Spread the love

ಹಬ್ಬದ ದಿನದಂದು ಆಧ್ಯಾತ್ಮಿಕ ಚಿಂತನೆ ಜನ ಸಾಮಾನ್ಯರ‌ ಒಟ್ಟು ಜೀವನಮಟ್ಟ ಸುಧಾರಣೆಗೆ ಸಹಾಯವಾಗಬಲ್ಲದೇ…….

ಅಧ್ಯಾತ್ಮ ಕುರಿತ ಒಂದು ಚಿಂತನೆ……..

ಏನಿದು ಅಧ್ಯಾತ್ಮ ?….

ಇದೊಂದು ದೈವಿಕತೆಯೇ ?
ವಿಶಿಷ್ಟ ಅನುಭವವೇ ?
ಜ್ಞಾನದ ಪರಾಕಾಷ್ಠೆಯೇ ?
ಭಕ್ತಿಯ ತುತ್ತ ತುದಿಯೇ ?
ಧರ್ಮದ ಆಚರಣೆಯೇ ?
ದೇವರ ಸಾನಿಧ್ಯವೇ ?
ನೆಮ್ಮದಿಯ ಹುಡುಕಾಟವೇ ?

ಸಾವಿನ ಭಯ ಗೆಲ್ಲುವ ತಂತ್ರವೇ ?
ಬದುಕಿನ ಉತ್ಸಾಹ ಹೆಚ್ಚಿಸುವ ಮಾರ್ಗವೇ ?
ವಾಸ್ತವ ಎದುರಿಸದೇ ಗೌರವಯುತವಾಗಿ ಪಲಾಯನ ಮಾಡಲು ಕಂಡುಕೊಂಡ ವಿಧಾನವೇ ?

ಆಧ್ಯಾತ್ಮಕ್ಕೆ ವಯಸ್ಸಿನ ಮಿತಿ ಇದೆಯೇ ?
ಆಧ್ಯಾತ್ಮಕ್ಕೆ ಲಿಂಗ ಬೇದ ಇದೆಯೇ ?
ಜಾತಿ ಧರ್ಮ ಭಾಷೆ ಪ್ರದೇಶದ ವ್ಯತ್ಯಾಸ ಇದೆಯೇ ?

ಆಧ್ಯಾತ್ಮ ಕೇವಲ ಜ್ಞಾನಿಗಳಿಗೆ ಮಾತ್ರ ನಿಲುಕುವುದೇ ?
ದೇವರು ಧರ್ಮ ಭಕ್ತಿ ರೀತಿಯ ವಿಷಯಗಳಿಗೆ ಮಾತ್ರ ಆಧ್ಯಾತ್ಮ ಸಂಬಂಧಿಸಿದೆಯೇ ?
ಆಧ್ಯಾತ್ಮಿಕತೆ ಪಡೆಯಲು ಬಹುದೊಡ್ಡ ಸಾಧನೆಯ ಅವಶ್ಯಕತೆ ಇದೆಯೇ ?
ದಿನನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆಗೆ ಜಾಗ ಇದೆಯೇ ?
ಆಧ್ಯಾತ್ಮಿಕತೆಯಿಂದ ಮಾಡಬಹುದಾದ ಸಾಧನೆಯಾದರೂ ಏನು ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ, ಸಾಮಾನ್ಯ ಜನರ ಮನಸ್ಸಿನಲ್ಲಿ ಆಧ್ಯಾತ್ಮದ ಬಗ್ಗೆ ಇರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸರಳವಾಗಿ ಹೇಳುವ ಒಂದು ಸಣ್ಣ ಪ್ರಯತ್ನ……

