿಗೆ ಸಾಮಾನ್ಯ ಜ್ಞಾನವು ಇಲ್ಲ. ಇದು ಷರಿಯತ್ ಅಥವಾ ಭಗವದ್ಗೀತೆಯ ಆಧಾರದ ಮೇಲೆ ನಡೆಯುತ್ತಿರುವ ರಾಜಪ್ರಭುತ್ವವಲ್ಲ. ಸಂವಿಧಾನದ ಅಡಿಯ ಪ್ರಜಾಪ್ರಭುತ್ವ. ಇಲ್ಲಿ ಪೋಲೀಸ್ ಮತ್ತು ನ್ಯಾಯಾಂಗದ ವ್ಯವಸ್ಥೆ ಇದೆ. ಕೆಲವು ದೌರ್ಬಲ್ಯಗಳ ನಡುವೆಯೂ ಅದನ್ನೇ ನಾವು ಪಾಲಿಸಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ….

ಕೆಲವು ಪ್ರಗತಿಪರರ ಮೇಲಿರುವ ಆರೋಪ ಅವರು ಕೇವಲ ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಹುಳುಕುಗಳ ಬಗ್ಗೆ ಗಂಭೀರವಾದ ಧ್ವನಿಯಲ್ಲಿ ಮಾತನಾಡುವುದಿಲ್ಲ. ಅದು ಪಕ್ಷಪಾತವಲ್ಲವೇ ಎಂದು. ಒಂದು ಸಮಗ್ರ ದೃಷ್ಟಿಕೋನದಿಂದ ಯೋಚಿಸಿದಾಗ ಇದು ಸಂಪೂರ್ಣ ನಿಜವಲ್ಲದೇ ಇರಬಹುದು. ಆದರೆ ಸಾಮಾನ್ಯ ದೃಷ್ಟಿಯಲ್ಲಿ ಇದು ಸ್ವಲ್ಪ ಮಟ್ಟಿಗೆ ನಿಜ ಎಂಬುದು ವಾಸ್ತವ. ಆಂತರ್ಯದ ಮಾನವೀಯತೆ ಮತ್ತು ಮುಖವಾಡ ಹಿಂದಿನ ಪ್ರಚಾರ, ಪ್ರಶಸ್ತಿ, ಅಧಿಕಾರದ ಮಾನವೀಯತೆಯ ನಡುವೆ ಸಾಕಷ್ಟು ಸೂಕ್ಷ್ಮವಾದ ವ್ಯತ್ಯಾಸವಿದೆ….

ಪ್ರೀತಿ, ಕರುಣೆ, ತ್ಯಾಗದ ನಿಜ ಮಾನವೀಯತೆ ಮತ್ತು ಕಾಠಿಣ್ಯ ತುಂಬಿದ ಸೈದ್ದಾಂತಿಕ ಒಣ ವೈಚಾರಿಕತೆ ನಡುವೆಯೂ ಸಾಕಷ್ಟು ವ್ಯತ್ಯಾಸಗಳು ಇವೆ. ಇಂದಿನ‌ ಎಡ ಬಲಗಳ ಸಂಘರ್ಷಕ್ಕೆ ಇದು ಸಹ ಪ್ರಬಲ ಕಾರಣವಾಗಿದೆ…

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬದಲಾಗಿ ಅಥವಾ ದೇವಸ್ಥಾನಗಳ ಜಾಗದಲ್ಲಿ ಆಸ್ಪತ್ರೆ, ಗ್ರಂಥಾಲಯ, ಶಿಕ್ಷಣ ಸಂಸ್ಥೆ, ಮೈದಾನ ನಿರ್ಮಿಸಬೇಕೆಂದು ಹೇಳುವವರು ಅದೇ ರೀತಿ ಚರ್ಚು, ಮಸೀದಿ, ಗುರುದ್ವಾರ, ಜೈನ ಬಸದಿ, ಬೌದ್ದ ಮಂದಿರ ನಿರ್ಮಾಣದ ಜಾಗದಲ್ಲಿ ಸಹ ಅದಕ್ಕಿಂತ ಮುಖ್ಯವಾಗಿ ಜನೋಪಯೋಗಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಧೈರ್ಯವಾಗಿ ಮತ್ತು ನೇರವಾಗಿ ಹೇಳಬೇಕಾಗುತ್ತದೆ. ಆಗ ಒಂದು ನೈತಿಕ ಪ್ರಜ್ಞೆ ಜನರಲ್ಲಿ ಜಾಗೃತವಾಗುತ್ತದೆ. ಪ್ರಗತಿಪರರ ಪ್ರಾಮಾಣಿಕತೆ ಬಗ್ಗೆ ವಿಶ್ವಾಸ ಮೂಡುತ್ತದೆ. ಇಲ್ಲದಿದ್ದರೆ ಅದು ಪಕ್ಷಪಾತದ ಧೋರಣೆಯಾಗುತ್ತದೆ….

