ಪಡುಬಿದ್ರಿ: ದಿನಾಂಕ:01-01-2024( ಹಾಯ್ ಉಡುಪಿ ನ್ಯೂಸ್) ಎರ್ಮಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಮರಳು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಚಾಲಕ ನನ್ನು ಬಂಧಿಸಿ ಮರಳು ತುಂಬಿದ ಟಿಪ್ಪರನ್ನು ಪಡುಬಿದ್ರಿ ಠಾಣಾ ಪಿಎಸ್ಐ ರವರು ವಶಪಡಿಸಿಕೊಂಡಿದ್ದಾರೆ.
ಪಡುಬಿದ್ರಿ ಠಾಣಾ ಪಿಎಸ್‌ಐ(ಕಾ.ಸು) ರವರು ದಿನಾಂಕ 31.12.2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಕಲ್ಯಾಣಿ ಬಾರ್ ಬಳಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಏಕಮುಖ ರಸ್ತೆಯ ಬದಿಯಲ್ಲಿ ಇಲಾಖಾ ಜೀಪ್ ನಿಲ್ಲಿಸಿ ವಾಹನ ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ.
ತಪಾಸಣೆ ನಡೆಸುವ ಸಮಯ KL-57-9089 ನೇ ನಂಬ್ರದ ಈಚರ್ ಟಿಪ್ಪರ್ ಲಾರಿಯ ಚಾಲಕ ಪರಶುರಾಮ ಎಂಬಾತನು ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಸುಮಾರು 15,000/- ರೂಪಾಯಿ ಬೆಲೆಬಾಳುವ ಸುಮಾರು 3 ಯೂನಿಟ್‌ನಷ್ಟು ಮರಳು ತುಂಬಿಸಿರುವುದು ಕಂಡು ಬಂದಿದ್ದು, ಚಾಲಕನ ಬಳಿ ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಆಗಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 379 ಜೊತೆಗೆ 34 ಐಪಿಸಿ ಮತ್ತು ಕಲಂ: 66 ಜೊತೆಗೆ 192 (ಎ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.