ನಿಸ್ಸಂದೇಹವಾಗಿ ಆಧ್ಯಾತ್ಮ..
ಸಾವಿನ ಭಯ ಗೆಲ್ಲಲು,
ಸೋಲಿನ ನಿರಾಸೆ ಮರೆಯಲು,
ಸಂಕಷ್ಟಗಳಲ್ಲಿ ಮಾನಸಿಕವಾಗಿ ಕುಸಿಯದಂತೆ ತಡೆಯಲು,
ಬದುಕಿನ ಉತ್ಸಾಹ ಹೆಚ್ಚಿಸಲು,
ಸಾಮಾನ್ಯ ಜನರಲ್ಲಿ ಕೆಲವರು ಮುಖ್ಯವಾಗಿ ಧಾರ್ಮಿಕ ವ್ಯಕ್ತಿಗಳು ಅದೊಂದು ಅತಿಮಾನುಷ ಶಕ್ತಿ ಎಂಬ ಭ್ರಮೆ ಸೃಷ್ಟಿಸಿ ತಮ್ಮ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು,
ದೇವರು ಮತ್ತು ಧರ್ಮದ ಆಳ ಅರಿಯಲು ಅನುಸರಿಸುವ ಒಂದು ಮಾರ್ಗ….

ಆಧ್ಯಾತ್ಮ ಎಂಬುದು ಒಂದು ಅನುಭಾವ. ಅದರಲ್ಲಿ ” ಜ್ಞಾನ ಅನುಭವ ಭಕ್ತಿ ನಂಬಿಕೆ ವೈಚಾರಿಕತೆ ಅಹಂ ತಿಕ್ಕಲುತನ ” ಎಲ್ಲವೂ ಸಮ್ಮಿಳಿತವಾಗಿವೆ.

ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗದ ಸಿದ್ದಿಯೂ ಆಧ್ಯಾತ್ಮ,

ಮೋಕ್ಷದತ್ತ ಮುನ್ನಡೆಯುವುದು ಒಂದು ಆಧ್ಯಾತ್ಮ,

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು ಆಧ್ಯಾತ್ಮ,

ಸ್ಥಿತಪ್ರಜ್ಞತೆಯತ್ತ ಇಡುವ ಹೆಜ್ಜೆ ಆಧ್ಯಾತ್ಮ,

ಸಾಮಾನ್ಯ ಜನರಿಗೆ ಆಧ್ಯಾತ್ಮದ ಒಲವು ಮೂಡುವುದು ತಮ್ಮ ಬದುಕಿನ ಸಂಧ್ಯಾ ಕಾಲದಲ್ಲಿ, ಕೆಲವರಿಗೆ ಸೋಲು ನಿರಾಸೆಯ ನಂತರ , ಮತ್ತೆ ಹಲವರಿಗೆ ಯಶಸ್ಸಿನ ತುತ್ತತುದಿಯಲ್ಲಿರುವಾಗ
ಆಧ್ಯಾತ್ಮದ ಬಗ್ಗೆ ಚಿಂತನೆ ಪ್ರಾರಂಭವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮದ ಬಗ್ಗೆ ಆಸಕ್ತಿ ಮೂಡುವುದು ಅಪರೂಪ. ಭಾರತೀಯ ಪರಂಪರೆಯಲ್ಲಿ ಸನ್ಯಾಸ ದೀಕ್ಷೆ ಪಡೆವ ಬಾಲಕರಿಗೆ ಆಧ್ಯಾತ್ಮವನ್ನೇ ಶಿಕ್ಷಣವಾಗಿ ಕಲಿಸಲಾಗುತ್ತದೆ.

ವೈಚಾರಿಕವಾಗಿ ಆಧ್ಯಾತ್ಮವನ್ನು ಹೀಗೆ ಅರ್ಥೈಸಬಹುದು…..

” ಆಧ್ಯಾತ್ಮ ಜ್ಞಾನದ ಧ್ಯಾನಸ್ಥ ಸ್ಥಿತಿ “

ಇದು ಭಕ್ತಿಯ ಭಾವದಿಂದಲೂ ಮೂಡಬಹುದು.
ಜ್ಞಾನದ ಬಲದಿಂದಲೂ ಮೂಡಬಹುದು,
ಇದು ದೇಹ ಮತ್ತು ಮನಸ್ಸಿನ ನಿಯಂತ್ರಣದಿಂದಲೂ ಮೂಡಬಹುದು.
ಕೆಲವು ಅಪರೂಪದ ವ್ಯಕ್ತಿಗಳಲ್ಲಿ ಗುರುವಿನ ಬಲದಿಂದಲೂ ಮೂಡಬಹುದು.

