ವಿಶ್ವದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ಜೀಸಸ್ ಕ್ರೈಸ್ಟ್ ಅವರನ್ನು ಕ್ರಿಸ್ ಮಸ್ ಸಮಯದಲ್ಲಿ ನೆನೆಯುತ್ತಾ…….
ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ಯೇಸು ಕ್ರಿಸ್ತ ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತರಾಗುತ್ತಾರೆ.
ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
” ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು “
ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಯೇಸು ಕ್ರಿಸ್ತ ಪ್ರಾರ್ಥಿಸಿದರು…..
ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನ ಆರಾಧಿಸುವ ದೇವರಾಗಿದ್ದಾರೆ. ಈಗ ಒಳಿತಿಗಾಗಿ ಜನ ಅವರನ್ನು ಪ್ರಾರ್ಥಿಸುತ್ತಿದ್ದಾರೆ.
ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಎಲ್ಲಾ ದೇವರುಗಳು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಗಳೆಂದು ಸೃಷ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಮಾತ್ರ ನಾವೇ ಉತ್ತರ ಹುಡುಕಿಕೊಳ್ಳಬೇಕು….!!!
ವಿಶ್ವದಾದ್ಯಂತ ಈಗ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಹಿಂದೆ ಇದ್ದ ಯುದ್ಧಗಳ ಜೊತೆಗೆ ಈಗ ಭಯೋತ್ಪಾದನೆ ಎಂಬ ಭೂತ ಆಕ್ರಮಿಸಿಕೊಂಡಿದೆ. ಮರೆಯಲ್ಲಿ ನಿಂತು ಮಾಯಾವಿಯಂತೆ ಜನರನ್ನು ಕೊಲ್ಲುತ್ತಾ ಸಾಗುತ್ತಿದೆ. ಅಮಾಯಕರ ನೆತ್ತರು ಹರಿಯುತ್ತಿದೆ.
ಇಂತಹ ಸಂದರ್ಭದಲ್ಲಿ ಜೀಸಸ್ ನೆನಪಾಗುತ್ತಾರೆ.
ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಅಮೋಘ ಸಂದೇಶ ನೀಡಿದವರು ಯೇಸು.
ಆದರೆ ಈಗ ಪ್ರೀತಿಸುವುದು ಇರಲಿ, ಗೆಳೆಯರನ್ನು, ನೆರೆಹೊರೆಯವರನ್ನು ನಂಬಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ…
ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಡನಂಬಿಕೆಗಳು, ಮತಾಂತರಗಳು, ವಿಭಾಗಗಳು ಕ್ರಿಶ್ಚಿಯನ್ ಧರ್ಮದಲ್ಲೂ ಬೆಳೆದು ಬಂದವು. ಮತಾಂಧ ಜನರಿಂದ ಧಾರ್ಮಿಕ ಕಾರಣಗಳಿಗಾಗಿ ಅಪಾರ ಹಿಂಸೆ ಸಹ ನಡೆದಿದೆ.
ಆದರೆ ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆಯನ್ನು, ನಾಗರಿಕ ಪ್ರಜ್ಞೆಯನ್ನು, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತು. ಮುಖ್ಯವಾಗಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.
ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ. ಅದಕ್ಕೆ ಕಾರಣ ಜೀಸಸ್ ಅವರ ಸರಳ ಭೋದನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು.
ವಿಶ್ವದ ಎರಡು ಮಹಾಯುದ್ಧಗಳಲ್ಲಿ ಕ್ರಿಶ್ಚಿಯನ್ ಧರ್ಮದ ದೇಶಗಳದೇ ಪ್ರಮುಖ ಪಾತ್ರ, ಹಾಗೆಯೇ ಧರ್ಮ ಒಂದು ಅಫೀಮು ಎಂದು ಆಕ್ರೋಶ ಭುಗಿಲೆದ್ದು ಕ್ರಾಂತಿಕಾರಕ ಚಿಂತನೆ ರೂಪ ಪಡೆದದ್ದು ಕ್ರಿಶ್ಚಿಯನ್ ಧರ್ಮದಲ್ಲೇ..
ಹೀಗೆ ತನ್ನ ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ನೆನೆಯುತ್ತಾ…
ಹಾಗೆಯೇ ಮತಾಂತರ ಕೆಲವು ಕಟ್ಟಾ ಕ್ರಿಶ್ಚಿಯನ್ ಮೇಲಿನ ಆರೋಪ……..
ಭಾರತದ ಮಟ್ಟಿಗೆ ಮತಾಂತರದ ಆರೋಪ ಹೆಚ್ಚಾಗಿ ಕೇಳಿಬರುತ್ತಿರುವುದು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆಯೇ. ಕೆಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಿದೆ…….