ಈ ಚರ್ಚೆಗಳೇ ಅತ್ಯಂತ ಸೂಕ್ಷ್ಮವಾದವುಗಳು. ಕೆಲವು ವಿಷಯಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಕು. ಕೆಲವು ವಿಷಯಗಳನ್ನು ಬೇರೆ ಬೇರೆ ತಕ್ಕಡಿಯಲ್ಲಿ ತೂಗಬೇಕು. ಅದು ಸಹಜ ಮಾನದಂಡ. ದುರಂತವೆಂದರೆ ಸತ್ಯದ ಹುಡುಕಾಟಕ್ಕಿಂತ ವಾದದ ಗೆಲುವೇ ಮುಖ್ಯವಾಗುವುದರಿಂದ ತಮಗೆ ಅನುಕೂಲಕರ ವಿಷಯಗಳನ್ನು ತಮಗೆ ಬೇಕಾದ ತಕ್ಕಡಿಯಲ್ಲಿಟ್ಟು, ವಾಸ್ತವ ಮರೆತು ಗೆಲ್ಲುವ ತಂತ್ರ ಉಪಯೋಗಿಸುತ್ತಾರೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿರುವುದರಿಂದ ಒಂದು ಕಡೆ ಸಂಪ್ರದಾಯವಾದಿಗಳು ಸರಿ ಎನಿಸಿದರೆ ಮತ್ತೊಂದು ಕಡೆ ಪ್ರಗತಿಪರರು ಸರಿ ಎನಿಸುತ್ತಾರೆ…..

ಹೃದಯದ ಭಾಷೆ ಮೆದುಳಿನ ಭಾಷೆಗಿಂತ ಹೆಚ್ಚು ಆಳವಾದದ್ದು ಮತ್ತು ಪರಿಣಾಮಕಾರಿಯಾದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಮಾತು ಮತ್ತು ಅಕ್ಷರಗಳ ಭಾಷೆಯೇ ಮೇಲುಗೈ ಪಡೆಯುತ್ತಿದೆ. ಅದರ ದುಷ್ಪರಿಣಾಮ ಚರ್ಚೆಗಳು ಎಡಪಂಥೀಯ ಅಥವಾ ಬಲಪಂಥೀಯ ಎಂದು ಅಥವಾ ಹಿಂದು ಪರ ಅಥವಾ ಹಿಂದು ವಿರೋಧಿ ಎಂದು ಅಥವಾ ಮುಸ್ಲಿಂ ಪರ ಅಥವಾ ವಿರೋಧಿ ಎಂದು ಕರೆಯಲಾಗುತ್ತದೆ. ಇದು ಇಡೀ ವಿಷಯದ ಸತ್ಯವನ್ನೇ ನಾಶ ಮಾಡುತ್ತದೆ……

ಅಲ್ಪಸಂಖ್ಯಾತರ ಬಗ್ಗೆ ಸಹಜವಾಗಿ ಸ್ವಲ್ಪ ಸಹಾನುಭೂತಿ ಇರಬೇಕಾಗುತ್ತದೆ. ಸನಾತನ ಮತ್ತು ಇಸ್ಲಾಂ ಧರ್ಮದ ನಂಬಿಕೆ ಮತ್ತು ಆಚರಣೆಗಳ ನಡುವಿನ ವ್ಯತ್ಯಾಸಗಳನ್ನು ಸಹ ಪರಿಗಣಿಸಬೇಕಾಗುತ್ತದೆ. ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಗೌರವಿಸಬೇಕಾಗುತ್ತದೆ. ಸೃಷ್ಟಿಯ ಸಾರ್ವತ್ರಿಕ ಸತ್ಯವನ್ನು ಅರ್ಥಮಾಡಿಕೊಂಡಿರಬೇಕಾಗುತ್ತದೆ. ಈ ಎಲ್ಲದರ ಅರಿವಿನಿಂದ ವಾಸ್ತವ ಪ್ರಜ್ಞೆಯೊಂದಿಗೆ ನಾವು ಮಾತನಾಡಬೇಕಾಗುತ್ತದೆ. ಆಗ ದೇಶದಲ್ಲಿ ಸಾಮರಸ್ಯ ಮೂಡಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗೆಂದು ಬಹುಸಂಖ್ಯಾತರಿಗೆ ಅನ್ಯಾಯವಾಗಲು ಬಿಡಬಾರದು. ಇದೊಂದು ಅತ್ಯಂತ ಜವಾಬ್ದಾರಿಯುತ ನಡವಳಿಕೆ……

ಹಾವೇರಿಯ ನೈತಿಕ ಪೋಲೀಸ್ ಗಿರಿಯನ್ನು ಮುಸ್ಲಿಂ ಸಮುದಾಯದ ಜನರು ಸಹ ಬಹಿರಂಗವಾಗಿ ಖಂಡಿಸಬೇಕು. ಹಾಗೆ ದಾರಿಯಲ್ಲಿ ಹೋಗುವ ಯಾರು ಯಾರು ಕಾನೂನು ಕೈಗೆ ತೆಗೆದುಕೊಳ್ಳುವುದು ಅತ್ಯಂತ ಅಮಾನವೀಯ ವರ್ತನೆ. ಅದು ಯಾವ‌ ಧರ್ಮದವರೇ ಆಗಿರಲಿ ತಮಗೆ ಸಂಬಂಧವಿಲ್ಲದ ವಿಷಯದಲ್ಲಿ ಮೂಗು ತೂರಿಸಿ ಹಿಂಸಿಸುವುದು ಅಧರ್ಮ ಎಂಬ ತಿಳಿವಳಿಕೆ ಇರಬೇಕು….

ಧರ್ಮವನ್ನು ಗುತ್ತಿಗೆ ಪಡೆದಂತೆ ಮಾತನಾಡುವವರು ಮತ್ತು ಅದರಂತೆ ವರ್ತಿಸುವವರು ಧರ್ಮ ವಿರೋಧಿಗಳು ಮತ್ತು ದೇಶ ದ್ರೋಹಿಗಳು. ಸಾಮಾನ್ಯ ಜನ ಈ ರೀತಿಯ ಸಮೂಹ ಸನ್ನಿಗೆ ಒಳಗಾಗದೆ ಸಹಜವಾಗಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ ಎಂದು ಮನವಿ ಮಾಡುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!