ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ಧಾರ್ಮಿಕ ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ……………
ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭ ಗಳಿಗೂ,
ಎಲ್ಲಾ ವಿಷಯಗಳಿಗೂ ಒಂದೇ ರೀತಿಯಲ್ಲಿ ಮತ್ತು ನಿಷ್ಪಕ್ಷಪಾತವಾಗಿ ಇರಲಿ…..
ಅತಿಮುಖ್ಯ ಎಂದರೆ ನಮ್ಮ ನ್ಯಾಯ ದಂಡವೇ ಸಮಗ್ರ ಚಿಂತನೆಯ 360° ಡಿಗ್ರಿ ಕೋನದ ಸಮಷ್ಟಿ ಪ್ರಜ್ಞೆಯ ಚಿಂತನೆಯಲ್ಲಿ ಮಾಡಿರಬೇಕು. ಆಗ ಮಾತ್ರ ನ್ಯಾಯ ತೀರ್ಮಾನ ಮಾಡಲು ಸಾಧ್ಯ. ಅರಿವೇ ಇಲ್ಲದ ವಿಷಯಗಳ ಬಗ್ಗೆ ಒಂದು ಅನುಮಾನದ ಅವಕಾಶಕ್ಕೆ ಜಾಗ ಕಲ್ಪಿಸಿರಬೇಕು. ಸ್ಪಷ್ಟತೆಯ ಹೆಸರಿನಲ್ಲಿ ಆತ್ಮವಂಚನೆ ಮಾಡಿಕೊಳ್ಳಬಾರದು…..
ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ಕಮ್ಯುನಿಸ್ಟ್ ಅಥವಾ ಬಿಎಸ್ಪಿ ಅಥವಾ ಜೆಡಿಎಸ್ ಅಥವಾ ಎಎಪಿ ಅಥವಾ ಇನ್ಯಾವುದೇ ಪಕ್ಷವಾಗಿರಲಿ ಅದನ್ನು ಬೆಂಬಲಿಸುವ ಅಥವಾ ವಿರೋಧಿಸುವ ಅಥವಾ ಸಮರ್ಥಿಸುವ ಮಾನದಂಡಗಳು ಯಾವಾಗಲೂ ಈ ನ್ಯಾಯ ದಂಡದ ಅಡಿಯಲ್ಲಿಯೇ ಇರಬೇಕು…….
ಮನುವಾದವೇ ಇರಲಿ, ಗಾಂಧಿ ಅಂಬೇಡ್ಕರ್ ಮಾರ್ಕ್ಸ್ ನಕ್ಸಲಿಸಂ ಮುಂತಾದ ವಾದಗಳೇ ಇರಲಿ ನಮ್ಮ ನ್ಯಾಯ ದಂಡ ಒಂದೇ ರೀತಿಯಾಗಿರಬೇಕು……
ಹಿಂದೂ ಇಸ್ಲಾಂ ಕ್ರಿಶ್ಚಿಯನ್ ಸಿಖ್ ಬೌದ್ಧ ಜೈನ ಲಿಂಗಾಯತ ಇತ್ಯಾದಿ ಯಾವುದೇ ಧರ್ಮವಾಗಿರಲಿ ಅದನ್ನು ಮೆಚ್ಚುವ ಅಥವಾ ಆರಾಧಿಸುವ ಅಥವಾ ಅದನ್ನು ಟೀಕಿಸುವ ನ್ಯಾಯ ದಂಡವೂ ಸಹ ಎಲ್ಲಾ ಅಭಿಮಾನ ಭಕ್ತಿಗಳನ್ನು ಮೀರಿ ಒಂದೇ ರೀತಿಯ ನ್ಯಾಯ ದಂಡ ಉಪಯೋಗಿಸಬೇಕು……
ಕೇವಲ ಇಷ್ಟೇ ಅಲ್ಲ. ಯಾವ ನ್ಯಾಯ ದಂಡದ ಅಡಿಯಲ್ಲಿ ನಾವು ನಮ್ಮ ತಾಯಿ ತಂದೆ ತಂಗಿ ಅಣ್ಣ ಹೆಂಡತಿ ಗಂಡ ಮಕ್ಕಳನ್ನು ತರುತ್ತೇವೆಯೋ ಅದೇ ಮಾನದಂಡ ಇತರ ಎಲ್ಲಾ ನಮ್ಮ ಜನರಿಗೂ ಅನ್ವಯಿಸಬೇಕು. ಮಗಳಿಗೆ ಒಂದು ಸೊಸೆಗೆ ಒಂದು, ಅತ್ತೆ ಮಾವನಿಗೆ ಒಂದು, ತಂದೆ ತಾಯಿಗೆ ಒಂದು ಹೀಗೆ ಬೇರೆ ಬೇರೆ ನ್ಯಾಯ ದಂಡ ಉಪಯೋಗಿಸಬಾರದು……
ಸ್ವಜನ ಪಕ್ಷಪಾತ ಕೂಡ ಒಂದು ರೀತಿಯ ಭ್ರಷ್ಟಾಚಾರ…….