ಸಾಮಾನ್ಯ ಜನರ ಸಾಮಾನ್ಯ ಪರಿಸ್ಥಿತಿಯಲ್ಲಿ ದಿನನಿತ್ಯದ ಅವಶ್ಯಕತೆಗಳಿಗೇ ಸಂಪೂರ್ಣ ಸಮಯ ವಿನಿಯೋಗಿಸುವ ಕಾರಣದಿಂದ ಆಧ್ಯಾತ್ಮ ಕೇವಲ ದೊಡ್ಡ ಜನಗಳಿಗೆ, ಬುದ್ದಿವಂತರಿಗೆ, ಪ್ರಖ್ಯಾತರಿಗೆ, ಸ್ವಾಮೀಜಿಗಳಿಗೆ ಮಾತ್ರ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ.

ಇದು ಅಷ್ಟು ನಿಜವಲ್ಲ. ಪಂಡಿತನಿಂದ ಪಾಮರನವರೆಗೆ ಯಾರು ಬೇಕಾದರೂ ಆಧ್ಯಾತ್ಮಿಕ ಮನಸ್ಥಿತಿ ಅರಿಯಬಹುದು. ಅದರ ಪ್ರಮಾಣ ರೂಪ ಪ್ರಾಯೋಗಿಕತೆಯಲ್ಲಿ ಒಂದಷ್ಟು ವ್ಯತ್ಯಾಸ ಇರಬಹುದು.

ಆಧ್ಯಾತ್ಮ ಕೆಲವರಿಗೆ ಸೆಳೆತ ಮತ್ತೆ ಕೆಲವರಿಗೆ ಆಕ್ರೋಶ.

ಸೆಳೆತಕ್ಕೆ ಕಾರಣ ಅದರೊಳಗೆ ನೆಮ್ಮದಿಯ ಬದುಕಿಗಾಗಿ ಒಂದಷ್ಟು ಒಳ್ಳೆಯ ಅಂಶಗಳು ಇರಬಹುದು ಎಂದು.

ಆಕ್ರೋಶಕ್ಕೆ ಕಾರಣ ಡೋಂಗಿಗಳು ಆಧ್ಯಾತ್ಮದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಾರೆ ಮತ್ತು ಮೌಢ್ಯಕ್ಕೆ ಪ್ರಚೋದಿಸುತ್ತಾರೆ ಎಂದು.

ಒಟ್ಟಿನಲ್ಲಿ ಆಧ್ಯಾತ್ಮ ಕೇವಲ ದೈವ ಭಕ್ತಿಯಲ್ಲ. ಅದೊಂದು ಜ್ಞಾನದ ಸಹಜ ಅನುಭಾವ ಎಂದು ಸರಳವಾಗಿ ಹೇಳಬಹುದು.

ಆಧ್ಯಾತ್ಮ ಎಂಬುದು ಆಳವಾದ ಅತ್ಯಂತ ಕಠಿಣ ಚಿಂತನೆ ಎಂದು ಜನರಲ್ಲಿ ಭ್ರಮೆ ಹುಟ್ಟುಹಾಕಿ ಅವರಿಂದ ದೂರ ಸರಿಸುವುದಕ್ಕಿಂತ ಜನಸಾಮಾನ್ಯರ ಭಾಷೆಯಲ್ಲಿ ಅವರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿದರೆ ಅವರು ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅದನ್ನು ಅರಿಯಲು ಮತ್ತು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ತಮ್ಮ ಬದುಕಿನ ನೆಮ್ಮದಿಯ ಕ್ಷಣಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಆಧ್ಯಾತ್ಮದ ಬಗ್ಗೆ ನನ್ನ ಗ್ರಹಿಕೆಗೆ ನಿಲುಕಿದ ವಿಷಯವನ್ನು ಸರಳವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಹೇಳುವ ಒಂದು ಪ್ರಯತ್ನ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನು ಸ್ವಾಗತಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068………

error: No Copying!