ಇಂತಹ ಶಾಂತಿ ದೂತನ ಅನುಯಾಯಿಗಳ ಮೇಲೆ ಮತಾಂತರದ ಆರೋಪ ಬಂದಾಗ ಅದನ್ನು ದಿಟ್ಟತನದಿಂದ ಎದುರಿಸಿ
” ನಮಗೆ ಮತಾಂತರ ಮುಖ್ಯವಲ್ಲ. ನಮಗೆ ಕ್ರಿಶ್ಚಿಯನ್ ಧರ್ಮ ಮುಖ್ಯವಲ್ಲ. ನಮಗೆ ಮನುಷ್ಯ ಮುಖ್ಯ. ಶೋಷಿತರು ಯಾರೇ ಆಗಲಿ ಅಸಹಾಯಕರು ಯಾರೇ ಇರಲಿ ಅವರ ಸೇವೆ ಮಾತ್ರ ನಮ್ಮ ಉದ್ದೇಶ. ಮತಾಂತರ ನಿಷೇಧ ಕಾನೂನು ಮಾತ್ರವಲ್ಲ ಅದಕ್ಕಿಂತ ಕಠಿಣ ಕಾನೂನು ಜಾರಿಯಾದರು ನಮಗೆ ಹೆದರಿಕೆ ಇಲ್ಲ. ನಮಗೆ ಸಮಾನತೆ ಮಾನವೀಯ ಮೌಲ್ಯಗಳ ಸೇವೆ ಮಾತ್ರ ಮುಖ್ಯ ” ಎನ್ನುವ ಔದಾರ್ಯ ಯೇಸುಕ್ರಿಸ್ತನ ಅನುಯಾಯಿಗಳಿಂದ ಬರಬೇಕಿತ್ತು. ಅದೇ ನಿಜವಾಗಿಯೂ ಶಾಂತಿ ಸೌಹಾರ್ದತೆಗೆ ಜೀಸಸ್ ಅನುಯಾಯಿಗಳು ಕೊಡಬಹುದಾದ ದೊಡ್ಡ ಕೊಡುಗೆ…….
ಒಂದು ವೇಳೆ ಹೀಗೆ ಹೇಳಿದ್ದರೆ ಖಂಡಿತ ಕರ್ಮಠ ಮೂಲಭೂತವಾದಿಗಳು ತಲೆ ತಗ್ಗಿಸುವಂತಾಗುತ್ತಿತ್ತು. ಧರ್ಮದ ನಿಜವಾದ ಪಾಲನೆ ಆಗುತ್ತಿತ್ತು. ಧರ್ಮದ ತಿಳಿವಳಿಕೆ ನಡವಳಿಕೆ ಆದಾಗ ಮಾತ್ರ ಅದಕ್ಕೆ ಅರ್ಥ. ಇಲ್ಲದಿದ್ದರೆ….
ಹಾಗೆಯೇ ಹಿಂದು ನಾವೆಲ್ಲರೂ ಒಂದು ಎಂದು ಅಭಿಮಾನದಿಂದ ಹೇಳುವವರು ಮತಾಂತರಕ್ಕೆ ಭಯಪಟ್ಟು ಕಾನೂನಿನ ಮೂಲಕ ನಿಯಂತ್ರಿಸುವಷ್ಟು ಹತಾಶರಾಗಿರುವುದು ಸಹ ಅತ್ಯಂತ ನಾಚಿಕೆಗೇಡು. ಹಿಂದುಗಳು ಮತಾಂತರ ಆಗಲು ಕಾರಣ ಹುಡುಕುವ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಜಾತಿಯ ಮೂಲಕ ಅಸ್ಪೃಶ್ಯತೆ ಆಚರಿಸುವುದು, ಜಾತಿಯ ಮೂಲಕ ಮೇಲು ಕೀಳು ವ್ಯಕ್ತಿತ್ವ ನಿರ್ಧರಿಸುವುದು, ಜಾತಿಯ ಮೂಲಕ ಮದುವೆ ಆಗುವುದು, ಜಾತಿಯ ಮೂಲಕ ಚುನಾವಣೆಗೆ ಸ್ಪರ್ಧಿಸುವುದು ಮತ್ತು ಮತ ಕೇಳುವುದು, ಜಾತಿಯ ಆಧಾರದ ಮೇಲೆ ಪಂಕ್ತಿ ಭೇದ ಮಾಡುವುದು ಮುಂತಾದ ಅನಿಷ್ಟಗಳು ಇನ್ನೂ ಈ ಸಮಾಜದಲ್ಲಿ ಜೀವಂತ ಇರುವಾಗ ಮತಾಂತರ ನಿಷೇಧಿಸುವ ನೈತಿಕತೆ ಎಲ್ಲಿದೆ..