ನರೇಂದ್ರ ಮೋದಿಯೋ, ರಾಹುಲ್ ಗಾಂಧಿಯೋ, ಮಾಯಾವತಿಯೋ, ಮಮತಾ ಬ್ಯಾನರ್ಜಿಯೋ ಇನ್ಯಾರೋ ಮಾಡಿದ್ದೆಲ್ಲವೂ ಸರಿ ಎನ್ನಬೇಡಿ. ನಮ್ಮ ಮೊದಲ ಮತ್ತು ಕೊನೆಯ ಆಶಯ ಭಾರತೀಯತೆ ಮತ್ತು ಮಾನವೀಯತೆಯೇ ಆಗಿರಲಿ. ವ್ಯಕ್ತಿಗಳು ಶಾಶ್ವತವಲ್ಲ. ಸಿದ್ದಾಂತಗಳು ಶಾಶ್ವತವಲ್ಲ, ಧರ್ಮಗಳು ಶಾಶ್ವತವಲ್ಲ.
ಆದರೆ ಕಾಲದೊಂದಿಗೆ ನ್ಯಾಯದ ಮತ್ತು ಸತ್ಯದ ಮಾನದಂಡ ಬದಲಾಗಬಹುದು. ಆದರೆ ನ್ಯಾಯ ಮತ್ತು ಸತ್ಯ ಮಾತ್ರ ಈ ಜಗತ್ತು ಇರುವವರೆಗೂ ಇದ್ದೇ ಇರುತ್ತದೆ……..
ನಾವು ಮಾನಸಿಕವಾಗಿ ಈ ರೀತಿಯ ನಿಷ್ಪಕ್ಷಪಾತ ನ್ಯಾಯ ದಂಡವನ್ನು ಉಪಯೋಗಿಸಿದ್ದೇ ಆದರೆ ನಮ್ಮ ಜ್ಞಾನದ ಮಟ್ಟ ಖಂಡಿತ ಉತ್ತಮ ಮಟ್ಟಕ್ಕೆ ಏರಿ ನಮ್ಮ ಜೀವನದ ಗುಣಮಟ್ಟ ಮೇಲ್ದರ್ಜೆಗೆ ಏರುತ್ತದೆ. ಇಲ್ಲದಿದ್ದರೆ ನಾವು ಜೀವನದ ಇನ್ನೊಂದು ಮುಖವನ್ನು ಕಾಣದೆ ಆ ಅನುಭವದಿಂದ ವಂಚಿತರಾಗುತ್ತೇವೆ……
ನಾವು ತಿಳಿದಿರುವ ವಿಷಯದ ಸಂಪೂರ್ಣ ಅರಿವು ನಮಗೆ ಆಗಬೇಕಿದ್ದರೆ ನಾವು ಮನುಸ್ಮೃತಿಯನ್ನು ತಿಳಿಯಬೇಕು, ಅಂಬೇಡ್ಕರ್ ಅವರನ್ನು ಓದಬೇಕು ಗಾಂಧಿ ಮಾರ್ಕ್ಸ್ ಗಳನ್ನು ಬುದ್ದ ಬಸವ ಮಹಾವೀರ ವಿವೇಕಾನಂದ ಪೈಗಂಬರ್ ಜೀಸಸ್ ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು…..
ಒಮ್ಮೆ ಬ್ರಾಹ್ಮಣನಾಗಿ ಯೋಚಿಸು ಅದೇ ಸಮಯದಲ್ಲಿ ಅಸ್ಪೃಶ್ಯನಾಗಿಯೂ ಅನುಭವಿಸು. ಆಗ ನಿನಗೆ ಎರಡೂ ವಿಷಯಗಳ ಮೇಲು ಕೀಳಿನ ಒಳ ನೋಟ ಸಿಗುತ್ತದೆ. ಆಗ ನ್ಯಾಯದ ದಂಡ ಉಪಯೋಗಿಸಿ ಅಭಿಪ್ರಾಯ ವ್ಯಕ್ತಪಡಿಸು. ಕನಿಷ್ಠ ವಾಸ್ತವದ ಹತ್ತಿರ ನೀ ಬರಬಲ್ಲೆ. ಜ್ಞಾನದ ಸವಿಯನ್ನು ಸವಿಯಬಲ್ಲೆ…….
ಸಾಧ್ಯವಾದಷ್ಟು ಇದನ್ನು ಪ್ರಯತ್ನಿಸಿ ನೋಡಿ.
ಇಸಂಗಳಿಲ್ಲದ ನಿಷ್ಪಕ್ಷಪಾತ ಅಭಿಪ್ರಾಯ ನಮಗೂ, ಸಮಾಜಕ್ಕೂ, ದೇಶಕ್ಕೂ ಈ ಸೋಷಿಯಲ್ ಮೀಡಿಯಾ ಅಬ್ಬರದಲ್ಲಿ ಅತ್ಯವಶ್ಯ ಎನಿಸುತ್ತದೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಎಚ್.ಕೆ.
9844013068………..