ಇತರೆ ಧರ್ಮಗಳ ಕೆಲವು ಕೆಟ್ಟ ಆಚರಣೆಗಳನ್ನು ಉದಾಹರಿಸಿ ನಮ್ಮ ಧರ್ಮದ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಅದನ್ನು ಸಾಕಷ್ಟು ಜನ ನಿರಂತರವಾಗಿ ಮಾಡುತ್ತಲೇ ಇದ್ದಾರೆ.
ಒಂದು ಧರ್ಮದ ನಿಜವಾದ ಶಕ್ತಿ ಸಾಮರ್ಥ್ಯ ಆಕರ್ಷಣೆ ಇರುವುದೇ ಅದರ ಸರಳತೆ ಸಮಾನತೆ ಮಾನವೀಯತೆಯ ಆಚರಣೆಗಳಲ್ಲಿ. ಅದನ್ನು ಅನುಸರಿಸುವ ಆ ಧರ್ಮದ ಅನುಯಾಯಿಗಳ ನಡವಳಿಕೆಗಳಲ್ಲಿ. ಅದನ್ನು ಸರಿಯಾಗಿ ಪಾಲಿಸಿ ಇತರ ಧರ್ಮಗಳಿಗೆ ಮಾದರಿಯಾಗದೆ ಒಂದು ಧರ್ಮ ಮತಾಂತರಕ್ಕೆ ಪ್ರಚೋದಿಸುವುದು, ಇನ್ನೊಂದು ಧರ್ಮ ಅದನ್ನು ನಿಷೇಧಿಸುವುದು ಎರಡೂ ಒಳ್ಳೆಯ ನಡೆಯಲ್ಲ.
ಏಕೆಂದರೆ ಕಾನೂನಿನ ಮೂಲಕವೇ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಪಕ್ಷಾಂತರ ನಿಷೇಧ ಕಾನೂನಿನ ದುರುಪಯೋಗವಾದಂತೆ ನಾಳೆ ಈ ಮತಾಂತರ ನಿಷೇಧ ಕಾನೂನಿನ ಒಳ ಲಾಭ ಪಡೆದು ಇಡೀ ಸಮುದಾಯಗಳೇ ಕಾನೂನಿನ ಅಡಿಯಲ್ಲಿ ಮತಾಂತರವಾದರೆ ಏನು ಮಾಡುವುದು. ಅದಕ್ಕಾಗಿಯೇ ಮೊದಲು ಸಮ ಸಮಾಜದ ಮಾನವೀಯ ಹಿನ್ನೆಲೆಯ ಸರಳ ಧರ್ಮ ನಮ್ಮದಾಗಬೇಕು.
ಕ್ರಿಸ್ಮಸ್ ಹಬ್ಬದ ಈ ಸಂದರ್ಭದಲ್ಲಿ ಜಗತ್ತು ವೈರಸ್ ರೂಪಾಂತರ ತಳಿಗಳ, ಯುದ್ಧ – ಭಯೋತ್ಪಾದನೆಯ ಅಬ್ಬರಕ್ಕೆ ಸಿಲುಕಿ ನಲುಗುತ್ತಿರುವಾಗ ಮತಾಂತರಗಳು ಮುಖ್ಯ ವಿಷಯವಾಗುತ್ತಿರುವುದು ಮಾನವ ಜನಾಂಗಕ್ಕೆ ” ವಿನಾಶ ಕಾಲೇ ವಿಪರೀತ ಬುದ್ದಿ ” ಎಂಬಂತಾಗಿದೆ. ಮಾಡಲು ಅತ್ಯಂತ ಪ್ರಮುಖ ಕೆಲಸಗಳು ನಮ್ಮ ಮುಂದೆ ಇರುವಾಗ ಜನರ ಮೂಲಭೂತ ಸೌಕರ್ಯಗಳ ನಿರ್ಲಕ್ಷ್ಯ ಖಂಡಿತ ಒಂದು ದೊಡ್ಡ ಅಪರಾಧಕ್ಕೆ ಸಮ….
ಸಾಮಾನ್ಯ ಜನರಾದ ನಾವುಗಳು ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಜೀಸಸ್ ಅಥವಾ ಪೈಗಂಬರ್ ಅಥವಾ ಭಗವದ್ಗೀತೆ ಅಥವಾ ಬುದ್ಧ ಮಹಾವೀರ ಯಾರೇ ಹೇಳಿರಲಿ ಶಾಂತಿ ಸಮಾನತೆ ಸೇವೆ ಮಾನವೀಯ ಮೌಲ್ಯಗಳೇ ನಾಗರಿಕ ಸಮಾಜದ ಬಹುಮುಖ್ಯ ಗುಣಲಕ್ಷಣಗಳು. ಅದನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂಬ ಆಶಯದೊಂದಿಗೆ…….
ವಿಶ್ವ ಶಾಂತಿಗಾಗಿ ಪ್ರಾರ್ಥಿಸುತ್ತಾ……
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068…………